Mysore
28
few clouds

Social Media

ಸೋಮವಾರ, 30 ಮಾರ್ಚ್ 2026
Light
Dark

ಚಾ.ನಗರ | ವಿವಿಧ ಗ್ರಾ.ಪಂಚಾಯ್ತಿಗಳಿಗೆ ಸಿಇಒ ದೀಢಿರ್‌ ಭೇಟಿ

ಚಾಮರಾಜನಗರ : ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಅವರು ದೀಢಿರ್‌ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಉದ್ಯೋಗ ಖಾತರಿ ಯೋಜನೆ, ಎನ್.ಆರ್.ಎಲ್.ಎಂ., ಸ್ವಚ್ಛ ಭಾರತ್ ಮಿಷನ್ (ಗ್ರಾ), ಜಲಜೀವನ್ ಮಿಷನ್, ವಿವಿಧ ವಸತಿ ಯೋಜನೆ, 14 ಮತ್ತು 15ನೇ ಹಣಕಾಸು ಯೋಜನೆ ಹಾಗೂ ಇತರೆ ಗ್ರಾಮೀಣಾಭಿವೃದ್ದಿ ಯೋಜನೆಗಳಡಿ ಅನುಷ್ಠಾನಗೊಳಿಸಲಾಗಿರುವ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯ, ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ, ಕೂಸಿನ ಮನೆ ಕೇಂದ್ರಗಳ ಅನುಷ್ಠಾನ, ನಿರ್ವಹಣೆ ಹಾಗೂ ತೆರಿಗೆ ವಸೂಲಾತಿ ಕುರಿತಾದ ಕಡತಗಳು ಮತ್ತು ದಾಖಲಾತಿಗಳ ನಿರ್ವಹಣೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಹಾಜರಾತಿಯನ್ನು ವೀಕ್ಷಿಸಿದರು.

ಮಾದಾಪುರ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯಕ್ಕೆ ಸದಸ್ಯತ್ವ ನೋಂದಣಿಯಾಗಿರುವ ಸದಸ್ಯರ ಸಂಖ್ಯೆ, ಗ್ರಂಥಾಲಯದಲ್ಲಿ ಸಂಗ್ರಹಿಸಲಾಗಿರುವ ಪುಸ್ತಕಗಳು, ಶಾಲಾ ಮಕ್ಕಳ ನೋಂದಣಿ, ಪುಸ್ತಕಗಳ ಸಂಗ್ರಹಣೆ ಮತ್ತು ನಿರ್ವಹಣೆ, ಗ್ರಂಥಾಲಯಕ್ಕೆ ಪ್ರತಿ ದಿನ ಭೇಟಿ ನೀಡುವವರ ಬಗ್ಗೆ ಗ್ರಂಥಾಲಯದ ಮೇಲ್ವಿಚಾರಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಽಕಾರಿಗಳಿಂದ ಮಾಹಿತಿ ಪಡೆದರು. ಸದಸ್ಯರ ನೋಂದಣಿ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಸೂಚನೆ ನೀಡಿದರು.

ಗ್ರಾಮದ ಅಂಗನವಾಡಿ ಕೇಂದ್ರ-1 ಮತ್ತು ಕೇಂದ್ರ-2ಕ್ಕೆ ಭೇಟಿ ನೀಡಿ, ಅಂಗನವಾಡಿಯಲ್ಲಿ ದಾಖಲಾಗಿರುವ ಮಕ್ಕಳ ಸಂಖ್ಯೆ, ಮಕ್ಕಳು ಹಾಗೂ ಗರ್ಭಿಣಿ-ಬಾಣಂತಿಯರಿಗೆ ನೀಡುತ್ತಿರುವ ಪೌಷ್ಟಿಕ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಆಹಾರ ಪದಾರ್ಥಗಳ ದಾಸ್ತಾನು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರ ಹಾಜರಾತಿ, ದಾಸ್ತಾನು ವಹಿ ಹಾಗೂ ಇತರೆ ವೆಚ್ಚದ ವಹಿಗಳು, ಅಡುಗೆ ಕೋಣೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮತ್ತು ಸ್ವಚ್ಛತೆ ಕುರಿತು ಮಾಹಿತಿ ಪಡೆದರು.

ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರಧಾನ ಮಂತ್ರಿಆವಾಸ್ (ಗ್ರಾ) ಯೋಜನೆಯಡಿ ನಿರ್ಮಿಸಲಾಗಿರುವ ‘ಮಾದರಿ ಮನೆ’ಗೆ ಭೇಟಿ ನೀಡಿ, ನೋಂದಣಿಯಾಗಿರುವ ಮಕ್ಕಳ ಸಂಖ್ಯೆ ಹಾಜರಾತಿ ಹಾಗೂ ನಿರ್ವಹಣಾ ಸಿಬ್ಬಂದಿಗಳ ಹಾಜರಾತಿಯನ್ನು ಪರಿಶೀಲಿಸಿದರು.

ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಳ್ಳನೂರು ಹಾಗೂ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಿಯೂರು ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ವತಿಯಿಂದ ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಟಾನಗೊಳಿಸಲಾಗಿರುವ ನಳ ಸಂಪರ್ಕ ಕಾಮಗಾರಿಗಳು ಹಾಗೂ ಕಿರು ನೀರು ಸರಬರಾಜು ಪೂರೈಕೆ ಕೇಂದ್ರಗಳನ್ನು ಖುದ್ದು ಪರಿಶೀಲಿಸಿದರು.

Tags:
error: Content is protected !!