ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ.
ಕಳೆದ 10 ದಿನಗಳಿಂದ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ಐದು ಸಾಕಾನೆಗಳನ್ನು ಬಳಸಿಕೊಂಡು ಹುಲಿಯನ್ನು ಹೇಗಾದರೂ ಮಾಡಿ ಸೆರೆ ಹಿಡಿಯಬೇಕು ಎಂದು ಪಣ ತೊಟ್ಟಿದ್ದರು.
ಚಾಮರಾಜನಗರ ತಾಲ್ಲೂಕಿನ ನಂಜೇದೇವನಪುರ, ಉಡಿಗಾಲ, ವೀರನಪುರ, ಕೆ.ಕೆ.ಹುಂಡಿ ಸೇರಿದಂತೆ ಏಳು ಗ್ರಾಮಗಳಲ್ಲಿ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿ ಹಗಲು ರಾತ್ರಿ ಎನ್ನದೇ ಹುಲಿಗಳನ್ನು ಸೆರೆ ಹಿಡಿಯಬೇಕು ಎಂದು ಪಣ ತೊಟ್ಟಿದ್ದರು.
ಈಗ ಚಾಮರಾಜನಗರ ತಾಲ್ಲೂಕಿನ ವೀರನಪುರ ಗ್ರಾಮದ ಜಮೀನಿನೊಂದರಲ್ಲಿ ಹುಲಿಯೊಂದು ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ ಈ ಹುಲಿಯು ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಯಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ತಾಯಿ ಹಾಗೂ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಮತ್ತೆ ಕಾರ್ಯಾಚರಣೆ ಕೈಗೊಳ್ಳಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ.





