ಡಿ.ವಿ.ರಾಜಶೇಖರ
ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್ ರೈಲು ಅಪಹರಣ ಮಾಡಿದ್ದ ಬಲೂಚಿ ಪ್ರತ್ಯೇಕತಾವಾದಿಗಳನ್ನು (ಬಲೂಚಿಸ್ತಾನ್ ಲಿಬರೇಷನ್ ಆರ್ಮಿ-ಬಿಎಲ್‌ಎ) ಕೊಲ್ಲುವಲ್ಲಿ ಪಾಕಿಸ್ತಾನ ಸೇನೆ ಸಫಲವಾಗಿದೆ. ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವಟಾದಿಂದ ಪೆಶಾವರಕ್ಕೆ ಹೋಗುತ್ತಿದ್ದ ೪೦೦ ಪ್ರಯಾಣಿಕರಿದ್ದ ರೈಲನ್ನು ಬಂದೂಕುಧಾರಿ ಬಲೂಚಿ ಪ್ರತ್ಯೇಕತಾವಾದಿಗಳು ಮಂಗಳವಾರ ಅಪಹರಿಸಿದ್ದರು. ಜೈಲುಗಳಲ್ಲಿರುವ ಬಲೂಚಿ ಹೋರಾಟಗಾರರನ್ನು ತತ್‌ಕ್ಷಣ ಬಿಡುಗಡೆ ಮಾಡಬೇಕು, ಇಲ್ಲವಾದರೆ ರೈಲನ್ನು ಸ್ಛೋಟಿಸುವುದಾಗಿ ಬಂಡಾಯಗಾರರು ಬೆದರಿಕೆ ಹಾಕಿದ್ದರು. ಆ ನಂತರ ಪಾಕಿಸ್ತಾನ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ಒಟ್ಟು ೫೮ ಮಂದಿ ಸತ್ತಿದ್ದಾರೆ. ೨೧ ಮಂದಿ ಪ್ರಯಾಣಿಕರು, ನಾಲ್ಕು ಮಂದಿ ಸೈನಿಕರು ಮತ್ತು ೩೩ ಮಂದಿ ಪ್ರತ್ಯೇಕತಾವಾದಿಗಳು ಹತರಾಗಿದ್ದಾರೆ ಎಂದು ಸೇನಾ ವಕ್ತಾರರು ಪ್ರಕಟಿಸಿದ್ದಾರೆ. ೩೦೦ ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ಬಲೂಚಿಸ್ತಾನದ ಪ್ರತ್ಯೇಕತಾವಾದಿ ಹೋರಾಟಗಾರರು ನಡೆಸಿದ ಮೊದಲ ದಾಳಿ ಇದೇನಲ್ಲ. ಸತತವಾಗಿ ಏಳು ದಶಕಗಳಿಂದಲೂ ಪ್ರತ್ಯೇಕ ಬಲೂಚಿಸ್ತಾನ ರಚನೆಗೆ ಒತ್ತಾಯಿಸಿ ಹಿಂಸಾಚಾರ ನಡೆಸುತ್ತಲೇ ಬಂದಿದ್ದಾರೆ. ಅದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ ಅಷ್ಟೆ. ಈ ಪ್ರತ್ಯೇಕತಾವಾದಿಗಳಿಗೆ ಭಾರತ ಬೆಂಬಲ ನೀಡುತ್ತಿದೆ ಎಂದು ಪಾಕಿಸ್ತಾನದ ಆಡಳಿತಗಾರರು ಆರೋಪಿಸುತ್ತಲೇ ಬಂದಿದ್ದಾರೆ. ಈ ರೈಲು ಅಪಹರಣ ಹಿಂದೆಯೂ ಭಾರತದ ಕುಮ್ಮಕ್ಕಿದೆ ಎಂದು ಪಾಕ್ ಆರೋಪಿಸಿದೆ. ಆದರೆ ಭಾರತ ಈ ಆರೋಪವನ್ನು ನಿರಾಕರಿಸಿದೆ. ಪ್ರಸ್ತುತ ರೈಲು ಅಪಹರಣ ಸಂದರ್ಭದಲ್ಲಿ ಬಿಎಲ್‌ಎ ನಾಯಕರೊಬ್ಬರು ಆಫ್ಘಾನಿಸ್ತಾನದ ತಾಲಿಬಾನ್ ನಾಯಕರ ಜೊತೆ ಫೋನ್‌ನಲ್ಲಿ ಸಂಪರ್ಕ ದಲ್ಲಿದ್ದುದ್ದು ಬಹಿರಂಗವಾಗಿದೆ. ಹೀಗಿದ್ದರೂ ಪಾಕಿಸ್ತಾನ ಆರೋಪ ಮಾಡುವುದನ್ನು ನಿಲ್ಲಿಸಿಲ್ಲ. ಇದೇನೇ ಇದ್ದರೂ ಬಿಎಲ್‌ಎ ಪ್ರತ್ಯೇಕತಾವಾದಿ ಹೋರಾಟ ಯಾವ ದೇಶ ಬೆಂಬಲ ನೀಡುತ್ತದೆ, ಯಾವ ದೇಶ ಬೆಂಬಲ ನೀಡುವುದಿಲ್ಲ ಎನ್ನುವುದರ ಮೇಲೆ ನಿಂತಿಲ್ಲ. ಬಲೂಚಿ ಪ್ರತ್ಯೇಕತಾವಾದಿ ಹೋರಾಟ ನೆಲದಿಂದಲೇ ಹುಟ್ಟಿದೆ ಮತ್ತು ಅದು ಬೆಳೆಯಲು ಪಾಕಿಸ್ತಾನವೇ ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ.
