ವೈಡ್ ಆಂಗಲ್
ಬಾ.ನಾ.ಸುಬ್ರಹ್ಮಣ್ಯ
ಕೊನೆಗೂ ರಾಜ್ಯ ಚಲನಚಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನದ ಸುದ್ದಿ. ೨೦೧೮ ಮತ್ತು ೨೦೧೯ರ ಸಾಲಿನ ಪ್ರಶಸ್ತಿಗಳು. ಈ ಬಾರಿ ಅದು ಮೈಸೂರಿನಲ್ಲಿ. ಬೆಂಗಳೂರಿನ ಹೊರಗೆ ಪ್ರಶಸ್ತಿ ಪ್ರದಾನ ಇದು ಮೊದಲೇನಲ್ಲ. ಬಿಜಾಪುರ, ಶಿವಮೊಗ್ಗ, ಕೋಲಾರ, ಮಂಡ್ಯ, ಹಾಸನ, ಮಂಡ್ಯ, ಹುಬ್ಬಳ್ಳಿ ಹೀಗೆ ರಾಜಧಾನಿಯ ಹೊರಗೆ ಹಲವು ನಗರಗಳಲ್ಲಿ ಈ ಸಮಾರಂಭ ನಡೆದಿದೆ. ೨೦೧೪ರ ಫೆಬ್ರವರಿ ೨೮ರಂದು ಮೈಸೂರಿನಲ್ಲಿ ಈ ಸಮಾರಂಭ ನಡೆದಿತ್ತು.
ಪ್ರಶಸ್ತಿ ಪ್ರದಾನ ಎಂದೋ ನಡೆಯಬೇಕಾಗಿತ್ತು. ಅದಕ್ಕೆ ಮುಹೂರ್ತ ಕೂಡಿಬಂದಿರಲಿಲ್ಲ. ಕೊನೆಯ ಬಾರಿ ಈ ಪ್ರಶಸ್ತಿ ಪ್ರದಾನ ನಡೆದದ್ದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ. ೨೦೨೨ರ ಏಪ್ರಿಲ್ ೨೪ರಂದು. ೨೦೧೭ರ ಪ್ರಶಸ್ತಿಗಳು. ಡಾ. ರಾಜಕುಮಾರ್ ಜನ್ಮದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಜೊತೆಯಾಗಿ ನಡೆಯಿತು. ಈ ಹಿಂದೆ ಸರ್ಕಾರ ಅಂತಹದೊಂದು ನಿರ್ಧಾರಮಾಡಿದ್ದೂ ಇದೆ. ಪ್ರತಿವರ್ಷ ರಾಜ್ ಜನ್ಮದಿನದಂದೇ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಆಗಬೇಕು ಎನ್ನುವ ನಿರ್ಧಾರ. ಅದು ನಡೆದಿಲ್ಲ ಎನ್ನುವುದು ಬೇರೆ ಮಾತು.
ಹ್ಞಾಂ, ಆ ಪ್ರಶಸ್ತಿ ಪ್ರದಾನ ಆದಾಗ ಮುಖ್ಯಮಂತ್ರಿಗಳಾಗಿದ್ದವರು ಬಸವರಾಜ ಬೊಮ್ಮಾಯಿ ಅವರು. ಅವರ ಅವಽಯಲ್ಲೇ, ಸಹಾಯಧನ ನೀಡುವ ಚಿತ್ರಗಳಸಂಖ್ಯೆಯನ್ನೂ ಗಣನೀಯವಾಗಿ ಏರಿಸಿದರೆನ್ನಿ. ಅದಕ್ಕೂ ಮೊದಲು ಸಹಾಯಧನಕ್ಕೆ ೭೫ರ ಬದಲು ಉತ್ತಮ ಗುಣಮಟ್ಟದ ೧೨೫ ಚಿತ್ರಗಳಿಗೆ ಎಂದು ಇದ್ದ ಆದೇಶವನ್ನು, ಉದ್ಯಮ ಒತ್ತಾಯಮಾಡಿದ ೧೭೫ರ ಬದಲು ೨೦೦ಕ್ಕೇರಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಬಹುಶಃ ೨೦೨೨ರಿಂದ ಇದು ಜಾರಿಗೆ ಬಂದರೂ ಬರಬಹುದು ಎನ್ನುವ ಮಾತು ಒಂದೆಡೆಯಾದರೆ. ಸಹಾಯಧನ ನೀಡುವ ರೀತಿ ಮತ್ತು ಸಂಖ್ಯೆಗಳನ್ನು ಮರುಪರಿಶೀಲಿಸುವ ಯೋಚನೆ ಸರ್ಕಾರಕ್ಕೆ ಇದೆ ಎನ್ನುವ ಮಾತೂ ಕೇಳಿಬರುತ್ತಿದೆ.
