ಮೈಸೂರು: ಭೀಕರ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡಿದ್ದ ಯುವಕನ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬ ವರ್ಗ ಸಾವಿನಲ್ಲಿಯೂ ಸಾರ್ಥಕ್ಯ ಮೆರೆದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸಿಂಗಪುರ ಗ್ರಾಮದ ೨೧ ವರ್ಷದ ಎಸ್.ಎ.ಸಚಿನ್ ಈಚೆಗೆ ಅಪಘಾತಕ್ಕೀಡಾಗಿ ಮೆದುಳಿನ ತೀವ್ರ ರಕ್ತಸ್ರಾವದಿಂದ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ರೋಗಿಯ ಮೆದುಳು ನಿಷ್ಕ್ರೀಯ ಗೊಂಡಿರುವ ಬಗ್ಗೆ ಮತ್ತು ಬದುಕುಳಿಯುವ ಸಾಧ್ಯತೆ ಬಗ್ಗೆ ರೋಗಿಯ ಪೋಷಕರಿಗೆ ವಿವರಿಸಿದರು. ಹೀಗಾಗಿ ಅಂಗಾಂಗ ದಾನ ಪ್ರಕ್ರಿಯೆಗೆ ಯುವಕನ ಕುಟುಂಬಸ್ಥರು ಸಮ್ಮತಿ ಸೂಚಿಸಿದರು.
ವೈದ್ಯರ ತಂಡ ರೋಗಿಯ ಹೃದಯ, ಎರಡು ಕಾರ್ನಿಯ(ಕಣ್ಣುಗಳು), ಎರಡು ಕಿಡ್ನಿ ಮತ್ತು ಲಿವರ್ ಅನ್ನು ಅವಶ್ಯಕತೆಯಿದ್ದ ರೋಗಿಗಳಿಗೆ ನೀಡಿದರು. ಕಸಿ ವಾಡಲು ಹೃದಯವನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಮತ್ತು ಒಂದು ಕಿಡ್ನಿ ಮತ್ತು ಲಿವರ್ ಅನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಗ್ರೀನ್ ಕಾರಿಡಾರ್ ಮುಖಾಂತರ ರವಾನಿಸಲಾಯಿತು. ಕಾರ್ನಿಯ(ಕಣ್ಣುಗಳು)ಗಳ ಅವಶ್ಯಕತೆ ಇದ್ದವರು ಈ ಸಂದರ್ಭದಲ್ಲಿ ಸಿಗದ ಕಾರಣ ಎರಡೂ ಕಾರ್ನಿಯ ಗಳನ್ನು ಬೆಂಗಳೂರಿನ ಲಯನ್ಸ್ ಆಸ್ಪತ್ರೆಗೆ ರವಾನಿಸಲಾಯಿತು.