ವಿಲ್ಪ್ರೆಡ್ ಡಿಸೋಜ
೩೪೬ ವಿಕೇಂದ್ರೀಕೃತ ತರಬೇತಿ ಸಂಯೋಜಕರು ಕೆಲಸ ಕಳೆದುಕೊಳ್ಳುವ ಆತಂಕ
ಮೈಸೂರಿನ ಪ್ರತಿಷ್ಠಿತ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಸಂಸ್ಥೆಯು ಒಳಗೆ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಸಹಭಾಗಿತ್ವ ಮಾದರಿಯ ವಿನೂತನ ತರಬೇತಿಗಳ ಮೂಲಕ ಅಧಿಕಾರ ವಿಕೇಂದ್ರೀಕರಣ ಮತ್ತು ಪಂಚಾಯತ್ ರಾಜ್ ಸಬಲೀಕರಣದ ದಾರಿಯಲ್ಲಿ ದಾಪುಗಾಲಿಡುತ್ತಿದ್ದ ಸಂಸ್ಥೆಯು ಬದ್ಧತೆಯ ಕೊರತೆ ಮತ್ತು ನಿರ್ಲಕ್ಷ ಕ್ಕೆ ಒಳಗಾಗಿ ಸೊರಗುತ್ತಿದೆ. ಪಂಚಾಯತ್ ರಾಜ್ ವ್ಯವಸ್ಥೆಗೆ ಸೂಕ್ತ ತರಬೇತಿ, ಪ್ರೇರಣೆ, ಮಾರ್ಗದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದ ಈ ಸಂಸ್ಥೆಯ ಆದ್ಯತೆ ಬದಲಾದಂತೆ ಕಾಣುತ್ತಿದೆ.
ಅನಪೇಕ್ಷಿತ ತೀರ್ಮಾನಗಳು: ಇತ್ತೀಚೆಗೆ ಸಂಸ್ಥೆಯಲ್ಲಿ ತೆಗೆದು ಕೊಂಡಿರುವ ಕೆಲವು ತೀರ್ಮಾನಗಳು ಬಿರುಗಾಳಿಯನ್ನು ಎಬ್ಬಿಸಿವೆ. ೨೫ ವರ್ಷಗಳಿಂದ ಆಯೋಜಿಸಲಾಗುತ್ತಿದ್ದ ವಿವಿಧ ತರಬೇತಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದ ೩೪೬ ವಿಕೇಂದ್ರೀಕೃತ ತರಬೇತಿ ಸಂಯೋಜಕರು ಸ್ಥಿರ ವರಮಾನದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ನೋಡಲ್ ತರಬೇತಿ ಸಂಯೋಜಕರು ಎನ್ನುವ ಹುದ್ದೆ ಸೃಷ್ಟಿಸುವ ಮೂಲಕ ಅವರಿಗೆ ಒದಗಿಸಿದ್ದ ಕನಿಷ್ಠ ವರಮಾನದ ಅವಕಾಶವನ್ನೂ ಕಿತ್ತುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
ನಜೀರ್ ಸಾಬ್ ಸಂಸ್ಥೆಯ ನಿರ್ದೇಶಕರ ಪರವಾಗಿ ಹೊರಡಿಸಲಾದ ಆದೇಶ (ಆದೇಶ ಸಂಖ್ಯೆ: SIRDPR TRG1002024-TRNG-ANSSIRD ದಿನಾಂಕ: ೦೧.೦೪.೨೦೨೫) ಈ ಗೊಂದಲಗಳಿಗೆ ಕಾರಣವಾಗಿದೆ. ಈ ಆದೇಶದಲ್ಲಿ ತಿಳಿಯಪಡಿಸಿರುವ ಪ್ರಮುಖ ಅಂಶಗಳು ಈ ಕೆಳಗಿಂತಿವೆ. ರಾಜ್ಯದ ಎಲ್ಲಾ ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೋಡಲ್ ತರಬೇತಿ ಸಂಯೋಜಕ ರನ್ನು ೦೧.೦೪.೨೦೨೫ ರಂದು ಸೇವೆಯಿಂದ ವಿಮುಕ್ತಿಗೊಳಿಸ ಲಾಗಿದೆ.
