Mysore
24
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಸಗಣಿ ಗುಡ್ಡದಲ್ಲೇ ಹೊರಳಾಡಿ ಸೆಗಣಿ ಉಂಡೆಗಳಿಂದ ಹೊಡೆದಾಡಿದರು ..!

ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮ್ಮಟಾಪುರದಲ್ಲಿ ಗೊರೆಹಬ್ಬ ಆಚರಣೆ

ಚಾಮರಾಜನಗರ: ಜಿಲ್ಲೆಯ ಗಡಿಯಲ್ಲಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮ್ಮಟಾಪುರದಲ್ಲಿ ಗ್ರಾಮಸ್ಥರು ಸೆಗಣಿಯ ಗುಡ್ಡದಲ್ಲೇ ಹೊರಳಾಡಿ, ಸೆಗಣಿ ಉಂಡೆಗಳಿಂದ ಹೊಡೆದಾಡಿ ವಿಶಿಷ್ಟವಾಗಿ ʼ ಗೊರೆ ಹಬ್ಬ’ ಆಚರಿಸಿದರು.
ಗ್ರಾಮದಲ್ಲಿ ಸಹಬಾಳ್ವೆ ಬೆಸೆಯುವ ಈ ಗೊರೆಹಬ್ಬವನ್ನು ಕನ್ನಡಿಗರೇ ಹೆಚ್ಚಿರುವ ಗುಮ್ಮಟಾಪುರದಲ್ಲಿ ತಲೆಮಾರುಗಳಿಂದ ಆಚರಿಸಲಾಗುತ್ತಿದೆ. ಪ್ರತಿವರ್ಷ ದೀಪಾವಳಿಯ ಬಲಿಪಾಡ್ಯಮಿ ಮಾರನೇ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಈ ವಿಶೇಷ ಹಬ್ಬ ನೋಡಲು ಸುತ್ತಲಿನ ಗ್ರಾಮಗಳ ಜನರು ಹಾಗೂ ಸಂಬಂಧಿಕರು, ನೆಂಟರು ಸೇರಿ ಸಾವಿರಾರು ಮಂದಿ ಬರುತ್ತಾರೆ. ದೀಪಾವಳಿ ಹಬ್ಬ ಬರುವುದನ್ನೇ ಕಾಯುವ ಇಲ್ಲಿನ ಯುವಕರು ಎಲ್ಲಿಲ್ಲದ ಹುಮ್ಮಸ್ಸಿನಿಂದ ಸಗಣಿ ಎರಚಾಡುವ ಮೂಲಕ ಸಂಭ್ರಮಿಸುತ್ತಾರೆ.
ಗುರುವಾರ ಮಧ್ಯಾಹ್ನ 3ಕ್ಕೆ ಪ್ರಾರಂಭವಾದ ಈ ಹಬ್ಬ ಸುಮಾರು ಒಂದೂವರೆ ತಾಸುಗಳ ಕಾಲ ನಡೆದು ನೂರಾರು ಯುವಕರು-ವಯಸ್ಕರು ದಪ್ಪ ದಪ್ಪ ಸಗಣಿ ಉಂಡೆ ಕಟ್ಟಿ ಪರಸ್ಪರ ಹೊಡೆದಾಡಿದರು.

ಹಬ್ಬದ ಹಿನ್ನೆಲೆ: ಗ್ರಾಮದ ಬೀರೇಶ್ವರ ಸ್ವಾಮಿಯ ಪ್ರೀತ್ಯರ್ಥವಾಗಿ ಗೊರೆಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.
ಹಿರಿಯರ ಪ್ರಕಾರ, ಗ್ರಾಮದ ಕಾಳೇಗೌಡ ಎಂಬುವವರ ಮನೆಗೆ ಉತ್ತರ ದೇಶದಿಂದ ದೇವರ ಗುಡ್ಡನೊಬ್ಬ ಬಂದಿದ್ದ. ಅವನು ಸತ್ತ ಮೇಲೆ ಅವನ ಜೋಳಿಗೆ, ಬೆತ್ತ, ಎಲ್ಲವನ್ನು ತಿಪ್ಪೆ ಗುಂಡಿಗೆ ಬಿಸಾಕಿದರಂತೆ. ಕೆಲವು ದಿನಗಳ ನಂತರ ಆ ತಿಪ್ಪೆಗುಂಡಿ ಬಳಿಗೆ ಎತ್ತಿನ ಗಾಡಿಯೊಂದು ಹೋದಾಗ ಲಿಂಗವೊಂದು ಕಾಣಿಸಿಕೊಂಡಿತು. ಗಾಡಿಯ ಚಕ್ರ ಲಿಂಗದ ಮೇಲೆ ಹರಿದಾಗ ಅದರಿಂದ ರಕ್ತ ಬಂದಿತ್ತು. ಆಗ ಗ್ರಾಮದ ಮುಖಂಡರ ಕನಸಿನಲ್ಲಿ ದೇವರ ಗುಡ್ಡಪ್ಪ ಕಾಣಿಸಿಕೊಂಡು ದೀಪಾವಳಿ ಹಬ್ಬವಾದ ಮರುದಿನವೇ ಗೊರೆಹಬ್ಬ ಮಾಡುವಂತೆ ಹೇಳಿದ್ದ ಎಂಬ ಪ್ರತೀತಿ ಇದೆ. ಲಿಂಗ ಕಾಣಿಸಿಕೊಂಡ ತಿಪ್ಪೆಗುಂಡಿಯಲ್ಲೇ ಬೀರಪ್ಪನ ದೇವಸ್ಥಾನ ಕಟ್ಟಿ ಗೊರೆಹಬ್ಬವನ್ನು ಆಚರಿಸಲಾಗುತ್ತಿದೆ.

ಚಾಡಿಕೋರನಿಗೆ ನಿಂದನೆ: ಹಬ್ಬ ಆರಂಭಕ್ಕೂ ಮುನ್ನ ಕೆರೆಯಂಗಳದಲ್ಲಿ ಕತ್ತೆಯನ್ನು ತೊಳೆದು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸೆಗಣಿ ಎರಚಾಡುವ ಬೀರಪ್ಪನ ಗುಡಿವರೆಗೆ ಕರೆ ತರಲಾಗುತ್ತದೆ.
ನಂತರ ಕತ್ತೆಯನ್ನು ತೊಳೆಯಲಾಗಿದ್ದ ಕೆರೆಯಲ್ಲಿ ಎಲ್ಲರೂ ಸ್ನಾನ ಮಾಡಿಕೊಂಡು ಊರಿಗೆ ಬರುವಾಗ ಚಾಡಿಕೋರನನ್ನು ಹೀಯಾಳಿಸುತ್ತಾ, ಊರ ಗೌಡನನ್ನು ಅಶ್ಲೀಲ ಶಬ್ದಗಳಿಂದ ಬಯ್ಯತ್ತಾ ಸಂಭ್ರಮಿಸಿ ಕೇಕೆ ಹಾಕುವುದು ನಡೆದುಕೊಂಡ ಬಂದ ರೂಢಿ. ಆಧುನಿಕತೆಯ ಎಲ್ಲ ಸೌಕರ್ಯಗಳು ಈ ಗ್ರಾಮಕ್ಕೂ ಕಾಲಿಟ್ಟಿವೆ. ಆದರೆ ತಲೆತಲಾಂತರದಿಂದ ಬಂದ ಈ ಹಬ್ಬವನ್ನು ಗ್ರಾಮಸ್ಥರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!