ಕಾಂಗ್ರೆಸ್-ಬಿಜೆಪಿ ಪಕ್ಷಗಳ ಒಳಗೊಳಗೆ ನಡೆಯುತ್ತಿದೆ ಆಂತರಿಕ ಒಳಜಗಳ
ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ನಂತರ ಕರ್ನಾಟಕದ ಮೂರೂ ರಾಜಕೀಯ ಪಕ್ಷಗಳು ಆಂತರಿಕ ಗೊಂದಲಕ್ಕೆ ಸಿಲುಕಿಕೊಂಡಿವೆ.
ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ ಬಿಜೆಪಿ ಮತ್ತು ಜಾ.ದಳ ಪಕ್ಷಗಳಲ್ಲಿ ಗೊಂದಲ ಕಾಣಿಸಿಕೊಳ್ಳುವುದು ಸಹಜ. ಆದರೆ ಉಪಚುನಾವಣೆ ನಡೆದ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸಿದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲೂ ಗೊಂದಲ ಕಾಣಿಸಿಕೊಂಡಿರುವುದು ಚೋದ್ಯವೇ ಸರಿ.
ಅಂದ ಹಾಗೆ ಬಿಜೆಪಿ ಪಾಳೆಯವನ್ನೇ ಹೊಕ್ಕು ನೋಡಿದರೆ ಅಲ್ಲಿ ಉಪಚುನಾವಣೆಯ ಸೋಲು ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಪಕ್ಷ ಸ್ವಯಂಶಕ್ತಿಯಿಂದ ಮೇಲೆದ್ದು, ನಿಲ್ಲಲು ಈ ಸೋಲು ಪ್ರೇರಕ ಎಂಬ ಭಾ ವನೆಆಳದಲ್ಲಿ ಇದೆಯಾದರೂ, ಮೇಲು ಮಟ್ಟದಲ್ಲಿ ಈ ಸೋಲಿನಹೊಣೆಗಾರಿಕೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಕಟ್ಟುವ ಪ್ರಯತ್ನ ನಡೆದಿದೆ. ಇಂತಹ ಪ್ರಯತ್ನ ವನ್ನು ಬಿಜೆಪಿಯ ಭಿನ್ನರು ಮಾಡುತ್ತಿರುವುದು ರಹಸ್ಯವೇನಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವ ರಂತಹ ನಾಯಕರು, ಉಪಚುನಾವಣೆಯ ಸೋಲಿಗೆ ವಿಜಯೇಂದ್ರ ಹೇಗೆ ಕಾರಣ ಎಂದು ವಿವರಿಸುತ್ತಾ ಹೊರಟಿದ್ದಾರೆ. ಆದರೆ, ಅವರ ಈ ಪ್ರಯತ್ನಕ್ಕೆ ರಾಜ್ಯ ಬಿಜೆಪಿಯ ಒಳವಲಯಗಳಲ್ಲೇ ವ್ಯಾಪಕ ವಿರೋಧ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ, ವಿಜಯೇಂದ್ರ ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಮಾಡುತ್ತಿರುವ ಆರೋಪಗಳ ವಿರುದ್ಧ ತಿರುಗಿ ಬಿದ್ದವರು, ಬಿಜೆಪಿಯನ್ನು ಮುಗಿಸಲು ಯತ್ನಾಳ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಂದ ಸುಪಾರಿ ಪಡೆದಿದ್ದಾರೆ ಎಂಬ ಪ್ರತ್ಯಾರೋಪ ಮಾಡುತ್ತಿದ್ದಾರೆ. ಪರಿಣಾಮ ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾನಗಳು ದಿನಕ್ಕೊಂದು ತಿರುವು ಪಡೆಯುತ್ತಾ ಬೀದಿ ಜಗಳದ ಮಟ್ಟಕ್ಕೆ ತಲುಪಿದೆ. ಒಂದು ಪಕ್ಷ ಬೀದಿ ಜಗಳದ ಮಟ್ಟಕ್ಕೆ ಇಳಿದರೆ ಅದರ
ಆಂತರಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದೇ ಅರ್ಥ. ಹೀಗಾಗಿ ಮೊದಲು ಅದು ಇಂತಹ ಆಂತರಿಕ ಸಂಘರ್ಷದಿಂದ ಬಚಾವಾಗುವುದು ಅನಿವಾರ್ಯ. ಆದರೆ ಅದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಅಂತ ಸದ್ಯಕ್ಕೆ ಹೇಳುವುದು ಕಷ್ಟ.
