ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷವು ಕಳೆದ ವಾರ ಎರಡು ದಿನಗಳ ಕಾಲ ಸದ್ದು ಮಾಡಿತು. ಪಕ್ಷದ ಉನ್ನತ ಅಧಿಕಾರದ ಕಾರ್ಯಕಾರಿಣಿ ಸಭೆ ಮತ್ತು ಅಖಿಲ ಭಾರತ ಮಟ್ಟದ ಅಧಿವೇಶನ ನಡೆಸಿ ‘ನ್ಯಾಯಪಥ್’ ಹೆಸರಿನಲ್ಲಿ ಹಲವು ನಿರ್ಣಯಗಳನ್ನು ಅಂಗೀಕರಿಸಿತು. ಕಾಂಗ್ರೆಸ್ ಈ ಹಿಂದೆ ಹಲವು ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಎಐಸಿಸಿ ಅಧಿವೇಶನ ಎಂದರೆ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುತ್ತಿತ್ತು. ಅಷ್ಟು ಮಾತ್ರವಲ್ಲದೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಎಲ್ಲಿಲ್ಲದ ಹುರುಪು ತರುತ್ತಿತ್ತು. ಆದರೆ ಗುಜರಾತ್‌ನಲ್ಲಿ ನಡೆದ ಎಐಸಿಸಿ ಅಧಿವೇಶನ ಪಕ್ಷದ ಸಾಂಪ್ರದಾಯಿಕ ಸಭೆಯಾಗಿ ಅಂತ್ಯಗೊಂಡದ್ದು ಮಾತ್ರ ವಿಪರ್ಯಾಸ.
೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದರ ನೂರು ವರ್ಷಗಳ ನೆನಪಿಗಾಗಿ ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆದಿತ್ತು. ಆದರೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ಎರಡು ದಿನಗಳ ಅಧಿವೇಶನ ಒಂದೇ ದಿನಕ್ಕೆ ಮೊಟಕುಗೊಂಡಿತ್ತು. ಈ ಅಧಿವೇಶನದ ಮುಂದುವರಿದ ಭಾಗವಾಗಿಯೇ ಗುಜರಾತ್‌ನಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನೋತ್ಸವದ ಅಂಗವಾಗಿ ಕಾಂಗ್ರೆಸ್ ತನ್ನ ಕಾರ್ಯಕಾರಿಣಿ ಸಭೆ ಮತ್ತು ಎಐಸಿಸಿ ಅಧಿವೇಶನ ನಡೆಸಿದ್ದು ವಿಶೇಷ.
