ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಈಗ ಬ್ರೇಕ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿಗಳು ಸೋಲಾರ್ ಬೋರ್‌ವೆಲ್ ಮೂಲಕ ನೀರು ತುಂಬಿಸಲು ಕಾರ್ಯಪ್ರವೃತ್ತರಾಗಿದ್ದಾರೆ ಎನ್ನಲಾಗುತ್ತಿದೆ.
2025ರ ಫೆಬ್ರವರಿಯಿಂದಲೇ ಈ ಬಾರಿ ತಾಪಮಾನ ಏರಿಕೆಯಾಗಿದ್ದು, ಬಿಸಿಲ ಬೇಗೆಗೆ ಕಾಡು ಪ್ರಾಣಿಗಳು ಸಹ ಬಸವಳಿದಿವೆ.
ಕಳೆದ ವರ್ಷ ಇದೇ ಸಮಯದಲ್ಲಿ ಬಂಡೀಪುರ ಅರಣ್ಯದಲ್ಲಿ 400 ಕೆರೆಗಳ ಪೈಕಿ ಶೇಕಡಾ.90ರಷ್ಟು ಕೆರೆಗಳು ಬರಿದಾಗಿದ್ದವು.
ಈ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ಕಬಿನಿ ಹಿನ್ನೀರು ಹಾಗೂ ತಮಿಳುನಾಡಿನ ಮಾಯಾರ್ ಕಡೆ ವಲಸೆ ಹೋಗಿದ್ದವು.
ಆದರೆ ಈ ವರ್ಷ ಮಾರ್ಚ್ ಬಂದರೂ ಕೂಡ ಕರೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿದ್ದು, ಪ್ರಾಣಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ.
ಆದರೂ ಮುನ್ನೆಚ್ಚರಿಕೆಯಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸೋಲಾರ್ ಬೋರ್‌ವೆಲ್ ಮೂಲಕ ನೀರು ತುಂಬಿಸಲು ಕಾರ್ಯೋನ್ಮುಖರಾಗಿದ್ದಾರೆ.





