ಕಳೆದ ಕೆಲ ದಿನಗಳ ಹಿಂದೆ ಮಂಡ್ಯದಲ್ಲಿ ಭ್ರೂಣಹತ್ಯೆಯ ದೊಡ್ಡ ಜಾಲ ಪತ್ತೆಯಾದ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಸಮೀಪದ ದಳವಾಯಿ ಕೆರೆಯಲ್ಲಿ ನವಜಾತ ಹೆಣ್ಣು ಶಿಶುವೊಂದರ ಶವ ಪತ್ತೆಯಾಗಿದೆ. ಕರುಳಬಳ್ಳಿಯ ಸಮೇತ ಶವ ದೊರಕಿದೆ.
ಕಳೆದ ಎರಡು ದಿನಗಳ ಹಿಂದೆ ಜನಿಸಿರುವ ಮಗು ಇದಾಗಿದ್ದು, ಹೆಣ್ಣು ಎಂಬ ಕಾರಣಕ್ಕೆ ಕೊಂದು ಬಿಸಾಡಿದ್ದಾರಾ ಎಂಬ ಸಂಶಯ ಶುರುವಾಗಿದೆ. ಶಿಶುವಿನ ಮೃತದೇಹವನ್ನು ಪೇಪರ್‌ನಿಂದ ಸುತ್ತಿರುವ ಕಿಡಿಗೇಡಿಗಳು ಕೆರೆ ಸಮೀಪ ಎಸೆದು ಹೋಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಾಂಡವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃತ್ಯ ಎಸಗಿದವರ ಬಂಧನಕ್ಕೆ ಮುಂದಾಗಿದ್ದಾರೆ. ಸದ್ಯ ಮಗುವಿನ ಶವವನ್ನು ತಾಲೂಕು ಆಸ್ಪತ್ರೆ ಶವಾಗಾರಕ್ಕೆ ಕಳುಹಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಿಂದ ಸಾವಿನ ಹಿಂದಿನ ಕಾರಣ ತಿಳಿದುಬರಬೇಕಿದೆ.