೧೩೭ ವರ್ಷ ಹಳೆಯದಾದ ಕಾಂಗ್ರೆಸ್ ಪಕ್ಷವೀಗ ಸಹಜವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಪಕ್ಷದ ಉಳಿವು ಮತ್ತು ಬೆಳವಣಿಗೆಗಾಗಿ ಪಕ್ಷದ ನಾಯಕತ್ವ ಹೊಸತನಕ್ಕಾಗಿ ಹುಡುಕಾಟ ನಡೆಸಿದೆ. ಪಂಡಿತ್ ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ನಡೆದದ್ದೇ ದಾರಿ ಎನ್ನುವಂತಿತ್ತು. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ನಾಲ್ಕು ದಶಕಗಳ ಹಿಂದೆ ಹುಟ್ಟಿದ ಭಾರತೀಯ ಜನತಾ ಪಕ್ಷದ ಮುಂದೆ ಕಾಂಗ್ರೆಸ್ ವಾಸ್ತವವಾಗಿ ಶಕ್ತಿಹೀನ ಸ್ಥಿತಿ ತಲುಪಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಸುಮಾರು ಅರವತ್ತು ವರ್ಷಗಳ ಕಾಲ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಅಂದಿನ ದಿನಗಳಲ್ಲಿ ಸಮರ್ಥವಾದ ನಾಯಕತ್ವ ಮೇಲಾಗಿ ಆದರ್ಶಪ್ರಾಯವಾಗಿದ್ದ ರಾಜಕೀಯ ಮೌಲ್ಯದಿಂದ ಸದೃಢವಾಗಿತ್ತು. ಹಾಗೆಯೇ ಅದರ ಕೆಲವು ತಪ್ಪುನಡೆಗಳಿಂದ ಆಗಾಗ್ಗೆ ಸೋಲಿನ ರುಚಿ ಯನ್ನೂ ಕಂಡಿತಾದರೂ ಪಕ್ಷ ದೇಶಕ್ಕೆ ಅನಿವಾರ್ಯ ಎನಿಸುವಷ್ಟು ಜನರಲ್ಲಿ ವಿಶ್ವಾಸವನ್ನು ಉಂಟು ಮಾಡಿತ್ತು. ಎಲ್ಲರನ್ನೂ ಒಂದಾಗಿ ತೆಗೆದುಕೊಂಡು ಹೋಗುವ ರಾಷ್ಟ್ರೀಯತೆ, ಜಾತ್ಯತೀತ ನೀತಿಯಲ್ಲಿದ್ದ ಬದ್ಧತೆ ಪಕ್ಷವನ್ನು ಬಲಗೊಳಿಸುತ್ತಿತ್ತು. ಆದರೆ ೧೯೯೫-೭೭ರ ಅವಧಿಯ ತುರ್ತು ಪರಿಸ್ಥಿತಿ ಹೇರಿಕೆ, ಇಂದಿರಾ ಗಾಂಧಿ ಅವರ ಸೋಲು, ಖಲಿಸ್ತಾನ ಚಳವಳಿಯನ್ನು ಹತ್ತಿಕ್ಕಿದ ಕಾರಣ ನಡೆದ ಇಂದಿರಾ ಗಾಂಧಿ ಅವರ ಹತ್ಯೆ, ಶ್ರೀಲಂಕಾದಲ್ಲಿನ ಎಲ್‌ಟಿಟಿಇ ವಿಷಯದಲ್ಲಿನ ತಪ್ಪು ಹೆಜ್ಜೆಗಳಿಂದ ಆದ ರಾಜೀವ್ ಗಾಂಧಿ ಅವರ ಹತ್ಯೆ ಕಾಂಗ್ರೆಸ್ ಪಕ್ಷವನ್ನು ಅಲುಗಾಡಿಸಿಬಿಟ್ಟಿತು. ನಂತರ ಪಿ.ವಿ.ನರಸಿಂಹರಾವ್ ಆಡಳಿತದಲ್ಲಿ ನಡೆದ ಬಾಬ್ರಿ ಮಸೀದಿ ನೆಲಸಮದಂತಹ ಘಟನೆಗಳಿಂದ ಕಾಂಗ್ರೆಸ್ ಅನುಭವಿಸಿದ ರಾಜಕೀಯ ಏಳು ಬೀಳಿನಂತಹ ತಲ್ಲಣಗಳಿಂದ ಅದಿನ್ನೂ ಚೇತರಿಸಿಕೊಳ್ಳಲಾಗಿಲ್ಲ ಎನ್ನುವುದು ಬೆಳಕಿನಷ್ಟೇ ಸತ್ಯ.
