ರಾಜೇಶ್ ಬೆಂಡರವಾಡಿ
ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿ ಗ್ರಾಮದ ಬಳಿ ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮಂಗಳವಾರ ರಾತ್ರಿ ಮುಖಾಮುಖಿ ಡಿಕ್ಕಿಯಾಗಿ ಚಾಲಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಲಾರಿ ಮತ್ತು ಬಸ್ ಪರಸ್ಪರ ಗುದ್ದಿದ ರಭಸಕ್ಕೆ ಅಶ್ವಮೇಧ ಸಾರಿಗೆ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಇದರಿಂದ ಬಸ್ ಚಾಲಕ ಮಂಜು ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಂಜನಗೂಡು ಕಡೆಯಿಂದ ಬಸ್, ಚಾಮರಾಜನಗರ ಕಡೆಯಿಂದ ಲಾರಿ ಸಂಚರಿಸುವಾಗ ಗ್ರಾಮದ ಶಾಲೆ ಹತ್ತಿರದ ತಿರುವಿನಲ್ಲಿ ರಾತ್ರಿ 10 ಗಂಟೆ ಸುಮಾರಿನಲ್ಲಿ ಘಟನೆ ಸಂಭವಿಸಿದೆ. ಗಾಯಾಳು ಪ್ರಯಾಣಿಕರನ್ನು ನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಮೃತ ಬಸ್ ಚಾಲಕ ಮಂಜು ಎಂಬುವವರು ಯಳಂದೂರು ತಾಲ್ಲೂಕಿನ ಇರಸವಾಡಿ ಗ್ರಾಮದವರಾಗಿದ್ದು, ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.





