ಚಾಮರಾಜನಗರ : ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನದ ಬಳಿಯ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನಗರದ ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ ನೌಕರನಾಗಿದ್ದ ವಿನಯ್ (೩೬) ಸಾವಿಗೆ ಶರಣಾದವರು. ಬಾಡಿಗೆ ಮನೆಯಲ್ಲಿ ವಾಸವಿದ್ದ ವಿನಯ್ ಶನಿವಾರ ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನಿಗೆ ಪಂಚೆ ಬಿಗಿದು ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಕೋಗಿಲೂರು ಗ್ರಾಮದ ವಿನಯ್ ನಗರದಲ್ಲಿ ಕಳೆದ ೭-೮ ವರ್ಷಗಳಿಂದ ನಗರದ ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ ನೌಕರನಾಗಿದ್ದರು. ಉದ್ಯಾನದ ಬಳಿಯ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು.
ಶನಿವಾರ ಸ್ನೇಹಿತರು, ಸಹೋದ್ಯೋಗಿಗಳನ್ನು ಸೇರಿಸಿಕೊಂಡು ‘ಸಾರಿ’ ಎಂಬ ವಾಟ್ಸ್ಗ್ರೂಪ್ ರಚಿಸಿ ಜೀವನದಲ್ಲಿ ಬೇಸರವಾಗಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದಾರೆ. ಅಂತಹ ಕೆಲಸ ಮಾಡಿಕೊಳ್ಳಬೇಡ ಎಂದು ಸ್ನೇಹಿತರು ಮನವಿ ಮಾಡಿದರೂ ನೇಣು ಹಾಕಿಕೊಂಡಿದ್ದಾರೆ.
ಮೇಸೆಜ್ ನೋಡಿದ ಸ್ನೇಹಿತರು ಮನೆಗೆ ಬಂದು ಬಾಗಿಲು ಬಡಿದರೂ ಪ್ರಯೋಜನವಾಗಲಿಲ್ಲ. ನಂತರ ಬಾಗಿಲು ಒಡೆದು ನೋಡಿದಾಗ ಫ್ಯಾನಿಗೆ ನೇಣು ಹಾಕಿಕೊಂಡಿದ್ದು ಕಂಡುಬಂದಿದೆ. ತಕ್ಷಣ ನೇಣು ಬಿಚ್ಚಿ ದೇಹವನ್ನು ಕೆಳಗೆ ಇಳಿಸಲಾಯಿತು ಅಷ್ಟೋತ್ತಿಗೆ ವಿನಯ್ ಮೃತಪಟ್ಟಿದ್ದರು. ಈ ವಿಚಾರವನ್ನು ಪಟ್ಟಣ ಪೊಲೀಸ್ ಠಾಣೆ ಪೊಲೀಸರಿಗೆ ತಿಳಿಸಲಾಯಿತು. ಸ್ಥಳಕ್ಕೆ ಇನ್ಸ್ಪೆಕ್ಟರ್ ಆನಂದ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ವಿನಯ್ ಪತ್ನಿ ಕೋಗಿಲೂರಿನಲ್ಲಿರುವ ತನ್ನ ಪತಿಯ ಊರಿಗೆ ಶುಭ ಸಮಾರಂಭವೊಂದಕ್ಕೆ ಹೋಗಿದ್ದರು. ಸದ್ಯದಲ್ಲೇ ನಗರಕ್ಕೆ ತಮ್ಮ ಮಗುವಿನೊಂದಕ್ಕೆ ಬರಲು ತಯಾರಿದ್ದರು ಆದರೆ ಪತಿ ಸಾವಿಗೆ ಶರಣಾಗಿದ್ದಾರೆ. ಭಾನುವಾರ ಬೆಳಿಗ್ಗೆ ವಿನಯ್ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಸಿಮ್ಸ್ ಆಸ್ಪತ್ರೆಗೆ ಒಪ್ಪಿಸಿದರು. ಸಂಜೆ ಶವ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ವಿತರಿಸಲಾಯಿತು.
ವಿನಯ್ ಭಾವಮೈದುನ ಉಮೇಶ್ ಇದೊಂದು ಅಸಹಜ ಸಾವು ಎಂದು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.





