ಡಿ.ವಿ.ರಾಜಶೇಖರ
ತೀವ್ರ ಕುತೂಹಲ ಕೆರಳಿಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಭೇಟಿ ಮತ್ತು ಮಾತುಕತೆ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿರುವವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಹಾಗೆ ನೋಡಿದರೆ ಮೋದಿ ಅವರು ವಲಸಿಗರ ಬಗ್ಗೆ ಟ್ರಂಪ್ ಅವರು ತಳೆದಿರುವ ನಿಲುವನ್ನು ಸಮರ್ಥಿಸಿದಂತೆ ಕಾಣುತ್ತಿದೆ. ಇತರ ವಿಷಯಗಳಿಗೆ ಸಂಬಂಧಿಸಿದಂತೆಯೂ ಮೋದಿ ಅವರು ಟ್ರಂಪ್ ಮುಂದಿಟ್ಟ ಎಲ್ಲ ತೀರ್ಮಾನಗಳಿಗೆ ಒಪ್ಪಿಗೆ ನೀಡಿ ಬಂದಂತೆ ಕಾಣುತ್ತಿದೆ.
ಮೋದಿ ಅವರನ್ನು ಟ್ರಂಪ್ ಗ್ರೇಟ್ ಲೀಡರ್ ಎಂದು ಹೊಗಳಿದ್ದಾರೆ. ಅದಕ್ಕೆ ಪ್ರತಿಯಾಗಿ ಮೋದಿ ಅವರೂ ಟ್ರಂಪ್ ಅವರಿಗೆ ಗ್ರೇಟ್ ಲೀಡರ್ ಎಂದು ಹೊಗಳಿದ್ದಾರೆ. ಈ ಪರಸ್ಪರ ಹೊಗಳಿಕೆಯಿಂದ ಭಾರತಕ್ಕೆ ಆದ ಅನುಕೂಲ ಅಷ್ಟೇನೂ ದೊಡ್ದದಲ್ಲ. ಹಾಗೆ ನೋಡಿದರೆ ಅಮೆರಿಕಕ್ಕೆ ಆದ ಅನುಕೂಲವೇ ಹೆಚ್ಚು. ಭಾರತ ಈಗ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಅಲ್ಲಿ ಹೋಗಿ ನೆಲೆಸಿರುವ ಭಾರತೀಯರ ಭವಿಷ್ಯ ಅತಂತ್ರಕ್ಕೆ ಒಳಗಾಗಿರುವುದು. ಅಕ್ರಮ ವಲಸಿಗರಿಗೆ ಸಂಬಂಽಸಿದಂತೆ ಅಮೆರಿಕದ ಕ್ರಮವನ್ನು ಭಾರತ ಸಮರ್ಥಿಸಿರುವುದು ಸರಿಯಾಗಿಯೇ ಇದೆ. ಕಾನೂನು ಉಲ್ಲಂಘನೆ ಮಾಡಿ ಅಮೆರಿಕಕ್ಕೆ ಹೋಗಿ ನೆಲೆಸುವುದನ್ನು ಭಾರತ ವಿರೋಧಿಸಿದೆ. ಅವರನ್ನು ಗುರುತಿಸಿದರೆ ಅವರನ್ನು ವಾಪಸ್ ಪಡೆಯಲು ಭಾರತ ಸಿದ್ಧ ಎಂದು ಮೋದಿ ಅವರೇ ಹೇಳಿಬಿಟ್ಟಿದ್ದಾರೆ. ಮಾನವ ಕಳ್ಳಸಾಗಣೆಯನ್ನು ತಡೆಯುವ ವಿಚಾರದಲ್ಲಿ ಭಾರತವು ಅಮೆರಿಕಕ್ಕೆ ಎಲ್ಲ ಸಹಕಾರ ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ. ಭಾರತೀಯ ವಲಸಿಗರದ್ದು ಅಕ್ರಮ ಪ್ರವೇಶ ಅಷ್ಟೇ ಸಮಸ್ಯೆ ಅಲ್ಲ. ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಕಾನೂನುಬದ್ಧವಾಗಿಯೇ ಅಮೆರಿಕಕ್ಕೆ ಹೋದವರೂ ಇಂದು ಸಮಸ್ಯೆ ಎದುರಿಸುತ್ತಿದ್ದಾರೆ. ಉತ್ತಮ ಕೆಲಸ ಹುಡುಕಿಕೊಳ್ಳಲೋ, ಗ್ರೀನ್ ಕಾರ್ಡ್‌ಗಾಗಿಯೋ ದಶಕಗಳ ಕಾಲದಿಂದ ಕಾಯುತ್ತಿರುವ ಲಕ್ಷಾಂತರ ಭಾರತೀಯರು ಅಲ್ಲಿದ್ದಾರೆ. ಹಲವು ದಶಕಗಳ ಹಿಂದೆ ಅಲ್ಲಿ ಹೋಗಿ ನೆಲೆಸಿ ಬದುಕು ಕಟ್ಟಿಕೊಂಡಿರುವ ವಿದ್ಯಾವಂತರ ಮಕ್ಕಳ ಭವಿಷ್ಯವೂ ಈಗ ಆತಂಕಕ್ಕೆ ಈಡಾಗಿದೆ. ಈ ಸಮಸ್ಯೆಗಳಿಗೆ ಮೋದಿ- ಟ್ರಂಪ್ ಭೇಟಿ ಪರಿಹಾರ ಕಂಡುಕೊಳ್ಳುವಲ್ಲಿ ನೆರವಾಗಿಲ್ಲ. ಈ ಸಮಸ್ಯೆಯನ್ನು ಕಾನೂನು ವ್ಯಾಪ್ತಿಯಲ್ಲಿ ಪರಿಹರಿಸಲು ಮಾರ್ಗೋಪಾಯ ಕಂಡುಕೊಳ್ಳಲಾಗುವುದು ಎಂದಷ್ಟೇ ಅಲ್ಲಿನ ವಿದೇಶಾಂಗ ಇಲಾಖೆ ತಿಳಿಸಿದೆ.
ಉಳಿದಂತೆ ಟ್ರಂಪ್ ಹೇಳಿದ್ದಕ್ಕೆಲ್ಲಾ ಮೋದಿ ಹೂಂಗುಟ್ಟಿದಂತೆ ಕಾಣುತ್ತಿದೆ. ಉದಾಹರಣೆಗೆ ಟ್ರಂಪ್ ಪ್ರಕಟಿಸಿರುವ ಸಮಾನ ತೆರಿಗೆ ಅಥವಾ ಸುಂಕದ ನೀತಿಯನ್ನೇ ನೋಡಬಹುದು. ಅಮೆರಿಕದಿಂದ ಭಾರತಕ್ಕೆ ಬರುವ ಕೆಲವಸ್ತುಗಳಿಗೆ ಭಾರತ ನೂರರಷ್ಟು ಪ್ರಮಾಣದಲ್ಲಿ ತೆರಿಗೆ ಹಾಕುತ್ತ ಬಂದಿದೆ. ಅಮೆರಿಕ ಶ್ರೀಮಂತ ದೇಶ. ಅದನ್ನು ಭಾರತದ ಜೊತೆ ಹೋಲಿಸಲು ಸಾಧ್ಯವಿಲ್ಲ. ಹೀಗಾಗಿ ಅಮೆರಿಕದಿಂದ ಆಮದಾದ ವಸ್ತುಗಳಿಗೆ ಹೆಚ್ಚು ತೆರಿಗೆ ವಿಧಿಸಲಾಗುತ್ತಿತ್ತು. ಭಾರತ ಅಭಿವೃದ್ಧಿಶೀಲ ದೇಶವಾದ್ದರಿಂದ ಅಮೆರಿಕಕ್ಕೆ ಕಳುಹಿಸಲಾದ ವಸ್ತುಗಳಿಗೆ ಸಾಧಾರಣ ತೆರಿಗೆ ಹಾಕಲಾಗುತ್ತಿತ್ತು. ಇದು ಮೊದಲಿಂದಲೂ ಅನುಸರಿಸಿಕೊಂಡು ಬಂದಿರುವ ತೆರಿಗೆ ನೀತಿ. ಭಾರತಕ್ಕಷ್ಟೇ ಅಲ್ಲ, ಎಲ್ಲ ಬಡದೇಶಗಳಿಗೂ ಇದೇ ನೀತಿಯನ್ನು ಅಮೆರಿಕ ಅನುಸರಿಸುತ್ತ ಬಂದಿತ್ತು. ಟ್ರಂಪ್ ಅವರಿಗೆ ಈಗ ಈ ತೆರಿಗೆಯ ಮೇಲೆ ಕಣ್ಣು ಬಿದ್ದಿದೆ. ಅಮೆರಿಕ ಏಕೆ ಹೆಚ್ಚು ತೆರಿಗೆ ನೀಡಬೇಕು ಎಂಬುದು ಅವರ ಪ್ರಶ್ನೆ. ಹಾಗೆಂದೇ ಈಗ ಸಮಾನ ತೆರಿಗೆ ನಿಯಮವನ್ನು ಜಾರಿಗೆ ತಂದಿದ್ದಾರೆ. ಕೆನಡಾ, ಮೆಕ್ಸಿಕೋ, ಚೀನಾ ದೇಶಗಳಿಂದ ಬರುವ ಸರಕುಗಳ ಮೇಲೆಯೂ ಹೆಚ್ಚು ತೆರಿಗೆ ಹಾಕಲಾಗಿದೆ. ಇದರಿಂದ ಅಮೆರಿಕಕ್ಕೆ ಹೆಚ್ಚು ಲಾಭ ಬರುತ್ತದೆ ಎನ್ನುವುದು ಅವರ ಲೆಕ್ಕಾಚಾರ. ಆದರೆ ವಾಸ್ತವವಾಗಿ ಭಿನ್ನ ಪರಿಣಾಮ ಆಗಲಿದೆ ಎಂಬುದು ಹಣಕಾಸು ತಜ್ಞರ ಅಭಿಪ್ರಾಯ. ಆ ವಸ್ತುಗಳ ಬೆಲೆಗಳು ಏರಿ ಹಣದುಬ್ಬರಕ್ಕೆ ಕಾರಣವಾಗುವ ಸಾಧ್ಯತೆಯೇ ಹೆಚ್ಚು. ಆದರೆ ಟ್ರಂಪ್ ಇದನ್ನು ಒಪ್ಪುವುದಿಲ್ಲ.
ಟ್ರಂಪ್ ಅವರು ನೇರವಾಗಿ ಈ ಸಮಾನ ತೆರಿಗೆ ನಿಯಮ ಜಾರಿಗೆ ತಂದಿರುವುದನ್ನು ಮೋದಿ ಅವರ ಗಮನಕ್ಕೆ ತಂದಿದ್ದಾರೆ. (ಮೋದಿ ಅವರನ್ನು ಟ್ರಂಪ್ ಭೇಟಿ ಮಾಡುವ ಕೆಲವೇ ಗಂಟೆಗಳ ಮೊದಲು ಈ ಆದೇಶ ಹೊರಡಿಸಲಾಗಿದೆ) ಈ ನಿಯಮ ವಿಶ್ವದ ಎಲ್ಲ ದೇಶಗಳಿಗೂ ಅನ್ವಯವಾಗುವುದರಿಂದ ಭಾರತ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ನಿಜ. ಆದರೆ ಅಂಥ ನೀತಿಯ ಕೆಟ್ಟ ಪರಿಣಾಮಗಳನ್ನು ಟ್ರಂಪ್ ಅವರಿಗೆ ವಿವರಿಸುವ ಮತ್ತು ಪರಸ್ಪರ ಮಾತುಕತೆಯ ಮೂಲಕ ತೆರಿಗೆ ಒಪ್ಪಂದ ಮಾಡಿಕೊಳ್ಳುವ ಪರ್ಯಾಯ ಮಾರ್ಗವನ್ನು ಸೂಚಿಸಬಹುದಿತ್ತು. ಅಂಥ ಸಲಹೆ ಬಂದ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಆದರೆ ವಾಣಿಜ್ಯ ಒಪ್ಪಂದವೊಂದನ್ನು ಮಾಡಿಕೊಳ್ಳಲು ತೀರ್ಮಾನಿಸಲಾಗಿರುವುದು ಸ್ವಲ್ಪಮಟ್ಟಿಗೆ ಸ್ವಾಗತಾರ್ಹ ಹೆಜ್ಜೆ. ಚೀನಾ ಇತ್ತೀಚಿನ ವರ್ಷಗಳಲ್ಲಿ ಅಮೆರಿಕವನ್ನು ಮೀರಿಸುವ ದಿಕ್ಕಿನಲ್ಲಿ ಬೆಳೆದಿದೆ. ಅಮೆರಿಕದ ವಸ್ತುಗಳಿಗೆ ಪರ್ಯಾಯವಾಗಿ ಕಡಿಮೆ ಬೆಲೆಯಲ್ಲಿ ಅಂಥದ್ದೇ ವಸ್ತುಗಳನ್ನು ಪೂರೈಸುವಷ್ಟು ಚೀನಾ ಪ್ರಭಾವಶಾಲಿಯಾಗಿದೆ. ಈ ಪೈಪೋಟಿಯನ್ನು ಎದುರಿಸಲು ಅಮೆರಿಕ ಈಗಲೇ ಹೆಣಗಾಡುತ್ತಿದೆ. ಅಮೆರಿಕದ ಆಮದು ವಸ್ತುಗಳ ಬೆಲೆ ಏರಿಕೆಯಾದರೆ ಅನುಕೂಲವಾಗುವುದು ಚೀನಾಕ್ಕೆ ಎನ್ನುವುದು ಸ್ಪಷ್ಟ.
ಮೋದಿ-ಟ್ರಂಪ್ ಮಾತುಕತೆಯಲ್ಲಿ ಭಾರತಕ್ಕೆ ಅನುಕೂಲವಾಗಿರುವಂಥ ಅಂಶ ಎಂದರೆ ಉಗ್ರವಾದವನ್ನು ಮಟ್ಟಹಾಕುವ ವಿಚಾರದಲ್ಲಿ ಅಮೆರಿಕ ಕಟುವಾದ ನಿಲುವು ತಳೆಯುವುದಾಗಿ ಭರವಸೆ ನೀಡಿರುವುದು. ಈ ದಿಸೆಯಲ್ಲಿ ೨೦೦೮ರ ಮುಂಬೈ ದಾಳಿಯ ರೂವಾರಿ ತಹವೂರ್ ರಾಣಾನನ್ನು (ಈಗ ಅಮೆರಿಕದ ಜೈಲಿನಲ್ಲಿದಾನೆ) ಭಾರತದ ವಶಕ್ಕೆ ನೀಡಲು ಒಪ್ಪಿರುವುದಾಗಿದೆ. ಖಾಲಿಸ್ತಾನ್ ಉಗ್ರರ ವಿಚಾರದಲ್ಲಿ ಇದುವರೆಗೆ ಅಮೆರಿಕ ಮೃದು ಧೋರಣೆ ತಳೆಯುತ್ತಾ ಬಂದಿತ್ತು. ಭಾರತದ ರಾಯಭಾರ ಕಚೇರಿಯ ಮೇಲೆ ಅಮೆರಿಕದಲ್ಲಿಯೇ ದಾಳಿ ನಡೆಸಲಾಗಿದೆ. ಇಂಥ ಚಟುವಟಿಕೆಯನ್ನು ಪ್ರತಿಬಂಧಿಸುವ ವಿಚಾರದಲ್ಲಿ ಟ್ರಂಪ್ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.
