Light
Dark

ಮತ್ತೊಂದು ಬೃಹತ್ ಸಂಘರ್ಷದತ್ತ ಪ್ಯಾಲೆಸ್ಟೇನ್- ಇಸ್ರೇಲ್ ಬಿಕ್ಕಟ್ಟು

ಈಜಿಪ್ಟ್, ಜೋರ್ಡಾನ್, ಸೌದಿ ಅರೇಬಿಯಾ, ಯುಎಇ, ಪ್ಯಾಲೆಸ್ಟೇನ್ ಮೇಲಿನ ಇಸ್ರೇಲ್ ದಾಳಿ ಖಂಡಿಸುತ್ತಲೇ ಆ ದೇಶದ ಜತೆ ವ್ಯಾಪಾರ ವಹಿವಾಟು ನಡೆಸುತ್ತಿವೆ! ಮತ್ತೊಂದು ಬೃಹತ್ ಸಂಘರ್ಷದತ್ತ ಪ್ಯಾಲೆಸ್ಟೇನ್- ಇಸ್ರೇಲ್ ಬಿಕ್ಕಟ್ಟು

 

-ಡಿವಿ ರಾಜಶೇಖರ್‌, ಹಿರಿಯ ಪತ್ರಕರ್ತ

ಪ್ಯಾಲೆಸ್ಟೇನ್ ಮತ್ತು ಇಸ್ರೇಲ್ ನಡುವೆ ಮತ್ತೊಮ್ಮೆ ದೊಡ್ಡ ಪ್ರಮಾಣದ ಸಂಘರ್ಷ ಸಿಡಿಯುವ ಸಾಧ್ಯತೆಗಳು ಕಾಣುತ್ತಿವೆ. ಜರೂಸಲೆಂನಲ್ಲಿರುವ ಮುಸ್ಲಿಮರ ಪ್ರವಿತ್ರ ಸ್ಥಳ ಅಲ್ ಅಕ್ಸಾ ಮಸೀದಿಯ ಆವರಣದೊಳಕ್ಕೆ ಕಳೆದ ವರ್ಷ ಇಸ್ರೇಲ್ ಸೈನಿಕರು ಪ್ರವೇಶಿದ ಘಟನೆಯಿಂದ ಆರಂಭವಾದ ಸಂಘರ್ಷ ಈವರೆಗೆ ನಿಂತಿಲ್ಲ. ಈವರೆಗೆ ಅಲ್ ಜಜೀರಾ ನ್ಯೂಸ್ ಚಾನಲ್‌ನ ಹಿರಿಯ ವರದಿಗಾರಳಾದ ಶೆರೀನ್ ಅಬು ಅಕಲಾಹ್ ಸೇರಿದಂತೆ ನೂರಾರು ಮಂದಿ ಇಸ್ರೇಲ್ ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ. ಇನ್ನು ಬಂಧನ ಮಾಡಿದ ಪ್ಯಾಲೆಸ್ಟೇನ್ ಯುವಕರ ಸಂಖ್ಯೆ ಲೆಕ್ಕವಿಲ್ಲ.

ಇಸ್ರೇಲ್‌ನಲ್ಲಿ ರಾಜಕೀಯ ಅಸ್ಥಿರತೆ ಕೊನೆಗೊಳ್ಳುವ ಸಾಧ್ಯತೆಯೂ ಕಾಣುತ್ತಿಲ್ಲ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಅಧಿಕಾರದಲ್ಲಿದ್ದ ನೆತಾನ್ಯಹು ಮಾಡಿದ ರಾಜಕೀಯ ಸರ್ಕಸ್ ಸಫಲವಾಗಲಿಲ್ಲ. ಕೊನೆಗೂ ಏಳು ಪಕ್ಷಗಳು ಒಂದು ಒಪ್ಪಂದಕ್ಕೆ ಬಂದು ನೆತಾನ್ಯಹು ಸರ್ಕಾರ ಅಧಿಕಾರದಿಂದ ಹೊರಹೋಗುವಂತೆ ಮಾಡಲಾಗಿದೆ. ನಫ್ತಾಲಿ ಬೆನೆಟ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಎರಡುವರೆ ವರ್ಷಗಳ ನಂತರ ಅವರು ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಮೊತ್ತೊಂದು ಪಕ್ಷದ ನಾಯಕರಿಗೆ ಅಧಿಕಾರ ಬಿಟ್ಟುಕೊಡಬೇಕಾಗಿದೆ.

