ಚಾಮರಾಜನಗರ : ಮಹಿಳೆಯೊಬ್ಬರು ಜ್ಯೋತಿಷಿ ಮಾತು ಕೇಳಿ ನಿಧಿ ಆಸೆಗಾಗಿ ಮನೆಯಲ್ಲೆ ಗುಂಡಿ ತೋಡಿರುವ ಘಟನೆ ನಡೆದಿದೆ. ಆ ಗೃಹಿಣಿ ನಿಧಿ ಆಸೆಗಾಗಿ ಮನೆಯೊಳಗೆ ಬರೋಬ್ಬರಿ 20 ಅಡಿ ಆಳದ ಗುಂಡಿ ತೆಗೆದಿದ್ದಾರೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಾಸ್ತು ಸರಿ ಇಲ್ಲ ಎಂದು ಶಾಸ್ತ್ರ ಕೇಳಲು ಹೋಗಿದ್ದ ಗ್ರಾಮದ ಭಾಗ್ಯ ಎಂಬ ಮಹಿಳೆಗೆ ನಿಮ್ಮ ಮನೆಯಲ್ಲಿ ನಿಧಿ ಇದೆ ಎಂದು ಜ್ಯೋತಿಷಿ ನಂಬಿಸಿದ್ದಾನೆ.
ನಿಧಿ ಸಿಗಲು ಮನೆಯಲ್ಲಿ ವಿಶೇಷ ಪೂಜೆ ಮಾಡಬೇಕೆಂದು ಜ್ಯೋತಿಷಿ ಮಹಿಳೆಯಿಂದ ಸಾವಿರಾರು ರೂಪಾಯಿ ವಸೂಲಿ ಮಾಡಿದ್ದಾನೆ. ಜ್ಯೋತಿಷಿ ಮಾತು ನಂಬಿ ಮಹಿಳೆಯು ಕಳಸ ಇಟ್ಟು ವಿಶೇಷ ಪೂಜೆ ಮಾಡಿಸಿದ್ದಾರೆ.
ಬಳಿಕ 3 ಅಡಿ ಅಗಲ 20 ಅಡಿ ಆಳದ ಗುಂಡಿ ತೆಗೆಸಿದ್ದಾರೆ. ನೆರೆಹೊರೆಯವರಿಗೆ ವಿಷಯ ಗೊತ್ತಾಗಿ ರಾಮಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲಿ ಜ್ಯೋತಿಷಿ ಕಾಲ್ಕಿತ್ತಿದ್ದಾನೆ. ಕಳೆದೊಂದು ವಾರದ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.