ಇಷ್ಟು ಬಿಟ್ಟರೆ ಭಾರತಕ್ಕೆ ಮತ್ತಾವ ಅನುಕೂಲವೂ ಆದಂತಿಲ್ಲ. ಭಾರತ ತೈಲ ಮತ್ತು ಅನಿಲವನ್ನು ಅರಬ್‌ದೇಶಗಳು ಮತ್ತು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇನ್ನು ಮುಂದೆ ಅಮೆರಿಕದಿಂದಲೂ ತೈಲವನ್ನು ಆಮದುಮಾಡಿಕೊಳ್ಳಬೇಕಿದೆ. ಅಂತೆಯೇ ಅಮೆರಿಕದಲ್ಲಿ ಲಭ್ಯವಿರುವ ಮತ್ತು ಉತ್ಪಾದಿಸುವ ವಸ್ತುಗಳನ್ನು ಕೊಳ್ಳುವ ಅವಕಾಶ ಕಲ್ಪಿಸಿಕೊಳ್ಳಬೇಕಿದೆ. ಇಂಧನ ಉತ್ಪಾದನೆಗಾಗಿ ಬಳಸಲಾಗುವ ಪರಮಾಣು ತಂತ್ರಜ್ಞಾನವನ್ನು ರವಾನಿಸಲು ಅಮೆರಿಕ ಸಿದ್ಧವಿದೆ. ರಿಯಾಕ್ಟರುಗಳನ್ನು ಸ್ಥಾಪಿಸಲು ಮುಂದಾಗಿದೆ. ಯುದ್ಧಾಸ್ತ್ರಗಳನ್ನು ಭಾರತ ಬಹುಪಾಲು ರಷ್ಯಾದಿಂದಲೇ ಕೊಳ್ಳುತ್ತ ಬಂದಿದೆ. ರಷ್ಯಾದ ಯುದ್ಧ ವಿಮಾನಗಳು ಭಾರತದ ವಾಯುಪಡೆಯಲ್ಲಿ ಪ್ರಾಬಲ್ಯ ಸಾಧಿಸಿವೆ. ಇತ್ತೀಚಿನ ವರ್ಷಗಳಲ್ಲಿ ಯುದ್ಧವಿಮಾನಗಳನ್ನು ಫ್ರಾನ್ಸ್ ಮತ್ತಿತರ ದೇಶಗಳಿಂದ ಕೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಭಾರತದ ಜೊತೆ ಅಮೆರಿಕ ಉತ್ತಮ ಬಾಂಧವ್ಯ ಪಡೆದಿರಲಿಲ್ಲ. ಅಮೆರಿಕ ಈ ವಿಚಾರದಲ್ಲಿ ಪಾಕಿಸ್ತಾನದ ಜೊತೆ ಬಾಂಧವ್ಯ ಪಡೆದು ಎಫ್ ೧೬ ಶ್ರೇಣಿಯ ಯುದ್ಧ ವಿಮಾನಗಳನ್ನು ಮಾರಾಟ ಮಾಡಲಾಗಿದೆ. ಇದೀಗ ಅತ್ಯಾಧುನಿಕ ಯುದ್ಧ ವಿಮಾನ (ಎಫ್-೩೫)ಗಳನ್ನು ಮಾರಾಟ ಮಾಡಲು ಟ್ರಂಪ್ ಒಪ್ಪಿಗೆ ನೀಡಿದ್ದಾರೆ. ಅಷ್ಟೇ ಅಲ್ಲ ಯುದ್ಧಾಸ್ತ್ರಗಳನ್ನು ಮಾರಾಟ ಮಾಡಲೂ ಅಮೆರಿಕ ಈಗ ಸಿದ್ಧವಿದೆ. ಒಟ್ಟಾರೆ ೨೦೩೦ರ ವೇಳೆಗೆ ಅಮೆರಿಕ ಮತ್ತು ಭಾರತದ ನಡುವಣ ವಾಣಿಜ್ಯ ವಹಿವಾಟು ೫೦೦ ಬಿಲಿಯನ್ ಡಾಲರ್‌ಗೆ ತಲುಪಬೇಕೆನ್ನುವುದು ಟ್ರಂಪ್ ಲೆಕ್ಕಾಚಾರ. ‘ಮೇಕ್ ಅಮೆರಿಕ ಗ್ರೇಟ್ ಎಗೈನ್‘ ಎಂಬ ಟ್ರಂಪ್ ಅವರ ಘೋಷಣೆಯ ಮಾದರಿಯಲ್ಲಿಯೇ ಮೋದಿ ಅವರೂ ಈಗ ‘ಮೇಕ್ ಇಂಡಿಯಾ ಗ್ರೇಟ್ ಎಗೈನ್‘ ಎಂಬ ಘೋಷಣೆಯನ್ನು ಚಲಾವಣೆ ಮಾಡಿದ್ದಾರೆ.
