* ಜಿಲ್ಲೆಯ 9 ತಾಲ್ಲೂಕುಗಳಲ್ಲಿ ಆರು ಕಡೆ ಬೀಕನ್ ಗ್ರಂಥಾಲಯಗಳು ಕಾರ್ಯನಿರ್ವಹಣೆ
* ಜಿಲ್ಲೆಯಲ್ಲಿ 66 ಡಿಜಿಟಲ್ ಗ್ರಂಥಾಲಯಗಳು
-ಕೆ.ಬಿ.ರಮೇಶ ನಾಯಕ
ಮೈಸೂರು: ಗ್ರಾಮಾಂತರ ಪ್ರದೇಶದ ಜನರು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಗ್ರಂಥಾಲಯಗಳನ್ನು ಡಿಜಿಟಲ್‌ಗೆ ಪರಿವರ್ತಿಸುತ್ತಿರುವುದಲ್ಲದೆ, ದೃಷ್ಟಿ ಸವಾಲಿಗೊಳಗಾದ ಮಕ್ಕಳಿಗೆ ಉಪಯೋಗವಾಗುವಂತೆ ಪ್ರತಿ ತಾಲ್ಲೂಕಿಗೆ ಒಂದರಂತೆ ಬ್ರೈಲ್ ಹಾಗೂ ಶ್ರವ್ಯ ಪುಸ್ತಕಗಳನ್ನೊಳಗೊಂಡ ಬೀಕನ್ ಗ್ರಂಥಾಲಯವನ್ನು ಪ್ರಾರಂಭಿಸಲಾಗುತ್ತಿದ್ದು, ಜಿಲ್ಲೆಯ ಆರು ಕಡೆಗಳಲ್ಲಿ ಈಗಾಗಲೇ ಗ್ರಾಮ್ ಬೀಕನ್ ಲೈಬ್ರರಿ ತೆರೆಯಲಾಗಿದೆ.
ಮುಂದಿನ ದಿನಗಳಲ್ಲಿ ದೃಷ್ಟಿ ಸವಾಲಿಗೆ ಒಳಗಾದವರು ತಂತಮ್ಮ ತಾಲ್ಲೂಕಿನ ಗ್ರಾಮ್ ಬೀಕನ್ ಲೈಬ್ರರಿಯಲ್ಲಿ ಕುಳಿತು ಪುಸ್ತಕಗಳನ್ನು ಓದುವ ಅವಕಾಶ ದೊರೆಯಲಿದೆ. ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 5622 ಗ್ರಂಥಾಲಯಗಳನ್ನು ಗ್ರಾಮೀಣ ಮಾಹಿತಿ ಮತ್ತು ಜ್ಞಾನ ಕೇಂದ್ರಗಳನ್ನಾಗಿ ಉನ್ನತೀಕರಿಸಲಾಗುವುದು. ಅದರಂತೆ ಜಿಲ್ಲೆಯ ಒಂಬತ್ತು ತಾಲ್ಲೂಕುಗಳ ಪೈಕಿ ಎಚ್.ಡಿ.ಕೋಟೆ, ತಿ.ನರಸೀಪುರ ತಾಲ್ಲೂಕುಗಳಲ್ಲಿ ತಲಾ ಎರಡು, ಪಿರಿಯಾಪಟ್ಟಣ ಹಾಗೂ ನಂಜನಗೂಡು ತಾಲ್ಲೂಕಿಗಳಲ್ಲಿ ತಲಾ ಒಂದೊಂದು ಗ್ರಂಥಾಲಯ ಉನ್ನತೀಕರಣ ಕಾರ್ಯ ಆರಂಭವಾಗಿದ್ದು, ಉಳಿದಂತೆ, ಮೈಸೂರು, ಕೆ.ಆರ್.ನಗರ, ಸರಗೂರು, ಹುಣಸೂರು ತಾಲ್ಲೂಕುಗಳಲ್ಲಿ ಬೀಕನ್ ಗ್ರಂಥಾಲಯ ತೆರೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಜಿಲ್ಲೆಯ 256 ಗ್ರಾಮ ಪಂಚಾಯಿತಿಗಳಲ್ಲಿ 225 ಗ್ರಾಪಂ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಿ ‘ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ’ ಎಂದು ಮರು ನಾಮಕರಣ ಮಾಡಲಾಗಿದೆ. ಗ್ರಂಥಾಲಯಗಳನ್ನು ಹೊಂದಿಲ್ಲದ 31 ಗ್ರಾಪಂಗಳಲ್ಲಿ ಖಾಸಗಿ ಅಥವಾ ಗ್ರಾಪಂ ವತಿಯಿಂದ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ9 ತಾಲ್ಲೂಕುಗಳಿಂದ 72,,943 ಮಂದಿ ನೋಂದಣಿ ಮಾಡಿಕೊಂಡಿದ್ದು, 28,668 ಮಂದಿ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.
