ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕಾರ್ಯಾಲಯ ನಿರ್ಮಾಣ…
ರಾಜೇಶ್ ಬೆಂಡರವಾಡಿ
ಚಾಮರಾಜನಗರ : ಸುಮಾರು 3ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ಬಿಜೆಪಿ ಕಾರ್ಯಾಲಯ ಕಟ್ಟಡವನ್ನು ನವರಾತ್ರಿಗೆ ಮುನ್ನ ಅಥವಾ ನಂತರ ಹಬ್ಬದೋಪಾದಿಯಲ್ಲಿ ಉದ್ಘಾಟಿಸಲು ಸದ್ದಿಲ್ಲದೆ ತಯಾರಿ ನಡೆಯುತ್ತಿದೆ.
ರಾಮಸಮುದ್ರ ಹೊಸ ಹೌಸಿಂಗ್ ಬೋರ್ಡ್ ಮುಖ್ಯರಸ್ತೆಗೆ(ಕುಲುಮೆ ರಸ್ತೆ) ಹೊಂದಿಕೊಂಡಂತೆ ಕಟ್ಡಡ ನಿರ್ಮಾಣ ಆಗಿದೆ. ೨೦೨೦ ಆಗಸ್ಟ್ ೧೫ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವರ್ಚುವಲ್ ಮುಖಾಂತರ ಕಟ್ಟಡ ನಿರ್ಮಾಣಕ್ಕೆ ಚಾಲನೆ ಕೊಟ್ಟಿದ್ದರು. ಹಲವು ಜಿಲ್ಲೆಗಳಲ್ಲಿನ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅವರು ಏಕಾಕಾಲದಲ್ಲಿ ಚಾಲನೆ ನೀಡಿದ್ದರು. ಅದೇ ಮಾದರಿಯಲ್ಲಿ ಈಗ ಚಾಮರಾಜನಗರ, ಬಾಗಲಕೋಟೆ, ಹಾವೇರಿ, ಗದಗ, ಕೋಲಾರ ಸಹಿತ ೧೩ಜಿಲ್ಲೆಗಳ ಹೊಸ ಕಟ್ಟಡಗಳನ್ನು ಅವರಿಂದ ಒಟ್ಟಿಗೇ ಉದ್ಘಾಟನೆ ಮಾಡಿಸಲು ಪಕ್ಷದ ರಾಜ್ಯಘಟಕದ ಹಂತದಲ್ಲಿ ಮಾತುಕತೆ ನಡೆದಿದೆ.
ಇದೇ ವೇಳೆ ,ಜಿಲ್ಲಾ ಕೇಂದ್ರದಲ್ಲಿ ಉಸ್ತುವಾರಿ ಸಚಿವ ವಿ.ಸೋಮಣ್ಣ, ರಾಜ್ಯಾಧ್ಯಕ್ಷರು ಹಾಗೂ ಪ್ರಮುಖರನ್ನು ಒಳಗೊಂಡಂತೆ ೫ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಉದ್ಘಾಟನಾ ಕಾರ್ಯಕ್ರಮ ನಡೆಸಲು, ೫ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ.
ಕಟ್ಟಡ ನಿರ್ಮಾಣಕ್ಕೆ ಸಾಮಾನ್ಯ ಕಾರ್ಯಕರ್ತರಿಂದ ದೊಡ್ಡ ನಾಯಕರವರೆಗೆ ಎಲ್ಲರೂ ಕೈಲಾದ ದೇಣಿಗೆ ಕೊಟ್ಟಿದ್ದಾರೆ. ದೇಣಿಗೆ ಪಟ್ಟಿಯಲ್ಲಿರುವ ಕೆಲವರನ್ನು ಹಣ ಕೇಳಬೇಡಿ ಎಂದು ಅವರ ಪರವಾಗಿ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೇ ೩೭ ಲಕ್ಷ ರೂ. ಗಳನ್ನು ಕಟ್ಟಡಕ್ಕೆ ನೀಡಿದ್ದಾಗಿ ತಿಳಿದು ಬಂದಿದೆ.