ಸಹಾಯಧನದ ಮಾತಿರಲಿ, ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಿಗದಿತ ದಿನವೊಂದನ್ನು ನಿರ್ಧರಿಸುವುದು ಸುಲಭ, ಆದರೆ ಅದನ್ನು ಪಾಲಿಸುವುದು ಕಷ್ಟ ಎನ್ನುವುದು ಈಗ ಸಂಬಂಧಪಟ್ಟವರಿಗೆ ಮನದಟ್ಟಾಗಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಮಾತೆತ್ತಿದರೆ, ನ್ಯಾಯಾಲಯದ ಮೆಟ್ಟಲೇರುವ ಮಂದಿ ಅಲ್ಲೊಬ್ಬರು ಇಲ್ಲೊಬ್ಬರು ಇದ್ದೇ ಇರುತ್ತಾರೆ. ತಮಗಾಗಿ ಅಲ್ಲದಿದ್ದರೂ, ಹಿಂದಿನಿಂದ ಅಂತಹವರನ್ನು ಉತ್ತೇಜಿಸುವ ಮಂದಿ ಈ ರಂಗದಲ್ಲಿ ಕಡಿಮೆ ಏನಲ್ಲ.
೨೦೧೮ರ ಸಾಲಿನ ಪ್ರಶಸ್ತಿ ಆಯ್ಕೆ ಆಗಿದ್ದರೂ ಅದನ್ನು ಪ್ರಶ್ನಿಸಲಾಗಿತ್ತು. ಆಯ್ಕೆಯ ವೇಳೆ ಆಗಿದೆ ಎನ್ನಲಾದ ಸ್ವಜನಪಕ್ಷಪಾತ, ನಿಯಮ ಮೀರಿದ ಆಯ್ಕೆದಾರರ ಆಯ್ಕೆ ಇವುಗಳನ್ನು ಪ್ರಶ್ನಿಸಲಾಗಿತ್ತು. ಕೊನೆಗೆ ನ್ಯಾಯಾಲಯದ ತೀರ್ಮಾನಕ್ಕೆ ಮೊದಲೇ ಸಂಬಂಧಪಟ್ಟವರ ಮನವೊಲಿಸಿ ಕೇಸನ್ನು ವಾಪಸ್ ಪಡೆಯುವಂತೆ ಮಾಡುವಲ್ಲಿ ಸಂಬಂಧಪಟ್ಟವರು ಯಶಸ್ವಿಯಾದರು ಎನ್ನುತ್ತಿವೆ ಮೂಲಗಳು. ಒಂದು ವೇಳೆ ದೂರು ನೀಡಿದವರು ಅದನ್ನು ವಾಪಸ್ ಪಡೆಯುವಂತೆ ಇದ್ದಿದ್ದರೆ, ಹಿಂದೊಮ್ಮೆ ಆದಂತೆ, ಸರ್ಕಾರ, ಆ ನಿರ್ಧಾರವನ್ನು ಬದಲಿಸಬೇಕಾಗುವ ಸಂಭವ ಬರುತ್ತಿತ್ತು ಎನ್ನುವುದು ಅಲ್ಲಿ ಕೇಳಿಬಂದ ಮಾತು. ಆಗ ಸರ್ಕಾರವೇ, ಆಯ್ಕೆ ಸಮಿತಿಯ ಶಿಫಾರಸನ್ನು ರದ್ದುಮಾಡಿ, ಬೇರೊಂದು ಆಯ್ಕೆ ಸಮಿತಿ ರಚಿಸಿ, ಆಯ್ಕೆ ಮಾಡುವುದಾಗಿ ನ್ಯಾಯಾಲಯಕ್ಕೆ ಹೇಳಿತ್ತು, ಅದರಂತೆ ನಡೆದಿತ್ತು.
