ಉನ್ನತಾಧಿಕಾರವುಳ್ಳ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ (ಜಿ.ಎಸ್.ಟಿ.) ಕೌನ್ಸಿಲ್ (ಸರಕುಗಳು ಮತ್ತು ಸೇವೆಗಳ ತೆರಿಗೆ ಪರಿಷತ್) ಸಭೆಯು ಬರುವ ಸೆಪ್ಟೆಂಬರ್ ೩ ಮತ್ತು ೪ರಂದು ನಡೆಯಲಿದೆ. ಎಲ್ಲ ರಾಜ್ಯಗಳ ಮತ್ತು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಇದರ ಸದಸ್ಯರು. ಕೇಂದ್ರ ಅರ್ಥ ಮಂತ್ರಿ ನಿರ್ಮಲಾ ಸೀತಾರಾಮನ್ ಅಧ್ಯಕ್ಷರು. ಜಿಎಸ್‌ಟಿ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇದಕ್ಕಿದೆ.
ಸದ್ಯದ ಕಾರ್ಯಸೂಚಿಯ ಪ್ರಕಾರ ತೆರಿಗೆ ದರಗಳನ್ನು ಅರ್ಥಪೂರ್ಣವಾಗಿ ಮತ್ತು ವೈಜ್ಞಾನಿಕವಾಗಿ ಕಡಿಮೆ ಮಾಡಲು ಸಲಹೆ ನೀಡುವುದಕ್ಕಾಗಿ ನೇಮಿಸಲ್ಪಟ್ಟ ಸದಸ್ಯ ಮಂತ್ರಿಗಳ ಉಪ ಸಮಿತಿ (Group of Ministers) ಸಲ್ಲಿಸಿರುವ ವರದಿಯನ್ನು ಸ್ವೀಕರಿಸಿ , ಚರ್ಚಿಸಿ ಮತ್ತು ಅಂಗೀಕರಿಸಿ ತೀರ್ಮಾನ ತೆಗೆದುಕೊಳ್ಳುವುದು ಪ್ರಮುಖ ವಿಷಯ. ಇತರ ಉಪಸಮಿತಿಗಳಿಂದ ಬಂದ ವರದಿಗಳನ್ನೂ ಅಂಗೀಕರಿಸಿ ತೀರ್ಮಾನ ತೆಗೆದುಕೊಳ್ಳುವುದೂ ಇತರ ವಿಷಯಗಳಲ್ಲಿವೆ. ಈ ಸಭೆ ಕ್ರಾಂತಿಕಾರಿಯಾಗಲಿದೆ.
ಜಿ.ಎಸ್.ಟಿ. ಜಾರಿಯಾಗಿ ಎಂಟು ವರ್ಷಗಳು ಪೂರ್ಣಗೊಂಡಿದ್ದು, ಈ ಅನುಭವದ ಆಧಾರದಲ್ಲಿ ಹೊಸತನ ತರಬೇಕಾದುದು ಅತ್ಯವಶ್ಯ ಮತ್ತು ಅನಿವಾರ್ಯ. ಈಗ ಶೇ.೫, ೧೨, ೧೮ ಮತ್ತು ೨೮ ಹೀಗೆ ನಾಲ್ಕು ತೆರಿಗೆ ದರಗಳಿವೆ. ಅಲ್ಲದೆ ಚಿನ್ನ, ಬೆಳ್ಳಿಯಂತಹ ದೊಡ್ಡ ಮೌಲ್ಯದ ಉತ್ಪನ್ನಗಳಿಗಾಗಿ ಶೇ.೦೩ ಮತ್ತು ಪಾಲಿಶ್ ಆಗದೇ ಇರುವ ಕಚ್ಚಾ ವಜ್ರಗಳಿಗಾಗಿ ಶೇ.೦.೨೫ ವಿಶೇಷ ದರಗಳೂ ಇರುತ್ತವೆ. ಈಗಿನ ಸುಧಾರಣೆಯಲ್ಲಿ ಈ ವಿಶೇಷ ದರಗಳನ್ನು ಮುಟ್ಟದೇ ಇರಬಹುದು.
