ಡಿ.ವಿ.ರಾಜಶೇಖರ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ಮೇಲೆ ಹೆಚ್ಚು ಸುಂಕದ ಬಾಂಬ್ ಹಾಕಿಯೇ ಬಿಟ್ಟಿದ್ದಾರೆ. ತಮ್ಮ ದೇಶಕ್ಕೆ ಬರುವ ಎಲ್ಲ ವಸ್ತುಗಳ ಮೇಲೆ ಹೊಸ ಸುಂಕ ಹೇರುವ ಮೂಲಕ ಜಾಗತಿಕ ಸುಂಕ ಯುದ್ಧಕ್ಕೆ ಅವರು ಚಾಲನೆ ನೀಡಿದ್ದಾರೆ. ಇದರಿಂದಾಗಿ ಜಾಗತಿಕ ವಾಣಿಜ್ಯ ಕ್ಷೇತ್ರದಲ್ಲಿ ಕೋಲಾಹಲ ಉಂಟಾಗಿದೆ. ಕೆಲವು ದೇಶಗಳು ಪ್ರತಿ ಸುಂಕ ಹಾಕಿ ಯುದ್ಧ ಮಾಡಿಯೇ ತೀರುವುದಾಗಿ ಪ್ರಕಟಿಸಿವೆ. ಕೆಲವು ದೇಶಗಳು ಮಾತುಕತೆಯ ಮಾರ್ಗ ಆಯ್ಕೆ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ. ಟ್ರಂಪ್ ತೆರಿಗೆಯಿಂದಾಗಿ ಜಾಗತಿಕ ಹಣ ದುಬ್ಬರ, ನಿರುದ್ಯೋಗ, ಅಭಿವೃದ್ಧಿಯಲ್ಲಿ ಕುಸಿತ ತಲೆದೋರಿ ಜನರು ಸಂಕಷ್ಟಕ್ಕೆ ಒಳಗಾಗಲಿದ್ದಾರೆಂಬ ಆತಂಕಕ್ಕೆ ದಾರಿಮಾಡಿಕೊಟ್ಟಿದೆ.
ರಫ್ತು ಮಾಡುವ ದೇಶ ನಿಗದಿಮಾಡಿರುವಷ್ಟೇ ಸುಂಕದ ಮೊತ್ತ (ಸರಿಸಮಾನ ಸುಂಕ -ಪ್ರತಿಸುಂಕ ವಿಧಿಸುವುದಾಗಿ ಘೋಷಿಸಿದ್ದ ಟ್ರಂಪ್ ತಮ್ಮ ನಿಲುವನ್ನು ಬದಲಿಸಿಕೊಂಡು ಅಮೆರಿಕ ಮತ್ತು ನಿರ್ದಿಷ್ಟ ದೇಶಗಳ ಜೊತೆ ಇರುವ ರಫ್ತು ಪ್ರಮಾಣವನ್ನು ಆಧರಿಸಿ ಸುಂಕ ನಿಗದಿ ಮಾಡಿದ್ದಾರೆ. ಸುಮಾರು 180 ದೇಶಗಳ ಮೇಲೆ ಸುಂಕ ಪ್ರಕಟಿಸಲಾಗಿದೆ. ಹೊಸ ಸುಂಕ ಪ್ರಕಟಿಸಿದ ದಿನವನ್ನು (ಏಪ್ರಿಲ್ 3) ಅಮೆರಿಕದ ವಿಮೋಚನಾ ದಿನ ಎಂದು ಘೋಷಿಸಿದ್ದಾರೆ. ಜಾಗತಿಕವಾಗಿ ಸುಂಕದ ಶೋಷಣೆಯಿಂದ ಅಮೆರಿಕ ಮುಕ್ತವಾದ ದಿನ ಅದು ಎಂಬುದು ಅವರ ವಿವರಣೆ. ಹಲವಾರು ದಶಕಗಳ ಕಾಲ