ಈ ಎಲ್ಲ ಸರ್ಕಸ್ ನಡುವೆ ಸಂಘರ್ಷ ಸಿಡಿದಿದೆ. ಪ್ರಸ್ತುತ ಪ್ರಧಾನಿ ಬೆನಟ್ ಅವರು ಬಲಪಂಥೀಯ ಪಕ್ಷದ ನಾಯಕರಾಗಿದ್ದು ಪ್ಯಾಲೆಸ್ಟೇನ್ ಸಮಸ್ಯೆ ಬಗ್ಗೆ ಕಟುವಾದ ನಿಲುವನ್ನು ಉಳ್ಳವರಾಗಿದ್ದಾರೆ. ಪ್ಯಾಲೆಸ್ಟೇನ್ ಮೇಲಿನ ಸೇನಾ ದಾಳಿಯನ್ನು ಸಮರ್ಥಿಸುತ್ತ ಬಂದಿದ್ದಾರೆ. ಹಿಂದಿನ ಪ್ರಧಾನಿ ನೆತಾನ್ಯಹು ಎರಡು ದೇಶ ರಚನೆ ವಿಚಾರದಲ್ಲಿ ಸ್ವಲ್ಪ ಮೃದು ಧೋರಣೆ ಉಳ್ಳವರಾಗಿದ್ದರು. ಆದರೆ ಈಗಿನ ಪ್ರಧಾನಿ ಬೆನೆಟ್ ಕಟುವಾದ ಧೋರಣೆ ಉಳ್ಳವರಾಗಿದ್ದಾರೆ. ಪ್ಯಾಲೆಸ್ಟೇನ್ ದೇಶ ರಚನೆ ಸಲಹೆಯನ್ನು ಇವರು ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ಅಂತಾರಾಷ್ಟ್ರೀಯ ಪ್ರಯತ್ನಗಳಿಗೂ ಬೆಲೆಕೊಟ್ಟಿಲ್ಲ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾರೆ. ಈ ಕಾರಣದಿಂದ ಪಾಲೆಸ್ಟೇನ್ ಸಮಸ್ಯೆ ಮೊತ್ತೊಂದು ದೊಡ್ಡ ಸಂಘರ್ಷದತ್ತ ಹೊರಳಿದಂತೆ ಕಾಣುತ್ತಿದೆ. ಗಾಜಾ ಪಟ್ಟಿ ಪ್ರದೇಶವೊಂದರಲ್ಲಿಯೇ ಈಳೆದ ಜೂನ್ ತಿಂಗಳಿಂದ ಈ ತಿಂಗಳ ವರೆಗೆ ೧೨೦ ಪ್ಯಾಲೆಸ್ಟೇನ್ ಜನರು ಇಸ್ರೇಲ್ ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಸ್ವತಂತ್ರ ಸಮೀಕ್ಷಾ ವರದಿಯೊಂದು ತಿಳಿಸಿದೆ. ಪ್ಯಾಲೆಸ್ಟೇನ್ ಜನರ ಉಗ್ರವಾದಿ ಹಮಾಸ್ ಸಂಘಟನೆಯ ಉಗ್ರರು ಕೂಡಾ ೪ ಸಾವಿರ ರಾಕೆಟ್ ದಾಳಿಗಳನ್ನು ಇಸ್ರೇಲ್ ಮೇಲೆ ನಡೆಸಿದ್ದಾರೆ. ಈ ದಾಳಿಗಳಲ್ಲಿ ೧೯ ಇಸ್ರೇಲ್ ಜನರು ಸತ್ತಿದ್ದಾರೆ. ಪತೀಕಾರವಾಗಿ ಇಸ್ರೇಲ್ ಪ್ಯಾಲೆಸ್ಟೇನ್ ಪ್ರದೇಶಗಳ ಮೇಲೆ ಆರ್ಥಿಕ ದಿಗ್ಬಂಧನ ಹೇರಿದೆ.

ಗಾಜಾ ಪಟ್ಟಿ ಪ್ರದೇಶಾಡಳಿತ ಹಮಾಸ್ ಉಗ್ರವಾದಿಗಳ ಕೈಯ್ಯಲ್ಲಿದೆ. ಪಶ್ಚಿಮ ದಂಡೆ ಪ್ರದೇಶ ಮಹಮ್ಮದ್ ಅಬ್ಬಾಸ್ ನೇತೃತ್ವದ ಉದಾರವಾದಿ ಫತಾ ಗುಂಪಿನ ನಿಯಂತ್ರಣದಲ್ಲಿದೆ. ಈ ಎರಡೂ ಗುಂಪುಗಳ ನಡುವೆ ಅಲ್ಪ ಸ್ವಲ್ಪ ಹೊಂದಾಣಿಕೆ ಸಾಧಿತವಾಗಿದ್ದರೂ ನೀತಿಗಳು ಭಿನ್ನವಾಗಿವೆ. ಹಮಾಸ್ ಗುಂಪು ಇಸ್ರೇಲ್ ಅಸ್ತಿತ್ವವನ್ನೇ ಒಪ್ಪುವುದಿಲ್ಲ. ಇಸ್ರೇಲ್ ನಾಶ ಅದರ ಗುರಿ. ಆದರೆ ಇಸ್ರೇಲ್ ಅಸ್ತಿತ್ವವನ್ನು ಫತಾ ಒಪ್ಪುತ್ತದೆ. ಸ್ವತಂತ್ರ ಪ್ಯಾಲೆಸ್ಟೇನ್ ದೇಶ ರಚನೆ ಅದರ ಗುರಿ. ಮಾತುಕತೆಯ ಮೂಲಕ ಈ ಗುರಿ ಸಾಧಿಸಲು ಫತಾ ಸಂಘಟನೆ ಬದ್ಧವಾಗಿದೆ. ಎರಡೂ ಸಂಘಟನೆಗಳು ಭಿನ್ನ ನಿಲುವು ತಳೆದಿರುವುದು ಇಸ್ರೇಲ್‌ಗೆ ಅನುಕೂಲವಾಗಿದೆ.

ಪ್ಯಾಲೆಸ್ಟೇನ್ ಜನರು ಮುಖ್ಯವಾಗಿ ಬೇರೆ ದೇಶಗಳ ನೆರವಿನಿಂದ ಜೀವನ ಸಾಗಿಸುತ್ತಿದ್ದಾರೆ. ನೆರವಿನ ಹಣ, ಆಹಾರ ಧಾನ್ಯ ಪಡೆಯಲು ಪರದಾಡುವಂಥ ದಿಗ್ಬಂಧನವನ್ನು ಇಸ್ರೇಲ್ ಹೇರಿದೆ ಎಂದು ಪತ್ಯಕ್ಷ ವರದಿಗಳು ತಿಳಿಸಿವೆ. ಗಾಜಾ ಪಟ್ಟಿ ಪ್ರದೇಶದಿಂದ ಪಶ್ಚಿಮ ದಂಡೆ ಪ್ರದೇಶಕ್ಕೆ ಹೋಗಲು ಇರುವ ದಾರಿಯ ಗೇಟನ್ನು ಮುಚ್ಚಲಾಗಿದ್ದು ಉದ್ಯೋಗ ಅರಸಿ ಹೋಗುವ ಪ್ಯಾಲೆಸ್ಟೇನ್ ಜನರಿಗೆ ಮತ್ತು ಹೊರಗಿನಿಂದ ವೈದ್ಯಕೀಯ, ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ತರುವವರಿಗೆ ತೊಂದರೆಯಾಗಿದೆ. ಶಾಂತಿಮಾತುಕತೆ ಪರವಾಗಿರುವ ಮಹಮ್ಮದ್ ಅಬ್ಬಾಸ್ ನಾಯಕತ್ವಕ್ಕೆ ಬೆಂಬಲ ಹೆಚ್ಚಿರುವ ಪಶ್ಚಿಮದಂಡೆ ಪ್ರದೇಶದ ಮೇಲೂ ಇಸ್ರೇಲ್ ದಾಳಿ ನಡೆಸಿ ಹಲವು ಜನರನ್ನು ಬಂಧಿಸಿದೆ.