ರಾಜ್ಯಗಳ ೨೦೨೪-೨೫ರ ಹಣಕಾಸು ಅಧ್ಯಯನ ಮಾಡಿದಾಗ ತಮ್ಮ ತೆರಿಗೆ ಆದಾಯದ ಸರಾಸರಿ ಶೇ.೪೫ರಿಂದ ೪೬ರಷ್ಟನ್ನು ಜಿ.ಎಸ್.ಟಿ.ಯಿಂದ ಪಡೆಯುತ್ತವೆ. ಬಿಹಾರ ಅತಿ ಹೆಚ್ಚು ಶೇ.೫೭.೧ರಷ್ಟು ಪಡೆಯುತ್ತಿದ್ದರೆ ಪಂಜಾಬ್ ಶೇ.೪೩.೭ರಷ್ಟು ಪಡೆಯುತ್ತಿದೆ ಎಂದು ೧೫ ದೊಡ್ಡ ರಾಜ್ಯಗಳ ಅಧ್ಯಯನದಿಂದ ತಿಳಿಯುತ್ತದೆ. ದೆಹಲಿ ಪ್ರದೇಶದಲ್ಲಿ ಶೇ.೬೦ ಬರುತ್ತದೆ.
ಶೇ.೫ ಮತ್ತು ೧೮ರ ಪ್ರಮುಖ ದರಗಳು, ಮತ್ತೊಂದು ಶೇ.೪೦: ಮಂತ್ರಿಗಳ ಉಪ ಸಮಿತಿಯು ಈಗಾಗಲೇ ನಿರ್ಧಾರ ತೆಗೆದುಕೊಂಡಿದ್ದು , ಶೇ.೦೫ ಮತ್ತು ೧೮ ಎರಡು ತೆರಿಗೆ ದರಗಳನ್ನು ಶೇ. ೯೯ಕ್ಕೂ ಹೆಚ್ಚು ಸೇವೆಗಳು ಮತ್ತು ಸರಕುಗಳಿಗೆ ನಿಗದಿ ಮಾಡಿದ್ದು, ಉಳಿದಂತೆ ಸೂಪರ್ ಶ್ರೀಮಂತರು ಬಳಸುವ ಭಾರೀ ಬೆಲೆಯ ಕಾರುಗಳಂತಹ ಕೆಲವೇ ಸರಕುಗಳು ಮತ್ತು ಚಟಗಾರರಿಗೆ ಬೇಕಾಗುವ ತಂಬಾಕು, ಪಾನ್ ಮಸಾಲ ಮತ್ತು ಗುಟಕಾ ಮುಂತಾದ ಪಾಪಿ ಉತ್ಪನ್ನಗಳಿಗಾಗಿ ಶೇ.೪೦ರ ದರವನ್ನು ನಿಗದಿ ಮಾಡಲಾಗಿದೆ.
ಕೌನ್ಸಿಲ್ ಸಭೆಯಲ್ಲಿ ಅಂಗೀಕಾರವಾಗಿ ಜಾರಿಯಾಗುವ ದಿನಾಂಕವನ್ನು ನಿಗದಿ ಮಾಡಿದರೆ ಸಾಕು. ನವದೆಹಲಿ ಮತ್ತು ರಾಜ್ಯಗಳ ರಾಜಧಾನಿಗಳಲ್ಲಿ ಪ್ರಕಟಿಸುವುದಷ್ಟೇ ಬಾಕಿ. ನಿಗದಿತ ದಿನದಿಂದ ಹೊಸ ದರಗಳು ಚಲಾವಣೆಗೆ ಬರುತ್ತವೆ. ಈ ಹಣಕಾಸು ವರ್ಷದ ಕೊನೆಯವರೆಗೆ ನಿರ್ವಹಣೆಯ ನಂತರ ಸಣ್ಣಪುಟ್ಟ ತಪ್ಪುಒಪ್ಪುಗಳನ್ನು ಪರಿಗಣಿಸಿ ಹೊಂದಾಣಿಕೆಗಳನ್ನು ಮಾಡಬಹುದು.
ಪರಿಣಾಮವಾಗಿ ಶೇ.೨೮ರ ದರದಲ್ಲಿರುವ ಸೇವೆಗಳು ಮತ್ತು ಸರಕುಗಳಲ್ಲಿ ಶೇ.೪೦ಕ್ಕೆ ಹೋಗುವ ಅತಿ ಕಡಿಮೆ ಸೂಪರ್ ಐಷಾರಾಮಿ ಮತ್ತು ಪಾಪಿ ಉತ್ಪನ್ನಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಶೇ.೧೮ರ ದರಕ್ಕೆ ಸೇರಿಕೊಳ್ಳುತ್ತವೆ. ಅಷ್ಟರಮಟ್ಟಿಗೆ ಅವುಗಳೆಲ್ಲ ಅಗ್ಗವಾಗುತ್ತವೆ. ಶೇ.೧೦ರ- ತೆರಿಗೆ ಉಳಿಯುತ್ತದೆ.