ಭಾರತವೂ ಸೇರಿದಂತೆ ಏಷ್ಯಾ ವಲಯದ ಹಲವು ಪ್ರದೇಶಗಳಿಂದ ಬ್ರಿಟಿಷರು ನಿರ್ಗಮಿಸುವ ಸಂದರ್ಭದಲ್ಲಿ ಬಲೂಚಿಸ್ತಾನದ ನಾಲ್ಕೂ ಪ್ರದೇಶಗಳ ಆಡಳಿತಗಾರರಿಗೆ ಮೂರು ಆಯ್ಕೆಗಳನ್ನು ಕೊಡಲಾಗಿತ್ತು. ಭಾರತದ ಅಥವಾ ಪಾಕಿಸ್ತಾನದ ಭಾಗವಾಗುವುದು ಮತ್ತು ಸ್ವತಂತ್ರವಾಗಿ ಉಳಿಯುವುದು ಆ ಆಯ್ಕೆಗಳಾಗಿದ್ದವು. ಆಗ ಬಲೂಚಿಸ್ತಾನದ ನಾಲ್ಕೂ ಆಡಳಿತಗಾರರು ಪಾಕಿಸ್ತಾನದ ಜತೆಗೆ ಸೇರುವ ನಿರ್ಧಾರ ತೆಗೆದುಕೊಂಡರು. ಅದರ ಪ್ರಕಾರ ಬ್ರಿಟಿಷರು ಬಲೂಚಿಸ್ತಾನ ಪ್ರದೇಶವನ್ನು ಪಾಕಿಸ್ತಾನದ ಭಾಗವನ್ನಾಗಿ ಮಾಡಿದರು. ಪಾಕಿಸ್ತಾನದ ಅತಿ ದೊಡ್ಡ ಪ್ರದೇಶವಾದ ಬಲೂಚಿಸ್ತಾನ ನೈಸರ್ಗಿಕ ಸಂಪನ್ಮೂಲದ ದೃಷ್ಟಿಯಿಂದ ಬಹಳ ಮುಖ್ಯವಾದುದು. ಕಲ್ಲಿದ್ದಲು, ಚಿನ್ನ, ತಾಮ್ರ, ಅನಿಲ ಈ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿದೆ ಎಂದು ಹೇಳಲಾಗಿದೆ. ಅಲ್ಪ ಸ್ವಲ್ಪ ಅನಿಲವನ್ನು ಹೊರತೆಗೆಯಲಾಗುತ್ತಿದ್ದು, ಅದರಿಂದ ಸ್ಥಳೀಯರಿಗೇನೂ ಉಪಯೋಗವಾಗುತ್ತಿಲ್ಲ. ಪಾಕಿಸ್ತಾನದ ಆಡಳಿತಗಾರರು ಆ ಪ್ರದೇಶದ ಸಂಪನ್ಮೂಲವನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸುವಲ್ಲಿ ವಿಫಲವಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ಈ ಪ್ರದೇಶದಲ್ಲಿ ಆರ್ಥಿಕ ವಲಯ ರಚಿಸಲು ಅಪಾರ ಪ್ರಮಾಣದಲ್ಲಿ ಹಣ ಹೂಡಿದೆ. ಅರಬ್ಬಿ ಸಮುದ್ರಕ್ಕೆ ಅಂಟಿಕೊಂಡಂತಿರುವ ಬಲೂಚಿಸ್ತಾನದ ಗ್ವಾದ್ವಾರ್ ಬಳಿ ಬಂದರು ನಿರ್ಮಾಣ ಮಾಡಲಾಗಿದೆ. ಈ ಆರ್ಥಿಕ ವಲಯ ನಿರ್ಮಾಣದಲ್ಲೂ ಸ್ಥಳೀಯರನ್ನು ನಿರ್ಲಕ್ಷಿ ಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿಯೇ ಚೀನಾ ಕಾರ್ಮಿಕರು ಮತ್ತು ಎಂಜಿನಿಯರುಗಳ ಮೇಲೆ ಬಲೂಚಿ ಪ್ರತ್ಯೇಕತಾ ವಾದಿಗಳು ಬಾಂಬ್ ದಾಳಿ ನಡೆಸಿದ್ದಾರೆ. ಹಲವರ ಸಾವೂ ಸಂಭವಿಸಿದೆ.