ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ದ ಪ್ರೇಕ್ಷಣಿಯ ಕ್ಷೇತ್ರ ಹಾಗೂ ಹಿಮವದ್ ಗೋಪಾಲಸ್ವಾಮಿ ನೆಲೆಸಿರುವ ಕ್ಷೇತ್ರವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಭಕ್ತರಿಗೆ ಸರತಿ ಸಾಲಿನ ಶೆಡ್ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಯಿತು.
ಗುಂಡ್ಲುಪೇಟೆ ತಾಲ್ಲೂಕಿನ ಗೋಪಾಲಸ್ವಾಮಿ ಬೆಟ್ಟಕ್ಕೆ ನನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು ವಿವಿಧ ಜಿಲ್ಲೆ ರಾಜ್ಯಗಳಿಂದ ಹಾಗೂ ವಿದೇಶದಿಂದಲೂ ಆಗಮಿಸುತ್ತಾರೆ. ಆದರೆ ಮಳೆ ಬಿಸಿಲಿಗೆ ಪ್ರವಾಸಿಗರು ನಿಲ್ಲಲು ಸರತಿ ಸಾಲಿನ ಶೆಡ್ ಇಲ್ಲದ ಕಾರಣ ತುಂಬಾ ಅವಸ್ಥೆ ಪಡುತ್ತಿದ್ದರು. ಈ ವಿಚಾರವಾಗಿ ಆಂದೋಲನ ಪತ್ರಿಕೆ “ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಬಿಸಿಲಿಗೆ ನಳುಗಿದ ಪ್ರವಾಸಿಗರು” ಎಂಬ ಶೀರ್ಷಿಕೆಯಲ್ಲಿ ವರದಿ ಮಾಡಲಾಗಿತ್ತು.
ಈ ವರದಿಯನ್ನು ಗಮನಿಸಿದ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳಾದ ಪರಮೇಶಿ ಹಾಗೂ ವೈಷ್ಣವಿ ಅವರು ಹಿಂದಿನ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಜೊತೆ ಮಾತನಾಡಿ ಕಾಯಕಲ್ಪ ರೂಪಿಸುವಂತೆ ಸೂಚಿಸಿದರು. ನಂತರ ಶಾಸಕ ಎಚ್ ಎಂ ಗಣೇಶ್ ಪ್ರಸಾದ್ ಜೊತೆ ಚರ್ಚಿಸಿ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಇದಕ್ಲೆ ಸ್ಪಂದಿಸಿದ ಶಾಸಕ ಎಚ್ ಎಂ ಗಣೇಶ್ ಪ್ರಸಾದ್ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪ್ರವಾಸಿಗರು, ಭಕ್ತರಿಗೆ ಅನುಕೂಲವಾಗಲಿ ಎಂದು ಸರತಿ ಸಾಲಿನ ಶೆಡ್ ನಿರ್ಮಾಣಕ್ಕೆ ಅನುದಾನ ಹಾಕಿ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗಣೇಶ್ ಪ್ರಸಾದ್ ಅವರು, ಅನೇಕ ದಿನಗಳಲ್ಲಿ ಮಾದ್ಯಮದಲ್ಲಿ ಪ್ರವಾಸಿಗರಿಗೆ ಬಿಸಿಲು ಮಳೆಗೆ ಸರತಿ ಸಾಲಿನಲ್ಲಿ ನಿಲ್ಲುವವರಿಗೆ ಸಮಸ್ಯೆಯಾಗುವ ಬಗ್ಗೆ ವರದಿ ಬಂದ ಹಿನ್ನಲೆ ಜಿಲ್ಲಾಧಿಕಾರಿಯಾಗಿದ್ದ ಶಿಲ್ಪಾನಾಗ್ ರವರು ನನಗೆ ಕರೆ ಮಾಡಿ ಅನುದಾನ ನೀಡುವ ಬಗ್ಗೆ ಕೇಳಿದ್ದರು. ಅದರಂತೆ 20 ಲಕ್ಷ ಅನುದಾನದಲ್ಲಿ ಕಾಮಗಾರಿಗೆ ಗುದ್ದಲಿಪೂಜೆ ನಡೆಸಿದ್ದು ಬಿಸಿಲು ಮಳೆಯಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಇಲ್ಲಿಯೇ ಟಿಕೆಟ್ ಕೌಂಟರ್ ತೆರೆಯುವುದರಿಂದ ಬಸ್ ಗಳು ಶೆಡ್ ಬಳಿಯಿಂದ ತೆರಳಲಿದೆ ಎಂದರು.
ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ನಂಜುಂಡ ಪ್ರಸಾದ್, ಮಾಜಿಕಾಡಾ ಅಧ್ಯಕ್ಷ ನಂಜಪ್ಪ, ಪಿ ಬಿ ರಾಜಶೇಖರ್, ಬಸವರಾಜು, ಹಾಪ್ ಕಾಮ್ಸ್ ಅಧ್ಯಕ್ಷ ನಾಗೇಶ್, ಎಪಿಎಂಸಿ ಅಧ್ಯಕ್ಷ ನಾಗರಾಜು, ಲೋಕೇಶ್ ಗೋಪಾಲಪುರ, ರವಿ ಕಲ್ಲಿಪುರ, ಸಿಎಫ್ ಪ್ರಭಾಕರನ್, ಎಸಿಎಫ್ ನವೀನ್ ಕುಮಾರ್, ಆರ್ ಎಫ್ ಓ ಮಲ್ಲೇಶ್, ಡಿಅರ್ ಎಫ್ ಓ ಶ್ರೀಕಾಂತ್, ಕೆಆರ್ ಡಿಎಲ್ ಇಇ ತಿಪ್ಪಾರೆಡ್ಡಿ, ಎಇಇ ಪ್ರಸನ್ನ ಕುಮಾರ್, ಪ್ರಶಾಂತ್, ಶಂಕರ್ ಗಾರಿ ಮತ್ತಿತರರಿದ್ದರು.





