Mysore
20
overcast clouds
Light
Dark

ಜಿಎಸ್‌ಟಿ ಸುಧಾರಣೆಯನ್ನು ಮುಂದೂಡುತ್ತಿರುವುದೇಕೆ?

ಪ್ರೊ. ಆರ್. ಎಂ. ಚಿಂತಾಮಣಿ

ಸರಕು ಮತ್ತು ಸೇವೆಗಳ ತೆರಿಗೆ ಪರಿಷತ್ (ಜಿಎಸ್‌ಟಿ ಕೌನ್ಸಿಲ್) ಉನ್ನತಾಧಿಕಾರವುಳ್ಳ ಶಾಸನಬದ್ಧ ಸಂಸ್ಥೆಯಾಗಿದೆ. ಈ ತೆರಿಗೆ ಜಾರಿಯಾಗಿ ಏಳು ವರ್ಷಗಳು ಪೂರ್ಣಗೊಂಡಿದ್ದು, ಅನುಭವದ ಆಧಾರದ ಮೇಲೆ ಲೋಪದೋಷಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಜಾರಿಗೆ ತಂದು ತೆರಿಗೆ ನೀತಿಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸುವ ಜವಾಬ್ದಾರಿ ಪರಿಷತ್ ಮೇಲಿದೆ.

ಈ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸಬೇಕಾಗಿದೆ. ಕೇಂದ್ರ ಅರ್ಥಮಂತ್ರಿಗಳು ಅಧ್ಯಕ್ಷರಾಗಿರುವ ಪರಿಷತ್ತಿನಲ್ಲಿ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. ಕಳೆದ ವಾರದ ಆರಂಭದಲ್ಲಿ ಸೆ. ೦೯ರಂದು ನಡೆದ ೫೪ನೇ ಸಭೆಯಲ್ಲಿ ಹಲವು ಆಡಳಿತಾತ್ಮಕ ನಿರ್ಧಾರಗಳಲ್ಲದೆ ಕೆಲವು ಸಣ್ಣಪುಟ್ಟ ತೆರಿಗೆ ಬದಲಾವಣೆಗಳನ್ನೂ ಕೌನ್ಸಿಲ್ ಪ್ರಕಟಿಸಿದೆ. ಕ್ಯಾನ್ಸರ್ ಕಾಯಿಲೆ ಗುಣಪಡಿಸಲು ಬಳಸುವ ಔಷಧಿಗಳ ಮೇಲಿನ ಜಿಎಸ್‌ಟಿಯನ್ನು ಶೇ. ೧೨ರಿಂದ ಶೇ. ೦೫ಕ್ಕೆ ಇಳಿಸಲಾಗಿದೆ. ಇದರಿಂದ ಅಷ್ಟರಮಟ್ಟಿಗೆ ಈ ಔಷಧಿಗಳ ಬೆಲೆಗಳು ಕಡಿಮೆಯಾಗುತ್ತವೆ. ರೋಗಿಗಳ ಮೇಲಿನ ಭಾರ ಕಡಿಮೆಯಾಗಿ ಹೆಚ್ಚು ರೋಗಿಗಳಿಗೆ ಔಷಧಿ ಲಭ್ಯವಾದೀತು. ಔಷಧ ಉತ್ಪಾದಕ ಕಂಪೆನಿಗಳ ಪ್ರಕಾರ ಇದೇ ರೀತಿ ಇತರೆ ಕೆಲವು ರೋಗಗಳ ಔಷಧಗಳ ಮೇಲಿನ ಜಿಎಸ್‌ಟಿಯನ್ನು ಬರುವ ದಿನಗಳಲ್ಲಿ ಕಡಿಮೆ ಮಾಡಿದರೆ ರೋಗಿಗಳಿಗೆ ಕೈಗೆಟುಕಬಹುದು.