ಪಿ.ವಿ. ನರಸಿಂಹರಾವ್ ಆಡಳಿತಾವಧಿಯನ್ನು ಬಿಟ್ಟರೆ ಕಾಂಗ್ರೆಸ್ ಮತ್ತೆ ನೆಹರೂ ಕುಟುಂಬದ ಸಂಬಂಧದಿಂದ ಹೊರಬರಲಾಗುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಚುನಾಯಿತ ಅಧ್ಯಕ್ಷರಾದರೂ ನೆಹರೂ-ಇಂದಿರಾ ಕುಟುಂಬದ ನಿಯಂತ್ರಣ ಬಲವಾಗಿರುವ ವಾಸ್ತವ ಸತ್ಯವನ್ನು ಮರೆಮಾಚಲಾಗದು. ಕಾಂಗ್ರೆಸ್ ಈಗ ಇಂದಿರಾ ಗಾಂಧಿ ಅವರ ಕುಟುಂಬದ ಸಂಬಂಧದಲ್ಲಿ ಮುಂದುವರಿದರೂ ಅಥವಾ ಆ ಸಂಬಂಧದಿಂದ ದೂರ ಉಳಿದರೂ ಪಕ್ಷ ಚೇತರಿಸಿಕೊಳ್ಳಲಾಗದ ಸ್ಥಿತಿಯನ್ನು ಎದುರಿಸುತ್ತಿರುವುದು ವಿಪರ್ಯಾಸ.
ಆದರೂ ಬಿಜೆಪಿಯ ಹಿಂದುತ್ವದ ವಶೀಕರಣ, ಮುಸ್ಲಿಮರನ್ನು ನಿರ್ಲಕ್ಷಿಸುವ ರಾಜಕಾರಣದ ಮುಂದೆ ಕಾಂಗ್ರೆಸ್ಸಿನ ರಾಷ್ಟ್ರೀಯ ಸೌಹಾರ್ದ, ಸಂವಿಧಾನ ರಕ್ಷಣೆಯಂತಹ ಮಾತುಗಳು ಜನರ ಮನಸ್ಸಿನಲ್ಲಿ ಕ್ಲೀಶೆ ಎನಿಸುವಂತಾಗಿರುವುದು ದುರಂತ. ಇದೇನೇ ಇದ್ದರೂ, ಕಾಂಗ್ರೆಸ್ ಗುಜರಾತ್ ಮಹಾ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳು ಆ ಪಕ್ಷದ ಭವಿಷ್ಯವನ್ನು ಗಟ್ಟಿ ಮಾಡಬಹುದೇ ಎನ್ನುವುದು ಈಗ ಮುಖ್ಯ ವಿಷಯ. ‘ನ್ಯಾಯಪಥ್’ ಹೆಸರಿನಲ್ಲಿ ಅಂಗೀಕರಿಸಿರುವ ನಿರ್ಣಯಗಳಲ್ಲಿ ಮುಖ್ಯವಾಗಿ ಸಂವಿಧಾನ ಸಂರಕ್ಷಣೆ, ರಾಷ್ಟ್ರ ಮಟ್ಟದಲ್ಲಿ ಸೌಹಾರ್ದತೆಯನ್ನು ಕಾಪಾಡುವುದು, ಮಹಿಳೆಯರ ಹಕ್ಕುಗಳ ರಕ್ಷಣೆ, ತಾನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮೀಸಲಾತಿಗೆ ಇರುವ ಶೇ.೫೦ರ ಮಿತಿಯನ್ನು ತೆಗೆದು ಹಾಕುವುದು. ಇದರ ಜೊತೆಗೆ ಈಗ ನಡೆಯಬಹುದಾದ ಸಾಮಾನ್ಯ ಜನಗಣತಿಯನ್ನು ಜಾತಿ ಆಧಾರಿತವಾಗಿ ನಡೆಸಬೇಕೆನ್ನುವ ಒತ್ತಾಯ, ಪರಿಶಿಷ್ಟರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಹಿತರಕ್ಷಣೆ ಕಾಪಾಡಲು ಬದ್ಧವಾಗಿರುವುದು ಕಾಂಗ್ರೆಸ್ಸಿನ ಮಹತ್ವದ ನಿರ್ಣಯಗಳು.
