Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಗುಂಡಾಲ್‌ ಜಲಾಶಯಕ್ಕೆ ಮೂರು ದಿನಗಳಲ್ಲಿ ನೀರು ಬಿಡುಗಡೆಗೆ ಕ್ರಮ: ಮಾಜಿ ಶಾಸಕ ಆರ್‌.ನರೇಂದ್ರ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯಕ್ಕೆ ಇನ್ನು ಮೂರು ದಿನಗಳಲ್ಲಿ ಸರಗೂರು ಗ್ರಾಮದ ಪಂಪ್ ಹೌಸ್ ನಿಂದ ನೀರು ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆರೆ ಪ್ರವಾಹ ಗ್ರಾಮಗಳಿಗೆ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯರವರು ಮೊದಲನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ 2018ರಲ್ಲಿ 132 ಕೋಟಿ ವೆಚ್ಚದಲ್ಲಿ ಗುಂಡಾಲ್ ಜಲಾಶಯ, ರಾಮನ ಗುಡ್ಡ, ಹುಬ್ಬೆಹುಣಸೆ ಮೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು.

ನಂತರ ಸರಗೂರು ಗ್ರಾಮದ ಬಳಿ ಕಾವೇರಿ ನದಿಯಿಂದ ನೀರನ್ನು ಎತ್ತಿ ಗುಂಡಾಲ್ ಜಲಾಶಯಕ್ಕೆ ಮಾತ್ರ ಬಿಡಲಾಗಿತ್ತು. ಇನ್ನು ರಾಮನಗುಡ್ಡ ಹಾಗೂ ಹುಬ್ಬೆ ಹುಣಸೆ ಜಲಾಶಯಕ್ಕೆ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸಲು ೬.೫೦ ಕೋಟಿ ಹೆಚ್ಚುವರಿ ಅನುದಾನ ಬೇಕಾಗಿರುವುದರಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿಕೆ ಶಿವಕುಮಾರ್ ,ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ರವರಿಗೆ ಮನವಿ ಪತ್ರ ನೀಡಲಾಗಿದೆ. ಅವರು ಸಹ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಈ ವರ್ಷ ಕಾಮಗಾರಿ ಪೂರ್ಣಗೊಂಡರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಜಲಾಶಯಗಳಿಗೆ ಕೆರೆ ನೀರು ತುಂಬಿಸುವ ಯೋಜನೆ ಪೂರ್ಣಗೊಳ್ಳಲಿದ್ದು ಈ ಭಾಗದ ಸಾವಿರಾರು ರೈತರಿಗೆ ಅಂತರ್ಜಲ ಮಟ್ಟ ಹೆಚ್ಚಿ ಅನುಕೂಲವಾಗಲಿದೆ ಎಂದರು.

ಕಬಿನಿ ಹಾಗೂ ಕಾವೇರಿ ನದಿಯಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದರು ಕಾಮಗಾರಿ ಪೂರ್ಣಗೊಂಡಿರುವ ಗುಂಡಾಲ್ ಜಲಾಶಯಕ್ಕೆ ಸರಗೂರು ಗ್ರಾಮದಿಂದ ಇನ್ನು ನೀರು ಸರಬರಾಜು ಆಗದೆ ಇರುವ ಬಗ್ಗೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಅಧಿಕಾರಿಗಳು ಸರಗೂರು ಗ್ರಾಮದಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕ ದುರಸ್ತಿಗೊಂಡಿರುವುದರಿಂದ ದುರಸ್ತಿಗೆ ಕಳುಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿಯಾಗಲಿದ್ದು ದುರಸ್ತಿಯಾದ ತಕ್ಷಣ ಗುಂಡಾಲ್ ಜಲಾಶಯಕ್ಕೆ ಕಾವೇರಿ ನದಿಯಿಂದ ನೀರು ಹರಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಮಾಧ್ಯಮದವರಿಗೆ ತಿಳಿಸಿದರು.

ಕೇರಳದ ವೈನಾಡು ಹಾಗೂ ಮಡಿಕೇರಿ ವ್ಯಾಪ್ತಿಯಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆ ಕಾವೇರಿ ಹಾಗೂ ಕಬಿನಿ ಜಲಾಶಯಗಳಿಂದ 2 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ನದಿಗೆ ಬಿಟ್ಟಿರುವುದರಿಂದ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಡಕುರಿಯ, ಸರಗೂರು, ಧನಗೆರೆ, ಜನಕನಹಳ್ಳಿ, ಸತ್ತೇಗಾಲ ಗ್ರಾಮಗಳು ಜಲಾವೃತವಾಗಲಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಗಂಜಿ ಕೇಂದ್ರಗಳಿಗೆ ತೆರೆಯುವಂತೆ ಮನವಿ ಮಾಡಿದ್ದೇನೆ.

ಬುಧವಾರ ಸಂಜೆಯಿಂದ ಹೆಚ್ಚು ನೀರು ಬಿಡುವ ನಿರೀಕ್ಷೆ ಇರುವುದರಿಂದ ಸರಗೂರು ಹಾಗೂ ದ್ವೀಪ ಗ್ರಾಮ ಎಂದೇ ಪ್ರಸಿದ್ಧಿಯಾಗಿರುವ ಎಡಕುರಿಯ ಗ್ರಾಮ ಬಹುತೇಕ ಮುಳುಗಡೆಯಾಗಲಿರುವುದರಿಂದ ಈಗಾಗಲೇ ಮುಂಜಾಗ್ರತೆ ಕ್ರಮ ವಹಿಸುವಂತೆ ಗ್ರಾಮಕ್ಕೆ ಭೇಟಿ ನೀಡಿ ನಿವಾಸಿಗಳಿಗೆ ಮನವರಿಕೆ ಮಾಡಿ ಕೊಟ್ಟಿದ್ದೇನೆ, ಈಗಾಗಲೇ ಜಿಲ್ಲಾಡಳಿತ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜಲಾವೃತ ಆಗುವ ಗ್ರಾಮಸ್ಥರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದಾರೆ. ಅವರು ಸಹ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಸಂತಾಪ: ಕೇರಳದ ವೈನಾಡಿನಲ್ಲಿ ಗುಡ್ಡ ಬಸಿದು ನೂರಾರು ಜನರು ಸಾವನ್ನಪ್ಪಿರುವುದು ದುರಾದೃಷ್ಟಕರದ ಸಂಗತಿ ಅವರ ಕುಟುಂಬಗಳಿಗೆ ದುಃಖ ತಡೆಯುವಂತಹ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.

ಜಿಲ್ಲಾಡಳಿತದ ಕಾರ್ಯವೈಖರಿಗೆ ಮೆಚ್ಚುಗೆ: ನೆರೆಯ ರಾಜ್ಯ ಕೇರಳದ ವೈನಾಡಿನಲ್ಲಿ ಗುಡ್ಡ ಕುಸಿದು ನೂರಾರು ಜನರು ಪ್ರಾಣ ಕಳೆದುಕೊಂಡಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಸಿ.ಟಿ ಶಿಲ್ಪನಾಗ್ ರವರು ಕೇರಳ ರಾಜ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ, ಇದಲ್ಲದೆ ನಮ್ಮ ಭಾಗದವರು ಅಲ್ಲಿ ಸಿಲುಕಿಕೊಂಡು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ .ಇದಲ್ಲದೆ ನಮ್ಮ ಜಿಲ್ಲೆಯವರು ವೈನಾಡಿಗೆ ಹೋಗಿರುವವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ಸಿ.ಟಿ ಶಿಲ್ಪಾ ನಾಗ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ, ಉಪ ವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ತಡ ರಾತ್ರಿಯ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ. ಕೇರಳದ ವೈನಾಡಿನಲ್ಲಿ ನಮ್ಮ ಭಾಗದವರು ಯಾರಾದರೂ ಸಿಲುಕಿಕೊಂಡಿದ್ದರೆ ಅವರಿಗೆ ಅನುಕೂಲ ಕಲ್ಪಿಸಲು ಸಹಾಯವಾಣಿ ಕೇಂದ್ರ ತೆರೆದು ಜಿಲ್ಲಾ ಮಟ್ಟದ ಅಧಿಕಾರಿಗಳು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರವು ಕೇರಳ ರಾಜ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಘೋಷಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಾವು ಸಹ ನಿರಂತರವಾಗಿ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಈ  ವೇಳೇ ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಳ್ಳಿ ಶಿವಕುಮಾರ್, ಜಿಪಂ ಮಾಜಿ ಸದಸ್ಯ ಕೊಪ್ಪಳಿ ಮಹದೇವ ನಾಯಕ್, ತಾಪಂ ಮಾಜಿ ಅಧ್ಯಕ್ಷ ಅರುಣ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನ್ ದೊರೆರಾಜು, ಮುಖಂಡರಾದ ಶಿವಶಂಕರ್, ಮಹಾದೇವ, ಸರಗೂರು ಶಿವು ಸೇರಿದಂತೆ ಇನ್ನಿತರರು ಹಾಜರಿದ್ದರು.

Tags: