ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟಕ್ಕೆ(ಚಾಮುಲ್) ಹಾಲು ಉತ್ಪಾದಕರು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ ಡಿಸೆಂಬರ್ ೧ರಿಂದ ೨ರೂ. ಹೆಚ್ಚಳ ಮಾಡಲಾಗಿದೆ.
ಗುರುವಾರದಿಂದ(ಡಿ.1) ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 30.85ರೂ. ದೊರೆಯಲಿದೆ ಎಂದು ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ತಿಳಿಸಿದ್ದಾರೆ.
ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಹಾಲು ಮತ್ತು ಮೊಸರಿನ ಬೆಲೆಯನ್ನು ಕೆಎಂಎಫ್ ಇತ್ತೀಚೆಗೆ ಪ್ರತಿ ಲೀಟರ್ ಹಾಲಿಗೆ 2ರೂ. ಹೆಚ್ಚಳ ಮಾಡಿತ್ತು. ಗ್ರಾಹಕರು ಖರೀದಿಸುವ ಮೊಸರು, ಹಾಲಿನಿಂದ ಬಂದ ಈ ಲಾಭಾಂಶವನ್ನು ಉತ್ಪಾದಕರಿಗೆ ವರ್ಗಾಯಿಸುವಂತೆಯೂ ಆಯಾ ಜಿಲ್ಲಾ ಹಾಲು ಒಕ್ಕೂಟಗಳಿಗೆ ತಿಳಿಸಿತ್ತು. ಅದರಂತೆ ಚಾಮುಲ್ ಹಾಲು ಖರೀದಿ ದರವನ್ನು 28.85 ರೂ.ನಿಂದ 30.85ರೂ. ಗೆ ಏರಿಸಿದೆ.
ದೀಪಾವಳಿ ಕೊಡುಗೆಯಾಗಿ ಅ.21ರಲ್ಲಿ ಲೀಟರ್‌ಗೆ 2ರೂ. ಹೆಚ್ಚಿಸಲಾಗಿತ್ತು. ಈಗ 2ರೂ. ಏರಿಕೆಯಾಗುತ್ತಿದ್ದು ಇದರೊಂದಿಗೆ ಕೇವಲ 40ದಿನಗಳಲ್ಲಿ ಹಾಲು ಉತ್ಪಾದಕರಿಂದ ಡೇರಿಗಳ ಮುಖಾಂತರ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ೪ರೂ. ಏರಿಸಿದಂತಾಗಿದೆ.