ಈ ವಚನವನ್ನು ಪಾಲಿಸುವ ಜೊತೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಪ್ಪು ವಿದೇಶಾಂಗ ನೀತಿಯನ್ನು ಅನುಸರಿಸುವ ಮೂಲಕ ವಿದೇಶಾಂಗ ವ್ಯವಹಾರದಲ್ಲಿ ಭಾರತ ಸೋಲುತ್ತಿದೆ ಎಂದು ಜನರಿಗೆ ಮನವರಿಕ ಮಾಡಿಕೊಡುವುದೂ ಕೂಡ ಕಾಂಗ್ರೆಸ್ ಪಕ್ಷದ ನಿರ್ಣಯಗಳಲ್ಲಿ ಒಂದು. ಅಧಿಕಾರದಲ್ಲಿ ಇಲ್ಲದ ಕಾರಣ ಜಡತ್ವದಲ್ಲಿರುವ ಪಕ್ಷವನ್ನು ಮತ್ತೆ ಚುರುಕುಗೊಳಿಸಲು ಹೊಸ ಪೀಳಿಗೆಯನ್ನು ಆಕರ್ಷಿಸುವುದರ ಕಡೆ ಹೆಚ್ಚು ಒತ್ತು ನೀಡಲು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿಷ್ಕ್ರಿಯರಾಗಿರುವವರು ಮತ್ತು ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲು ಹಿಂಜರಿಯುವವರು ಪಕ್ಷದ ರಾಜಕಾರಣದಿಂದ ನಿವೃತ್ತರಾಗಿ ಎಂದು ಕರೆ ನೀಡಿರುವುದು ಹಳಬರನ್ನು ಮುಜುಗರಕ್ಕೊಳಪಡಿಸಿದೆ. ಆದರೆ ಹೊಸ ಪೀಳಿಗೆಯು ಪಕ್ಷದತ್ತ ನೋಡುತ್ತಿಲ್ಲವಾದ ಕಾರಣ ಇರುವ ಹಿರಿಯರನ್ನುಕಳೆದುಕೊಳ್ಳುವುದು ವಾಸ್ತವವಾಗಿ ಕಷ್ಟದ ಕೆಲಸವೇ. ಏಕೆಂದರೆ ಬಿಜೆಪಿ ಮತ್ತು ಸಂಘ ಪರಿವಾರವು ನೆಹರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಬಗೆಗೆ ಹೊಸಬರ ತಲೆಯಲ್ಲಿ ಅಳಿಸಲಾಗದಂತೆ ದ್ವೇಷದ ವಿಷವನ್ನು ತುಂಬಿಬಿಟ್ಟಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂವಿಧಾನವನ್ನು ಬದಲಾಯಿಸಲು ಹೊರಟಿದೆ ಎಂದು ಕಳೆದ ಲೋಕಸಭೆ ಚುನಾವಣೆಯಲ್ಲಿ ವ್ಯಾಪಕವಾದ ಪ್ರಚಾರ ನಡೆಸಿದ್ದು ಮತ್ತು ರಾಹುಲ್ ಗಾಂಧಿ ದೇಶದ ಉದ್ದಗಲಕ್ಕೂ ನಡೆಸಿದ ಭಾರತ್ ಜೋಡೋ ಯಾತ್ರೆಯಿಂದ ಕಳೆದ ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿಯ ನಾಗಾಲೋಟವನ್ನು ತಡೆಯಿತಾದರೂ ತಾನು ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಗಮನಿಸಿದಾಗ ರಾಹುಲ್ ಗಾಂಧಿ ನಾಯಕತ್ವ ಜನರ ವಿಶ್ವಾಸ ಗಳಿಸಲು ಇನ್ನೂ ಹೆಚ್ಚು ಶ್ರಮ ಹಾಕುವ ಅವಶ್ಯಕತೆಯನ್ನು ಒತ್ತಿ ಹೇಳಿದೆ. ಆದರೆ ಲೋಕಸಭೆ ಚುನಾವಣೆ ಕಾಲದಲ್ಲಿ ತನ್ನ ನೇತೃತ್ವದಲ್ಲಿ ಆಗಿದ್ದ ‘ಇಂಡಿಯಾ’ಮೈತ್ರಿಕೂಟದಲ್ಲಿ ಒಡಕು ಮೂಡಿದ್ದರೂ ಈ ಅಽವೇಶನದಲ್ಲಿ ಯಾವ ಚರ್ಚೆಯೂ ಆಗದೆ ಮೌನವಾಗಿರುವುದನ್ನು ಗಮನಿಸಿದರೆ ಮೈತ್ರಿ ಕೂಟದ ಅಸ್ಥಿತ್ವ ಈಗ ಇಲ್ಲ ಎನ್ನುವ ಸಂದೇಶ ನೀಡಿದಂತೆಯೇ ಎನ್ನುವುದನ್ನು ತಿಳಿಯಬೇಕಿದೆ.
ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಹಲವು ನಾಯಕರ ಬಾಯಿಯಲ್ಲಿ ಸಂವಿಧಾನ ಬದಲಾವಣೆಯ ಬಗ್ಗೆ ಕೇಳಿ ಬರುತ್ತಿದ್ದ ಹೇಳಿಕೆಗಳ ಕಾರಣ ಕಾಂಗ್ರೆಸ್ ದಲಿತರು, ಹಿಂದುಳಿದ ವರ್ಗವರು ಮತ್ತು ಮುಸ್ಲಿಮರ ರಕ್ಷಣೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಈಗಿರುವ ಸಂವಿಧಾನದಿಂದ ಮಾತ್ರ ಸಾಧ್ಯ ಎನ್ನುವ ಕಟು ಸತ್ಯವನ್ನು ಅರಿತು ಕಾಂಗ್ರೆಸ್ ಇತ್ತೀಚಿನ ದಿನಗಳಲ್ಲಿ ಸಂವಿಧಾನ ರಕ್ಷಣೆಗೆ ಹೆಚ್ಚಿನ ಮುತುವರ್ಜಿ ವಹಿಸಿರುವುದನ್ನು ಕಾಣಬಹುದು. ಹಾಗಾಗಿ ಈ ಬದ್ಧತೆಯನ್ನು ಕಾಂಗ್ರೆಸ್ ತನ್ನ ಅಹಮದಾಬಾದ್ ನಿರ್ಣಯದಲ್ಲಿ ಉಲ್ಲೇಖಿಸುವುದನ್ನು ಮರೆತಿಲ್ಲ.
ಹಾಗಾಗಿಯೇ ಹರಿದು ಹಂಚಿಹೋಗಿರುವ ಪಕ್ಷದ ಸಾಂಪ್ರದಾಯಿಕ ದಲಿತರ ಮತಗಳನ್ನು ಮತ್ತೆ ಗಳಿಸಿಕೊಳ್ಳಬೇಕೆನ್ನುವ ಕಾರಣಕ್ಕೆ ಜಾತಿ ಆಧಾರಿತವಾಗಿ ಜನಗಣತಿ ನಡೆಸಬೇಕೆನ್ನುವ ಪಟ್ಟನ್ನು ಮುಂದುವರಿಸಿದೆ. ಬಿಹಾರದ ಜಾತಿಗಣತಿಯನ್ನು ಆದರ್ಶವಾಗಿಟ್ಟುಕೊಂಡಿರುವ ರಾಹುಲ್ ಗಾಂಧಿ ಕರ್ನಾಟಕದಲ್ಲೂ ಹಲವು ವರ್ಷಗಳ ಹಿಂದೆಯೇ ಸಿದ್ಧವಾಗಿ ದೂಳು ಹಿಡಿಯುತ್ತಿದ್ದ ಕಾಂತರಾಜ ಆಯೋಗದ ವರದಿಯನ್ನು ಜಾರಿಗೆ ತರಲು ಒತ್ತಾಯಿಸಿರುವ ಕಾರಣ ಗುಜರಾತ್ ಅಧಿವೇಶನ ಮುಗಿಸಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಅಯೋಗದ ವರದಿಯನ್ನು ಸಚಿವ ಸಂಪುಟದ ಮುಂದೆ ತಂದು ಅದರ ಜಾರಿಗೆ ಸಿದ್ಧತೆ ನಡೆಸಿರುವುದಕ್ಕೆ ಇದೇ ಕಾರಣ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ೨೦೨೬ರಲ್ಲಿ ನಡೆಯಬೇಕಿರುವ ಜನಗಣತಿಯಲ್ಲಿ ಜಾತಿಗಳ ಗಣತಿಯನ್ನು ನಡೆಸಬೇಕೆಂದು ಒತ್ತಾಯಿಸುತ್ತಿರುವ ರಾಹುಲ್ ಗಾಂಽ, ಕರ್ನಾಟಕದಲ್ಲಿ ಈಗ ಜಾರಿಗೆ ತರಲು ಹೊರಟಿರುವ ಎಚ್. ಕಾಂತರಾಜ ಆಯೋಗದ ವಸ್ತುಸ್ಥಿತಿ ಮತ್ತು ಅದರ ಜಾರಿಯಿಂದ ಆಗಬಹುದಾದ ರಾಜಕೀಯ ತಲ್ಲಣದಿಂದ ಕಾಂಗ್ರೆಸ್ ಭವಿಷ್ಯದ ಮೇಲೆ ಯಾವ ಪರಿಣಾಮ ಉಂಟು ಮಾಡಬಹುದು ಎನ್ನುವುದನ್ನು ಕಾಲವೇ ಹೇಳಬೇಕಿದೆ.
ಎಲ್.ಜಿ. ಹಾವನೂರು, ಚಿನ್ನಪ್ಪ ರೆಡ್ಡಿ ಮತ್ತು ವೆಂಕಟಸ್ವಾಮಿ ಆಯೋಗಗಳು ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧ ಪಟ್ಟಿದ್ದವು. ಈ ಮೂರೂ ಆಯೋಗಗಳನ್ನು ರಾಜ್ಯದ ಎರಡು ಬಲಿಷ್ಠ ಜಾತಿಗಳು ವಿರೋಽಸಿಕೊಂಡೇ ಬಂದವು. ಆದರೆ ಕಾಂತರಾಜ ಆಯೋಗವು ನೇರವಾಗಿ ಮೀಸಲಾತಿಗೆ ಸಂಬಂಧ ಪಡದಿದ್ದರೂ ಜಾತಿಗಳ ವಾಸ್ತವ ಜನಸಂಖ್ಯೆ ಮತ್ತು ಹಿಂದುಳಿದವರ್ಗದವರು ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಚಿತ್ರಣವನ್ನು ನೀಡಲಿದೆ. ಇದರಿಂದ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಆಗಬಹುದಾದ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರವನ್ನು ಕಾದು ನೋಡಬೇಕಿದೆ.
” ಬಿಜೆಪಿಯ ಹಿಂದುತ್ವದ ವಶೀಕರಣ, ಮುಸ್ಲಿಮರನ್ನು ನಿರ್ಲಕ್ಷಿಸುವ ರಾಜಕಾರಣದ ಮುಂದೆ ಕಾಂಗ್ರೆಸ್ಸಿನ ರಾಷ್ಟ್ರೀಯ ಸೌಹಾರ್ದ, ಸಂವಿಧಾನ ರಕ್ಷಣೆಯಂತಹ ಮಾತುಗಳು ಜನರ ಮನಸ್ಸಿನಲ್ಲಿ ಕ್ಲೀಶೆ ಎನಿಸುವಂತಾಗಿರುವುದು ದುರಂತ. ಇದೇನೇ ಇದ್ದರೂ, ಕಾಂಗ್ರೆಸ್ ಗುಜರಾತ್ ಮಹಾಧಿವೇಶನದಲ್ಲಿ ಕೈಗೊಂಡ ನಿರ್ಣಯಗಳು ಆ ಪಕ್ಷದ ಭವಿಷ್ಯವನ್ನು ಗಟ್ಟಿ ಮಾಡಬಹುದೇ ಎನ್ನುವುದು ಈಗ ಮುಖ್ಯ ವಿಷಯ.”