ದಿಂದ ಅಮೆರಿಕ ಅತಿ ಕಡಿಮೆ (ಗರಿಷ್ಟ ಶೇ. 3.5) ಸುಂಕವನ್ನು ವಿಧಿಸುತ್ತಿತ್ತು. ಕಾಲ ಈಗ ಅಂತ್ಯವಾಗಿದೆ. ಇನ್ನು ಮುಂದೆ ಯಾವುದೇ ವಸ್ತುವನ್ನು ಅಮೆರಿಕಕ್ಕೆ ರಫ್ತು ಮಾಡಬೇಕಾದರೆ ಕನಿಷ್ಠ ಶೇ. 10 ಸುಂಕವನ್ನು ನೀಡಲೇಬೇಕಾಗುತ್ತದೆ. ಈಗ ಈ ಸುಂಕ ಹತ್ತಿರ ಹತ್ತಿರ ಶೇ. 60ಕ್ಕೆ ಏರಲಿದೆ. ಸುಂಕ ಏರಿಕೆಯಿಂದಾಗಿ ಅಮೆರಿಕಕ್ಕೆ ಸುಮಾರು ಏಳು ಟ್ರಲಿಯನ್ ಡಾಲರ್ ಬಂಡವಾಳವಾಗಿ ಹರಿದು ಬರುತ್ತದೆ, ಜನರಿಗೆ ಬೇಕಾದ ವಸ್ತುಗಳು ಇಲ್ಲಿಯೇ ಉತ್ಪಾದನೆಯಾಗುತ್ತವೆ, ಅಮೆರಿಕದ ವಸ್ತುಗಳಿಗೆ ಮತ್ತೆ ಬೆಲೆ ಬರುತ್ತದೆ, ಇದರಿಂದಾಗಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತವೆ ಮತ್ತು ಪ್ರತಿವರ್ಷ ಕನಿಷ್ಟ 3 ಟ್ರಿಲಿಯನ್ ಡಾಲರ್ ಆದಾಯ ಬರುತ್ತದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಇದರಿಂದಾಗಿ ಅಮೆರಿಕ ಮತ್ತೆ ಶ್ರೀಮಂತ ದೇಶವಾಗಿ ಮೆರೆಯಲಿದೆ ಎಂಬುದು ಅವರ ಲೆಕ್ಕಾಚಾರ.
ಚೀನಾ-ಶೇ. 54, ಭಾರತ ಶೇ. 27, ಪಾಕಿಸ್ತಾನ ಶೇ. 29, ದಕ್ಷಿಣ ಆಫ್ರಿಕಾ ಶೇ. 30, ತೈವಾನ್ ಶೇ. 32, ಜಪಾನ್ ಶೇ.24, ಥೈಲ್ಯಾಂಡ್ ಶೇ. 36, ವಿಯಟ್ನಾಂ ಶೇ. 46…ಹೀಗೆ 180 ದೇಶಗಳಿಗೆ ಅನ್ವಯವಾಗುವಂತೆ ಸುಂಕ ನಿಗದಿ ಮಾಡಲಾಗಿದೆ. ರಷ್ಯಾ, ಕೆನಡಾ, ಮೆಕ್ಸಿಕೊ ದೇಶಗಳನ್ನು ಈ ರಫ್ತು ದರಪಟ್ಟಿ ಯಿಂದ ಹೊರ ಗಿಡಲಾಗಿದೆ. ಆದರೆ ಈ ಹಿಂದೆ ಪ್ರಕಟಿಸಿದ ಕಾರುಗಳ ರಫ್ತು ಮೇಲಿನ ಸುಂಕ (ಶೇ.25) ತೆರಬೇಕಾಗುತ್ತದೆ. ಈ ಸುಂಕ ಹೇರಿಕೆ ವಿರುದ್ಧ ಈಗಾಗಲೇ ಜಗತ್ತಿನಾದ್ಯಂತ ಪ್ರತಿಭಟನೆ ಕಂಡುಬರುತ್ತಿದೆ. ಕೆನಡಾ ಸಮಾನವಾದ ಪ್ರತಿಸುಂಕ ವಿಧಿಸುವುದಾಗಿ ಪ್ರಕಟಿಸಿದೆ. ಅಮೆರಿಕ ಮತ್ತು ಕೆನಡಾದ ಆರ್ಥಿಕತೆ ಬಹುಪಾಲು ಮಿಳಿತವಾದುದು. ಅಮೆರಿಕ ಪ್ರತಿವರ್ಷ ವಿವಿಧ ರೀತಿಯಲ್ಲಿ ಕೆನಡಾಕ್ಕೆ ವಿವಿಧ ಯೋಜನೆಗಳ ಮೂಲಕ ಸುಮಾರು 350 ಬಿಲಿಯನ್ ಡಾಲರ್ ನೆರವು ನೀಡುತ್ತಿದೆ. ಅಲ್ಲಿ ಉತ್ಪಾದನೆಯಾದ ವಸ್ತುಗಳಿಗೆ ಅಮೆರಿಕದಲ್ಲಿ ಬೆಲೆ ರಕ್ಷಣೆ ಇದೆ. ಅಮೆರಿಕದ ಕೆಲವು ರಾಜ್ಯಗಳಿಗೆ ವಿದ್ಯುತ್ ಉತ್ಪಾದನೆ ಕೆನಡಾದಲ್ಲಿಯೇ ಆಗಿ ಆ ರಾಜ್ಯಗಳಿಗೆ ವಿತರಣೆಯಾಗುತ್ತದೆ. ಕಾರುಗಳಿಂದ ಹಿಡಿದು ಸಣ್ಣ ಎಲೆಕ್ಟ್ರಾನಿಕ್ ಉಪಕರಣಗಳವರೆಗೆ ಕೆನಡಾದಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಅಮೆರಿಕವೇ ಮಾರುಕಟ್ಟೆ. ಹೀಗಾಗಿಯೇ ಕೆನಡಾ ದೇಶ ಅಮೆರಿಕದ ಭಾಗ ಎಂದು ಟ್ರಂಪ್ ಹೇಳಲು ಆರಂಭಿಸಿದ್ದು. ಕೆನಡಾವನ್ನು ಅಮೆರಿಕದ 51ನೇ ರಾಜ್ಯನ್ನಾಗಿ ಸೇರಿಸಿಕೊಳ್ಳುವ ಇಚ್ಛೆಯನ್ನು ಟ್ರಂಪ್ ವ್ಯಕ್ತಮಾಡಿ ದೊಡ್ಡ ವಿವಾದವನ್ನೇ ಉಂಟು ಮಾಡಿದ್ದಾರೆ. ಇದರಿಂದ ಎರಡೂ ದೇಶಗಳ ನಡುವೆ ಬಾಂಧವ್ಯ ಕೆಟ್ಟಿದೆ. ಇದೀಗ ಅಮೆರಿಕಕ್ಕೆ ರಫ್ತಾಗುವ ಕಾರುಗಳ ಮೇಲೆ ಶೇ. 25 ಹೊಸಸುಂಕ ವಿಧಿಸಿರುವುದು ಬಾಂಧವ್ಯ ಮತ್ತಷ್ಟು ಕೆಡಲು ಕಾರಣವಾಗಿದೆ. ಇದೀಗ ಕೆನಡಾ ಪ್ರಧಾನಿ ಮಾರ್ಕ್ ಕಾನಿ ಅವರು ಟ್ರಂಪ್‌ಗೆ ಸವಾಲು ಹಾಕಿದ್ದು ಅಮೆರಿಕದ ವಸ್ತುಗಳಿಗೆ ತಾವೂ ಪ್ರತಿಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೊಸ ಸುಂಕ ಹೇರಿಕೆಯಿಂದ ಕಾರುಗಳಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತುಗಳು ದುಬಾರಿಯಾಗಲಿವೆ. ಗ್ರಾಹಕರು ಕೊಳ್ಳದಿದ್ದರೆ ಕೆನಡಾ ಅಪಾರ ನಷ್ಟ ಅನುಭವಿಸಬೇಕಾಗುತ್ತದೆ. ಕಾರುಗಳ ಉತ್ಪಾದನೆ ಕುಸಿತವಾದರೆ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಾರೆ. ಮೆಕ್ಸಿಕೋ ಕೂಡ ಇಂಥದ್ದೇ ಸ್ಥಿತಿ ಎದುರಿಸಬೇಕಾಗುತ್ತದೆ. ಇದೇ ರೀತಿ ಅಮೆರಿಕದಲ್ಲಿಯೂ ಬದಲಾವಣೆಗಳಾಗುತ್ತವೆ. ರಫ್ತಾದ ವಸ್ತುಗಳನ್ನು ಕೊಳ್ಳಲು ಜನರು ಹೆಚ್ಚು ಹಣ ತೆರಬೇಕಾಗುತ್ತದೆ. ಇದು ಹಣದುಬ್ಬರಕ್ಕೆ ಕಾರಣವಾಗಬಹುದು. ಹೊಸ ಸುಂಕಗಳು ಜಾರಿಗೆ ಬಂದ ಹೊಸದರಲ್ಲಿ ಜನಕ್ಕೆ ಸ್ವಲ್ಪ ಕಷ್ಟವಾಗಬಹುದು. ಆದರೆ ಕಾಲಕ್ರಮೇಣ ಪರಿಸ್ಥಿತಿ ಸರಿಹೋಗುತ್ತದೆ. ಅಮೆರಿಕದಲ್ಲಿಯೇ ಜನರು ಬಯಸುವ ವಸ್ತುಗಳು ಅಗ್ಗದ ದರಗಳಲ್ಲಿ ಸಿಗಲಿವೆ ಎಂದು ಟ್ರಂಪ್ ಹೇಳುತ್ತಿದ್ದಾರೆ.
ಚೀನಾದಿಂದ ರಫ್ತಾಗುವ ವಸ್ತುಗಳ ಮೇಲೆ ಟ್ರಂಪ್ ತಮ್ಮ ಹಿಂದಿನ ಅವಧಿಯಲ್ಲಿಯೇ ಶೇ.18ರಷ್ಟು ಸುಂಕ ವಿಧಿಸಿದ್ದರು. ಇದೀಗ ಇನ್ನೂ ಶೇ. 34ರಷ್ಟು ಪ್ರತಿಸುಂಕ ವಿಧಿಸಲಾಗಿದೆ. ಇದರಿಂದ ಕುಪಿತರಾಗಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೂ ಕೂಡಅಮೆರಿಕದಿಂದ ಆಮದು ಮಾಡಿ ಕೊಳ್ಳುವ ವಸ್ತುಗಳ ಮೇಲೆ ಪ್ರತಿಸುಂಕ ವಿಧಿಸುವುದಾಗಿ ಹೇಳಿದ್ದಾರೆ. ಆದರೆ ಮೊದಲು ಅಮೆರಿಕದ ಜೊತೆ ಮಾತುಕತೆ ನಡೆಸಿ ನಂತರ ಮಾತ್ರ ಪ್ರತಿಸುಂಕದ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಯೂರೋಪ್ ದೇಶಗಳಮೇಲೆಶೇ.20ರಷ್ಟುಸುಂಕವಿಧಿಸಲಾಗಿದೆ. ಇದರಿಂದಬೇಸರಗೊಂಡಿರುವ ಫ್ರಾನ್ಸ್ ಅಧ್ಯಕ್ಷಮೆಕ್ರಾನ್ ಅವರು ಅಮೆರಿಕದಲ್ಲಿಯಾರೂ ಬಂಡವಾಳ ಹೂಡಬೇಡಿ ಎಂದು ಕರೆ ನೀಡಿದ್ದಾರೆ. ಯೂರೋಪ್ ಕೂಡ ಪ್ರತಿಸುಂಕ ವಿಧಿಸಲು ಸಿದ್ಧವಿದೆ, ಆದರೆ ಸರಿಯಾದ ಸಮಯಕ್ಕೆ ಕಾಯುತ್ತೇವೆ ಎಂದು