- ಡಿ.ವಿ. ರಾಜಶೇಖರ
ಸಿಖ್ ಪ್ರತ್ಯೇಕತಾವಾದಿ ಗುರು ಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆ ಯತ್ನದ ಸಂಚಿನ ಹಿಂದೆ ಭಾರತ ಸರ್ಕಾರದ ಅಧಿಕಾರಿಗಳು ಇದ್ದಾರೆ ಎಂದು ಅಮೆರಿಕ ಆರೋಪ ಮಾಡಿದಂದಿನಿಂದಲೂ ಉಭಯ ದೇಶಗಳ ನಡುವಣ ಬಾಂಧವ್ಯ ಬಿಕ್ಕಟ್ಟಿಗೆ ಒಳಗಾದಂತೆ ಕಾಣುತ್ತಿದೆ. ಅಮೆರಿಕದ ನ್ಯೂಯಾರ್ಕ್‌ನ ಕೋರ್ಟಿನಲ್ಲಿ ಸರ್ಕಾರದ ನ್ಯಾಯಾಂಗ ಅಧಿಕಾರಿಗಳು ಪನ್ನುನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪಣೆ ಪತ್ರ ಸಲ್ಲಿಸಿದ ನಂತರ ಭಾರತ ಆ ಪ್ರಕರಣವನ್ನು ಸಾರಾಸಗಟಾಗಿ ಅಲ್ಲಗಳೆಯಲು ಹೋಗದೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಬಾಡಿಗೆ ಹಂತಕರಿಂದ ಪ್ರತ್ಯೇಕತಾವಾದಿಗಳನ್ನು ಕೊಲ್ಲಿಸುವುದು ಭಾರತದ ನೀತಿಯಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಸ್ಪಷ್ಟನೆ ನೀಡಿದ ನಂತರವೂ ಈ ಪ್ರಕರಣ ತಣ್ಣಗಾಗಿಲ್ಲ.
ಈ ಪ್ರಕರಣ ಕುರಿತಂತೆ ಅಮೆರಿಕದ ಉನ್ನತ ಅಧಿಕಾರಿಗಳು ಭಾರತದ ಅಧಿಕಾರಿಗಳ ಜೊತೆ ಮಾತನಾಡುತ್ತಲೇ ಇದ್ದಾರೆ. ಒತ್ತಡದಿಂದಾಗಿ ಜಾಗೃತ ದಳದ ಉನ್ನತ ಅಧಿಕಾರಿಗಳು ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುವುದು ಅನಿವಾರ್ಯವಾದಂತಿದೆ. ಇದೀಗ ಮುಂದಿನ ವಾರ ಅಮೆರಿಕದ ಎಫ್‌ಬಿಐನ (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಡೈರೆಕ್ಟರ್ ಕ್ರಿಸ್ಟೊಫರ್ ರೇ ಭಾರತಕ್ಕೆ ಭೇಟಿ ನೀಡುವರೆಂಬ ವರದಿಗಳನ್ನು ದೆಹಲಿಯಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್‌ಸೆಟಿ ಖಚಿತಪಡಿಸಿದ್ದಾರೆ.
