Mysore
21
clear sky

Social Media

ಬುಧವಾರ, 14 ಜನವರಿ 2026
Light
Dark

ಮಹಾತ್ಮನನ್ನು ಯಾಕೆ ಬೇಕೆಂದೇ ಮರೆಯುತ್ತಿದ್ದಾರೆ?

gandheeji

ಆ ಶತಾಯುಷಿ ಅಜ್ಜ ಊರುಗೋಲಿನ ಸಹಾಯ ದಿಂದ ನಡೆದು ಬರುತ್ತಿದ್ದರೆ, ಅವರ ಮಾಂಸ ಖಂಡ ಗಳೆಲ್ಲಾ ಕರಗಿ ಚರ್ಮವು ಜೋಲಾಡುತ್ತಿರುವಂತೆ ಅನಿಸುತ್ತಿತ್ತು. ಹೊಳೆಯುವ ಬೊಕ್ಕತಲೆ ಮತ್ತು ಕೈಯ ಲ್ಲಿದ್ದ ಜೋಳಿಗೆ ಥೇಟ್ ಗಾಂಧೀಜಿಯನ್ನು ಹೋಲು ವಂತಹ ಫಕೀರ. ಆಗಸ್ಟ್ ಬಂತೆಂದರೆ ಮಳೆ ಕೊಂಚ ತಗ್ಗಿ ಶಾಲೆಯ ವರಾಂಡ ಸ್ವಚ್ಛಗೊಳಿಸಿ ಧ್ವಜ ಸ್ತಂಭ ತೊಳೆಯುವ ನಮಗೆ ಸ್ವಾತಂತ್ರೋತ್ಸವ ಅಂದರೆ ಹುಚ್ಚು ಖುಷಿ. ಆ ದಿನ ಮನೆಗೆ ಬಂದ ಅಜ್ಜನಲ್ಲಿ ವಿಶೇಷವೊಂದಿತ್ತು. “ನಾನು ಗಾಂಽಜಿಯನ್ನು ನೋಡಿದ್ದೇನೆ”.

“ಹೋ ಹೌದಾ ಯಾವಾಗ ಅಜ್ಜಾ” ನನ್ನ ಕುತೂಹಲದ ಪ್ರಶ್ನೆ. “ಗಾಂಧಿ ಪಾರ್ಕ್ ಅಂತ ಉಪ್ಪಿನಂಗಡಿಯಲ್ಲುಂಟಲ್ವಾ? ಅದು ಗಾಂಧಿ ಭಾಷಣಕ್ಕೆ ಬಂದದ್ದಕ್ಕೆ ಇಟ್ಟ ಹೆಸರೂಂತ. ಉಪ್ಪಿನಂಗಡಿಯ ಹಳೆ ಸಂಕ ಉಂಟಲ್ವಾ? ಅದು ಕಂಪೆನಿ (ಬ್ರಿಟಿಷ್ ಸರಕಾರ) ಕಟ್ಟಿದ್ದು. ನಾನೇ ಅದಕ್ಕೆ ಇಟ್ಟಿಗೆ ಹೊತ್ತಿದ್ದೆ” ಅವರು ಅಂಗಿಯ ಕೈಗಳನ್ನು ಜರುಗಿಸಿ ಭುಜ ತೋರಿಸಿದರು.

ಜೋತು ಬಿದ್ದ ಆ ನರಪೇತಲ ಮೈಯಲ್ಲಿ ಚರ್ಮ ಬಿಟ್ಟು ಬೇರೇನೂ ಕಾಣದಿ ದ್ದರೂ ಕೂತೂಹಲ ಮತ್ತು ಗೌರವದೊಂದಿಗೆ ನಾನು ಅವರನ್ನು ಕೇಳಿದ್ದೆ. “ನೀವು ಸ್ವಾತಂತ್ರ್ಯ ಹೋರಾಟಗಾರರಾ? ” ಅಜ್ಜ ಪೆಚ್ಚಾಗಿ ಏನೂ ಅರ್ಥವಾಗದಂತೆ ನನ್ನನ್ನು ನೋಡಿದ್ದರು. ಮನೆಯಲ್ಲಿ ಯಾವತ್ತೂ ಮಕ್ಕಳ ಕಿರಿಕಿರಿಯನ್ನು ಹೇಳಿಕೊಂಡಿದ್ದ ಅರಳು ಮರಳು ಜೀವ ನೂರ ಹದಿನಾಲ್ಕು ವರ್ಷ ಬದುಕಿ ತೀರಿಕೊಂಡಿತು.

