ಚಾಮರಾಜನಗರ : ರಾಷ್ಟ್ರ ಮಟ್ಟದ ಪುರುಷರ ಮೈಕಟ್ಟು ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ತಾಲ್ಲೂಕಿನ ಕೋಡಿಮೋಳೆ ಬಸವನಪುರ ಬಿ.ಆರ್.ಹೇಮಂತ್ ಅವರು ಮಿಸ್ಟರ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಗೋವಾದಲ್ಲಿ ಶನಿವಾರವಷ್ಟೇ ಫಿಟ್ನೆಸ್ ಇಂಟರ್‌ನ್ಯಾಷನಲ್ ಫೆಡರೇಷನ್ ವತಿಯಿಂದ ನಡೆದ ಈ ಸ್ಪರ್ಧೆಯಲ್ಲಿ ಪಿಜಿಕ್ಯೂ ಸೀನಿಯರ್ ಹಾಗೂ ಜೂನಿಯರ್ ಓವರಾಲ್ ಚಾಂಪಿಯನ್‌ಷಿಪ್ ತನ್ನದಾಗಿಸಿಕೊಂಡು ಪದಕ, ಎರಡು ದೊಡ್ಡ ಟ್ರೋಫಿ ಹಾಗೂ ಬಹುಮಾನ ಪಡೆದು ಜಿಲ್ಲೆ, ರಾಜ್ಯ, ದೇಶಕ್ಕೆ ಕೀರ್ತಿ ತಂದಿದ್ದಾರೆ.
ಬಸವನಪುರ ಗ್ರಾಮದ ರೈತ ಬಿ.ಜಿ ರವಿಕುಮಾರ್ ,ಹೇಮಾ ದಂಪತಿಯ ಪುತ್ರರಾದ ೨೩ರ ಹರೆಯದ ಬಿ.ಆರ್.ಹೇಮಂತ್ ಎಂಬಿಎ ಪದವಿಯನ್ನು ಈಚೆಗೆ ಮುಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಗುರಿ ಅವರದ್ದಾಗಿದೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸ್ಥಳೀಯವಾಗಿಯೇ ಓದಿರುವ ಅವರು ಪದವಿಯನ್ನು ಆಳ್ವಾಸ್ ನಲ್ಲಿ ಮಾಡಿದ್ದು ಫಿಟ್ನೆಸ್ ಅನ್ನು ಶ್ರಮದಿಂದ ಮಾತ್ರ ಗಳಿಸಬಹುದು. ಹಣದಿಂದ ಗಿಟ್ಟಿಸಲು ಸಾಧ್ಯವಿಲ್ಲ. ಹೀಗಾಗಿ ಶ್ರಮ ಬೇಡುವ ಈ ಕ್ಷೇತ್ರ ಆಯ್ಕೆ ಮಾಡಿಕೊಂಡು ಸಾಧಿಸುವ ಹಂಬಲ,ಛಲದತ್ತ ನನ್ನ ಪ್ರಯತ್ನ ಸಾಗಿದೆ ಎಂದು ಹೇಮಂತ್ ಹೇಳಿದರು.