ಯೂರೋಪಿಯನ್ ಒಕ್ಕೂ ಟದ ಅಧ್ಯಕ್ಷೆ ಊರ್ಸುಲಾ ವನ್ ದೆರ್ ಲೆಯನ್ ಹೇಳಿದ್ದಾರೆ. ಇನ್ನು ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತಿತರ ಬಡ ದೇಶಗಳು ಟ್ರಂಪ್ ಅವರ ಈ ಸುಂಕದ ಬೆದರಿಕೆಯಿಂದ ತತ್ತರಿಸಿವೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಹಾನ್ ಸ್ನೇಹಿತರು ಎಂದು ವರ್ಣಿಸಿರುವ ಟ್ರಂಪ್, ಸುಂಕದ ವಿಚಾರದಲ್ಲಿ ರಿಯಾಯ್ತಿ ತೋರಿಸಿಲ್ಲ. ಸುಂಕದ ವಿಚಾರದಲ್ಲಿ ಭಾರತದ ಆಡಳಿತಗಾರರು ಅಮೆರಿಕವನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಅಮೆರಿಕದ ವಸ್ತುಗಳಿಗೆ ವಿಪರೀತ ಆಮದು ಸುಂಕ ವಿಧಿಸ ಲಾಗಿದೆ. ಅಮೆರಿಕದ ಕಾರು, ಬೈಕ್‌ಗಳಿಗೆ ಶೇ. 75ರಿಂದ ಶೇ.150ರವರೆಗೆ ಸುಂಕ ವಿಧಿಸಿದ ಉದಾಹರಣೆಗಳಿವೆ. ಸರಾಸರಿ ಶೇ.54ರಷ್ಟು ಸುಂಕ ವಿಧಿಸಲಾಗುತ್ತಿದೆ. ಇದರಿಂದ ಅಮೆರಿಕದಲ್ಲಿ ತಯಾರಾದ ವಸ್ತುಗಳು ಭಾರತದಲ್ಲಿ ಮಾರಾಟ ಮಾಡುವುದು ಕಷ್ಟ ಎನ್ನುವಂತಾಗಿದೆ. ಈ ಶೋಷಣೆಯನ್ನು ನಿಲ್ಲಿಸದೆ ಇರಲಾಗದು ಎಂದಿರುವ ಟ್ರಂಪ್ ಶೇ.27 ಸುಂಕವನ್ನು ಘೋಷಿಸಿದ್ದಾರೆ. ಇದೊಂದು ರೀತಿಯಲ್ಲಿ ಭಾರತಕ್ಕೆ ಆಘಾತ. ಈ ಹೊಡೆತದಿಂದ ತಪ್ಪಿಸಿಕೊಳ್ಳಲು ಉಭಯ ದೇಶಗಳ ನಡುವೆ ಒಂದು ಸುತ್ತು ವಾಣಿಜ್ಯ ಮಾತುಕತೆಗಳು ನಡೆದಿವೆ. ಹಾಗೆಂದು ಟ್ರಂಪ್ ರಿಯಾಯ್ತಿಯನ್ನು ತೋರಿಸಿಲ್ಲ. ಈ ಸುಂಕ ಹೇರಿಕೆಯಿಂದ ಭಾರತದ ಮೇಲೆ ಅಷ್ಟು ಕೆಟ್ಟಪರಿಣಾಮ ಆಗುವುದಿಲ್ಲ ಎಂದು ಸರ್ಕಾರ ಬೆಂಬಲದ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಆದರೆ ವಾಸ್ತವ ಪರಿಸ್ಥಿತಿ ಬೇರೆಯೇ ಇದ್ದಂತಿದೆ.
