Mysore
16
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಜಿಎಸ್‌ಟಿ ಸುಧಾರಣೆಗಳು ತಡವಾಗುತ್ತಿರುವುದೇಕೆ?

ಜಾರಿಯಾಗಿ ಎಂಟು ವರ್ಷಗಳು ಪೂರ್ಣಗೊಂಡ ನಂತರವೂ ಸರಕು ಮತ್ತು ಸೇವೆಗಳ ತೆರಿಗೆಯಲ್ಲಿ (Goods And Services Taxಜಿ.ಎಸ್.ಟಿ.) ಸುಧಾರಣೆಗಳನ್ನು ತರುವುದು ವಿಳಂಬವಾಗುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಇದಕ್ಕಾಗಿ ಜಿ.ಎಸ್.ಟಿ. ಕೌನ್ಸಿಲ್ ಸದಸ್ಯ ಮಂತ್ರಿಗಳ ಉಪ ಸಮಿತಿಯನ್ನು ರಚಿಸಲಾಗಿದ್ದು, ಅದರ ವರದಿ ಬರಬೇಕಾಗಿದೆ ಎಂದು ಮೊದಲು ಹೇಳಲಾಗುತ್ತಿತ್ತು. ಇತ್ತೀಚೆಗೆ ಪ್ರಧಾನ ಮಂತ್ರಿಗಳ ಕಚೇರಿಯಿಂದಲೂ ಅನುಮತಿ ದೊರೆತಿದೆ ಎಂದು ವರದಿಗಳು ಹೇಳುತ್ತವೆ. ಆದರೂ ವಿಳಂಬ ನೀತಿ ಏಕೆ? ಯಾವುದೇ ತೆರಿಗೆ ಇರಲಿ ಅದು ವೈಜ್ಞಾನಿಕವಾಗಿರಬೇಕು. ಸರಳವಾಗಿರಬೇಕು. ಸರ್ಕಾರಕ್ಕೆ ಲೆಕ್ಕಾಚಾರದಂತೆ ಆದಾಯ ಬರುವಂತಿರಬೇಕು.

ತೆರಿಗೆದಾರರಿಗೆ ಮತ್ತು ಪರೋಕ್ಷ ತೆರಿಗೆ ವಿಷಯದಲ್ಲಿ ಅದರ ಹೊರೆಯನ್ನು ಅನುಭವಿಸುವವರಿಗೆ ಭಾರವಾಗಬಾರದು. ಸುಧಾರಣೆಗೆ ಅವಕಾಶವಿರಬೇಕು. ಮತ್ತು ಸೂಕ್ತ ಸಮಯದಲ್ಲಿ ಸುಧಾರಣೆಗಳಾಗಬೇಕು. ಸಮಸ್ಯೆಗಳು ಉದ್ಭವಿಸಿದರೆ ಮತ್ತು ತೊಂದರೆಗಳಾದರೆ ಸರಿಪಡಿಸುವ ವ್ಯವಸ್ಥೆ ಇರಬೇಕು. ನೊಂದವರಿಗೆ ನ್ಯಾಯ ಸಿಗುವಂತಿರಬೇಕು.

ಈಗ ಕೇಂದ್ರ ಮತ್ತು ರಾಜ್ಯಗಳಲ್ಲಿದ್ದ ೧೭ಕ್ಕೂ ಹೆಚ್ಚು ಪರೋಕ್ಷ ತೆರಿಗೆಗಳನ್ನು ವಿಲೀನಗೊಳಿಸಿ ಜಾರಿ ಮಾಡಿದ ಜಿ.ಎಸ್.ಟಿ.ಯ ವಿಷಯಕ್ಕೆ ಬರೋಣ. ಇದನ್ನು ಕೇಂದ್ರ ಸರ್ಕಾರವೇ ಸಂಗ್ರಹಿಸುತ್ತಿದ್ದು ಕೇಂದ್ರ ಜಿ.ಎಸ್.ಟಿ. ಮತ್ತು ರಾಜ್ಯ ಜಿ.ಎಸ್.ಟಿ. ಎಂದು ಎರಡು ಭಾಗಗಳಲ್ಲಿ ಸಂಗ್ರಹಿಸುತ್ತಿದೆ. ರಾಜ್ಯದ ಭಾಗವನ್ನು ಆಯಾ ರಾಜ್ಯಗಳಿಗೆ ವರ್ಗಾಯಿಸುತ್ತಿದ್ದು, ತನ್ನ ಭಾಗವನ್ನು ತಾನು ಇಟ್ಟುಕೊಳ್ಳುತ್ತಿದೆ. ತನ್ನ ಭಾಗದಲ್ಲಿಯೂ ವರ್ಷದ ಕೊನೆಯಲ್ಲಿ ಹಣಕಾಸು ಆಯೋಗದ ಶಿ-ರಸ್ಸಿನಂತೆ ಒಟ್ಟು ತೆರಿಗೆ ಆದಾಯದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವರ್ಗಾಯಿಸು ತ್ತದೆ. ತುರ್ತು ಸುಧಾರಣೆಯಾಗಬೇಕಾಗಿರುವುದು ತೆರಿಗೆ ದರಗಳು ಮತ್ತು ಸೆಸ್ (ಮೇಲ್ತೆರಿಗೆ ಅಥವಾ ಮೇಲ್ ಶುಲ್ಕ ) ವಿಷಯದಲ್ಲಿ . ಈ ಬಗ್ಗೆ ಚರ್ಚೆಗಳು ಮುಂದುವರಿಯುತ್ತಲೇ ಇವೆ.

