ಹನೂರು : ವಿಧಾನಸಭಾ ಕ್ಷೇತ್ರದ ಪ್ರಮುಖ ಜಲಾಶಯಗಳ ಪೈಕಿ ರಾಮನ ಗುಡ್ಡ ಜಲಾಶಯಕ್ಕೆ ಕಳೆದ ಎರಡು ತಿಂಗಳ ಹಿಂದೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಲಾಗಿದೆ. ಮುಂದಿನ ದಿನಗಳಲ್ಲಿ ಹುಬ್ಬೆ ಹುಣಸೆ ಜಲಾಶಯಕ್ಕೂ ನೀರು ತುಂಬಿಸಿ ಈ ಭಾಗದ ರೈತರ ಹಲವು ವರ್ಷಗಳ ಕನಸು ನನಸು ಮಾಡಲು ಕ್ರಮ ವಹಿಸುವುದಾಗಿ ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲೂಕಿನ ಹುಬ್ಬೆ ಹುಣಸೆ ಜಲಾಶಯದ ಹೂಳೆತ್ತುವ ಕಾಮಗಾರಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಹುಬ್ಬೆ ಹುಣಸೆಯ ಜಲಾಶಯ ನಿರ್ಮಾಣವಾದ ಸಂದರ್ಭದಲ್ಲಿ ರೈತರ ಜಮೀನುಗಳನ್ನು ಪರಿಹಾರ ನೀಡಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಆದರೆ ನೀರಾವರಿ ಇಲಾಖೆಯ ಅಧಿಕಾರಿಗಳು ಗಡಿ ಗುರುತು ಮಾಡದೇ ಇರುವುದರಿಂದ ಹಾಗೂ ಸಮರ್ಪಕ ಮಳೆಯಾಗದೆ ಜಲಾಶಯ ಭರ್ತಿಯಾಗದೆ ಇರುವುದರಿಂದ ಪರಿಹಾರ ಪಡೆದುಕೊಂಡ ರೈತರು ತಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿದ್ದರು. ಇದರಿಂದ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ನೀರು ಶೇಖರಣೆ ಆಗುತ್ತಿರಲಿಲ್ಲ, ಈ ಸಂಬಂಧ ಜಲಾಶಯದ ಗಡಿ ಗುರುತು ಮಾಡಿ ಒತ್ತುವರಿ ತೆರವು ಮಾಡಲಾಗಿದೆ ಎಂದು ಹೇಳಿದರು.
ಇನ್ನು ಮೂರು ತಿಂಗಳೊಳಗೆ ಹುಬ್ಬೆ ಹುಣಸೆ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಲು ಎಲ್ಲಾ ರೀತಿಯ ಕ್ರಮ ವಹಿಸಲಾಗಿದೆ. ಇದೀಗ ಹೆಚ್ಚಿನ ನೀರು ಶೇಖರಣೆ ಮಾಡುವ ನಿಟ್ಟಿನಲ್ಲಿ ಹೂಳು ತೆಗೆಸಲಾಗುತ್ತಿದೆ. ಕೆರೆಯಲ್ಲಿರುವ ಮಣ್ಣನ್ನು ಯಾರು ಬೇಕಾದರೂ ತೆಗೆದುಕೊಂಡು ಬಳಕೆ ಮಾಡಿಕೊಳ್ಳಬಹುದು. ಮಣ್ಣು ತೆಗೆಯುವ ವೇಳೆ ಯಾರಾದರೂ ತೊಂದರೆ ನೀಡಿದರೆ ಅಂತಹ ಅವರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹನೂರು ವಿಧಾನಸಭಾ ಕ್ಷೇತ್ರದ ಗುಂಡಾಲ್ ಜಲಾಶಯ, ರಾಮನ ಗುಡ್ಡ, ಹುಬ್ಬೆ ಹುಣಸೆ ಸೇರಿದಂತೆ ಮೂರು ಜಲಾಶಯಗಳಿಗೆ ಈ ಹಿಂದೆ 138 ಕೋಟಿ ವೆಚ್ಚದಲ್ಲಿ ಕಾವೇರಿ ನದಿ ಮೂಲದಿಂದ ನೀರು ತುಂಬಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಗುಂಡಾಲ್ ಜಲಾಶಯಕ್ಕೆ ಮಾತ್ರ ಕಳೆದ ಎರಡು ವರ್ಷಗಳ ಹಿಂದೆಯೇ ನೀರು ತುಂಬಿಸಲಾಗಿತ್ತು. ಉಳಿದಂತೆ ರಾಮನ ಗುಡ್ಡ ಹಾಗೂ ಜಲಾಶಯಗಳಿಗೆ ನೀರು ತುಂಬಿಸಲು ಸಾಧ್ಯವಾಗದೆ ನೆನಗುದಿಗೆ ಬಿದ್ದಿತ್ತು. ಇದರಿಂದ ಈ ಭಾಗದ ರೈತರ ಕನಸು ಈಡೇರಲಿಲ್ಲ, ಕಳೆದ ಹಲವಾರು ವರ್ಷಗಳಿಂದ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದೆ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು. ಇದಲ್ಲದೆ ಕಾವೇರಿ ನದಿಯ ಮೂಲಕ ತಮಿಳುನಾಡಿಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದರು ಈ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ, ಈ ಸಂಬಂಧ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ರಾಮನ ಗುಡ್ಡ ಚಲಾಯಿಸಿ ಕೇವಲ ಎರಡು ಕೋಟಿ ವೆಚ್ಚದಲ್ಲಿ ಅಳವಡಿಸಿ ನೀರು ತುಂಬಿಸಲಾಗಿದೆ. ಇದರಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರು ಆರ್ಥಿಕವಾಗಿ ಸದೃಢರಾಗಲಿದ್ದಾರೆ ಎಂದು ಸಂತಷ ವ್ಯಕ್ತಪಡಿಸಿದರು.
ರಾಮನಗುಡ್ಡ ಜಲಾಶಯ ಬಹುತೇಕ ಭರ್ತಿಯಾಗಿರುವುದರಿಂದ ಹಳ್ಳದ ಮೂಲಕ ನೀರು ಹರಿಸಲಾಗುತ್ತಿದ್ದು ಚಿಂಚಳ್ಳಿ, ಮಣಗಳ್ಳಿ ಗ್ರಾಮದವರೆಗೆ ಇರುವ ಚೆಕ್ ಡ್ಯಾಂ ಭರ್ತಿಯಾಗಿದ್ದು ಅಂತರ್ಜಲ ಮಟ್ಟ ಹೆಚ್ಚಾಗಿರುವುದರಿಂದ ಜನಜಾನುವಾರುಗಳಿಗೆ ಅನುಕೂಲವಾಗಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದರು.
ಇದೇ ವೇಳೆ ಮಡಿವಾಳ ಸಮುದಾಯದ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ಮುಖಂಡರಾದ ಡಿ.ಕೆ ರಾಜು, ಉದ್ದನೂರು ಗಿರೀಶ್ ಜಿಕೆ, ಹೊಸೂರು ಪ್ರಮೋದ್, ಚಿನ್ನವೆಂಕಟ ಸೇರಿದಂತೆ ಇನ್ನಿತರರು ಹಾಜರಿದ್ದರು.