ಹತ್ಯೆ ಸಂಚಿನಿಂದ ಬಚಾವಾದ ಪನ್ನುನ್ ಭಾರತದ ಮೇಲೆ ಆರೋಪಗಳ ಸುರಿಮಳೆಯನ್ನೇ ಕರೆಯುತ್ತಿದ್ದಾರೆ. ಕಳೆದ ತಿಂಗಳ 19 ರಂದು ಏರ್ ಇಂಡಿಯಾ ವಿಮಾನದಲ್ಲಿ ಯಾರೂ ಪ್ರಯಾಣ ಮಾಡಬೇಡಿ, ಪ್ರಯಾಣ ಮಾಡಿದರೆ ಅಪಾಯ ಕಾದಿದೆ ಎಂದು ಪನ್ನುನ್ ಬೆದರಿಕೆ ಹಾಕಿದ್ದರು. ಅಂದು ಏನೂ ಆಗಲಿಲ್ಲ ಎನ್ನುವುದು ನಿಟ್ಟುಸಿರು ಬಿಡುವ ವಿಚಾರವೇ ಆದರೂ ಇದೀಗ ಡಿಸೆಂಬರ್ 13ರಂದು ಪಾರ್ಲಿಮೆಂಟ್ ಭವನದ ಮೇಲೆ ದಾಳಿ ನಡೆಸಲಾಗುವುದು ಎಂದು ಹೊಸ ಬೆದರಿಕೆ ಹಾಕಿ ಆತಂಕದ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. 2001 ಡಿಸೆಂಬರ್ 13 ರಂದು ಪಾಕಿಸ್ತಾನದ ಉಗ್ರಗಾಮಿಗಳು ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದನ್ನು ನೆನಪಿಸಿಕೊಳ್ಳಲು ಈ ದಾಳಿ ಎಂದು ಪನ್ನುನ್ ಘೋಷಿಸಿರುವುದು ಈ ಆತಂಕಕ್ಕೆ ಕಾರಣ. ಹಾಗೆ ನೋಡಿದರೆ ನ್ಯೂಯಾರ್ಕ್‌ನಲ್ಲಿ ಲಾಯರ್ ಆಗಿರುವ ಪನ್ನುನ್ ಅಂಥ ದೊಡ್ಡ ಉಗ್ರಗಾಮಿ ಅಲ್ಲ, ಕೇವಲ ಘೋಷಣೆಗಳ ಉಗ್ರಗಾಮಿ ಅಷ್ಟೆ ಎಂದು ಭಾರತದ ರಹಸ್ಯದಳದ ಅಧಿಕಾರಿಗಳು ಹೇಳುತ್ತಾರೆ. ಸಿಖ್ ಫಾರ್ ಜಸ್ಟೀಸ್ ಎಂಬ ಉಗ್ರಗಾಮಿ ಸಂಘಟನೆಯ (ಈಗ ನಿಷೇಧಕ್ಕೆ ಒಳಗಾಗಿದೆ) ಸಂಸ್ಥಾಪಕರಾಗಿರುವ ಅವರಿಗೆ ಅಮೆರಿಕ ಅಥವಾ ಮತ್ತಾವುದೇ ದೇಶದಲ್ಲಿರುವ ಸಿಖ್ ಉಗ್ರವಾದಿಗಳ ಬೆಂಬಲ ಅಷ್ಟಾಗಿ ಇಲ್ಲ. ಇತರ ಸಂಘಟನೆಗಳ ಜೊತೆ ಸೇರಿ ಕಾರ್ಯಕ್ರಮ ರೂಪಿಸುವುದರಿಂದಾಗಿ ಅವರ ಬಗ್ಗೆ ಎಲ್ಲ ದೇಶಗಳಲ್ಲೂ ಕಣ್ಗಾವಲು ಇದೆ. ಕಳೆದ ಜೂನ್ ತಿಂಗಳಲ್ಲಿ ಕೆನಡಾದಲ್ಲಿ ಹತ್ಯೆಯಾದ ಹರದೀಪ್ ಸಿಂಗ್ ನಿಜ್ಜರ್ ಮತ್ತು ಪನ್ನುನ್ ಸಮಾನ ಮನಸ್ಕರು. ತಮ್ಮ ಚಟುವಟಿಕೆಗಳಲ್ಲಿ ಪರಸ್ಪರ ಸಹಕಾರ ನೀಡುತ್ತಿದ್ದರು. ನಿಜ್ಜರ್ ಕೊಲೆಯಾದ ಹಿನ್ನೆಲೆಯಲ್ಲಿ ಪನ್ನುನ್ ಮೇಲೆ ಇದ್ದ ಜೀವ ಬೆದರಿಕೆಗೆ ಇದೀಗ ಮಹತ್ವ ಬಂದಿದೆ. ಪನ್ನುನ್ ಹತ್ಯೆಗೆ ಬೆದರಿಕೆ ಇತ್ತು ಎಂಬುದನ್ನು ಅಮೆರಿಕದ ಸರ್ಕಾರಿ ಅಧಿಕಾರಿಗಳು ಖಚಿತ ಪಡಿಸಿಕೊಂಡಿದ್ದು ಅವರಿಗೆ ವಿಶೇಷ ಭದ್ರತೆ ನೀಡಲಾಗಿದೆ.