ಇನ್ನು ಶೇ.೧೨ರ ತೆರಿಗೆ ದರದಲ್ಲಿಯ ಸರಕು ಮತ್ತು ಸೇವೆಗಳಲ್ಲಿ ಸಾಮಾನ್ಯರು ಉಪಯೋಗಿಸಬಹುದೆನ್ನಲಾಗುವ ದೊಡ್ಡ ಪ್ರಮಾಣದಲ್ಲಿರುವಂಥವುಗಳು (ಸುಮಾರು ಶೇ.೯೦ರಷ್ಟು ) ಶೇ.೫ರ ತೆರಿಗೆ ದರಕ್ಕೆ ಸೇರಿಕೊಳ್ಳಬಹುದು. ಅಷ್ಟರ ಮಟ್ಟಿಗೆ ಅವರ ಜೀವನ ವೆಚ್ಚ ಕಡಿಮೆಯಾಗಿ ಹೆಚ್ಚು ಕೊಳ್ಳುವ ಶಕ್ತಿ ಅವರ ಕೈಯಲ್ಲಿ ಉಳಿಯಬಹುದು. ಉಳಿದಂತೆ ಸ್ವಲ್ಪ ಭಾಗವು (ಶೇ.೧೦ರ ಆಸುಪಾಸು) ಹೆಚ್ಚಿನ ತೆರಿಗೆ ದರ ಶೇ. ೧೮ರಲ್ಲಿ ಸೇರಬಹುದು. ಇವೆಲ್ಲ ಮಧ್ಯಮ ವರ್ಗದವರು ಮತ್ತು ಮೇಲ್ವರ್ಗದವರು ಉಪಯೋಗಿಸುವ ಸಾಮಾನ್ಯ ಸೇವೆ ಮತ್ತು ಸರಕುಗಳಾಗಿರಬಹುದು. ಸ್ವಲ್ಪ ಬೆಲೆ ಹೆಚ್ಚಳವಾದರೂ (ತೆರಿಗೆ ದರದಲ್ಲಿ ಶೇ.೬ ಮಾತ್ರ ಹೆಚ್ಚಿಗೆ ) ಅವರ ಜೇಬಿಗೆ ಹೆಚ್ಚಿಗೆ ಕತ್ತರಿ ಬೀಳಲಿಕ್ಕಿಲ್ಲ ವೆಂದು ಹೇಳಬಹುದಾಗಿದೆ. ಇದು ಹೊಂದಾಣಿಕೆ ಮಾತ್ರ.
ತಾತ್ಕಾಲಿಕ ಪರಿಣಾಮಗಳು: ಯಾವುದೇ ಬದಲಾವಣೆಗಳನ್ನು ಅನುಷ್ಠಾನಗೊಳಿಸಿದಾಗಲೂ ಒಂದಷ್ಟು ಏರುಪೇರುಗಳಾಗುವುದು ಸ್ವಾಭಾವಿಕ. ನಂತರ ವಿವಿಧ ದಿಕ್ಕಿನಲ್ಲಿ ಹೊಂದಾಣಿಕೆಗಳಾಗಿ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆಗಳು ಮುಂದುವರಿಯುತ್ತವೆ. ಇದು ಸರ್ವೇ ಸಾಮಾನ್ಯ. ಈಗ ನಡೆಯಲಿರುವ ಜಿಎಸ್‌ಟಿ ದರಗಳ ಸಂಖ್ಯೆ ಕಡಿಮೆ ಮಾಡುವ ಪ್ರಕ್ರಿಯೆಯ ಪರಿಣಾಮಗಳ ಬಗ್ಗೆ ನಮ್ಮ ಎಸ್‌ಬಿಐ ಆರ್ಥಿಕ ಸಂಶೋಧನಾ ವಿಭಾಗ ಒಂದು ವರದಿಯನ್ನು ಪ್ರಕಟಿಸಿದೆ.