ಶೇ.5ರಷ್ಟು ಅನುದಾನ ಬಳಕೆ: 15ನೇ ಹಣಕಾಸು ಯೋಜನೆಯಡಿ ಗ್ರಾಪಂ, ತಾಪಂ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಸರ್ಕಾರದಿಂದ ಅನುಮೋದಿಸಲಾದ ಮತ್ತು ಬಿಡುಗಡೆಯಾದ ಜಿಪಿಡಿಪಿಯ ಒಟ್ಟು ಅನುದಾನದಲ್ಲಿ ಶೇ.5ರಷ್ಟು ಅನುದಾನವನ್ನು ಪ್ರತಿ ವರ್ಷ ಕಾಯ್ದಿರಿಸಿ ವಿಕಲಚೇತನರ ಕಲ್ಯಾಣಕ್ಕಾಗಿ ಬಳಸಲು ಸರ್ಕಾರ ಆದೇಶ ನೀಡಿದೆ. ಅದರಂತೆ ನಿಗದಿಪಡಿಸಿರುವ ಅನುದಾನ ಮತ್ತು ಸ್ವಂತ ಸಂಪನ್ಮೂಲಗಳಿಂದ ಬರುವ ಅನುದಾನವನ್ನು ಸೇರಿಸಿ ಶೇ.5ರಷ್ಟು ಹಣವನ್ನು ವಿಕಲಚೇತನರ ಸರ್ವತೋಮುಖ ಅಭಿವೃದ್ಧಿಗಾಗಿ ಬಳಕೆ ಮಾಡುತ್ತಿರುವ ಕಾರಣ ಬೀಕನ್ ಗ್ರಂಥಾಲಯಗಳಿಗೆ ಮತ್ತಷ್ಟು ಅತ್ಯಾಧುನಿಕ ಬ್ರೈಲ್ ಮತ್ತು ಶ್ರವ್ಯ ಪುಸ್ತಕಗಳನ್ನು ಒದಗಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 6 ಬೀಕನ್ ಲೈಬ್ರರಿ ಮತ್ತು 66 ಡಿಜಿಟಲ್ ಲೈಬ್ರರಿಗಳು ಶುರುವಾಗಿವೆ. ಉಳಿದ ಕಡೆಗಳಲ್ಲಿ ಬೀಕನ್ ಲೈಬ್ರರಿ ನಿರ್ಮಾಣದ ಕೆಲಸ ನಡೆಯುತ್ತಿದೆ. ಡಿಜಿಟಲ್ ಲೈಬ್ರರಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉನ್ನತೀಕರಿಸಿದ ಗ್ರಂಥಾಲಯಗಳನ್ನು ಹಂತ ಹಂತವಾಗಿ ಡಿಜಿಟಲೀಕರಣ ಮಾಡಲಾಗುವುದು. ಈಗಾಗಲೇ ನೋಂದಣಿ ಮಾಡಿಸಿಕೊಂಡಿರುವ ಸಾರ್ವಜನಿಕರು ಪ್ರಯೋಜನ ಪಡೆಯುತ್ತಿದ್ದಾರೆ.
-ಡಾ.ಬಿ.ಕೃಷ್ಣಂರಾಜು, ಜಿಪಂ ಉಪ ಕಾರ್ಯದರ್ಶಿ ಹಾಗೂ ಗ್ರಂಥಾಲಯ ಉಸ್ತುವಾರಿ, ಮೈಸೂರು.
——————-
‘ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ’ದಲ್ಲಿ ರೈತರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರಿ ದತ್ತಾಂಶ, ಯೋಜನೆ, ನೌಕರರಿಗೆ ಸಂಬಂಧಿಸಿದ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಆನ್‌ಲೈನ್ ಮೂಲಕ ಪಡೆಯಬಹುದು. ಗ್ರಂಥಾಲಯದಲ್ಲಿ ವೈಫೈ ವ್ಯವಸ್ಥೆ ಇರುವ ಕಾರಣ ಸಾರ್ವಜನಿಕರು ಉಚಿತವಾಗಿ ಇಂಟರ್‌ನೆಟ್ ಬಳಸಬಹುದಾಗಿದೆ.
66 ಡಿಜಿಟಲ್ ಗ್ರಂಥಾಲಯಗಳು ಎಲೆಲ್ಲಿ? ಎಷ್ಟೆಷ್ಟು?
ತಾಲ್ಲೂಕು ಗ್ರಂಥಾಲಯ ಸಂಖ್ಯೆ
ಮೈಸೂರು 12
ಕೆ.ಆರ್.ನಗರ 2
ಪಿರಿಯಾಪಟ್ಟಣ 4
ನಂಜನಗೂಡು 20
ಸರಗೂರು 1
ಹುಣಸೂರು 18
ತಿ.ನರಸೀಪುರ 5
ಎಚ್.ಡಿ.ಕೋಟೆ 4
ಬೀಕನ್ ಲೈಬ್ರರಿ ಸೌಕರ್ಯಗಳು
ರ್ಯಾಂಪ್ ಮತ್ತು ಶೌಚಾಲಯ ನಿರ್ಮಿಸಿದ್ದಲ್ಲಿ ಅವುಗಳನ್ನು ಸೂಕ್ತ ನಿರ್ವಹಣೆ ಮಾಡಿ ರೆಟ್ರೋಫಿಟ್ಟಿಂಗ್ ಮಾಡುವುದು, ಅನುಭವಿ ಮತ್ತು ಕ್ರಿಯಾತ್ಮಕ ಮೇಲ್ವಿಚಾರಕರು ಕಾರ್ಯನಿರ್ವಹಿಸುವುದು, ಗಣಕಯಂತ್ರಗಳು ಮತ್ತು ಇಂಟರ್‌ನೆಟ್ ಸಂಪರ್ಕ, ಸೌಲಭ್ಯ ಹೊಂದಿರುವ ಡಿಜಿಟಲೀಕರಣಗೊಳಿಸಲಾಗಿದೆ. ವಿಕಲಚೇತನರು ಮತ್ತು ದೃಷ್ಟಿ ಸವಾಲಿಗೆ ಒಳಗಾದವರಿಗೆ ಬ್ರೈಲ್ ಮತ್ತು ಶ್ರವ್ಯ ಪುಸ್ತಕಗಳನ್ನು ಕಾಲಾನುಕಾಲಕ್ಕೆ ಒದಗಿಸುವಂತೆ ಕ್ರಮವಹಿಸಲಾಗಿದೆ.