Mysore
20
overcast clouds
Light
Dark

ಜಾತಿ ವ್ಯವಸ್ಥೆ ಹೋದರಷ್ಟೆ ಪ್ರಬುದ್ಧ ಭಾರತ ನಿರ್ಮಾಣ : ಹ ರಾ ಮಹೇಶ್

ಹನೂರು: ಜಾತಿ, ಬಡತನ ವ್ಯವಸ್ಥೆ ಹೋಗಲಾರದೆ ಪ್ರಭುದ್ಧ ಭಾರತ ನಿರ್ಮಾಣವಾಗಲು ಸಾಧ್ಯವಿಲ್ಲ ಎಂದು ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷರಾದ ಹ.ರಾ.ಮಹೇಶ್ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಐದನೇ ಜಾಗೃತಿ ಶಿಬಿರದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿಗೂ ಜಾತಿ ಅಸಮಾನತೆ ತಾಂಡವಾಡುತ್ತಿದೆ. ಅದನ್ನು ತೊಲಗಿಸಲು ಬುದ್ಧ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಉತ್ತಮ ಸಾಮಾಜಿಕ ರಾಜಕೀಯ ಶೈಕ್ಷಣಿಕ ಬಿತ್ತನೆ ಬೀಜವನ್ನು ನೀಡಿದ್ದಾರೆ. ಆದರೆ ಹದವಾದ ಭೂಮಿ ಆಗಿರಬೇಕಾದ ಸಮುದಾಯದ ಕೆಲವು ಜನತೆ ದೇವರು ದಿಂಡಿರು ಎಂಬ ಮೌಡ್ಯದ ಜೊತೆಗೆ ದುಶ್ಚಟಗಳ ದಾಸಕ್ಕೆ ಬಲಿಯಾಗಿದ್ದಾರೆ. ಮೌಡ್ಯವನ್ನು ತಮ್ಮ ಮನೆಯಿಂದಲೇ ಹೋಗಲಾಡಿಸಬೇಕು ಅದು ಬಿಟ್ಟು ಎಲ್ಲರೂ ಬದಲಾಗುವುದಿಲ್ಲ ಎನ್ನುವುದು ಸರಿಯಲ್ಲ. ಸಮುದಾಯದ ಜನತೆ ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಜಾಗೃತರಾಗಬೇಕೆಂದು ತಿಳಿಸಿದರು.

ಡಿಸಿಪಿ ಸಿದ್ದರಾಜು ಅವರು ಮಾತನಾಡಿ, ಸಂವಿಧಾನ ಹೆಚ್ಚಳ ಮಾಡುವುದಕ್ಕೆ ಡಾ.ಬಿ. ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಕೆಲವರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ಕೋಟಿ ಕೋಟಿ ಖರ್ಚು ಮಾಡಿ ದೇಶವನ್ನು ಪಡೆದು ಕೊಳ್ಳೆ ಹೊಡೆಯುವ ವ್ಯವಸ್ಥೆ ನಿರ್ಮಾಣವಾಗಿದೆ. ಒಂದು ಎಂ. ಪಿ. ಸ್ಥಾನದಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅಧಿಕಾರ ಕಳೆದುಕೊಳ್ಳಬೇಕಾಯಿತು. ಒಂದು ಮತದ ಅಂತರದಿಂದ ಆರ್. ಧ್ರುವನಾರಾಯಣ್ ಸಂಸತ್ತಿಗೆ ಪ್ರವೇಶ ಮಾಡಿದರು. ಹಾಗಾಗಿ ಜನತೆ ಮತದಾನದ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಉಪಾಸಕರಾದ ಅರವಿಂದ್ ರಾಜ್ ಬೌದ್ಧ್ ಮಾತನಾಡಿ, ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ ಸ್ವಾಭಿಮಾನವನ್ನು ದೊಡ್ಡದು. ಅವರ ಮಗ ರಾಜರತ್ನ ತೀರಿಕೊಂಡಾಗ ಮಗನ ಶವಕ್ಕೆ ಹೊದ್ದಿಸಲು ಬಟ್ಟೆ ಇರದಂತಹ ಪರಿಸ್ಥಿತಿಯಲ್ಲಿದ್ದರೂ ಸ್ವಾಭಿಮಾನವನ್ನು ಬಿಟ್ಟುಕೊಟ್ಟಿರಲಿಲ್ಲ. ಹುಟ್ಟಿನ ಆಧಾರದ ಮೇಲೆ ಜಾತಿಯನ್ನು ನಿರ್ಧರಿಸಬಾರದು. ನಡತೆ ಆಧಾರದ ಮೇಲೆ ಗುರುತಿಸಬೇಕು. ಅಸ್ಪೃಶ್ಯರು ಎನಿಸಿಕೊಂಡ ಇಂದಿನ ಜನ ಹಿಂದೆ ಬೌದ್ಧರಾಗಿದ್ದರು ಎಂದರು.
ನಿವೃತ್ತ ಮುಖ್ಯ ಶಿಕ್ಷಕಿ ನಾಗಮಂಗಲದ ಚೂಡಾಮಣಿ, ಲಕ್ಷ್ಮಣ್ ಬಕ್ಕಾಯಿ, ದೊಡ್ಡಿಂದವಾಡಿ ಸಿದ್ದರಾಜು, ಶಿಕ್ಷಕಿ ಶಿವಕುಮಾರಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಬಂತೆ ಸುಗತಪಾಲರು ಧಮ್ಮ ವಂದನೆ, ಪಂಚಶೀಲ ಬೋಧಿಸಿದರು. ಚೌಡೇಶ್ ಅವರು ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಮುಕ್ತ ಸಂವಾದ ವೇದಿಕೆಯಿಂದ ಹನೂರು ಶೋಭಾ ಎಚ್. ಎಂ.ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ. ಪಂ.ಸದಸ್ಯ ಸಂಪತ್ ಕುಮಾರ್, ಗೌತಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ, ಗೃಹರಕ್ಷಕ ಸಿಬ್ಬಂದಿ ರಮೇಶ್, ಮಾರ್ಟಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಾಮಲಿಂಗಂ, ಸಂವಾದ ವೇದಿಕೆ ಸದಸ್ಯರಾದ ಶಿಕ್ಷಕ ಸುಭಾಷ್ ಚಂದ್ರ, ಮಹಾರಾಜ ವರ್ಮ, ವಿಜಯ ವರ್ಮ, ಪ್ರಭುಸ್ವಾಮಿ, ಹನೂರು ಪಟ್ಟಣದ ಯಜಮಾನರು, ಯುವಕರು, ಮುಖಂಡರುಗಳು ಸೇರಿದಂತೆ ವಿವಿಧ ಗ್ರಾಮಗಳ ಸಾರ್ವಜನಿಕರು ಪಾಲ್ಗೊಂಡಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