ಅದರಂತೆ ಇದೇ ವರ್ಷ ಉಳಿದ ಅವಧಿಯಲ್ಲಿ (ಇದೇ ಅಕ್ಟೋಬರ್ ಒಂದರಿಂದ ೨೦೨೬ ಮಾರ್ಚ್ ೩೧ ರವರೆಗೆ) ಸರ್ಕಾರದ ತೆರಿಗೆ ಆದಾಯದಲ್ಲಿ ೪೫,೦೦೦ ಕೋಟಿ ರೂ.ಗಳು ನಷ್ಟವಾಗುತ್ತದೆ ಎಂದು ಅಂದಾಜಿಸಿದೆ. ಅದೇ ರೀತಿ ವಸ್ತುಗಳು ಮತ್ತು ಸೇವೆಗಳು ಅಗ್ಗವಾಗುವುದರಿಂದ ಉಪಭೋಗಕರು ಹೆಚ್ಚು ಖರೀದಿಸಿ ಉಪಭೋಗಿಸುವುದರಿಂದ ಅರ್ಥ ವ್ಯವಸ್ಥೆಯಲ್ಲಿ ೫.೩೧ ಲ.ಕೋ.ರೂ. ಮೌಲ್ಯದ ಉಪಭೋಗ (Consumption) ಹೆಚ್ಚಾಗಲಿದೆ ಎಂದೂ ಅಂದಾಜಿಸಲಾಗಿದೆ. ಇದು ವಿವಿಧ ತೆರಿಗೆ ಮೂಲಗಳ ಹೆಚ್ಚಳಕ್ಕೆ ಕಾರಣವಾಗಿ ಸರ್ಕಾರದ ಬೊಕ್ಕಸಕ್ಕೆ ಕೊರತೆಯುಂಟಾಗುವುದಿಲ್ಲವೆಂದೂ ಅಭಿಪ್ರಾಯಪಡಲಾಗಿದೆ.
ಇಲ್ಲಿಯವರೆಗೆ ನಾಲ್ಕು ತೆರಿಗೆ ದರಗಳಿದ್ದಾಗ ಪರಿಣಾಮಕಾರಿ ಸರಾಸರಿ ತೆರಿಗೆ ದರ ಶೇ.೧೪.೪ ಇದ್ದದ್ದು ದರಗಳನ್ನು ಅರ್ಥಪೂರ್ಣವಾಗಿ ಕಡಿಮೆ ಮಾಡಿದ ನಂತರ ಈ ಪರಿಣಾಮಕಾರಿ ಸರಾಸರಿ ದರವು ಶೇ.೯.೫ಕ್ಕೆ ಇಳಿಯಲಿದೆ ಎಂದೂ ಲೆಕ್ಕ ಹಾಕಲಾಗಿದೆ. ಹೀಗೆ ತೆರಿಗೆ ಭಾರ ಒಂದೆಡೆ ಕಡಿಮೆಯಾದರೆ ಇನ್ನೊಂದೆಡೆ ಸೇವೆಗಳು ಮತ್ತು ಸರಕುಗಳು ಕಡಿಮೆ ಬೆಲೆಗಳಲ್ಲಿ ಲಭ್ಯವಾಗುತ್ತವೆ. ಮೊದಲೇ ಹೇಳಿದಂತೆ ಉಪಭೋಗಕರ ಕೈಯಲ್ಲಿ ಕೊಳ್ಳುವ ಶಕ್ತಿಯು ಉಳಿಯುವುದರಿಂದ ಅದು ಉಳಿತಾಯಗಳಾಗಿ ಹಣದುಬ್ಬರವು (Inflation))ಅಂದಾಜು ಶೇ.೦.೧೫ ರಿಂದ ೦.೨೦ವರೆಗೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಂತಿಮವಾಗಿ ದರಗಳು ಕಡಿಮೆಯಾಗುವುದರಿಂದ ಆರ್ಥಿಕ ಬೆಳವಣಿಗೆ ವೇಗ ಹೆಚ್ಚಬಹುದು.
” ಇಲ್ಲಿಯವರೆಗೆ ನಾಲ್ಕು ತೆರಿಗೆ ದರಗಳಿದ್ದಾಗ ಪರಿಣಾಮಕಾರಿ ಸರಾಸರಿ ತೆರಿಗೆ ದರ ಶೇ.೧೪.೪ ಇದ್ದದ್ದು ದರಗಳನ್ನು ಅರ್ಥಪೂರ್ಣವಾಗಿ ಕಡಿಮೆ ಮಾಡಿದ ನಂತರ ಈ ಪರಿಣಾಮಕಾರಿ ಸರಾಸರಿ ದರವು ಶೇ.೯.೫ಕ್ಕೆ ಇಳಿಯಲಿದೆ ಎಂದೂ ಲೆಕ್ಕ ಹಾಕಲಾಗಿದೆ.”
-ಪ್ರೊ.ಆರ್.ಎಂ.ಚಿಂತಾಮಣಿ





