ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏರಿಕಾಡು ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಕುಡಿಯುವ ನೀರಿನ ಟ್ಯಾಂಕ್‌ಗೆ ಮುಚ್ಚಳವೇ ಇಲ್ಲದೆ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಹನೂರು ತಾಲೂಕು ಅಧ್ಯಕ್ಷ ಲೂರ್ದುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ಏರಿಕಾಡು ಗ್ರಾಮದ ಅರ್ಧದಷ್ಟು ಜನರು ಇದೇ ಟ್ಯಾಂಕ್‌ನ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಆದರೆ ಟ್ಯಾಂಕ್‌ಗೆ ಮುಚ್ಚಳವಿಲ್ಲದ ಕಾರಣ ಕೋತಿಗಳು ಅದರೊಳಗೆ ಇಳಿದು ಸ್ನಾನ ಮಾಡುತ್ತಿವೆ. ಟ್ಯಾಂಕ್‌ನ ಸುತ್ತಮುತ್ತ ಗಲೀಜು ತುಂಬಿಕೊಂಡಿದ್ದು, ನೀರು ಸಂಪೂರ್ಣ ಕಲುಷಿತಗೊಂಡಿದೆ.
ಟ್ಯಾಂಕ್ ತುಂಬಿ ಹರಿದು ಸಾವಿರಾರು ಲೀಟರ್ ನೀರು ಪ್ರತಿದಿನ ವ್ಯರ್ಥವಾಗುತ್ತಿದೆ. ನೀರನ್ನು ನಿಲ್ಲಿಸುವ ಬಗ್ಗೆಯೂ, ಟ್ಯಾಂಕ್ ಸ್ವಚ್ಛಗೊಳಿಸುವ ಬಗ್ಗೆಯೂ ಯಾರೂ ಗಮನ ಹರಿಸುತ್ತಿಲ್ಲ” ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.