ಅಮೆರಿಕದ ಹೊಸ ನೀತಿಗಳು ಭಾರತ ಇತರ ದೇಶಗಳ ಜೊತೆ ಇದುವರೆಗೆ ಪಡೆದಿದ್ದ ಬಾಂಧವ್ಯದ ಮೇಲೆ ಪರಿಣಾಮ ಬೀರಲಿದೆ. ಆದರೆ ಟ್ರಂಪ್ ಅವರ ಹೊಸ ನೀತಿಗಳು ಎಷ್ಟರಮಟ್ಟಿಗೆ ಜಾರಿಗೆ ಬರುತ್ತಿವೆ ಎನ್ನುವುದರ ಮೇಲೆ ಬದಲಾವಣೆ ಆಗಲಿವೆ. ಭಾರತ ಅಷ್ಟೇ ಅಲ್ಲ ಟ್ರಂಪ್ ಅವರ ತೆರಿಗೆ ನೀತಿಗಳು ವಿಶ್ವದ ಆರ್ಥಿಕ ನೀತಿಗಳನ್ನೇ ಅಲುಗಾಡಿಸಿವೆ. ಯೂರೋಪಿನ ಬಲಿಷ್ಠ ದೇಶಗಳೂ ತಮ್ಮ ಆರ್ಥಿಕ, ವಾಣಿಜ್ಯ ನೀತಿಗಳನ್ನು ಪುನರ್ ರೂಪಿಸಬೇಕಾಗಿ ಬಂದಿದೆ.
” ಟ್ರಂಪ್ ಅವರು ನೇರವಾಗಿ ಈ ಸಮಾನ ತೆರಿಗೆ ನಿಯಮ ಜಾರಿಗೆ ತಂದಿರುವುದನ್ನು ಮೋದಿ ಅವರ ಗಮನಕ್ಕೆ ತಂದಿದ್ದಾರೆ. (ಮೋದಿ ಅವರನ್ನು ಟ್ರಂಪ್ ಭೇಟಿ ಮಾಡುವ ಕೆಲವೇ ಗಂಟೆಗಳ ಮೊದಲು ಈ ಆದೇಶ ಹೊರಡಿಸಲಾಗಿದೆ) ಈ ನಿಯಮ ವಿಶ್ವದ ಎಲ್ಲ ದೇಶಗಳಿಗೂ ಅನ್ವಯವಾಗುವುದರಿಂದ ಭಾರತ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ನಿಜ. ಆದರೆ ಅಂಥ ನೀತಿಯ ಕೆಟ್ಟ ಪರಿಣಾಮಗಳನ್ನು ಟ್ರಂಪ್ ಅವರಿಗೆ ವಿವರಿಸುವ ಮತ್ತು ಪರಸ್ಪರ ಮಾತುಕತೆಯ ಮೂಲಕ ತೆರಿಗೆ ಒಪ್ಪಂದ ಮಾಡಿಕೊಳ್ಳುವ ಪರ್ಯಾಯ ಮಾರ್ಗವನ್ನು ಸೂಚಿಸಬಹುದಿತ್ತು. ಅಂಥ ಸಲಹೆ ಬಂದ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.”




