ಚಾಮರಾಜನಗರ : ಕೋವಿಡ್ ವೇಳೆಯಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲಿ (ಈಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ) ಸಂಭವಿಸಿದ್ದ ಆಕ್ಸಿಜನ್ ದುರಂತದಲ್ಲಿ 36 ಮಂದಿ ಮೃತಪಟ್ಟಿದ್ದರು. ಇವರ ಕುಟುಂಬದವರ ನಿರಂತರ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಈ ಕುಟುಂಬಗಳ 25 ಮಂದಿಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರವನ್ನು ವಿತರಿಸಿದ್ದಾರೆ.
ಏ.21 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಂಡ್ಲುಪೇಟೆಯಲ್ಲಿ ಆಯೋಜಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಮಾರಂಭದಲ್ಲಿ 25 ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಖಾಯಂ ಉದ್ಯೋಗ ನೇಮಕಾತಿ ಪತ್ರವನ್ನು ವಿತರಿಸಲಿದ್ದಾರೆ. ಈ ಮೂಲಕ ಸಂತ್ರಸ್ತರ ಉದ್ಯೋಗದ ಕನಸು ನನಸಾಗಲಿದೆ.
25 ಮಂದಿಗೂ ನಗರದ ಹೊರವಲಯದ ಸಿಮ್ಸ್ ಬೋಧನಾ ಆಸ್ಪತ್ರೆಯಲ್ಲೇ ಉದ್ಯೋಗ ನೀಡುತ್ತಿರುವುದು ವಿಶೇಷ. ಹಿಂದೆ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಉದ್ಯೋಗ ನೀಡಲು ಚಿಂತನೆ ನಡೆದಿತ್ತು. ಆದರೆ, ವೈದ್ಯಕೀಯ ಶಿಕ್ಷಣ ಇಲಾಖೆಯು ಬೋಧನಾ ಆಸ್ಪತ್ರೆಯಲ್ಲೇ ಉದ್ಯೋಗ ನೀಡಬೇಕು ಎಂದು ತೀರ್ಮಾನಿಸಿತ್ತು.
ಪ್ರಕರಣದಲ್ಲಿ ಮೃತಪಟ್ಟ 36 ಮಂದಿಯ ಕುಟುಂಬಗಳ ಸಂತ್ರಸ್ತರಲ್ಲಿ 11 ಮಂದಿಗೆ ಕೆಲವರಿಗೆ ಸರ್ಕಾರಿ ನೌಕರಿಗೆ ಅಗತ್ಯ ವಿದ್ಯಾರ್ಹತೆಯಿಲ್ಲ. ಒಬ್ಬರು ಈಗಾಗಲೇ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಇನ್ನೂ ಕೆಲವರು ನೌಕರಿ ಬೇಡ ಎಂದು ನಿರಾಕರಿಸಿದ್ದಾರೆ. ಹಾಗಾಗಿ ಅರ್ಹ 25 ಸಂತಸ್ತರಿಗೆ ಖಾಯಂ ಉದ್ಯೋಗ ನೀಡಲಾಗುತ್ತಿದೆ.
ಕೊರೊನಾ 2ನೇ ಅಲೆ ಸಂದರ್ಭ 2021ರ ಮೇ 2ರಂದು ನಗರದ ಜಿಲ್ಲಾಸ್ಪತ್ರೆಗೆ ಕೊರೊನಾ ಸೋಂಕಿನಿಂದ ಹಲವರು ದಾಖಲಾಗಿದ್ದರು. ಈ ವೇಳೆ ಆಕ್ಸಿಜನ್ ಕೊರತೆಯಿಂದ 23 ಮಂದಿ ಮೃತಪಟ್ಟರು. ಇದಲ್ಲದೆ, ಹೊರಗೆ 4 ಮಂದಿ ಸಾವಿಗೀಡಾಗಿದ್ದರು. ಅಂದಿನ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿತ್ತು.
ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಸಂಸದರಾದ ದಿವಂಗತ ಆರ್.ಧ್ರುವನಾರಾಯಣ ಅವರು ಆಕ್ಸಿಜನ್ ದುರಂತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಅವರ ಜೊತೆಯಾಗಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ನೀಡಿದ್ದರು. ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ಯಾತ್ರೆ ಗುಂಡ್ಲುಪೇಟೆ ಮೂಲಕ ಸಾಗಿ ಹೋದಾಗ ಆಕ್ಸಿಜನ್ ಸಂತ್ರಸ್ತರನ್ನು ಕರೆದೊಯ್ದು ರಾಹುಲ್ ಗಾಂಧಿ ಅವರಿಗೆ ಪರಿಚಯಿಸಿದ್ದರು. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉಪಸ್ಥಿತರಿದ್ದು, ನಮ್ಮ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದ್ದರು.
ಮತ್ತೊಂದು ಕಡೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಮುಖಂಡರು ಆಕ್ಸಿಜನ್ ಸಂತ್ರಸ್ತರ ಪರ ಸುದೀರ್ಘ ಹೋರಾಟ ನಡೆಸಿದ್ದರು. ಸಂತ್ರಸ್ತರನ್ನು ರಾಜ್ಯಪಾಲರ ಬಳಿಗೆ ಕರೆದೊಯ್ದು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು. ನೊಂದವರಿಗೆ ಖಾಯಂ ಉದ್ಯೋಗ ನೀಡಬೇಕೆಂದು ನಿರಂತರ ಹೋರಾಟ ನಡೆಸಿದ್ದರು. ನಗರದ ವಿವಿಧ ಸಂಘಟನೆಗಳು ಸಹ ಸಂತ್ರಸ್ತರ ಪರ ಚಳವಳಿ ನಡೆಸಿದ್ದವು. ಒಟ್ಟಾರೆ ಇದು ಗ್ಯಾರಂಟಿ ಯೋಜನೆಗಳ ಸರ್ಕಾರ ನೊಂದವರ ಪರ ನಿಂತ ಮತ್ತೊಂದು ನಿದರ್ಶನವಾಗಿದೆ.