ಇದೇ ರೀತಿ ಜಾ.ದಳ ಪಾಳೆಯದಲ್ಲೂ ಆಂತರಿಕ ಗೊಂದಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅನುಭವಿಸಿದ ಸೋಲು ಇದಕ್ಕೆ ಕಾರಣ. ಅಂದ ಹಾಗೆ ಚನ್ನಪಟ್ಟಣದಲ್ಲಿ ಜಾ.ದಳ ಗೆಲುವು ಗಳಿಸಿದ್ದರೆ ಹಳೇ ಮೈಸೂರು ಭಾಗದಲ್ಲಿ ನಿಮಗೆ ನಮ್ಮ ಸಖ್ಯ ಅನಿವಾರ್ಯ ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರಿಗೆ ರವಾನಿಸಲು ಜಾ.ದಳಕ್ಕೆ ಸಾಧ್ಯವಾಗುತ್ತಿತ್ತು. ಆದರೆ ಚನ್ನಪಟ್ಟಣದಲ್ಲಿ ಬಿಜೆಪಿಯ ಸಖ್ಯವಿದ್ದರೂ ತಾನು ಅನುಭವಿಸಿದ ಸೋಲು ಬಿಜೆಪಿ ವರಿಷ್ಠರಿಗೆ ವ್ಯತಿರಿಕ್ತ ಸಂದೇಶ ರವಾನಿಸಿರಬಹುದು ಎಂಬ ಶಂಕೆ ಜಾ.ದಳ ಪಾಳೆಯದಲ್ಲಿ ಶುರುವಾಗಿದೆ. ಅದೇ ಕಾಲಕ್ಕೆ ಚನ್ನಪಟ್ಟಣದಲ್ಲಿ ಪಕ್ಷ ಅನುಭವಿಸಿದ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಕೆಲ ಶಾಸಕರು ಕಾಂಗ್ರೆಸ್ ಜತೆ ಕೈ ಜೋಡಿಸಬಹುದು ಎಂಬ ಆತಂಕವೂ ಶುರುವಾಗಿದೆ. ಅಂದ ಹಾಗೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್ ಅವರಾಡಿದ ಮಾತು ಇದಕ್ಕೆ ಕಾರಣ. ಮೊನ್ನೆ ಅವರು ಇದ್ದಕ್ಕಿದ್ದಂತೆ, ಮನಸ್ಸು ಮಾಡಿದರೆ ಜಾ.ದಳ ಪಕ್ಷದಲ್ಲಿರುವ ಹಲವು ಶಾಸಕರನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರುತ್ತೇನೆ ಎಂದರು. ಯಾವಾಗ ಅವರು ಹೀಗೆ ಮಾತನಾಡಿದರೋ ಇದಾದ ನಂತರ ಜಾ.ದಳ
ಶಾಸಕರು ಒಗ್ಗಟ್ಟಿನ ಪ್ರದರ್ಶನ ಮಾಡುವ ಯತ್ನ ನಡೆಸಿದರು. ಇಷ್ಟಾದರೂ ಆಳದಲ್ಲಿ ತುಂಬಾ ಶಾಸಕರಿಗೆ ಪಕ್ಷದ ನಾಯಕರ ಬಗ್ಗೆ ಅಸಮಾಧಾನವಿದೆ ಎಂಬುದು ರಹಸ್ಯವಲ್ಲ.
ಮೂಲಗಳ ಪ್ರಕಾರ, ಇಂತಹ ಶಾಸಕರ ಪೈಕಿ ಹಲವರು ಹಿಂದಿನಿಂದಲೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಸಿ.ಪಿ.ಯೋಗೇಶ್ವರ್ ಅವರಾಡಿದ ಮಾತನ್ನು ಜಾ.ದಳ ಪಾಳೆಯ ವಿರೋಧಿಸಿದರೂ ಆಳದಲ್ಲಿ ಹೆಚ್ಚಿನ ಶಾಸಕರು ಆಪರೇಷನ್ ಹಸ್ತ ಕಾರ್ಯಾಚರಣೆ ನಡೆದರೆ ಜಾ.ದಳ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯ ಯಶಸ್ಸಿನ ನಂತರ ಆತ್ಮವಿಶ್ವಾಸ ತುಂಬಿಕೊಂಡಿದ್ದ ಜಾ.ದಳ ಪಾಳೆಯದಲ್ಲಿ ಈಗ ಗೊಂದಲದ ವಾತಾವರಣ ಇದೆ. ಈ ಮಧ್ಯೆ ಪಕ್ಷದಲ್ಲಿ ನಡೆದ ಹಲವು ಬೆಳವಣಿಗೆಗಳು ಆ ಪಕ್ಷದ ಅಂತಃ ಶಕ್ತಿಯನ್ನು ಕುಗ್ಗಿಸಿವೆ. ಪರಿಣಾಮ ತನ್ನ ಆಂತರ್ಯದಲ್ಲಿ ನೆಲೆಸಿರುವ ಗೊಂದಲದಿಂದ ಹೊರಬರಲು ಜಾ.ದಳ ಕೂಡ ದೊಡ್ಡ ಮಟ್ಟದಲ್ಲಿ ಪ್ರಯತ್ನ ನಡೆಸಬೇಕಿದೆ.