ಭಾರತ ಮತ್ತು ಅಮೆರಿಕದ ನಡುವೆ ಸುಮಾರು 120 ಬಿಲಿಯನ್ ಡಾಲರ್‌ನಷ್ಟು ರಫ್ತು ವಹಿವಾಟಿದೆ. ಕೃಷಿ ಉತ್ಪನ್ನಗಳಿಂದ ಹಿಡಿದು ಯಂತ್ರೋಪಕರಣಗಳವರೆಗೆ ಹಲವು ವಸ್ತುಗಳನ್ನು ಭಾರತವು ಅಮೆರಿಕಕ್ಕೆ ರಫ್ತುಮಾಡುತ್ತಿದೆ. ಕಾರು, ಟ್ರಕ್ಕುಗಳು ಸೇರಿದಂತೆ ವಿವಿಧ ರೀತಿಯ ವಾಹನಗಳು, ವಜ್ರ, ಚಿನ್ನದ ಆಭರಣಗಳು, ಜವಳಿ, ಉಕ್ಕು, ಖನಿಜಗಳು, ಅಡುಗೆ ಎಣ್ಣೆ, ಸಂಸ್ಕರಿಸಿದ ಆಹಾರ, ಆಹಾರ ಧಾನ್ಯ…. ಹೀಗೆ ವ್ಯಾಪಕವಾದರಫ್ತು ವಹಿವಾಟು ಇದೆ. ದೇಶದ ಒಟ್ಟಾರೆ ದೇಶೀಯ ಉತ್ಪನ್ನಕ್ಕೆ ಹೋಲಿ ಸಿದರೆ ಅಮೆರಿಕಕ್ಕೆ ಮಾಡುವ ರಫ್ತು ಪ್ರಮಾಣ ಅತಿ ಕಡಿಮೆ ಎನ್ನುವುದು ನಿಜ. ಆದರೂ ಟ್ರಂಪ್ ಸುಂಕದಿಂದ ಭಾರತಕ್ಕೆ ಸುಮಾರು 7 ಬಿಲಿಯನ್ ಡಾಲರ್‌ನಷ್ಟು ನಷ್ಟ ಸಂಭವಿಸಬಹುದೆಂದು ಅಂದಾಜು ಮಾಡಲಾಗಿದೆ. ಈ ನಷ್ಟವನ್ನು ಇತರ ದೇಶಗಳ ಜೊತೆ ವಹಿವಾಟು ಸಂಬಂಧ ಬೆಳೆಸುವ ಮೂಲಕ ನಷ್ಟ ತುಂಬಿಕೊಳ್ಳ ಬಹುದೆಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಆದರೆ ಟ್ರಂಪ್ ಸುಂಕದಿಂದ ರಫ್ತು ಕುಸಿದರೆ ಆ ವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳು ಮುಚ್ಚುತ್ತವೆ. ಅಲ್ಲಿನ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ವಾಣಿಜ್ಯ ವ್ಯವಸ್ಥೆಯಲ್ಲಿರುವ ನೂರಾರು ಜನರೂ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಈ ಮಧ್ಯೆ ಚೀನಾ ಅಗ್ಗದ ದರದಲ್ಲಿ ತನ್ನ ವಸ್ತುಗಳನ್ನು ಭಾರತದಲ್ಲಿ ಮಾರಾಟ ಮಾಡುವುದು ಖಚಿತ. ಈ ಸ್ಪರ್ಧೆಯನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ.