ಪನ್ನುನ್ ಹತ್ಯೆ ಸಂಚಿನ ಬಗ್ಗೆ ಸರ್ಕಾರಿ ವಕೀಲರು ಕೋರ್ಟಿಗೆ ಸಲ್ಲಿಸಿರುವ ದೋಷಾರೋಪಣೆ ಪ್ರಕಾರ ಈ ಸಂಚಿನ ಹಿಂದೆ ಇಬ್ಬರು ಭಾರತೀಯರು ಇದ್ದಾರೆ. ಅದರಲ್ಲಿ ಒಬ್ಬರು ಸರ್ಕಾರಿ ಗುಪ್ತಚರ ವಿಭಾಗದ ಅಧಿಕಾರಿ, ಮತ್ತೊಬ್ಬರು ಖಾಸಗಿ ವ್ಯಕ್ತಿ. ಸರ್ಕಾರಿ ಅಧಿಕಾರಿ ಯಾರು ಎಂಬುದು ಅಮೆರಿಕದ ರಹಸ್ಯದಳದವರಿಗೆ ಗೊತ್ತಿದೆ. ಆದರೆ ಆರೋಪ ಸಾಬೀತಾಗದೆ ಹೆಸರು ಹೇಳುವಂತಿಲ್ಲ ಎಂಬ ಸ್ಪಷ್ಟೀಕರಣವನ್ನು ನೀಡಲಾಗಿದೆ. ಮತ್ತೊಬ್ಬ ವ್ಯಕ್ತಿ ನಿಖಿಲ್ ಗುಪ್ತ. ದೋಷಾರೋಪಣೆ ಪ್ರಕಾರ ಅವರು ಗುಜರಾತಿನವರು. ಮಾದಕ ವಸ್ತು ಮತ್ತು ಯುದ್ಧಾಸ್ತ್ರಗಳ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದು ಅನೇಕ ಮೊಕದ್ದಮೆಗಳನ್ನು ಭಾರತದಲ್ಲಿ ಎದುರಿಸುತ್ತಿದ್ದಾರೆಂದು ತಿಳಿಸಲಾಗಿದೆ. ಹೆಸರು ಬಹಿರಂಗಪಡಿಸದೆ ಇರುವ ಸರ್ಕಾರಿ ಗುಪ್ತಚರ ಅಧಿಕಾರಿ ನಿಖಿಲ್ ಗುಪ್ತರಿಗೆ ಪನ್ನುನ್ ಅವರನ್ನು ಕೊಲ್ಲುವ ಕಾಂಟ್ರಾಕ್ಟ್ ಕೊಡುತ್ತಾರೆ. ಈ ಕೆಲಸ ಮಾಡಿದರೆ ಗುಜರಾತಿನಲ್ಲಿ ಅವರ ಮೇಲಿರುವ ಎಲ್ಲ ಮೊಕದ್ದಮೆಗಳಿಂದ ಬಿಡುಗಡೆ ಮಾಡುವುದಾಗಿ ಆಮಿಷ ಒಡ್ಡುತ್ತಾರೆ. ಈ ಆಮಿಷದಿಂದ ಉತ್ತೇಜಿತರಾದ ಗುಪ್ತ ಅವರು ಬಾಡಿಗೆ ಹಂತಕನೊಬ್ಬನ ಜೊತೆ ಸಂಪರ್ಕ ಬೆಳೆಸುತ್ತಾರೆ. ಒಂದು ಲಕ್ಷ ಡಾಲರ್‌ಗೆ ಕಾಂಟ್ರಾಕ್ಟ್ ಕುದುರಿಸಲಾಗುತ್ತದೆ. ಮುಂಗಡ ಹಣವನ್ನೂ ಕೊಡಲಾಗುತ್ತದೆ.