ಎರಡನೆಯ ನಿರ್ಧಾರದಂತೆ ಇನ್ನು ಮುಂದೆ ವಾಣಿಜ್ಯ ಉದ್ದೇಶಗಳಿಗಾಗಿ ನೋಂದಾಯಿತವಲ್ಲದ ಸಂಸ್ಥೆಗಳಿಗೆ (ಪಾಲುಗಾರಿಕೆ ಫರ್ಮುಗಳು ಮತ್ತು ವ್ಯಕ್ತಿಗಳು) ಕಟ್ಟಡಗಳನ್ನು ಬಾಡಿಗೆಗೆ ಕೊಟ್ಟಿದ್ದರೆ ಆ ಬಾಡಿಗೆ ಮೊತ್ತದ ಮೇಲೆ ಶೇ. ೧೮ ಜಿಎಸ್‌ಟಿ ಆಕರಿಸಲಾಗುವುದು. ಅದನ್ನು ಬಾಡಿಗೆದಾರರಿಂದಲೇ ವಸೂಲು ಮಾಡಲಾಗುವುದು. ಅಂದರೆ ಬಾಡಿಗೆದಾರ ವಾಣಿಜ್ಯ ವ್ಯವಹಾರಸ್ಥರು ತಾವು ಕೊಟ್ಟ ತೆರಿಗೆ ಮೊತ್ತವನ್ನು ಬಾಡಿಗೆಯಲ್ಲಿ ಕಳೆದು ಉಳಿದ ಮೊತ್ತವನ್ನು ಕಟ್ಟಡ ಮಾಲೀಕರಿಗೆ ತೆರಿಗೆ ರಸೀದಿಯೊಡನೆ ಕೊಡಬಹುದು. ಮುಂದೆ ತೆರಿಗೆ ಸೇರಿ ಬಾಡಿಗೆಗಳು ಹೆಚ್ಚಾಗಬಹುದು. ಆದರೆ ಜೀವ ವಿಮೆ ಮತ್ತು ಆರೋಗ್ಯ ವಿಮೆ ಪ್ರಿಮಿಯಂ ಮೇಲಿನ ಜಿಎಸ್‌ಟಿ ವಿನಾಯಿತಿ ಕೇಳಿ ಬಂದ ಮನವಿಗಳ ಪರಿಶೀಲನೆಯನ್ನು ಮಂತ್ರಿಗಳ ಉಪಸಮಿತಿಗೆ ಒಪ್ಪಿಸಲಾಗಿದೆ.

ಕೇಂದ್ರ ಸಚಿವ ಸಂಪುಟದಲ್ಲಿಯ ಹಿರಿಯ ಸದಸ್ಯರಾದ ನಿತಿನ್ ಗಡ್ಕರಿಯವರೂ ವಿನಾಯಿತಿ ಕೊಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೂ ನಿರ್ಧಾರ ಮುಂದೂಡಲಾಗಿದೆ. ವಿನಾಯಿತಿ ಕೊಟ್ಟರೆ ಪ್ರಿಮಿಯಂ ವೆಚ್ಚ ಅಷ್ಟರ ಮಟ್ಟಿಗೆ ಕಡಿಮೆಯಾಗುತ್ತದೆ. ಭಾರತದಲ್ಲಿ ವಿಮಾ ರಕ್ಷಣೆಗೆ ಒಳಪಡುವವರು ಜನಸಂಖ್ಯೆಯ ಶೇ. ೩. ೮ ಮಾತ್ರ ಇದ್ದು, ಜಾಗತಿಕ ಮಟ್ಟದಲ್ಲಿ ಈ ಪ್ರಮಾಣ ಶೇ. ೬. ೫ ಇದೆ ಎಂದು ಅಽಕೃತ ವರದಿಗಳು ಹೇಳುತ್ತವೆ. ಆದ್ದರಿಂದ ಪ್ರಿಮಿಯಂ ವೆಚ್ಚ ಕಡಿಮೆಯಾದರೆ ವಿಮಾ ರಕ್ಷಣೆ ಪಡೆಯುವವರ ಸಂಖ್ಯೆಯು ಹೆಚ್ಚಾಗಿ ಸಾಮಾಜಿಕ ಭದ್ರತೆ ಹೆಚ್ಚಾಗುವುದೆಂಬ ಬಲವಾದ ವಾದವೂ ಇದೆ. ಸರ್ಕಾರಗಳ ಇತರೆ ತೆರಿಗೆಗಳ ಸಂಗ್ರಹ ಇದರಿಂದ ಹೆಚ್ಚಾಗಬಹುದೆಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಲಾಗಿದೆ. ಜಿಎಸ್‌ಟಿ ದರಗಳು: ನಮ್ಮಲ್ಲಿ ಈಗ ಶೇ. ೫, ಶೇ. ೧೨, ಶೇ. ೧೮ ಮತ್ತು ಶೇ. ೨೮ ಹೀಗೆ ನಾಲ್ಕು ತೆರಿಗೆ ದರಗಳಿದ್ದು, ತೆರಿಗೆ ಮುಕ್ತ ಸರಕು ಮತ್ತು ಸೇವೆಗಳ ಪಟ್ಟಿ ಬೇರೆ ಇದೆ. ತೆರಿಗೆ ದರಗಳು ಹೆಚ್ಚಾಗಿದ್ದಷ್ಟು ಆಡಳಿತಾತ್ಮಕ ತೊಂದರೆಗಳು ಮತ್ತು ತೆರಿಗೆ ವಿವಾದಗಳು ಹೆಚ್ಚು.

ತೆರಿಗೆ ಕಳ್ಳತನಕ್ಕೂ ಹೆಚ್ಚು ಅವಕಾಶವಿರುತ್ತದೆ. ತೆರಿಗೆ ದರಗಳು ಕಡಿಮೆ ಇದ್ದಷ್ಟು ತೆರಿಗೆ ಆಡಳಿತದಲ್ಲಿ ಸರ್ಕಾರಕ್ಕೂ ಮತ್ತು ತೆರಿಗೆ ನಿರ್ವಹಣೆ ತೆರಿಗೆದಾರರಿಗೂ ಅನುಕೂಲ. ಆದ್ದರಿಂದ ದರಗಳನ್ನು ಮೊದಲು ಮೂರಕ್ಕೂ ನಂತರ ಎರಡಕ್ಕೂ ಇಳಿಸಿದರೆ ಎಲ್ಲ ದೃಷ್ಟಿಕೋನಗಳಿಂದಲೂ ಅನುಕೂಲವೆಂದು ತಜ್ಞರು ಖಚಿತವಾಗಿ ಅಭಿಪ್ರಾಯಪಡುತ್ತಾರೆ. ಆದರೆ ಜಿಎಸ್‌ಟಿ ಕೌನ್ಸಿಲ್ ಮಂತ್ರಿಗಳ ಉಪಸಮಿತಿ ಇನ್ನೂ ವರದಿಯನ್ನು ಕೊಟ್ಟಿಲ್ಲವೆಂದೋ ಒಮ್ಮತ ಮೂಡಿಲ್ಲವೆಂದೋ ಕಾರಣಗಳನ್ನು ಮುಂದೊಡ್ಡಿ ತೆರಿಗೆ ದರಗಳನ್ನು ಕಡಿಮೆ ಮಾಡಿ ಇನ್ನಷ್ಟು ವೈಜ್ಞಾನಿಕಗೊಳಿಸುವ ಮತ್ತು ವಿವಿಧ ತೆರಿಗೆ ದರ ಪಟ್ಟಿಯಲ್ಲಿರುವ ಸರಕು ಮತ್ತು ಸೇವೆಗಳನ್ನು ಬದಲಾಯಿಸಿ ಮತ್ತಷ್ಟು ತೆರಿಗೆದಾರ ಸ್ನೇಹಿಯನ್ನು ಮಾಡುವ ನಿರ್ಧಾರಗಳನ್ನು ಮುಂದೂಡುತ್ತಲೇ ಬಂದಿದೆ. ಇತ್ತೀಚಿನ ಸಭೆಯಲ್ಲಿಯೂ ಇದೇ ಹಾಡು. ಈ ರೀತಿ ವಿಳಂಬ ಮಾಡುವುದು ಅರ್ಥವ್ಯವಸ್ಥೆಯ ಸುಧಾರಣೆಗಳ ದೃಷ್ಟಿಯಿಂದ ಸರಿಯಲ್ಲವೆಂದು ಅರ್ಥಶಾಸ್ತ್ರಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ತೆರಿಗೆ ನೀತಿ ಪರಿಣತರೂ ದೆಹಲಿಯ ರಾಷ್ಟ್ರೀಯ ತೆರಿಗೆ ನೀತಿ ಮತ್ತು ಯೋಜನೆ ಸಂಸ್ಥೆಯ ಹಿಂದಿನ ನಿರ್ದೇಶಕರೂ ಆದ ಎಂ. ಗೋವಿಂದರಾವ್‌ರವರು ಗಂಭೀರವಾಗಿ ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರಗಳ ತೆರಿಗೆ ಆದಾಯಗಳಲ್ಲಿ ಏರುಪೇರು ಆದೀತೆಂಬ ಭಯದಿಂದ ಹೀಗೆ ದರಗಳ ಸರಳೀಕರಣವನ್ನು ಮುಂದೂಡಲಾಗುತ್ತಿದೆಯೇ ಎಂಬ ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ.