೨೦೧೯, ೨೦೨೦, ೨೦೨೧ರ ಸಾಲಿನ ವಾರ್ಷಿಕ ಪ್ರಶಸ್ತಿ ಆಯ್ಕೆ ಮತ್ತು ಸಹಾಯಧನ ನೀಡಲು ಗುಣಮಟ್ಟದ ಚಿತ್ರಗಳ ಆಯ್ಕೆಗಾಗಿ ೨೦೨೪ರ ಜನವರಿ ತಿಂಗಳ ಕೊನೆಯಲ್ಲಿ ಸರ್ಕಾರ ಸಮಿತಿಗಳನ್ನು ನೇಮಿಸಿತು. ಆದರೆ ಅದನ್ನು ಪ್ರಶ್ನಿಸಿ, ನ್ಯಾಯಾಲಯಕ್ಕೆ ಹೋದ ಪ್ರಸಂಗವೂ ಇತ್ತು. ಆ ಕೇಸು ರದ್ದಾದ ನಂತರ ೨೦೧೯ರ ಸಾಲಿನ ಪ್ರಶಸ್ತಿ ಮತ್ತು ಸಹಾಯಧನ ಆಯ್ಕೆಗಾಗಿ ಚಿತ್ರಗಳ ವೀಕ್ಷಣೆಯನ್ನು ೨೦೨೪ರ ಆಗಸ್ಟ್ ತಿಂಗಳಿನಲ್ಲಿ ಆರಂಭಿಸಲಾಯಿತು. ಇದೀಗ ೨೦೧೯, ೨೦೨೦ ಮತ್ತು ೨೦೨೧ನೇ ಸಾಲಿನ ಪ್ರಶಸ್ತಿ ಪ್ರದಾನ ಮತ್ತು ಸಹಾಯಧನ ಬಿಡುಗಡೆ.
೨೦೧೯ರ ಸಾಲಿನ ಪ್ರಶಸ್ತಿಗಳನ್ನು ೨೦೧೮ರ ಜೊತೆ ಮೈಸೂರಿನಲ್ಲಿ ಪ್ರದಾನ ಮಾಡಲು ಸಿದ್ಧತೆಗಳು ನಡೆದ ವಿವರವನ್ನು ಅಲ್ಲಿ ಜಿಲ್ಲಾಡಳಿತ ತಿಳಿಸಿದೆ. ಸಾಮಾನ್ಯವಾಗಿ ರಾಜಧಾನಿಯ ಹೊರಗೆ ಈ ಕಾರ್ಯಕ್ರಮ ನಡೆದಾಗ, ಉದ್ಯಮದ ಪ್ರಮುಖರು, ಮಾಧ್ಯಮಗಳ ಸದಸ್ಯರನ್ನು ಪ್ರಶಸ್ತಿ ಪುರಸ್ಕೃತರೊಂದಿಗೆ ಕರೆದುಕೊಂಡು ಹೋಗುವ ವಾಡಿಕೆ ಇದೆ. ೨೦೧೯ರ ಸಾಧಕರ ಆಯ್ಕೆಯ ವಿವರ ಈ ಅಂಕಣ ಬರೆಯುವವರೆಗೆ ಹೊರಬಿದ್ದರಲಿಲ್ಲ. ೨೦೧೮ರ ಸಾಲಿನಲ್ಲಿ, ರಾಜಕುಮಾರ್ ಪ್ರಶಸ್ತಿಗೆ ಹಿರಿಯ ನಟ ಶ್ರೀನಿವಾಸ ಮೂರ್ತಿ, ಕಣಗಾಲ್ ಪುಟ್ಟಣ್ಣ ಪ್ರಶಸ್ತಿಗೆ ನಿರ್ದೇಶಕ ಪಿ.ಶೇಷಾದ್ರಿ ಮತ್ತು ವಿಷ್ಣುವರ್ಧನ್ ಪ್ರಶಸ್ತಿಗೆ ಛಾಯಾಗ್ರಾಹಕ ಬಸವರಾಜ್ ಭಾಜನರಾಗಿದ್ದಾರೆ. ವಾರ್ಷಿಕ ಪ್ರಶಸ್ತಿ ಪ್ರದಾನದ ವೇಳೆ ಇದನ್ನೂ ಕೊಡಮಾಡಲಾಗುತ್ತದೆ. ಈಗಾಗಲೇ ಆಯ್ಕೆಯಾದ ೨೦೨೦ ಮತ್ತು ೨೦೨೧ರ ಸಾಲಿನ ಪ್ರಶಸ್ತಿಗಳನ್ನು ಇನ್ನೊಂದು ನಗರದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿದು ಬಂದಿದೆ. ಬಹುತೇಕ, ಮುಂದಿನ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಈ ಕಾರ್ಯಕ್ರಮ ನಡೆದರೂ ನಡೆಯಬಹುದು.