ಆ ವರ್ಷ ಶಾಲೆಯಲ್ಲಿ ಗಾಂಽಜಿ ವೇಷ ಧರಿಸಿ ಸ್ವಾತಂತ್ರ್ಯೋತ್ಸವಕ್ಕೆ ಬಂದಿದ್ದ ಹುಡಗ ನೊಬ್ಬ ಜೋರಾಗಿ “ಮಹಾತ್ಮ ಗಾಂಧಿ ಕಿ” ಅಂದ. ನಾವು ಒಕ್ಕೊರೊಲನಿಂದ “ಜೈ” ಎಂದು ಕೂಗಿದೆವು.

ಆ ದಿನದಂದು ಗಾಂಧೀಜಿಯವರ ವಿಚಾರ ವನ್ನು ಸವಿವರವಾಗಿ ಬಂದಿರುವ ಅತಿಥಿಗಳು ಕೊಂಡಾಡಿ ಮಾತನಾಡಿದ್ದರು. ವರ್ಷಾನು ವರ್ಷವೂ ನನಗೆ ಅಜ್ಜನ ನೆನಪಾದಗಲೆಲ್ಲಾ ಗಾಂಧಿಜಿಯ ನೆನಪುಗಳು ಸದಾ ಕಾಡುತ್ತಲೇ ಇದ್ದವು. ಗಾಂಧಿ ಎಂದರೆ ಪ್ರೀತಿಯ ಸೆಳೆತ. ಆಗಾಗ ಪಾಠದ ಮಧ್ಯೆ ಅಧ್ಯಾಪಕರು ಗಾಂಧಿಯ ಬಗ್ಗೆ ಹೊಗಳಿ ಮಾತನಾಡುತ್ತಿದ್ದರು. ಆಗ ಅಬ್ಬನ ಅಂಗಡಿ ಪೇಟೆಯಲ್ಲಿದ್ದುದರಿಂದ ಒಂದು ದಿನ ನಾನು ಬಹಳಷ್ಟು ಕುತೂಹಲ ದಿಂದಲೇ ಉಪ್ಪಿನಂಗಡಿ ಪೇಟೆಯ ಗಾಂಧಿ ಪಾರ್ಕನ್ನು ನೋಡಿದ್ದೆ. ಅಲ್ಲಿದ್ದ ಸಣ್ಣ ಪಾರ್ಕು.ಗಾಂಧೀಯ ನಿರ್ಲಿಪ್ತ ಪುತ್ಥಳಿ.

ಅದನ್ನು ನೋಡಿದಾಗಲೆಲ್ಲಾ ದೇಶ ಪ್ರೇಮ ಉಕ್ಕಿ ಬಂದು ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹಗಳು ನೆನಪಿಗೆ ಬಂದು, ಈ ಮುದಿ ಜೀವ ಇಡೀ ದೇಶವನ್ನು ಅಹಿಂಸೆಯೆಂಬ ಬ್ರಹ್ಮಾಸ್ತ್ರ ಉಪಯೋಗಿಸಿ ಸ್ವಾತಂತ್ರ್ಯವನ್ನು ಪಡೆದುಕೊಟ್ಟರಲ್ವಾ ಅನ್ನುವ ಅಭಿಮಾನ ಮೂಡಿ ನನ್ನ ರೋಮಗಳು ನಿಮಿರಿ ನಿಂತವು.