ಅವರ ಪ್ರಕಾರ ನಮ್ಮಂತೆ ಜಿಎಸ್‌ಟಿ ಮತ್ತು ಮೌಲ್ಯವಽತ ತೆರಿಗೆ ಜಾರಿ ಮಾಡಿರುವ ೩೧ ದೇಶಗಳಲ್ಲಿ ಬಹುತೇಕರಲ್ಲಿ ಎರಡೇ ದರಗಳಿವೆ. ನಾಲ್ಕು ದರಗಳನ್ನು ಉಳಿಸಿಕೊಂಡಿರುವ ದೇಶ ನಮ್ಮದೊಂದೇ. ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ದರಗಳಿರುವುದರಿಂದ ಪ್ರತಿ ದರದಲ್ಲಿ ಸರಕು ಸೇವೆಗಳನ್ನು ಪಟ್ಟೀಕರಿಸುವುದು ಕಷ್ಟದ ಕೆಲಸ. ಎಲ್ಲ ವಲಯಗಳಿಗೂ ಕಡಿಮೆ ದರದಲ್ಲಿರಬೇಕೆಂಬ ಆಕಾಂಕ್ಷೆ ಇರುವುದು ಸಹಜ. ಇದರಿಂದ ಅಸಮಾಧಾನಗಳು, ಮನವಿಗಳು ಮತ್ತು ಪ್ರತಿಭಟನೆಗಳ ಸಾಧ್ಯತೆ ಹೆಚ್ಚು. ಇದರಿಂದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆಗಳು ಹೆಚ್ಚು. ಅಲ್ಲದೆ ಇನ್ನೂ ಹಲವು ಆಯಾಮಗಳೊಡನೆ ಯಾವುದೇ ತೆರಿಗೆ ನೀತಿಯಲ್ಲಿ ಪ್ರಮುಖವಾಗಿ ತೆರಿಗೆ ಸಂಗ್ರಹ ವೆಚ್ಚ (ಸರ್ಕಾರಕ್ಕೆ), ತೆರಿಗೆದಾರರಿಗೆ ನಿಯಮ ಪಾಲಿಸುತ್ತಾ ತೆರಿಗೆ ಪಾವತಿಸುವ ವೆಚ್ಚ ಮತ್ತು ಅರ್ಥವ್ಯವಸ್ಥೆಗೆ ತೆರಿಗೆಯಿಂದಾಗುವ ಏರುಪೇರುಗಳಿಂದುಂಟಾದ ಖರ್ಚು ಈ ಮೂರೂ ವೆಚ್ಚಗಳನ್ನು ಕನಿಷ್ಠ ಮಟ್ಟದಲ್ಲಿ ಇಡಬೇಕಾಗುತ್ತದೆ. ಹೆಚ್ಚು ದರಗಳಿದ್ದರೆ ಇದನ್ನು ಸಾಧಿಸುವುದು ಸಮಸ್ಯೆಗಳನ್ನೊಡ್ಡುತ್ತದೆ. ಆದ್ದರಿಂದ ಕೌನ್ಸಿಲ್ ಸಾಧ್ಯವಿದ್ದಷ್ಟು ಬೇಗನೆ ದರಗಳನ್ನು ವೈಜ್ಞಾನಿಕಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕು.

ಪರಿಹಾರ ಸೆಸ್ ಭವಿಷ್ಯ: ಜಾರಿಯಾದಾಗ ರಾಜ್ಯಗಳಿಗೆ ತಮ್ಮ ಸ್ವಂತ ತೆರಿಗೆ ಆದಾಯ ಬೆಳವಣಿಗೆಯಲ್ಲಿ ಕೊರತೆಯಾಗುವ ಭಯವನ್ನು ಮನಗಂಡ ಕೇಂದ್ರ ಕೊರತೆ ಪರಿಹಾರವನ್ನು ಮೊದಲ ಐದು ವರ್ಷ ಕೊಡುವುದಾಗಿ ಒಪ್ಪಿಕೊಂಡಿತ್ತು. ಅದನ್ನು ಸರಿದೂಗಿಸಲು ಕೇಂದ್ರ ಕೆಲವು ಹೆಚ್ಚಿನ ದರದ ಸರಕು ಮತ್ತು ಸೇವೆಗಳ ಜಿಎಸ್‌ಟಿ ಮೇಲೆ ಪರಿಹಾರ ಸೆಸ್ (ಮೇಲ್ತೆರಿಗೆ) ಆಕರಿಸಲು ಆರಂಭಿಸಿತು. ಈ ಪರಿಹಾರ ಜುಲೈ ೨೦೨೨ಕ್ಕೆ ನಿಂತು ಹೋಯಿತು. ಆದರೂ ಸೆಸ್ ೨೦೨೬ ಮಾರ್ಚ್‌ವರೆಗೆ ಮುಂದುವರಿಯುತ್ತದೆ. ಕಾರಣ: ಕೋವಿಡ್-೧೯ ಅವಽಯಲ್ಲಿ ಪರಿಹಾರ ಕೊಡಲು ಕೇಂದ್ರ ಮಾಡಿದ ಸಾಲ ಮತ್ತು ಬಡ್ಡಿ ತೀರಿಸಬೇಕು. ೨೦೨೬ ಮಾರ್ಚ್ ನಂತರ ಸೆಸ್ ಮುಂದುವರಿಯುವುದೇ? ಹಾಗಾದರೆ ಸೆಸ್ ಉಪಯೋಗ ಹೇಗೆ? ರಾಜ್ಯಗಳಿಗೆ ಪಾಲಿರುವ ಜಿಎಸ್‌ಟಿ ಮೇಳೆ ಆಕರಿಸಿರುವುದರಿಂದ ರಾಜ್ಯಗಳಿಗೂ ಪಾಲು ಕೊಡುವುದೇ? ಕೊಟ್ಟರೆ ಎಷ್ಟು? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹುಡುಕಬೇಕಾಗುತ್ತದೆ. ಒಂದು ರಾಜಮಾರ್ಗವಿದೆ. ಹೇಗೋ ತೆರಿಗೆದಾರರು ಹೆಚ್ಚಿನ ತೆರಿಗೆ ಕೊಡುತ್ತಿದ್ದಾರೆ. ಒಗ್ಗಿಹೋಗಿದ್ದಾರೆ. ಈಗ ಕೆಲವು ಐಷಾರಾಮಿ ಸರಕು ಮತ್ತು ಸೇವೆಗಳ ಮೇಲಿನ ಮತ್ತು ಪಾಪ (Sin) ಸರಕುಗಳ ಮೇಲಿನ ಸೆಸ್‌ಅನ್ನು ಅವುಗಳ ತೆರಿಗೆ ದರದಲ್ಲಿಯೇ ವಿಲೀನ ಮಾಡಿ ದರಗಳನ್ನೇ ಹೆಚ್ಚಿಸಬಹುದು. ಇದರಿಂದ ಲಭ್ಯವಾಗುವ ಹೆಚ್ಚುವರಿ ಉಳಿಕೆಯ ಸೌಲಭ್ಯವನ್ನು (ಕುಶನ್) ತೆರಿಗೆ ದರಗಳನ್ನು ಕಡಿಮೆ ಮಾಡಿದಾಗ ಉಂಟಾಗುವ ಏರುಪೇರುಗಳನ್ನು ಸರಿಪಡಿಸಲು ಬಳಸಬಹುದು. ಕೇಂದ್ರ ಮತ್ತು ರಾಜ್ಯಗಳ ಆದಾಯವೂ ಹೆಚ್ಚಾದೀತು. ಒಟ್ಟಾರೆ ಕೌನ್ಸಿಲ್ ತೀವ್ರವಾಗಿ ಸುಧಾರಣೆಗಳಿಗೆ ಕ್ರಮವಹಿಸಬೇಕು.