ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದ ಪ್ರದೇಶದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ.
ಬಂಡೀಪುರ ಅರಣ್ಯದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ದಿಟ್ಟ ಕ್ರಮ ಕೈಗೊಂಡಿದ್ದು, ಇದೇ ಮೊದಲ ಬಾರಿಗೆ ಆನೆ ಕಾರ್ಯಪಡೆ ರಚಿಸಿ ಆದೇಶ ಹೊರಡಿಸಿದೆ.
ಆನೆ ಕಾರ್ಯಪಡೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪಶು ವೈದ್ಯಾಧಿಕಾರಿ, ವಲಯ ಅರಣ್ಯಾಧಿಕಾರಿ ಹಾಗೂ 4 ಉಪವಲಯ ಅರಣ್ಯಾಧಿಕಾರಿ, 8 ಅರಣ್ಯ ರಕ್ಷಕರ ಜೊತೆಗೆ 32 ಮಂದಿ ಹೊರ ಗುತ್ತಿಗೆ ಸಿಬ್ಬಂದಿಗಳು ಇರಲಿದ್ದಾರೆ.
ಆನೆ ಕಾರ್ಯಪಡೆ ಕೇಂದ್ರ ಸ್ಥಾನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇರಲಿದ್ದು, ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರ ನಿರ್ದೇಶನದಡಿ ಕಾರ್ಯ ನಿರ್ವಹಿಸಲಿದೆ.