ನಾನು ನಮ್ಮ ಶಾಲೆ ಬಿಟ್ಟು ಮುಂದಿನ ಕಲಿಕೆಗಾಗಿ ಹೈಸ್ಕೂಲ್ ಸೇರಿಕೊಂಡೆ. ಅಲ್ಲಿನ ಸ್ವಾತಂತ್ರ್ಯೋತ್ಸವ ಗಾಂಧೀಜಿಯ ಫೋಟೊಗಳಿಟ್ಟು ಹೂವು ಹಾಕಿದರೇ ವಿನಾ ಅತಿಥಿ ಭಾಷಣದಲ್ಲಿ ಒಮ್ಮೆಯೂ ಅವರ ಹೆಸರು ಸುಳಿಯಲಿಲ್ಲ. ಸುಭಾಷ್ ಚಂದ್ರಬೋಸರು- ಭಗತ್ ಸಿಂಗ್ ಬಂದರೂ ಗಾಂಧಿಜಿಯ ನೆನಪು ಅವರಿಗಾಗಲೇ ಇಲ್ಲ. ಶಾಲೆ ಬದಲಾದಂತೆ ಗಾಂಧಿಜಿಯ ಫೋಟೊವೇ ಇಲ್ಲದ ಸ್ವಾತಂತ್ರ್ಯ ತಿರಂಗಾ ಮತ್ತು ಅಬ್ಬರದ ಭಾಷಣದಲ್ಲೇ ಮುಗಿಯತೊಡಗಿತು. ಗಾಂಧಿ ನೆನಪಿನ ಪುಟದಿಂದ ಸಣ್ಣಗೆ ಮಾಸತೊಡಗಿದ್ದಾರೆ. ಎಲ್ಲರೂ ಗಾಂಧೀಯನ್ನು ನೆನಪು ಮಾಡಿಕೊಳ್ಳುವುದನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಿದ್ದಾ ರೆಂದು ಕಾಣುತ್ತಿದೆ.

ಕಳೆದ ನಾಲ್ಕೈದು ವರ್ಷಗಳ ಹಿಂದೆ ಹೈವೇ ಪ್ರಾಜೆಕ್ಟ್ ಬಂದು ಉಪ್ಪಿನಂಗಡಿಯ ಚಂದ ಪಾರ್ಕ್ ತೆಗೆಯಲಾಯಿತು. ಎಂದೂ ಅಬ್ಬರ ಸದ್ದು ಮಾಡದ ಗಾಂಧೀಜಿಯ ಪುತ್ಥಳಿಯನ್ನು ತೆಗೆಯಲಾಯಿತು. ಗಾಂಧೀಜಿ ಎಂಬ ಮೌನ ಫಕೀರ ಮರೆಗೆ ಸರಿದರು. ಸ್ವಾತಂತ್ರ್ಯೋತ್ಸವದ ಮೆರವಣಿಗೆಗಳಲ್ಲಿ ಅವರ ಪರವಾದ ಜೈಕಾರ ಮೌನವಾಗಿತೊಡಗಿತು. ಕಳೆದ ವರ್ಷ ಅತಿಥಿಯಾಗಿ ಊರಿಗೆ ಬಂದಿದ್ದ ಅತಿಥಿಯೊಬ್ಬರು ಜೋರಿನಿಂದ ಭಾಷಣ ಮಾಡುತ್ತಿದ್ದರು. “ಚಳವಳಿ, ಪ್ರತಿಭಟನೆಗಳಿಂದ ದೇಶಕ್ಕೇನೂ ಸ್ವಾತಂತ್ರ್ಯ ಸಿಕ್ಕಿದ್ದಲ್ಲ. ರಕ್ತ ಕೊಡಬೇಕು, ನಾವಾಗಿಯೇ ಹೋರಾಡಿ ಮಡಿಯಬೇಕು. ರಕ್ತ ಬಸಿದ ಕಾರಣಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರೋದು”. ನನಗೆ ಯಾಕೋ ಇರಿಸು ಮುರಿಸಾಯಿತು. ಸುಮ್ಮನೆ ತಲೆಯೆತ್ತಿ ಗಾಂಧೀಜಿಯವರ ಫೋಟೊ ಹಿಂದೆ ಇರಿಸಿದ್ದ ಕಡೆಗೊಮ್ಮೆ ನೋಡಿದೆ. ಅಲ್ಲಿ ಗಾಂಧೀಜಿ ಇರಲಿಲ್ಲ. ಅಚಾನಕ್ಕಾಗಿ ಎದ್ದು ನಡೆದ ಮೌನಿ ಅಜ್ಜನಂತೆಯೇ ಗಾಂಧಿ ಹೊರಟು ಹೋಗಿದ್ದರು. ಚರ್ಮಕ್ಕಂಟಿದ ಎಲುಬಿನ ಗೂಡಿನ ಗಾಂಧಿ ಮೌನ ಸತ್ಯಾಗ್ರಹದಲ್ಲಿ ತಲ್ಲೀನರಾದಂತೆ ಭಾಸವಾಗತೊಡಗಿತು.

-ಮುನವ್ವರ್ ಜೋಗಿಬೆಟ್ಟು (mahammadmunavvar@gmail.com)

Tags:
error: Content is protected !!