ತೆರಿಗೆ ದರಗಳು:  ಸಾಮಾನ್ಯವಾಗಿ ಒಂದು ತೆರಿಗೆಯಲ್ಲಿ ಮಾದರಿ ಎನ್ನುವಂತೆ ಮೂರು ದರಗಳಿರುತ್ತವೆ. ಐಷಾರಾಮಿ ವಸ್ತುಗಳು ಮತ್ತು ಸೇವೆಗಳಿಗೆ ಮತ್ತು ‘ಪಾಪಿ ’ ಉತ್ಪನ್ನಗಳೆಂದು ಕರೆಯಲ್ಪಡುವ ತಂಬಾಕು ಮತ್ತು ತಂಬಾಕು ಉತ್ಪನ್ನಗಳು ಹಾಗೂ ಮಾದಕ ಪೇಯಗಳ ಮೇಲೆ ಹೆಚ್ಚಿನ ದರವಿರುತ್ತದೆ. ಸೌಲಭ್ಯಗಳು ಎಂದು ಕರೆಯಲ್ಪಡುವ ಬಹುತೇಕ ಎಲ್ಲರೂ ಉಪಯೋಗಿಸಬಹುದಾದ ಸೇವೆಗಳು ಮತ್ತು ಉತ್ಪನ್ನಗಳ ಮೇಲೆ ಕಡಿಮೆ ಅಂದರೆ ಮಧ್ಯಮ ಮಟ್ಟದಲ್ಲಿ ತೆರಿಗೆ ದರ ನಿಗದಿ ಮಾಡಬೇಕಾಗುತ್ತದೆ. ಮತ್ತು ಜೀವನಾವಶ್ಯಕ ವಸ್ತುಗಳ ಮತ್ತು ಸೇವೆಗಳನ್ನು ತೀರಾ ಕಡಿಮೆ ದರದ ತೆರಿಗೆಯಲ್ಲಿ ಇಡಬೇಕಾಗುತ್ತದೆ. ಸಾಮಾನ್ಯ ಜನರು (ತೆರಿಗೆ ಕೊಡಲಿಕ್ಕಾಗದವರೂ ಸೇರಿ )ಮತ್ತು ಎಲ್ಲರೂ ಬಳಸುವ ಜೀವನಾವಶ್ಯಕಗಳನ್ನು ‘ತೆರಿಗೆ ಮುಕ್ತ ’ ಪಟ್ಟಿಯಲ್ಲಿಯೂ ಇಟ್ಟಿರಬೇಕಾಗುವುದು ಅವಶ್ಯ. ಈಗ ನಮ್ಮಲ್ಲಿ ಜಿ.ಎಸ್.ಟಿ. ಶೇ.೨೮. ಶೇ.೧೮, ಶೇ.೧೨ ಮತ್ತು ಶೇ.೦೫ ಹೀಗೆ ನಾಲ್ಕು ತೆರಿಗೆ ದರಗಳಿವೆ. ಜಾರಿ ಮಾಡುವ ಸಂದರ್ಭದಲ್ಲಿದ್ದ ಸಾಕಷ್ಟು ವೈವಿಧ್ಯತೆಗಳಿಂದಾಗಿ ಈ ನಾಲ್ಕಕ್ಕೆ ಇಳಿಸುವುದೇ ಕಷ್ಟದ ಕೆಲಸ ಮತ್ತು ಅನಿವಾರ್ಯವಾಗಿತ್ತು. ಈಗ ಸಾಕಷ್ಟು ಅನುಭವವಾಗಿದೆ.

ವಿವಿಧ ದರಗಳಲ್ಲಿಯ ತೆರಿಗೆ ಸಂಗ್ರಹದ ಅಂಕಿ ಸಂಖ್ಯೆಗಳೂ ಲಭ್ಯ. ಈ ನಾಲ್ಕು ತೆರಿಗೆ ದರಗಳಿರುವುದರಿಂದ ಆಡಳಿತವೂ ಕಠಿಣವೆನ್ನಿಸುತ್ತಿದೆ ಮತ್ತು ತೆರಿಗೆ ಸಂಗ್ರಹದಲ್ಲಿಯೂ ತೊಡಕುಗಳು ಉಂಟಾಗುತ್ತಿರುವುದು ಕಂಡು ಬಂದಿದೆ. ತೆರಿಗೆ ದರದಲ್ಲಿಯೂ ಗೊಂದಲಗಳಿವೆ . ಕೆಲವು ಉತ್ಪನ್ನಗಳ ಮೇಲೆ ಒಂದು ತೆರಿಗೆ ದರವಿದ್ದರೆ ಇವುಗಳ ಬಿಡಿ ಭಾಗಗಳ ಮೇಲೆ ಬೇರೆ ದರವಿದೆ. ಜಿ.ಎಸ್.ಟಿ. ಜಾರಿಯಿಂದ ತೆರಿಗೆದಾರರ ಮೇಲಿನ ಭಾರ ಕಡಿಮೆಯಾಗಿದೆ ಎಂಬುದನ್ನೂ ಸರ್ಕಾರಗಳ ತೆರಿಗೆ ಆಡಳಿತ ಸರಳವಾಗಿದೆ ಎಂಬುದನ್ನೂ ಒಪ್ಪಿಕೊಳ್ಳಲೇಬೇಕು. -ಬ್ರವರಿ ೧೧, ೨೦೨೫ರಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಅರ್ಥ ಮಂತ್ರಿ ನಿರ್ಮಲಾ ಸೀತಾರಾಮನ್ ರವರು ಹೇಳಿದಂತೆ ಜಿ.ಎಸ್.ಟಿ. ಜಾರಿಗೆ ಮೊದಲು ಇದ್ದ ಎಲ್ಲ ವಿಲೀನಗೊಂಡ ತೆರಿಗೆಗಳ ಸರಾಸರಿ ದರವು ಶೇ. ೧೫.೮ ಇದ್ದರೆ ೨೦೨೩-೨೪ರಲ್ಲಿ ಜಿ.ಎಸ್.ಟಿ. ಸರಾಸರಿ ದರವು ಶೇ.೧೧.೬ ಇದ್ದುದನ್ನು ಇಲ್ಲಿ ಗಮನಿಸಬಹುದು. ಅಂದರೆ ಜಿ.ಎಸ್.ಟಿ. ಜಾರಿಯಿಂದ ತೆರಿಗೆದಾರರಿಗೆ ಗಣನೀಯವಾಗಿ ಅನುಕೂಲವಾಗಿದೆ. ಸರ್ಕಾರಕ್ಕೂ ಆಡಳಿತದ ಸಮಸ್ಯೆ ಮತ್ತು ವೆಚ್ಚ ಕಡಿಮೆ ಯಾಗಿದೆ ಎಂದಂತಾಯಿತು. ಇನ್ನೂ ಸುಧಾರಣೆ ಬೇಕು. ಸದ್ಯ ತೆರಿಗೆ ದರಗಳನ್ನು ನಾಲ್ಕರಿಂದ ಮೂರಕ್ಕೆ ಇಳಿಸುವುದು ಒಂದು ಸುಧಾರಣೆಯಾದರೆ, ಸೆಸ್ ಭವಿಷ್ಯವನ್ನು ನಿರ್ಧರಿಸಬೇಕಾಗಿರುವುದು ಇನ್ನೊಂದು.