ಬಲೂಚಿಗಳು ಮುಸ್ಲಿಮ್ ಜನಾಂಗದ ಸುನ್ನಿ ಪಂಗಡದ ಹನಾಫಿ ಪಂಥಕ್ಕೆ ಸೇರಿದವರು. ಗುಡ್ಡಗಾಡು ಜನರು. ಅವರದೇ ಆದ ಸಂಪ್ರದಾಯ, ಆಚರಣೆಗಳಿವೆ. ಬಲೂಚಿಗಳು ನೆರೆಯ ಆಫ್ಘಾನಿಸ್ತಾನ ಮತ್ತು ಇರಾನ್‌ನ ಗಡಿ ಭಾಗಗಳಲ್ಲಿಯೂ ಇದ್ದಾರೆ. ಆದರೆ ಪಾಕಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಫ್ಘಾನಿಸ್ತಾನ ಮತ್ತು ಇರಾನ್‌ನ ಗಡಿ ಪ್ರದೇಶ ಮತ್ತು ಪಾಕಿಸ್ತಾನದಲ್ಲಿ ತಾವಿರುವ ಪ್ರದೇಶ ಸೇರಿ ಒಂದು ಪ್ರತ್ಯೇಕ ದೇಶ ಸ್ಥಾಪಿಸುವುದು ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯ ಕನಸು. ಇತ್ತೀಚಿನ ವರ್ಷಗಳಲ್ಲಿ ಬಲೂಚಿ ಹೋರಾಟಗಾರರ ದಾಳಿಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವರ್ಷ ಕನಿಷ್ಠ ೧೫೦ ಹಿಂಸಾಚಾರದ ಘಟನೆಗಳು ನಡೆದಿವೆ. ಇಷ್ಟು ವರ್ಷ ಸೋಷಿಯಲ್ ಮೀಡಿಯಾಗಳ ಬಳಕೆ ಅಷ್ಟಿರಲಿಲ್ಲ. ಈಗ ಅದು ವ್ಯಾಪಕವಾಗಿದ್ದು ಪ್ರತಿ ದಾಳಿಯೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಬಿಎಲ್‌ಎಗೆ ಬೆಂಬಲ ಹೆಚ್ಚುತ್ತಿದೆ.
ಹಾಗೆ ನೋಡಿದರೆ ಸ್ವತಂತ್ರ ಬಲೂಚಿಸ್ತಾನ ರಚನೆಗೆ ಸಾಮಾನ್ಯ ಜನರು ಅಷ್ಟಾಗಿ ಬೆಂಬಲ ಸೂಚಿಸುತ್ತಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದರೆ ಸ್ವಾಯತ್ತ ಬಲೂಚಿಸ್ತಾನ ರಚನೆಗೆ ಒಲವು ಕಂಡುಬಂದಿದೆ. ಅಭಿವೃದ್ಧಿ ಕಡೆಗೆ ಗಮನ ನೀಡುವಂಥ ಆಡಳಿತ ಬರುವಂತಾಗಬೇಕು ಎಂಬುದು ಬಹುಪಾಲು ಜನರ ಆಶಯ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದರೆ ಪಾಕಿಸ್ತಾನ ಸರ್ಕಾರ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡುವ ದಿಕ್ಕಿನಲ್ಲಿ ಯೋಚಿಸುತ್ತಿಲ್ಲ. ಕೈಗೊಂಬೆ ಸರ್ಕಾರ ಅಥವಾ ಸೇನಾ ಆಡಳಿತ ಸ್ಥಾಪಿಸುವ ದಿಕ್ಕಿನಲ್ಲಿ ಮಾತ್ರ ಯೋಚಿಸುತ್ತಿರುವುದು ಒಂದು ದುರಂತ.
ಪಾಕಿಸ್ತಾನ ಸತತವಾಗಿ ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತ ಬಂದಿದೆ. ರಾಜಕೀಯ ಅಸ್ಥಿರತೆಯ ಜೊತೆಗೆ ಆರ್ಥಿಕ ಅಸ್ಥಿರತೆಯೂ ಜನರನ್ನು ಕಾಡುತ್ತಿದೆ. ರಾಜಕೀಯ ಅಸ್ಥಿರತೆಯನ್ನು ನಿವಾರಿಸಿಕೊಳ್ಳಲು ಪ್ರಧಾನಿ ಶಹಬಾಜ್ ಷರೀಫ್ ಸರ್ಕಾರ ವಿರೋಧಿ ನಾಯಕ ಇಮ್ರಾನ್ ಖಾನ್ ಅವರನ್ನು ಜೈಲಿಗೆ ದೂಡಿದೆ. ಆದರೆ ಅದರಿಂದ ಪರಿಸ್ಥಿತಿಯಲ್ಲಿ ಬದಲಾವಣೆಯೇನೂ ಕಾಣುತ್ತಿಲ್ಲ. ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳಲು ಸರ್ಕಾರ ಐಎಂಎಫ್‌ನಿಂದ ಮತ್ತೆ ಸಾಲಪಡೆಯುವ ದಾರಿ ತುಳಿದಿದೆ. ಸುಮಾರು ೭ ಬಿಲಿಯನ್ ಡಾಲರ್ ಸಾಲ ಕೊಡಲು ಐಎಂಎಫ್ ಒಪ್ಪಿದೆ. ಆದರೆ ಕೆಲವು ಆರ್ಥಿಕ ಶಿಸ್ತಿನ ಷರತ್ತುಗಳನ್ನು ವಿಧಿಸಿದೆ. ಆ ಷರತ್ತುಗಳನ್ನು ಪಾಲಿಸಲಾಗದೆ ಸರ್ಕಾರ ಒದ್ದಾಡುತ್ತಿದೆ. ಮೊದಲ ಕಂತಾಗಿ ಒಂದು ಬಿಲಿಯನ್ ಡಾಲರ್ ಸಾಲ ಮಾತ್ರ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ವಿದೇಶೀ ವಿನಿಮಯ ಹಣ ಎರಡು ತಿಂಗಳಿಗೆ ಮಾತ್ರ ಸಾಕಾಗುವಷ್ಟು ಇದ್ದು ಮತ್ತೊಮ್ಮೆ ಸರ್ಕಾರ ದಿವಾಳಿಯಾಗುವ ಭೀತಿ ಎದುರಿಸುತ್ತಿದೆ. ಇಂಥ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ತಾಲಿಬಾನ್ ಹಾವಳಿ ಹೆಚ್ಚಿದೆ. ಈ ಹಿಂದೆ ಆ-ನಿಸ್ತಾನದ ತಾಲಿಬಾನ್ ಸಂಘಟನೆಗೆ ಪಾಕಿಸ್ತಾನ ನೆರವಾಗಿತ್ತು. ಆದರೆ ಮೂರು ವರ್ಷಗಳ ಹಿಂದೆ ತಾಲಿಬಾನ್ ಅಽಕಾರಕ್ಕೆ ಬಂದ ನಂತರ ಎಲ್ಲವೂ ತಲೆಕೆಳಕಾಗಿದೆ. ಈಗ ಗಡಿಯಲ್ಲಿರುವ ತಾಲಿಬಾನ್ ಸಂಘಟನೆಯ ವಿರುದ್ಧ ಪಾಕಿಸ್ತಾನದ ಮಿಲಿಟರಿ ಹೋರಾಡಬೇಕಾಗಿ ಬಂದಿದೆ. ಪಾಕ್ ಗಡಿಯಲ್ಲಿ ಪ್ರತ್ಯೇಕ ಇಸ್ಲಾಮಿಕ್ ದೇಶ ರಚನೆ ಗುರಿಯಿಟ್ಟುಕೊಂಡು ಆ ಪ್ರದೇಶದಲ್ಲಿ ಮೇಲುಗೈ ಸಾಧಿಸಲು ಯತ್ನಿಸುತ್ತಿದೆ. ಮಿಲಿಟರಿ ನೆಲೆಗಳಿಂದ ಹಿಡಿದು ಸಾರ್ವಜನಿಕ ಸ್ಥಳಗಳ ಮೇಲೆ ತಾಲಿಬಾನ್ ಉಗ್ರವಾದಿಗಳು ದಾಳಿ ನಡೆಸುತ್ತಿದ್ದಾರೆ. ಬಲೂಚಿಸ್ತಾನ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಖೈಬರ್ ಫಕ್ತುನ್ವಾ ಪ್ರದೇಶದಲ್ಲಿ ತಾಲಿಬಾನ್ ದಾಳಿ ನಡೆದಿದೆ. ಪಾಕಿಸ್ತಾನ ಸೇನೆ ಮತ್ತೊಮ್ಮೆ ತಾಲಿಬಾನ್ ಉಗ್ರರ ಮೇಲೆ ದಾಳಿ ನಡೆಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.
