Mysore
27
scattered clouds

Social Media

ಬುಧವಾರ, 15 ಜನವರಿ 2025
Light
Dark

ಸೋನಿಯಾ ವಿರುದ್ಧ ಬಿಜೆಪಿ ಪೋಸ್ಟರ್ ಅಭಿಯಾನ

ಮಂಡ್ಯ: ಮಹದಾಯಿ ನೀರನ್ನು ಕರ್ನಾಟಕಕ್ಕೆ ಕೊಡಬೇಡಿ ಎಂದಿದ್ದ ಸೋನಿಯಾ ಗಾಂಧಿಯೊಂದಿಗೆ ರಾಹುಲ್‌ಗಾಂಧಿ ಭಾರತ್ ಜೋಡೊ ಪಾದಯಾತ್ರೆ ಮಾಡುತ್ತಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಪೋಸ್ಟರ್ ಅಂಟಿಸಿ ಅಭಿಯಾನ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಗೋವಾದಲ್ಲಿ ನಡೆದ ವಿಧಾನ ಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು ಕರ್ನಾಟಕ ರಾಜ್ಯಕ್ಕೆ ಒಂದು ಹನಿ ನೀರನ್ನೂ ಮಹದಾಯಿ ನದಿಯಿಂದ ಕೊಡಬೇಡಿ ಎಂದು ಹೇಳಿಕೆ ನೀಡುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಅಪಮಾನ ಮಾಡಿದ್ದರು. ಈಗ ಮಂಡ್ಯದಲ್ಲಿ ಭಾರತ್ ಜೋಡೊ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಹನಿ ನೀರನ್ನೂ ಕೊಡಬೇಡಿ ಎಂದಿದ್ದ ಸೋನಿಯಾ ಮತ್ತು ರಾಹುಲ್ ಗಾಂಧಿಯವರಿಗೆ ಮಂಡ್ಯದಲ್ಲೇ ಬಿಸ್ಲರಿ ವಾಟರನ್ನು ನೀಡುತ್ತೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನೂ ಸರಿಯಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ರಾಷ್ಟ್ರೀಯ ನಾಯಕರು ಉದಾರತೆಯನ್ನು ಮೆರೆಯಬೇಕು. ಅದನ್ನು ಬಿಟ್ಟು ಒಡೆದು ಆಳುವ ನೀತಿ ಅನುಸರಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.

ಕರ್ನಾಟಕ ವಿರೋಧಿ ಹೇಳಿಕೆ ನೀಡಿದ್ದ ಸೋನಿಯಾಗಾಂಧಿ ಅವರ ವಿರುದ್ಧ ನಾವು ಪೋಸ್ಟರ್ ಅಭಿಯಾನ ಮಾಡುತ್ತಿದ್ದೇವೆ. ಇಂತಹ ಜನವಿರೋಧಿ ಹೇಳಿಕೆ ನೀಡಿರುವ ನಿಮಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುವಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರೊಂದಿಗೆ ರಾಜ್ಯದಲ್ಲಿ ಪಾದಯಾತ್ರೆ ನಡೆಸುವ ನೈತಿಕತೆಯಾದರೂ ಇದೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡರಾದ ಹೊಸಹಳ್ಳಿ ಶಿವು, ಹನಿಯಂಬಾಡಿ ನಾಗರಾಜು, ಮಾದರಾಜ ಅರಸ್ ಇತರರು ಪೋಸ್ಟರ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