ನಿಜ್ಜರ್ ಕೊಲೆಯಾದ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿ ಹಂತಕರಿಗೆ ಈಗ ಕೊಟ್ಟಿರುವ ಕೆಲಸ ಮುಗಿಯುತ್ತಿದ್ದಂತೆಯೇ ಇನ್ನಷ್ಟು ಕೆಲಸಗಳಿವೆ ಎಂದು ಹೇಳಿರುವ ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡಲಾಗಿದೆ. ಆದರೆ ಗುಪ್ತ ಅವರು ಯಾವ ಹಂತಕನಿಗೆ ಸುಪಾರಿ ನೀಡಿದ್ದರೋ ಅವನು ನಿಜವಾದ ಹಂತಕನಾಗಿರದೆ ಅಮೆರಿಕದ ಸೀಕ್ರೆಟ್ ಸರ್ವೀಸ್‌ನ ಏಜೆಂಟನಾಗಿರುತ್ತಾನೆ. ಹೀಗಾಗಿ ಗುಪ್ತ ಸಿಕ್ಕಿಹಾಕಿಕೊಳ್ಳುತ್ತಾರೆ. ಇದೊಂದು ರೀತಿಯಲ್ಲಿ ಸಿನಿಮಾ ಕಥೆಯಂತೆ ಇದ್ದರೂ ನಡೆದದ್ದೇ ಹೀಗೆ ಎಂದು ಕೋರ್ಟಿಗೆ ಸಲ್ಲಿಸಿರುವ ದೋಷಾರೋಪಣೆಯಲ್ಲಿ ತಿಳಿಸಲಾಗಿದೆ. ನಂತರ ಜಕ್ ದೇಶದಲ್ಲಿದ್ದ ನಿಖಿಲ್ ಗುಪ್ತ ಅವರನ್ನು ಅಮೆರಿಕದ ಪೊಲೀಸರು ಇದೀಗ ಕರೆತಂದು ಜೈಲಿನಲ್ಲಿರಿಸಿದ್ದಾರೆ. ಪನ್ನುನ್ ಹತ್ಯೆಗೆ ಆದೇಶ ಕೊಟ್ಟ ಅಧಿಕಾರಿಯನ್ನು ಹಿಡಿದು ತನಿಖೆ ನಡೆಸಬೇಕಿದೆ ಎಂಬುದು ಅಮೆರಿಕದ ಆಗ್ರಹ.
ಅಮೆರಿಕದ ಈ ಪ್ರಕರಣ ಕೆನಡಾದ ನಿಜ್ಜರ್ ಪ್ರಕರಣಕ್ಕೆ ಬಲ ತಂದುಕೊಟ್ಟಿದೆ. ಆದರೆ ಕೆನಡಾ ಇದುವರೆವಿಗೂ ಸಾಕ್ಷಾಧಾರ ಒದಗಿಸಿಲ್ಲ. ಹೀಗಾಗಿ ಕೆನಡಾ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಆದರೆ ಎರಡೂ ಪ್ರಕರಣಗಳು ಒಂದಕ್ಕೆ ಇನ್ನೊಂದು ಸಂಬಂಧ ಪಡೆದಿರುವುದರಿಂದ ಇದರಲ್ಲಿ ಭಾರತದ ಪಾತ್ರ ಇದೆಯೇ ಇಲ್ಲವೇ ಎನ್ನುವುದು ಹೊರಬರಲಿದೆ. ಪನ್ನುನ್ ಅವರನ್ನು ಭಯೋತ್ಪಾದಕ ಎಂದು ಭಾರತ ಘೋಷಿಸಿದೆ. ಅವರ ಮೇಲೆ ಅನೇಕ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಹೀಗಾಗಿ ಅವರನ್ನು ಭಾರತಕ್ಕೆ ಒಪ್ಪಿಸಬೇಕೆಂಬ ಕೋರಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೆನಡಾದಲ್ಲಿರುವ ಹಿಂದೂಗಳೆಲ್ಲಾ ಭಾರತಕ್ಕೆ ಹೋಗಿ, ಪಾರ್ಲಿಮೆಂಟ್ ಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂಬಿತ್ಯಾದಿ ಅಪಾಯಕಾರಿ ಘೋಷಣೆಗಳನ್ನು ಹರಿಬಿಡುತ್ತಿರುವ ಪನ್ನುನ್ ವಿರುದ್ಧ ಅಮೆರಿಕ ಏಕೆ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅವರೇನಾದರೂ ಅಮೆರಿಕದ ಗುಪ್ತದಳ ಸಿಐಎ ಏಜೆಂಟರೇ ಎನ್ನುವ ಅನುಮಾನವನ್ನೂ ಜನರು ವ್ಯಕ್ತಮಾಡಿದ್ದಾರೆ. ಇದೇನೇ ಇದ್ದರೂ ನಿಖಿಲ್ ಗುಪ್ತ ಯಾರು ಎನ್ನುವ ಬಗ್ಗೆ ಭಾರತದಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ. ಗುಪ್ತ ಎನ್ನುವ ಯಾರೊಬ್ಬರೂ ಗುಜರಾತ್ ಮತ್ತು ಪಂಜಾಬ್ ರಾಜ್ಯಗಳ ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗಾದರೆ ಗುಪ್ತ ಯಾರು? ಅದು ಕಳ್ಳ ಹೆಸರೇ ಎಂಬುದನ್ನು ಈಗ ಉಭಯ ದೇಶಗಳ ತನಿಖೆಯಿಂದ ಗೊತ್ತಾಗಬೇಕಿದೆ.
ಈ ಮಧ್ಯೆ ಪನ್ನುನ್ ಹತ್ಯೆ ಸಂಚು ವಿಚಾರ ಅಮೆರಿಕದ ಬಹುರಾಷ್ಟ್ರೀಯರ ಮೇಲೆ ದೌರ್ಜನ್ಯ ಕುರಿತ ಸೆನೆಟ್ ಕಮಿಟಿಯಲ್ಲಿ ಚರ್ಚೆಗೆ ಬಂದಿದೆ. ಇದೊಂದು ಗಂಭೀರ ವಿಚಾರ ಎಂದು ವಿದೇಶಾಂಗ ವಿಚಾರಗಳ ಸಮಿತಿಯ ಅಧ್ಯಕ್ಷ ಬೆನ್ ಕಾರ್ಡಿನ್ ಕಳವಳ ವ್ಯಕ್ತಮಾಡಿದ್ದಾರೆ. ಬಹುರಾಷ್ಟ್ರೀಯರ ರಕ್ಷಣೆಗೆ ಕಾನೂನೊಂದನ್ನು ತರಲು ಸೆನೆಟ್‌ನಲ್ಲಿ ಆಗ್ರಹಿಸುವುದಾಗಿ ಹೇಳಿದ್ದಾರೆ. ಪ್ರಜಾತಂತ್ರ ದೇಶವಾದ ಭಾರತ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಬಂದಿರುವುದು ದುರದೃಷ್ಟಕರ ಎಂದಿದ್ದಾರೆ. ಪ್ರಜಾತಂತ್ರದ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವವರು ಭಿನ್ನಮತೀಯರನ್ನು ಹತ್ತಿಕ್ಕಲು ಸರ್ವಾಧಿಕಾರಿ ದೇಶಗಳು ಅನುಸರಿಸುತ್ತಿರುವ ದಾರಿ ಹಿಡಿದಿರುವುದು ಗಂಭೀರ ವಿಚಾರ ಎಂದೂ ಹೇಳಿದ್ದಾರೆ.