ಈಗಲೇ ಶೇ.೨೮ರ ದರವನ್ನು ಮುಟ್ಟುವ ಅವಶ್ಯಕತೆ ಇಲ್ಲ. ೨೦೨೩-೨೪ರಲ್ಲಿ ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರ ಈ ತೆರಿಗೆ ದರದಿಂದ ಒಟ್ಟು ತೆರಿಗೆ ಸಂಗ್ರಹದಲ್ಲಿ ಶೇ.೧೩-೧೫ ಬರುತ್ತಿದ್ದು, ಇದರಲ್ಲಿ ಬದಲಾವಣೆ ಬೇಕಾಗಿಲ್ಲವೆನಿಸುತ್ತದೆ. ಉಳಿದಂತೆ ಶೇ.೧೮ರ ದರದಿಂದ ದೊಡ್ಡ ಪಾಲು ಶೇ. ೭೦ -೭೫ರಷ್ಟು ಸಂಗ್ರಹವಾಗುತ್ತದೆ. ಇಲ್ಲಿ ತೆರಿಗೆದಾರರ ಸಂಖ್ಯೆಯೂ ದೊಡ್ಡದಿದೆ. ಶೇ.೧೨ರ ದರದಿಂದ ಶೇ.೫-೬ರಷ್ಟು ತೆರಿಗೆ ಸಂಗ್ರಹವಾಗುತ್ತಿದ್ದರೆ ಕೊನೆಯ ಶೇ.೫ರ ತೆರಿಗೆ ದರದಿಂದ ಶೇ. ೬-೮ರಷ್ಟು ತೆರಿಗೆ ಸಂಗ್ರಹವಾಗುತ್ತದೆ ಎಂದು ಅಂಕಿ ಸಂಖ್ಯೆಗಳು ತೋರಿಸುತ್ತವೆ. ಈ ಎರಡರಲ್ಲಿಯೇ ಬದಲಾವಣೆ ಸಾಧ್ಯತೆ ಹೆಚ್ಚು . ಉಪಯುಕ್ತವೂ ಆಗಬಹುದು. ಎರಡನ್ನೂ ವಿಲೀನ ಮಾಡಿ ಶೇ. ೮ ನಿಗದಿ ಮಾಡಿದರೆ ಕೆಳಗಿನ ದರದವರು ಶೇ.೩ ಮಾತ್ರ ಹೆಚ್ಚು ಕೊಡಬಹುದು. ಮೇಲಿನವರಿಗೆ ಶೇ.೪ರಷ್ಟು ಅನುಕೂಲವಾಗುತ್ತದೆ. ಸುಧಾರಣೆಗಳನ್ನು ಜಾರಿಗೊಳಿಸಿದಾಗ ಇಂಥ ಸಣ್ಣಪುಟ್ಟ ಏರುಪೇರುಗಳು ಅನಿವಾರ್ಯ. ನಿಧಾನವಾಗಿ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುತ್ತಾರೆ.

ಸೆಸ್ ಬಗ್ಗೆ ಒಂದು ಮಾತು. ಈಗ ಹೇಗೂ ಕೇಂದ್ರ, ರಾಜ್ಯಗಳಿಗೆ ನಷ್ಟ ಪರಿಹಾರ ಕೊಡಬೇಕಿಲ್ಲ. ಈ ಎರಡು ವರ್ಷ ಕೇಂದ್ರಕ್ಕೆ ಹೆಚ್ಚುವರಿಯಾಗಿ ಉಳಿದಿರುತ್ತದೆ. ಈಗ ಸೆಸ್ ಅನ್ನು ಕೈಬಿಡುವುದು ಒಳ್ಳೆಯದು. ರಾಜ್ಯ ಸರ್ಕಾರಗಳು ಗೊಣಗುವುದಾದರೂ ತಪ್ಪುತ್ತದೆ. ತೆರಿಗೆದಾರರೂ ಅಷ್ಟರ ಮಟ್ಟಿಗೆ ಭಾರ ಕಡಿಮೆಯಾಯಿತೆಂದು ಸಮಾಧಾನ ಪಡುತ್ತಾರೆ . ತನ್ನ ಆದಾಯ ಕಡಿಮೆಯಾಯಿತು ಎನ್ನುವುದಾದರೆ ಕೇಂದ್ರವು ಶೇ.೨೮ರ ತೆರಿಗೆ ದರದಲ್ಲಿ ಅಥವಾ ಎಲ್ಲ ದರಗಳಲ್ಲಿ ವಿಲೀನಗೊಳಿಸಬಹುದು. ರಾಜ್ಯಗಳಿಗೂ ಪಾಲು ಹೋಗುತ್ತದೆ. ಒಟ್ಟಾರೆ ಸೆಸ್, ಸರ್‌ಚಾರ್ಜ್ ಗಳ ಬಗ್ಗೆ ಮರು ಚಿಂತನೆ ನಡೆಯಬೇಕು.

” ಯಾವುದೇ ತೆರಿಗೆ ಇರಲಿ ಅದುವೈಜ್ಞಾನಿಕವಾಗಿರಬೇಕು. ಸರಳವಾಗಿರಬೇಕು. ಸರ್ಕಾರಕ್ಕೆ ಲೆಕ್ಕಾಚಾರದಂತೆ ಆದಾಯ ಬರುವಂತಿರಬೇಕು. ತೆರಿಗೆದಾರರಿಗೆ ಮತ್ತು ಪರೋಕ್ಷ ತೆರಿಗೆ ವಿಷಯದಲ್ಲಿ ಅದರ ಹೊರೆಯನ್ನು ಅನುಭವಿಸುವವರಿಗೆ ಭಾರವಾಗಬಾರದು. ಸುಧಾರಣೆಗೆ ಅವಕಾಶವಿರಬೇಕು.”

-ಪ್ರೊ.ಆರ್.ಎಂ. ಚಿಂತಾಮಣಿ

Tags:
error: Content is protected !!