ಬಲೂಚಿಸ್ತಾನದ ಒಂದು ಸಿದ್ಧಾಂತಕ್ಕೆ ಬದ್ಧವಾದ ಪ್ರತ್ಯೇಕತಾವಾದಿಗಳ ಹೋರಾಟವನ್ನು ಹೇಗೆ ಬಂದೂಕಿನ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲವೋ ಅದೇ ರೀತಿ ಧರ್ಮಾಧಾರಿತ ತಾಲಿಬಾನ್ ಸಂಘಟನೆಯ ಹೋರಾಟವನ್ನೂ ಬಂದೂಕಿನ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಮಾತುಕತೆ ಯೊಂದೇ ದಾರಿ. ಆದರೆ ಪಾಕ್‌ನ ಆಡಳಿತಗಾರರು ಸರ್ವಾಧಿಕಾರಿಗಳಂತೆ ವರ್ತಿಸುವುದರಿಂದ ಮಾತುಕತೆ ಸಾಧ್ಯವೇ ಇಲ್ಲ. ಇದರಿಂದಾಗಿ ಸದ್ಯಕ್ಕೆ ಯಾರಿಗೂ ನೆಮ್ಮದಿ ಇಲ್ಲ.
” ಬಲೂಚಿಸ್ತಾನದ ಪ್ರತ್ಯೇಕತಾವಾದಿ ಹೋರಾಟಗಾರರು ನಡೆಸಿದ ಮೊದಲ ದಾಳಿ ಇದೇನಲ್ಲ. ಸತತವಾಗಿ ಏಳು ದಶಕಗಳಿಂದಲೂ ಪ್ರತ್ಯೇಕ ಬಲೂಚಿಸ್ತಾನ ರಚನೆಗೆ ಒತ್ತಾಯಿಸಿ ಹಿಂಸಾಚಾರ ನಡೆಸುತ್ತಲೇ ಬಂದಿದ್ದಾರೆ. ಅದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ ಅಷ್ಟೆ. ಈ ಪ್ರತ್ಯೇಕತಾವಾದಿಗಳಿಗೆ ಭಾರತ ಬೆಂಬಲನೀಡುತ್ತಿದೆ ಎಂದು ಪಾಕಿಸ್ತಾನದ ಆಡಳಿತಗಾರರು ಆರೋಪಿಸುತ್ತಲೇ ಬಂದಿದ್ದಾರೆ. ಈ ರೈಲು ಅಪಹರಣ ಪ್ರಕರಣದ ಹಿಂದೆಯೂ ಭಾರತದ ಕುಮ್ಮಕ್ಕಿದೆ ಎಂದು ಪಾಕ್ ಆರೋಪಿಸಿದೆ. ಆದರೆ ಭಾರತ ಈ ಆರೋಪವನ್ನು ನಿರಾಕರಿಸಿದೆ. ಪ್ರಸ್ತುತ ರೈಲು ಅಪಹರಣ ಸಂದರ್ಭದಲ್ಲಿ ಬಿಎಲ್‌ಎ ನಾಯಕರೊಬ್ಬರು ಆಫ್ಘಾನಿಸ್ತಾನದ ತಾಲಿಬಾನ್ ನಾಯಕರ ಜೊತೆ ಫೋನ್‌ನಲ್ಲಿ ಸಂಪರ್ಕ ಪಡೆದಿರುವುದು ಬಹಿರಂಗವಾಗಿದೆ.”