ಈ ಆದೇಶಕ್ಕೆ ಪೂರಕವಾಗಿ ಕೆಲವು ವಿವರಣೆಗಳನ್ನು ನೀಡಲಾಗಿದೆ. ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ (RGSY)ಯೋಜನೆಯ ೨೦೨೫-೨೬ನೇ ಸಾಲಿನ ಕ್ರಿಯಾ ಯೋಜನೆ ಸಂಪೂರ್ಣವಾಗಿ ಪರಿಷ್ಕರಣೆಗೊಳ್ಳುತ್ತಿದ್ದು, ತರಬೇತಿ ಕ್ಯಾಲೆಂಡರ್ ಪೂರ್ಣಗೊಂಡಿಲ್ಲ. ಅದು ಪೂರ್ಣಗೊಂಡು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ಪಡೆದ ನಂತರ ಅಧಿಸೂಚನೆ ಮತ್ತು ಮಾರ್ಗಸೂಚಿಯನ್ನು ಹೊರಡಿಸಲಾ ಗುವುದು. ಈ ಹಿನ್ನೆಲೆಯಲ್ಲಿ ನೋಡಲ್ ಸಂಯೋಜಕರನ್ನು ಕರ್ತವ್ಯದಿಂದ ವಿಮುಕ್ತಿಗೊಳಿಸಲಾಗಿದೆ. ನೋಡಲ್ ತರಬೇತಿ ಸಂಯೋಜಕರ ಹುದ್ದೆ ಯನ್ನು ಮುಂದುವರಿಸುವ ಕುರಿತು ಯಾವ ಪ್ರಸ್ತಾಪವೂ ಆದೇಶದಲ್ಲಿ ಕಾಣುತ್ತಿಲ್ಲ.
ವಿಪರ್ಯಾಸ ಮತ್ತು ಗೊಂದಲ ಮೇಲಿನ ಆದೇಶಕ್ಕೆ ದಿನಾಂಕ ೦೧.೦೪.೨೦೨೫ ರಂದು ಬೆಳಿಗ್ಗೆ ೧೧.೧೧ರ ವೇಳೆಯಲ್ಲಿ ಸಂಸ್ಥೆಯ ನಿರ್ದೇಶಕರ ಪರವಾಗಿ ಕವಿತಾ ರಾಜಾರಾಂ ಎನ್ನುವ ಅಧಿಕಾರಿ ಸಹಿ ಹಾಕಿದ್ದಾರೆ. ಆದರೆ ಅವರು ಸಹಿ ಹಾಕಿದ ಸಮಯಕ್ಕೆ ಮೊದಲೇ ಬೆಳಿಗ್ಗೆ ೧೧.೦೬ರ ವೇಳೆಗೆ ಸಂಸ್ಥೆಯ ಬೋಧಕರು ಅವರ ಉಸ್ತುವಾರಿಯ ಜಿಲ್ಲೆಯ ನೋಡಲ್ ಸಂಯೋಜಕರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಕರ್ತವ್ಯದಿಂದ ವಿಮುಕ್ತಿಗೊಳಿಸಲಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆ.
ದಿನಾಂಕ ೦೪.೦೯.೨೦೨೪ರಂದು ರಾಜ್ಯ ಮಟ್ಟದಲ್ಲಿ ನಡೆದ ನಜೀರ್ ಸಾಬ್ ಸಂಸ್ಥೆಯ ೧೦ನೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ಒಂದು ನಿರ್ಣಯ ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ.
ವಿಷಯ: ಸಂಸ್ಥೆಯ ತರಬೇತಿ ಕಾರ್ಯಕ್ರಮಗಳಿಗೆ Expression of interest ಮುಖಾಂತರ ಮಾಸ್ಟರ್ ರಿಸೋರ್ಸ್ ಪರ್ಸನ್ (IP) ಗಳನ್ನು ಗುರುತಿಸುವ ಬಗ್ಗೆ ಚರ್ಚೆ ಮತ್ತು ನಿರ್ಣಯ. ನಿರ್ಣಯ: “ವಿಷಯದ ಬಗ್ಗೆ ಚರ್ಚಿಸಲಾಗಿ ಎಂಆರ್‌ಪಿ (ಮುಖ್ಯ ಸಂಪನ್ಮೂಲ ವ್ಯಕ್ತಿಗಳು)ಗಳನ್ನು ಹೊರಗಿನಿಂದ ನಿಯೋಜಿಸುವ ಬದಲು ಸರ್ಕಾರಿ ವ್ಯವಸ್ಥೆಗೆ ಪರಿಚಿತ ರಾಗಿರುವ ಸರ್ಕಾರಿ ನೌಕರರನ್ನು ಗುರುತಿಸಿ ಎಂಆರ್‌ಪಿಗಳಾಗಿ ತರಬೇತಿಗೊಳಿಸುವುದು ಸೂಕ್ತ ವಾಗಿದೆ ಎಂದು ಅಭಿಪ್ರಾಯಿಸಿ, ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಅಂಗನವಾಡಿ ಮೇಲ್ವಿಚಾರಕರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಮುಂತಾದ ಅರ್ಹ, ಆಸಕ್ತ ಸರ್ಕಾರಿ ನೌಕರರನ್ನು ಎಂಆರ್‌ಪಿಗಳಾಗಿ ತರಬೇತಿಗೊಳಿಸಿ ಅವರ ಸೇವೆಯನ್ನು ಸಂಸ್ಥೆಯ ತರಬೇತಿಗಳಿಗೆ ಬಳಸಿಕೊಳ್ಳಲು ಹಾಗೂ ಸೂಕ್ತ ಗೌರವಧನವನ್ನು ಪಾವತಿಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು”. ನಿರ್ಣಯಕ್ಕೆ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ರಾಜ್ಯದ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಸಮಿತಿಯ ಪದನಿಮಿತ್ತ ಕಾರ್ಯದರ್ಶಿ ಆಗಿರುವ ನಜೀರ್ ಸಾಬ್ ಸಂಸ್ಥೆಯ ನಿರ್ದೇಶಕರು ಸಹಿ ಹಾಕಿದ್ದಾರೆ.
ಈ ನಿರ್ಣಯ ಕಳೆದ ೨೫ ವರ್ಷಗಳಿಂದ ನಜೀರ್ ಸಾಬ್ ಸಂಸ್ಥೆಯಲ್ಲಿ ಪಾಲಿಸುತ್ತಾ ಬಂದಿರುವ ತತ್ವಗಳಿಗೆ ವಿರುದ್ಧವಾಗಿದೆ. ಅನಿತ ಕೌಲ್ ಅವರು ಸಂಸ್ಥೆಯ ಮಹಾ ನಿರ್ದೇಶಕರಾಗಿದ್ದಾಗ, ವಿ.ಪಿ.ಬಳಿಗಾರ್ ಮತ್ತು ಟಿ.ಆರ್. ರಘುನಂದನ್ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದಾಗ ಸಂಸ್ಥೆಯ ತರಬೇತಿಗಳ ನಿರ್ವಹಣೆಗಾಗಿ ಸರ್ಕಾರಿ ನೌಕರರನ್ನು ಹೊರತುಪಡಿ ಸಿದ ಸಂಪನ್ಮೂಲ ವ್ಯಕ್ತಿಗಳ ತಂಡವನ್ನು ಸಜ್ಜುಗೊಳಿಸುವ ನಿರ್ಧಾರವನ್ನು ಕೈಗೊಂಡು ಪಾಲಿಸಿಕೊಂಡು ಬರಲಾ ಗುತ್ತಿತ್ತು. ಸಂಸ್ಥೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಹೆಚ್.ಎಸ್.ಅಶೋಕಾನಂದ್, ಅಶ್ರಫುಲ್ ಹಸನ್, ಶಿವಶಂಕರ್, ಕೆಂಪೇಗೌಡ, ಶಿಲ್ಪಾ ನಾಗ್, ಲಕ್ಷ್ಮಿಪ್ರಿಯ ಮೊದಲಾದವರು ಈ ಉದ್ದೇಶದ ಹಿಂದಿನ ಸಾಮಾಜಿಕ ನ್ಯಾಯದ ತತ್ವವನ್ನು ಅರ್ಥೈಸಿಕೊಂಡು ಸಂಪನ್ಮೂಲ ವ್ಯಕ್ತಿಗಳನ್ನು ವಿವಿಧ ತರಬೇತಿಗಳಲ್ಲಿ ಯಶಸ್ವಿಯಾಗಿ ಬಳಸಲು ಸಾಧ್ಯವಾಗಿತ್ತು. ೧,೦೦೦ಕ್ಕೂ ಹೆಚ್ಚು ಸದಸ್ಯರಿರುವ ಸಂಪನ್ಮೂಲ ವ್ಯಕ್ತಿಗಳ ತಂಡವನ್ನು ತುಂಬ ಕಾಳಜಿ ಮತ್ತು ಎಚ್ಚರಿಕೆಯಿಂದ ಆಯ್ಕೆ ಮಾಡಿ ತರಬೇತುದಾರರಾಗಿ ಸಜ್ಜುಗೊಳಿಸಲಾಗಿತ್ತು. ಸಂಪೂರ್ಣ ಸಾಕ್ಷರತಾ ಆಂದೋಲನ, ಭಾರತ ಜ್ಞಾನ ವಿಜ್ಞಾನ ಸಮಿತಿ, ದಲಿತ ಸಂಘಟನೆ, ರೈತ ಸಂಘಟನೆ ಮುಂತಾದ ಸಾಮಾಜಿಕ ಕಾಳಜಿಯ ಕಾರ್ಯಕರ್ತ ರನ್ನು ಆಯ್ಕೆಗೆ ಪರಿಗಣಿಸಲಾಗಿತ್ತು. ಎರಡನೇ ಹಂತದಲ್ಲಿ ಸಾಧನೆ ಮಾಡಿದ ಗ್ರಾಮ ಪಂಚಾಯಿತಿ ಸದಸ್ಯರನ್ನು ಗುರುತಿಸಿ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಾಗಿತ್ತು. ಕಾರ್ಯದಕ್ಷತೆಯುಳ್ಳ ಸರ್ಕಾರಿ ಅಧಿಕಾರಿಗಳನ್ನು ಗುರುತಿಸಿ ಕೆಲವು ಸಂದರ್ಭಗಳಲ್ಲಿ ವಿಷಯ ತಜ್ಞರಾಗಿ ಮಾತ್ರ ತರಬೇತಿ ನೀಡಲು ಆಹ್ವಾನಿಸಲಾಗುತ್ತಿತ್ತು. ಪಿಡಿಒಗಳ ೮ ವಾರಗಳ ಬುನಾದಿ ತರಬೇತಿ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಮತ್ತು ಇಲಾಖೆಗಳ ನೌಕರರು ಮತ್ತು ಅಧಿಕಾರಿಗಳ ನೂರಾರು ತರಬೇತಿಗಳನ್ನು ಈ ಸಂಪನ್ಮೂಲ ವ್ಯಕ್ತಿಗಳೇ ಇಷ್ಟು ವರ್ಷ ನಿರ್ವಹಿಸಿಕೊಂಡು ಬಂದಿದ್ದಾರೆ. ಹೀಗಿರುವಾಗ ಏಕಾಏಕಿ ವಿವಿಧ ಸರ್ಕಾರಿ ಇಲಾಖೆಗಳ ನೌಕರರನ್ನು ಸಂಸ್ಥೆಯ ಮುಖ್ಯ ತರಬೇತುದಾರರಾಗಿ ನೇಮಿಸಲು
ಕಾರಣ ಏನು? ಶಿಕ್ಷಣ ಇಲಾಖೆಯ ನೌಕರರು, ಅಂಗನವಾಡಿ ಮೇಲ್ವಿಚಾರಕರು ಮತ್ತು ಆಸಕ್ತ ಸರ್ಕಾರಿ ನೌಕರರು ತಮ್ಮ ಇಲಾಖೆಯ ಕರ್ತವ್ಯ ಬಿಟ್ಟು ಚುನಾಯಿತ ಪ್ರತಿನಿಧಿಗಳು ತರಬೇತಿ ನಡೆಸಬೇಕೆ? ಅವರಿಗೆ ಈಗಾಗಲೇ ಪಡೆಯುತ್ತಿರುವ ವೇತನದ ಜೊತೆಗೆ ಹೆಚ್ಚುವರಿ ಗೌರವಧನ ಪಾವತಿಸುವ ಅಗತ್ಯ ಇದೆಯೆ? ಜೊತೆಗೆ ಕಳೆದ ೨೫ ವರ್ಷಗಳಿಂದ ಸಂಸ್ಥೆಯ ಭಾಗವಾಗಿ ಬದುಕುತ್ತಿದ್ದ ೩೪೬ ವಿಕೇಂದ್ರೀಕೃತ ತರಬೇತಿ ಸಂಯೋಜಕರ ಬದುಕಿಗೆ ನೆಮ್ಮದಿ ಕಲ್ಪಿಸುವ ಹೊಣೆಗಾರಿಕೆ ಸರ್ಕಾರಕ್ಕೆ ಇಲ್ಲವೇ?
” ಇತ್ತೀಚೆಗೆ ಸಂಸ್ಥೆಯಲ್ಲಿ ತೆಗೆದುಕೊಂಡಿರುವ ಕೆಲವು ತೀರ್ಮಾನಗಳು ಬಿರುಗಾಳಿಯನ್ನು ಎಬ್ಬಿಸಿವೆ. ೨೫ ವರ್ಷಗಳಿಂದ ಸಂಸ್ಥೆಯಿಂದ ಆಯೋಜಿಸಲಾಗುತ್ತಿದ್ದ ವಿವಿಧ ತರಬೇತಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದ ೩೪೬ ವಿಕೇಂದ್ರೀಕೃತ ತರಬೇತಿ ಸಂಯೋಜಕರು ಸ್ಥಿರ ವರಮಾನದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ನೋಡಲ್ ತರಬೇತಿ ಸಂಯೋಜಕರು ಎನ್ನುವ ಹುದ್ದೆ ಸೃಷ್ಟಿಸುವ ಮೂಲಕ ಅವರಿಗೆ ಒದಗಿಸಿದ್ದ ಕನಿಷ್ಠ ವರಮಾನದ ಅವಕಾಶವನ್ನು ಕಿತ್ತುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.”