Mysore
26
light rain

Social Media

ಮಂಗಳವಾರ, 08 ಅಕ್ಟೋಬರ್ 2024
Light
Dark

ಮ. ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಹಕಾರ: ಇಬ್ಬರು ಮುಖ್ಯ ಪೇದೆಗಳ ಅಮಾನತ್ತು

ಹನೂರು: ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇಬ್ಬರು ಮುಖ್ಯಪೇದೆಗಳನ್ನು ಅಮಾನತ್ತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ ಆದೇಶ ಹೊರಡಿಸಿದ್ದಾರೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಮುಖ್ಯಪೇದೆ ಅಣ್ಣಾ ದೊರೆ ಹಾಗೂ ಮುತ್ತುರಾಜು ಅಮಾನತುಗೊಂಡ ಪೊಲೀಸ್ ಪೇದೆಗಳಾಗಿದ್ದಾರೆ.

ಘಟನೆಯ ವಿವರ: ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದಿದ್ದರೂ ಹಿರಿಯ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆ ಗುಪ್ತ ಮಾಹಿತಿ ಸಂಗ್ರಹಗಾರನಾಗಿ (ಎಸ್ ಬಿ)ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯಪೇದೆ ಅಣ್ಣಾ ದೊರೆರವರನ್ನು ಅಮಾನತ್ತು ಮಾಡಲಾಗಿದೆ. ಇದಲ್ಲದೆ ಸ್ಥಳೀಯರು ದೂರು ನೀಡಿದ ಹಿನ್ನೆಲೆ ಇನ್ನೋರ್ವ ಮುಖ್ಯಪೇದೆ ಮುತ್ತುರಾಜುರವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಎಎಸ್ಐಯಾಗಿದ್ದ ಚಿಕ್ಕಕ್ಕಾಳೇಗೌಡರವರನ್ನು ಬೇಗೂರು ಪೊಲೀಸ್ ಠಾಣೆಗೆ, ಪೇದೆಗಳಾದ ಅಮರೇಶ್ ಚಾಮರಾಜನಗರ ಪಟ್ಟಣ ಠಾಣೆ, ಜೆ ಎಸ್ ಶ್ರೀಗಂಧ ಕೊಳ್ಳೇಗಾಲ ಪಟ್ಟಣ ಠಾಣೆ, ಗುರುಕಿರಣ್ ಜೆ, ಸಿ ಇ.ಎನ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇವರ ಸ್ಥಳಕ್ಕೆ ಸೆನ್ ಪೊಲೀಸ್ ಠಾಣೆಯ ಎಎಸ್ಐ, ಸಿ ಮಹದೇವಸ್ವಾಮಿ, ಮುಖ್ಯಪೇದೆ ನೀಲಕಂಠ, ಪೇದೆಗಳಾದ ನವೀನ್, ಮಲ್ಲನಗೌಡ ಬಿರಾದರ್ ಅವರನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹನೂರು ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ ಪಿ ಡಾ. ಬಿ.ಟಿ. ಕವಿತಾ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಮದ್ಯ ಮಾರಾಟ ಮಾಡಲು ತಡೆಯಲು ಸ್ಥಳೀಯ ಪೊಲೀಸ್ ಠಾಣೆಯಿಂದ ನಾಲ್ವರು ಸಿಬ್ಬಂದಿಗಳನ್ನು ಬೇರೆ ಠಾಣೆಗಳಿಗೆ ವರ್ಗಾಯಿಸಲಾಗಿದ್ದು ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮದ್ಯ ಮಾರಾಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದು ತಿಳಿಸಿದರು.

Tags: