ಮಂಡ್ಯ: ಪ್ರತಿ ಟನ್ ಕಬ್ಬಿಗೆ ೪,೫೦೦ ರೂ. ಹಾಗೂ ಪ್ರತಿ ಲೀಟರ್ ಹಾಲಿಗೆ ೪೦ ರೂ. ನಿಗದಿಗೆ ಒತ್ತಾಯಿಸಿ ಸರ್ ಎಂ.ವಿ.ಪ್ರತಿಮೆ ಎದುರು ರೈತ ಸಂಘದಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಗುರುವಾರ ೨೫ನೇ ದಿನ ಪೂರೈಸಿತು.
ಈ ಹೋರಾಟಕ್ಕೆ ಮದ್ದೂರು ತಾಲ್ಲೂಕು ರೈತ ಸಂಘದ ಜತೆಗೆ ಈಚಗೆರೆ, ಹೊಡಾಘಟ್ಟ, ಉಪ್ಪಾರಕನಹಳ್ಳಿ ಗ್ರಾಮಸ್ಥರು ಬೆಂಬಲ ಸೂಚಿಸಿದರು. ಮಾತ್ರವಲ್ಲದೆ, ಪ್ರತಿದಿನ ಭಾಗವಹಿಸುವವರು ಒಂದರಂತೆ ಪುಟ್ಟ ಗುಡಿಸಲು ನಿರ್ಮಾಣ ಮಾಡುವ ಮೂಲಕ ವಿಭಿನ್ನವಾಗಿ ಹೋರಾಟ ನಡೆಸಿದರು.
ಈ ವೇಳೆ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ನಾವು ಹೆಚ್ಚುವರಿ ಹಣ ಕೊಡುವಂತೆ ಕೇಳುತ್ತಿಲ್ಲ. ನ್ಯಾಯಯುತವಾದ ಬೆಲೆ ಕೊಡುವಂತೆ ಒತ್ತಾಯಿಸುತ್ತಿದ್ದೇವೆ. ಡಾ.ಸ್ವಾಮಿನಾಥನ್ ಆಯೋಗ ವರದಿ ಪ್ರಕಾರ ಪ್ರತಿ ಟನ್ ಕಬ್ಬಿಗೆ ಐದು ಮುಕ್ಕಾಲು ಸಾವಿರ ರೂ. ಕೊಡಬೇಕಾಗುತ್ತದೆ. ಪ್ರಸ್ತುತ ಪ್ರತಿ ಟನ್ ಕಬ್ಬು ಬೆಳೆಯಲು ಮೂರು ಮುಕ್ಕಾಲು ಸಾವಿರ ವೆಚ್ಚವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಗಮನ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷೃ ಎ.ಎಲ್.ಕೆಂಪೂಗೌಡ, ವಿನೋದ್ ಬಾಬು, ಸಿದ್ದೇಗೌಡ, ಶಂಕರ, ವರದಪ್ಪ, ಅಶೋಕ್, ರಾಮಣ್ಣ, ಬೋರೇಗೌಡ, ಲಿಂಗಪ್ಪಾಜಿ, ಕುಮಾರ, ಚಂದ್ರು, ಅಶ್ವಿನಿ, ಅನುಸೂಯಮ್ಮ, ಕೆಂಪಮ್ಮ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.