ಸುಂಕದ ವ್ಯಾಪ್ತಿಗೆ ಕಂಪ್ಯೂಟರ್ ಸಾಫ್ಟ್‌ವೇರ್, ಆತಿಥ್ಯವಲಯ, ಆರೋಗ್ಯ ಸೇವೆಯಂಥ ಸೇವಾವಲಯವನ್ನು ಸೇರಿಸಿಲ್ಲದಿರುವುದು ಸ್ವಲ್ಪ ಸಮಾಧಾನಕರ ಸಂಗತಿ, ಕಂಪ್ಯೂಟರ್ ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ ಭಾರತ ಪ್ರಮುಖ ರಫ್ತು ದಾರ ದೇಶ ಆಗಿದೆ. ಮುಂದೆ 2ನೆಯ ಹಂತದಲ್ಲಿ ಟ್ರಂಪ್ ಈ ವಲಯದ ಮೇಲೂ ಸುಂಕ ಹೇರಿದರೆ ದೊಡ್ಡ ಸಮಸ್ಯೆಯನ್ನು ಭಾರತ ಎದುರಿಸಬೇಕಾಗಬಹುದು. ಹೀಗೆ ಹತ್ತಾರು ಸಮಸ್ಯೆಗಳಿವೆ. ಅವುಗಳನ್ನು ಗಮನದಲ್ಲಿ ಇಟ್ಟುಕೊಂಡು ಅಮೆರಿಕದ ಜೊತೆ ಮಾತುಕತೆ ನಡೆಸುವ ಮೂಲಕ ಒಂದು ಒಪ್ಪಂದಕ್ಕೆ ಬರಬಹುದು. ಇತರ ದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆಗೆ ಗಟ್ಟಿ ಯತ್ನಗಳನ್ನು ನಡೆಸಬೇಕಾಗಿದೆ. ಈ ಸಂದರ್ಭದಲ್ಲಿ ಭಾರತ ಹಿಂದೆಬಿದ್ದರೆ ಮತ್ತೆ ಆರ್ಥಿಕವಾಗಿ ಮುಂದೆ ಬರುವುದು ಕಷ್ಟ.
ಸುಂಕದ ವ್ಯಾಪ್ತಿಗೆ ಕಂಪ್ಯೂಟರ್ ಸಾಫ್ಟ್‌ವೇ, ಆತಿಥ್ಯವಲಯ, ಆರೋಗ್ಯ ಸೇವೆಯಂಥ ಸೇವಾವಲಯವನ್ನು ಸೇರಿಸಿಲ್ಲದಿರುವುದು ಸ್ವಲ್ಪ ಸಮಾಧಾನಕರ ಸಂಗತಿ. ಕಂಪ್ಯೂಟರ್ ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ ಭಾರತ ಪ್ರಮುಖ ರಫ್ತುದಾರ ದೇಶ ಆಗಿದೆ. ಮುಂದೆ 2ನೆಯ ಹಂತದಲ್ಲಿ ಟ್ರಂಪ್ ಈ ವಲಯದ ಮೇಲೂ ಸುಂಕ ಹೇರಿದರೆ ದೊಡ್ಡ ಸಮಸ್ಯೆಯನ್ನು ಭಾರತ ಎದುರಿಸಬೇಕಾಗಬಹುದು. ಹೀಗೆ ಹತ್ತಾರು ಸಮಸ್ಯೆಗಳಿವೆ. ಅವುಗಳನ್ನು ಗಮನದಲ್ಲಿ ಇಟ್ಟುಕೊಂಡು ಅಮೆರಿಕದ ಜೊತೆ ಮಾತುಕತೆ ನಡೆಸುವ ಮೂಲಕ ಒಂದು ಒಪ್ಪಂದಕ್ಕೆ ಬರಬಹುದು. ಇತರ ದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆಗೆ ಗಟ್ಟಿ ಯತ್ನಗಳನ್ನು ನಡೆಸಬೇಕಾಗಿದೆ. ಈ ಸಂದರ್ಭದಲ್ಲಿ ಭಾರತ ಹಿಂದೆ ಬಿದ್ದರೆ ಮತ್ತೆ ಆರ್ಥಿಕವಾಗಿ ಮುಂದೆ ಬರುವುದು ಕಷ್ಟ.