೨೦೨೫ರಲ್ಲಿ ಇನ್ನೆರಡು ತಿಂಗಳುಗಳು ಬಾಕಿ. ೨೦೨೨, ೨೦೨೩ ಮತ್ತು ೨೦೨೪ರ ಸಾಲಿನ ಪ್ರಶಸ್ತಿ ಮತ್ತು ಸಹಾಯಧನ ಆಯ್ಕೆಗಾಗಿ ಸಮಿತಿಗಳ ರಚನೆ ಆಗಬೇಕು. ಅದಕ್ಕೂ ಮೊದಲು ಈ ವರ್ಷಗಳ ಚಿತ್ರಗಳನ್ನು ಅದಕ್ಕಾಗಿ ಅರ್ಜಿ ಸಲ್ಲಿಸಲು ಪ್ರಕಟಣೆ ನೀಡಬೇಕು. ಈಗಾಗಲೇ ಸಹಾಯಧನಕ್ಕೆ ಆಯ್ಕೆಯಾದ ಚಿತ್ರಗಳಲ್ಲಿ ಕೆಲವಕ್ಕಷ್ಟೇ ಅದು ಸಂದಿದ್ದು ಬಹಳಷ್ಟು ಮಂದಿ ನಿರೀಕ್ಷೆಯಲ್ಲಿದ್ದಾರೆ. ಇಲಾಖೆಯಲ್ಲಿ ಕೇಳಲು ಹೋದ ಮಂದಿಗೆ, ಸರ್ಕಾರದತ್ತ ಬೆರಳು ತೋರಿಸುತ್ತಾರಂತೆ!
ಈಗಾಗಲೇ ಸಂದ ಮೂರು ವರ್ಷಗಳ, ಮುಗಿಯುತ್ತಿರುವ ೨೦೨೫ರ ಸಾಲಿನ ಚಿತ್ರಗಳೆಂದರೆ ೬೦೦ರಿಂದ ೮೦೦ ಉತ್ತಮ ಗುಣಮಟ್ಟದ ಚಿತ್ರಗಳಿಗೆ ಸಹಾಯಧನ ನೀಡಬೇಕು. ಅಷ್ಟು ಗುಣಮಟ್ಟದ ಚಿತ್ರಗಳು ಬರುತ್ತಿವೆಯೇ ಎನ್ನುವುದನ್ನು ಸಂಬಂಧಪಟ್ಟವರು ಗಮನಿಸಬೇಕು. ಸಹಾಯಧನಕ್ಕಾಗಿಯೇ ಸುತ್ತಿ ಕಳುಹಿಸುವ ಚಿತ್ರಗಳನ್ನು ದೂರ ಇಡುವ ಕನಿಷ್ಠ ಕೆಲಸವಾದರೂ ಆಗಬೇಕು. ಕಿರುತೆರೆ ಸರಣಿಗಳಂತೆ ಚಲನಚಿತ್ರಗಳ ಹೆಸರಿನಲ್ಲಿ ತಯಾರಾಗುವ ಚಿತ್ರಗಳೇ ಹೆಚ್ಚು. ಸಿನಿಮಾ ಭಾಷೆಯ ಪ್ರಾಥಮಿಕ ಜ್ಞಾನ ಕೂಡ ಇಲ್ಲದ ಮಂದಿಯದೇ ಈಗ ಕಾರುಬಾರು. ಅಲ್ಲೊಂದು ಇಲ್ಲೊಂದು ಅಪವಾದಗಳನ್ನು ಹೊರತುಪಡಿಸಿದರೆ, ಅಂತಹ ಮಂದಿಯ ತಾಳಕ್ಕೆ ತಕ್ಕಂತೆ ಕುಣಿಯುವ ಮಂದಿ ಆಯ್ಕೆ ಸಮಿತಿಯಲ್ಲಿ ಹೇಗೋ ಸೇರಿಕೊಂಡುಬಿಡುತ್ತಾರೆ. ಚಿತ್ರರಂಗಕ್ಕೆ ಉದ್ಯಮದ ಸ್ಥಾನ ನೀಡುವ ನಿರ್ಧಾರದ ಈ ಹೊತ್ತಲ್ಲಿ, ಸಹಾಯಧನದ ಕುರಿತಂತೆ ಕೂಡ ಸರಿಯಾದ ನಿರ್ಧಾರ ಮುಖ್ಯ. ಮಾನ್ಯತೆ ಪಡೆದ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ಚಿತ್ರಗಳಿಗೆ ನೇರ ಸಹಾಯಧನ ಎಂದಿತ್ತು. ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿಗಳ ಚಿತ್ರಗಳಿಗೂ ನೇರ ಸಹಾಯಧನ.
ಬಹುಶಃ ೨೦೨೨ರ ಸಾಲಿನಿಂದ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧೆಯಲ್ಲಿದ್ದ ಚಿತ್ರಗಳಿಗೂ ಈ ನಿಯಮ ಅನ್ವಯವಾಗಬಹುದು. ಹಳೆಯ ರಾಜ್ಯ ಚಲನಚಿತ್ರ ನೀತಿಗೆ ಆಗಾಗ ತಿದ್ದುಪಡಿಗಳು ಆಗುವುದಿದೆ. ಮಾನ್ಯತೆ ಪಡೆದ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ಚಿತ್ರಗಳಿಗೆ ಎನ್ನುವುದರ ಬದಲು, ಈಗ ಅಂತಹ ಚಿತ್ರೋತ್ಸವಗಳಲ್ಲಿ ಸ್ಪರ್ಧೆಯಲ್ಲಿದ್ದ ಚಿತ್ರಗಳಿಗೆ ಮಾತ್ರ ನೇರ ಸಹಾಯಧನ ಎಂದು ತಿದ್ದುಪಡಿ ಮಾಡಲಾಗಿದೆ. ಅಷ್ಟು ಮಾತ್ರವಲ್ಲ, ಅಂತಾರಾಷ್ಟ್ರೀಯ ಸಿನಿಮಾ ನಿರ್ಮಾಪಕರ ಸಂಘಟನೆಗಳ ಒಕ್ಕೂಟ (FIAPF)) ಯಾವ ವಿಭಾಗದ ಮೂಲಕ ಮಾನ್ಯತೆ ನೀಡಿರುತ್ತದೋ ಆ ವಿಭಾಗದಲ್ಲಿ ಸ್ಪರ್ಧೆಯಲ್ಲಿರುವ ಚಿತ್ರಗಳಿಗೆ ಮಾತ್ರ ನೇರ ಸಹಾಯಧನ ಎನ್ನುವ ಇನ್ನೊಂದು ತಿದ್ದುಪಡಿ ಇದೆ.
