ಹನೂರು: ಕಾವೇರಿ ನದಿಯಲ್ಲಿ ಅಕ್ರಮವಾಗಿ ಮೀನು ಹಿಡಿದು ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿರುವ ಘಟನೆ ಶನಿವಾರ ( ಫೆಬ್ರವರಿ 3 ) ಜರುಗಿದೆ.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಗೇರಿ ಸಮೀಪದ ಅಂತೋಣಿ, ಟಿ ಜಿ ದೊಡ್ಡಿ ಗ್ರಾಮದ ರಾಜ ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆ ವಿವರ: ಕೊಳ್ಳೇಗಾಲ ಬಫರ್ ವಲಯದ ಸತ್ತೇಗಾಲ ಜಾಗೇರಿ ಶಾಖೆಯ ಶಿಲುಬೆಪುರ ಗಸ್ತಿನ ಕಣಿವೆ ಹಳ್ಳ ಅರಣ್ಯ ಪ್ರದೇಶದಲ್ಲಿ ವಲಯ ಅರಣ್ಯಾಧಿಕಾರಿ ಭರತ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ನಂದೀಶ್ ಗಸ್ತಿನಲ್ಲಿದ್ದಾಗ ಇಬ್ಬರು ವ್ಯಕ್ತಿಗಳು ಮೀನುಗಳನ್ನು ಹಿಡಿದು ಮಾರಾಟ ಮಾಡಲು ತೆರಳುತ್ತಿರುವುದು ಕಂಡು ಬಂದಿದೆ. ತಕ್ಷಣ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಸಾಗಾಟ ಮಾಡುತ್ತಿದ್ದ 40 ಕೆಜಿ ಮೀನುಗಳನ್ನು ವಶಕ್ಕೆ ಪಡೆದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ ಸಂತೋಷ್ ಕುಮಾರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಶಶಿಧರ್ ಬಿಎಸ್ ರವರ ಮಾರ್ಗದರ್ಶನದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.





