ಕೊಳ್ಳೇಗಾಲ: ಕಾಡಾನೆಯೊಂದು ನಡೆಸಿದ ದಾಳಿಯಲ್ಲಿ ವೃದ್ಧನೊಬ್ಬ ಮೃತಪಟ್ಟ ಘಟನೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ತಾಲ್ಲೂಕಿನ ಕರಳಕಟ್ಟೆ ಗ್ರಾಮದ ನಿವಾಸಿ ಸಣ್ಣಮಾದ (72) ಆನೆ ದಾಳಿಯಿಂದ ಮೃತಪಟ್ಟವರಾಗಿದ್ದಾರೆ.
ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಕಳಕಟ್ಟೆ ಗ್ರಾಮಕ್ಕೆ ಕಾಡಾನೆಯೊಂದು ಬಂದಿದೆ. ಸಣ್ಣಮಾದ ಅವರು ಪತ್ನಿ ಜಡೆ ಮಾದಮ್ಮ, ನಾದಿನಿ ರಂಗಮ್ಮ ಜೊತೆ ಮೇಗಲದೊಡ್ಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆನೆ ದಾರಿ ಮಧ್ಯೆ ನಿಂತಿತ್ತು. ಆನೆಯಿಂದ ತಪ್ಪಿಸಿಕೊಳ್ಳಲು ಸಣ್ಣಮಾದ ಸೇರಿದಂತೆ ಮೂವರೂ ಓಡಿದರು.ಸಣ್ಣ ಮಾದ ಅವರನ್ನು ಅಟ್ಟಿಸಿದ ಆನೆ ದಾಳಿ ಮಾಡಿದೆ. ಪರಿಣಾಮ ವೃದ್ಧ ಸಾವನ್ನಪ್ಪಿದ್ದಾರೆ. ಉಳಿದವರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದಕುಮಾರ್, ಡಿಆರ್‌ಎಫ್‌ಒ ಮಹೇಶ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಸಿಎಫ್ ನಂದಕುಮಾರ್ ಭೇಟಿ ನೀಡಿದ ವೇಳೆ ಗ್ರಾಮಸ್ಥರು, ಸಣ್ಣ ಮಾದ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದರು. ಇದಕ್ಕೆ ʼಇಲಾಖೆಯಿಂದ ಸಿಗುವ ಪರಿಹಾರ ಮತ್ತು ಸೌಲಭ್ಯಗಳನ್ನು ಸಣ್ಣಮಾದ ಅವರ ಕುಟುಂಬಕ್ಕೆ ಸಿಗುವಂತೆ ಮಾಡಲಾಗುವುದುʼ ಎಂದು ಭರವಸೆ ನೀಡಿದರು.