ಚಾ.ನಗರ ಮಟ್ಟಿಗೆ ಜಿಲ್ಲಾಮಟ್ಟದಲ್ಲಿ ಸ್ವಂತ ಕಾರ್ಯಾಲಯ ಹೊಂದಿದ ಮೊದಲ ರಾಜಕೀಯ ಪಕ್ಷ ಬಿಜೆಪಿಯಾಗಿದೆ. ಸ್ವಾಗತ ಸಭಾಂಗಣ, ಗ್ರಂಥಾಲಯ, ವಸ್ತುಸಂಗ್ರಹಾಲಯ, ಅಧ್ಯಕ್ಷರ ಕೊಠಡಿ, ವಿವಿಧಮಂಡಲ ಅಧ್ಯಕ್ಷರುಗಳ ಕಂಪಾರ್ಟ್ ಮೆಂಟ್, ೨೫೦ ಮಂದಿ ಕೂರಬಹುದಾದ ಸಭಾಂಗಣ, ಪದಾಧಿಕಾರಿಗಳ ಕೊಠಡಿ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ವರ್ಚುವಲ್ ವೇದಿಕೆ ಇವೇ ಮೊದಲಾದವು ಎರಡಂತಸ್ತಿನ ಈ ನೂತನ ಕಟ್ಟಡದಲ್ಲಿವೆ. ಭವಿಷ್ಯದಲ್ಲಿ ೪ ಅಂತಸ್ತಿನ ಕಟ್ಟಡವಾಗಿ ವಿಸ್ತರಿಸಲು ಬೇಕಾದ ಲಿಫ್ಟ್ ಇನ್ನಿತರ ವ್ಯವಸ್ಥೆಗೆ ಈಗಲೇ ವ್ಯವಸ್ಥೆ ಮಾಡಿದ್ದು ವಿದ್ಯುತ್ ಸಂಪರ್ಕ, ಬಣ್ಣ ಬಳಿಯುವ ಕಾರ್ಯವಷ್ಟೇ ಬಾಕಿ ಇವೆ. ಕಟ್ಟಡ ಮುಂಭಾಗದಲ್ಲಿ ೫೦೦ ಆಸನಗಳ ಶಾಮಿಯಾನ ಹಾಕಬಹುದಾದಷ್ಟು ವಿಶಾಲ ಜಾಗವಿದೆ. ರಾಜ್ಯದಲ್ಲಿ ಚುನಾವಣೆ ಕಾವು ನಿಧಾನಕ್ಕೆ ಆರಂಭವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಕಟ್ಟಡ ಉದ್ಘಾಟನೆ ತಯಾರಿ ನಡೆಯುತ್ತಿದೆ. ಬಿಜೆಪಿ ಜಿಲ್ಲಾ ಕಾರ್ಯಾಲಯ ಸದ್ಯ ಮೆಘಾ ಕಾಂಪ್ಲೆಕ್ಸ್ ನಲ್ಲಿನ ಸಾಮಾನ್ಯ ಕೊಠಡಿೊಂಂದರಲ್ಲಿ ನಡೆಯುತ್ತಿದ್ದು ಇಲ್ಲಿಂದ ಹೊಸಕಟ್ಟಡಕ್ಕೆ ಸ್ಥಳಾಂತರ ಆಗುವ ದಿನ ಹತ್ತಿರವಾಗಿದೆ. ಶಂಕುಸ್ಥಾಪನೆ ಆದ ೨ವರ್ಷಗಳಲ್ಲೇ ಉದ್ಘಾಟನೆಗೆ ಕಟ್ಟಡ ಸಿದ್ಧಗೊಂಡಿದೆ.
ಬಿಜೆಪಿ ಜಿಲ್ಲಾ ಕಾರ್ಯಾಲಯದ ಹೊಸ ಕಟ್ಟಡವನ್ನು ಸಂಪ್ರದಾಯ ಬದ್ಧವಾಗಿ ಉದ್ಘಾಟಿಸಲು ಉದ್ದೇಶಿಸಲಾಗಿದೆ. ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಅವರು ಗೊತ್ತುಪಡಿಸಿದ ದಿನದಂದು ಹಬ್ಬದ ವಾತಾವರಣದೊಂದಿಗೆ ಉದ್ಘಾಟಿಸಲಾಗುವುದು.
-ಆರ್.ಸುಂದರ್, ಬಿಜೆಪಿ ಜಿಲ್ಲಾಧ್ಯಕ್ಷರು.
ರಾಷ್ಟ್ರೀಯ ಅಧ್ಯಕ್ಷರ ಹೆಸರಿನಲ್ಲಿ ಕಟ್ಟಡ!
ನಿವೇಶನಕ್ಕೇ ೯೦ಲಕ್ಷ ರೂ.ಮೇಲಾಗಿದ್ದು ಕಟ್ಟಡಕ್ಕೆ ಬಹುಪಾಲು ೨ ಕೋಟಿ ರೂ.ಗಳಿಗೂ ಹೆಚ್ಚು ಹಣ ಪಕ್ಷದ ಕೇಂದ್ರಕಚೇರಿಯಿಂದಲೇ ಸಂದಾಯ ಆಗಿರುವುದರಿಂದ ಈ ಹೊಸ ಕಾರ್ಯಾಕಲಯ ರಾಷ್ಟ್ರೀಯ ಅಧ್ಯಕ್ಷರ ಹೆಸರಿನಲ್ಲಿದೆ. ನೂತನ ಕಟ್ಟಡಗಳೆಲ್ಲಾ ರಾಷ್ಟ್ರೀಯ ಅಧ್ಯಕ್ಷರ
ಹೆಸರಿನಲ್ಲೇ ಇವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.