FIAPF ಈ ನಾಲ್ಕು ವಿಧದ ಚಿತ್ರೋತ್ಸವಗಳಿಗೆ ಮಾನ್ಯತೆ ನೀಡುತ್ತದೆ. ಅಂತಾರಾಷ್ಟ್ರೀಯ ಚಿತ್ರಗಳ ಸ್ಪರ್ಧೆಯ ಚಿತ್ರೋತ್ಸವ, ವಿಶೇಷ ಸ್ಪರ್ಧೆ ಇರುವ ಚಿತ್ರೋತ್ಸವ (ಮೊದಲ ಮತ್ತು ಎರಡನೇ ಚಿತ್ರಗಳ ಸ್ಪರ್ಧೆ, ಮಹಿಳಾ ನಿರ್ದೇಶಕರ ಚಿತ್ರಗಳ ಸ್ಪರ್ಧೆ, ಪ್ರದೇಶ ಸೀಮಿತ ಚಿತ್ರಗಳ ಸ್ಪರ್ಧೆ ಹೀಗೆ), ಸ್ಪರ್ಧಾರಹಿತ ಚಿತ್ರೋತ್ಸವ ಹಾಗೂ ಸಾಕ್ಷ್ಯ ಚಿತ್ರ ಮತ್ತು ಕಿರು ಚಿತ್ರೋತ್ಸವ ಹೀಗೆ. ರಾಜ್ಯದ ತಿದ್ದುಪಡಿಯ ಪ್ರಕಾರ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ವಿಶೇಷ ವಿಭಾಗದ್ದು, ಏಷ್ಯಾ ವಿಭಾಗದ ಚಿತ್ರಗಳ ಸ್ಪರ್ಧೆ ನಮ್ಮದು. ಮಾನ್ಯತೆ ಚಿತ್ರೋತ್ಸವಗಳ ವಿಭಾಗಗಳು, ಇತರ ಚಟುವಟಿಕೆಗಳನ್ನು ಆಧರಿಸಿ ನೀಡುವ ವಿವರಗಳನ್ನು ಅದರ ಜಾಲತಾಣದಲ್ಲಿ ಕಾಣಬಹುದು.
ರಾಜ್ಯ ಚಲನ ಚಿತ್ರ ನೀತಿ -೨೦೧೧ ಪ್ರಕಟವಾಗಿ ೧೪ ವರ್ಷಗಳಾಗಿವೆ. ಅದು ಕೂಡ ಅವಸರದಲ್ಲಿ ಬಂದ ನೀತಿ. ನ್ಯಾಯಾಲಯದ ಮುಂದೆ ಬಂದ ಪ್ರಕರಣವೊಂದರ ಹಿನ್ನೆಲೆಯಲ್ಲಿ ಅದು ಬಂತು ಎನ್ನಲಾಗಿದೆ. ಸಮಗ್ರ ನೀತಿಯೊಂದರ ಅಗತ್ಯ ಈಗ ಇದೆ. ಅದು ಡಿಜಿಟಲ್ ಮಾಧ್ಯಮ ಅದರ ಅಗತ್ಯಗಳು, ಎವಿಜಿಸಿ-ಎಕ್ಸ್‌ಆರ್ ನೀತಿ, ಚಲನಚಿತ್ರ ಪ್ರವಾಸೋದ್ಯಮ ನೀತಿ, ಚಲನಚಿತ್ರ ಶಿಕ್ಷಣ ಇವೆಲ್ಲ ಒಳಗೊಂಡ ಸಮಗ್ರ ನೀತಿಯಾಗಬೇಕು. ಮೈಸೂರಿನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಈ ಕುರಿತ ಚಿಂತನೆಗೂ ನಾಂದಿ ಹಾಡುವಂತಾಗಲಿ.
” ರಾಜ್ಯ ಚಲನಚಿತ್ರ ನೀತಿಗೆ ಆಗಾಗ ತಿದ್ದುಪಡಿಗಳು ಆಗುವುದಿದೆ. ಮಾನ್ಯತೆ ಪಡೆದ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ಚಿತ್ರಗಳಿಗೆ ಎನ್ನುವುದರ ಬದಲು, ಈಗ ಅಂತಹ ಚಿತ್ರೋತ್ಸವಗಳಲ್ಲಿ ಸ್ಪರ್ಧೆಯಲ್ಲಿದ್ದ ಚಿತ್ರಗಳಿಗೆ ಮಾತ್ರ ನೇರ ಸಹಾಯಧನ ಎಂದು ತಿದ್ದುಪಡಿ ಮಾಡಲಾಗಿದೆ”