ಇದೇ ರೀತಿ ಆಡಳಿತಾರೂಢ ಕಾಂಗ್ರೆಸ್ ಪಾಳೆಯವನ್ನು ಹೊಕ್ಕು ನೋಡಿದರೆ ಅಲ್ಲೂ ಗೊಂದಲದ ಛಾಯೆ ಕಾಣಿಸುತ್ತದೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಗಳಿಸಿದ ಗೆಲುವು
ಅದಕ್ಕೆ ಶಕ್ತಿ ತುಂಬಿದೆಯಾದರೂ, ಅದರಾಳದಲ್ಲಿ ಗೊಂದಲ ಮಾತ್ರ ನಿಂತಿಲ್ಲ. ಏಕೆಂದರೆ ಮೊನ್ನೆ ಮೊನ್ನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರಾಜ್ಯ ಸಚಿವ ಸಂಪುಟ ಪುನರ್ ರಚನೆಯಾಗುವ ಇಂಗಿತ ವ್ಯಕ್ತಪಡಿಸಿದರು. ಅವರ ಮಾತಿನ ಪ್ರಕಾರ, ಸರ್ಕಾರದಲ್ಲಿರುವ ಹಲವು ಸಚಿವರಿಗೆ ಪದತ್ಯಾಗ ಮಾಡಲು ಸಜ್ಜಾಗಿರುವಂತೆ ಸೂಚನೆ ಹೋಗಿದೆ. ಆದರೆ ಯಾವಾಗ ಅವರು ಈ ಮಾತುಗಳನ್ನಾಡಿದರೋ ಇದಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಸದ್ಯಕ್ಕೆ ಸಂಪುಟ ವಿಸ್ತರಣೆಯೂ ಇಲ್ಲ. ಪುನರ್ ರಚನೆಯೂ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿದರು. ಅರ್ಥಾತ್, ಸರ್ಕಾರದ ಮಟ್ಟದಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಆಡುವ ಮಾತುಗಳಿಗೆ ವಿರೋಧ ವ್ಯಕ್ತಪಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ನಡೆಯುತ್ತಿದೆ ಎಂದರೆ ನಾಯಕತ್ವ ಬದಲಾವಣೆಯ ಕೂಗು ತಳದಲ್ಲಿ ಹಾಗೇ ಉಳಿದಿದೆ ಎಂದರ್ಥ.
ಇವತ್ತು ಡಿಕೆಶಿ ಒಂದು ಮಾತು ಹೇಳಿದರೆ ಆ ಮಾತನ್ನು ವಿರೋಧಿಸುವ ಕೆಲಸ ಸಾಂಗೋಪಾಂಗವಾಗಿ ನಡೆಯುತ್ತಿದೆ. ಇದೇನನ್ನು ಸೂಚಿಸುತ್ತದೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಿಸುವ ಯಾವುದೇ ಪ್ರಸ್ತಾಪವನ್ನು ಪಕ್ಷದ ಬಹುತೇಕರು ಒಪ್ಪುವುದಿಲ್ಲ ಎಂಬುದನ್ನು ತಾನೇ? ಇದೇ ರೀತಿ ಕೆಲ ದಿನಗಳ ಹಿಂದೆ ಡಿಕೆಶಿ ಅವರು, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಇಂಗಿತ ವ್ಯಕ್ತಪಡಿಸಿದಾಗಲೂ ಹೀಗೇ ಆಯಿತು. ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ನಾಯಕರು ತಿರುಗಿಬಿದ್ದರು, ಹಾಗೆಯೇ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಪ್ರಶ್ನೆಯೇ ಇಲ್ಲ ಎಂದರು. ಈ ಬೆಳವಣಿಗೆಯನ್ನು ಆಳವಾಗಿ ಗಮನಿಸಿ ನೋಡಿದರೆ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದ ಕುರುಹು ಉಳಿದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತಿದೆ. ಹೀಗಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕೂಡ ಇಂತಹ ಗೊಂದಲಗಳಿಂದ ಹೊರಬರಲು ಮತ್ತಷ್ಟು ಕಾಲ ಕಾಯುವ ಅನಿವಾರ್ಯತೆಯಲ್ಲಿದೆ.
ಅಂದ ಹಾಗೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್ ಅವರಾಡಿದ ಮಾತು ಇದಕ್ಕೆ ಕಾರಣ. ಮೊನ್ನೆ ಅವರು ಇದ್ದಕ್ಕಿದ್ದಂತೆ, ಮನಸ್ಸು ಮಾಡಿದರೆ ಜಾ.ದಳ ಪಕ್ಷದಲ್ಲಿರುವ ಹಲವು ಶಾಸಕರನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರುತ್ತೇನೆ ಎಂದರು. ಯಾವಾಗ ಅವರು ಹೀಗೆ ಮಾತನಾಡಿದರೋ ಇದಾದ ನಂತರ ಜಾ.ದಳ ಶಾಸಕರು ಒಗ್ಗಟ್ಟಿನ ಪ್ರದರ್ಶನ ಮಾಡುವ ಯತ್ನ ನಡೆಸಿದರು. ಇಷ್ಟಾದರೂ ಆಳದಲ್ಲಿ ಹೆಚ್ಚಿನ ಶಾಸಕರಿಗೆ ಪಕ್ಷದ ನಾಯಕರ ಬಗ್ಗೆ ಅಸಮಾಧಾನವಿದೆ ಎಂಬುದು ರಹಸ್ಯವಲ್ಲ.