ಅಮೆರಿಕದ ಕಾಂಗ್ರೆಸ್ ಸದಸ್ಯರೊಬ್ಬರು ಈ ಸಂಚಿನ ಬಗ್ಗೆ ಕಳವಳ ವ್ಯಕ್ತಮಾಡಿದ್ದಾರೆ. ಈ ಪ್ರಕರಣ ಕ್ರಮೇಣ ದೊಡ್ಡದಾಗಿರುವಂತೆ ಕಾಣುತ್ತಿದ್ದು ವಿದೇಶಾಂಗ ಸಚಿವ ಜೈಶಂಕರ್ ಅವರು ಸದ್ಯ ಅಮೆರಿಕಕ್ಕೆ ಭೇಟಿ ನೀಡಿದ್ದು ಅಲ್ಲಿನ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ತಿಳಿಗೊಳಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇದೇನೇ ಇದ್ದರೂ ಖಲಿಸ್ತಾನ ಉಗ್ರರ ಸಮಸ್ಯೆ ಈಗಾಗಲೇ ಕೆನಡಾ ಮತ್ತು ಭಾರತದ ನಡುವಣ ಬಾಂಧವ್ಯವನ್ನು ಹಾಳು ಮಾಡಿದೆ. ರಾಜಕೀಯ ಕಾರಣಗಳಿಗಾಗಿ ಪ್ರಧಾನಿ ಜಸ್ಟಿನ್ ಟ್ರೂಡೊ ಸಿಖ್ ಪ್ರತ್ಯೇಕತಾ ವಾದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿದ್ಧವಿಲ್ಲ. ಏಕೆಂದರೆ ಸಿಖ್ಖರ ಪಕ್ಷ ಸರ್ಕಾರಕ್ಕೆ ಬೆಂಬಲ ನೀಡಿದೆ. ಸಿಖ್ಖರ ಪಕ್ಷ ಬೆಂಬಲ ವಾಪಸ್ ಪಡೆದರೆ ಸರ್ಕಾರವೇ ಬಿದ್ದು ಹೋಗುತ್ತದೆ. ಅಮೆರಿಕದಲ್ಲಿ ಅಂಥ ಪರಿಸ್ಥಿತಿಯೇನೂ ಇಲ್ಲ. ಆದರೂ ಸರ್ಕಾರ ಸಿಖ್ ಪ್ರತ್ಯೇಕತಾವಾದಿಗಳ ಪರ ಇರುವುದು ಆಶ್ಚರ್ಯ ಹುಟ್ಟಿಸುತ್ತದೆ. ಪನ್ನುನ್ ತನ್ನ ಪ್ರಜೆ ಎನ್ನುವುದು ಅಮೆರಿಕದ ಅಧಿಕಾರಿಗಳ ವಾದ.
ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ಜೊತೆಗಿನ ಭಾರತದ ಬಾಂಧವ್ಯ ಉತ್ತಮಗೊಳ್ಳುತ್ತಿದೆ. ಅದನ್ನು ಉಳಿಸಿ-ಬೆಳೆಸುವ ದಿಕ್ಕಿನಲ್ಲಿ ಎರಡೂ ದೇಶಗಳ ನಾಯಕರು ಪ್ರಯತ್ನಿಸಬೇಕಿದೆ. ಕೆನಡಾ, ಅಮೆರಿಕ ಅಷ್ಟೇ ಅಲ್ಲ ಆಸ್ಟ್ರೇಲಿಯಾ, ಬ್ರಿಟನ್‌ನಲ್ಲಿಯೂ ಸಿಖ್ಖರು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಭಾರತದ ಪಂಜಾಬ್‌ನಲ್ಲಿ ಪ್ರತ್ಯೇಕವಾದ ಖಲಿಸ್ತಾನ ದೇಶ ರಚಿಸುವುದು ಈ ಉಗ್ರಗಾಮಿಗಳ ಕನಸು.