ಕರೋನಾ ಪಿಡುಗಿನಿಂದ ಈಗಾಗಲೇ ವಿಶ್ವ ತತ್ತರಿಸಿದೆ. ಎಲ್ಲ ದೇಶಗಳ ಆರ್ಥಿಕ ಸ್ಥಿತಿ ಕೆಟ್ಟಿದೆ. ಇಂಥ ಸಂದರ್ಭದಲ್ಲಿ ಯುಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಸಿಡಿದು ಎಲ್ಲ ದೇಶಗಳ ಗಮನ ಅತ್ತ ತಿರುಗಿದೆ. ಈಗ ಯಾವ ದೇಶವೂ ಪ್ಯಾಲೆಸ್ಟೇನ್ ಸಮಸ್ಯೆಯನ್ನು ಮುಖ್ಯವಾಗಿ ಭಾವಿಸುತ್ತಿಲ್ಲ. ಹೊಸ ಸನ್ನಿವೇಶ ಬಳಸಿಕೊಂಡು ಇಸ್ರೇಲ್ ಸೇನೆ, ಪ್ಯಾಲೆಸ್ಟೇನ್ ಜನರ ಮೇಲೆ ದಾಳಿಯನ್ನು ಹೆಚ್ಚಿಸಿದೆ. ಹೆಚ್ಚು ಹೆಚ್ಚು ಪ್ಯಾಲೆಸೇನ್ ಪ್ರದೇಶಗಳನ್ನು ಅತಿಕ್ರಮಿಸಿಕೊಳ್ಳುತ್ತಿದೆ. ಪ್ಯಾಲೆಸ್ಟೇನ್ ಜನರನ್ನು ಒಕ್ಕಲೆಬ್ಬಿಸಿ ಆ ಜಾಗದಲ್ಲಿ ಯಹೂದಿಗಳಿಗೆ ನೆಲೆವಾಸ ಕಲ್ಪಿಸುತ್ತಿದೆ. ಯಾವ ದೇಶಗಳು ಹಲವು ದಶಕಗಳ ಹಿಂದೆ ಪ್ಯಾಲೆಸ್ಟೇನ್ ಜನರ ಪರವಾಗಿ ನಿಂತು ಇಸ್ರೇಲ್ ವಿರುದ್ಧ ಯುದ್ಧ ಹೂಡಿದ್ದವೋ (ಈ ಯುದ್ಧದಲ್ಲಿ ಮುಸ್ಲಿಮ್ ದೇಶಗಳು ಹೀನಾಯ ಸೋಲು ಕಂಡವು) ಆ ದೇಶಗಳೆಲ್ಲಾ ಈಗ ಇಸ್ರೇಲ್ ಜೊತೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳುತ್ತಿವೆ. ಮೊದಲು ಈಜಿಪ್ಟ್, ನಂತರ ಜೋರ್ಡಾನ್, ಸೌದಿ ಅರೇಬಿಯಾ ಇದೀಗ ಯುಎಇ. ಪ್ಯಾಲೆಸ್ಟೇನ್ ಜನರ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸುತ್ತಲೇ ಅದೇ ದೇಶದ ಜೊತೆ ಯಾವುದೇ ಸಮಸ್ಯೆಯಿಲ್ಲದೆ ವ್ಯಾಪಾರ ವಹಿವಾಟು ನಡೆಸುತ್ತ ಬಂದಿವೆ. ಅರಬ್ ದೇಶಗಳ ಈ ಎರಡು ಮುಖವೇ ಈಗ ಪ್ಯಾಲೆಸ್ಟೇನ್ ಸಮಸ್ಯೆ ಮೂಲೆಗುಂಪಾಗಲು ಕಾರಣವಾಗಿದೆ. ಜೊತೆಗೆ ಪ್ಯಾಲೆಸ್ಟೇನ್ ಜನರಲ್ಲಿ ಒಗ್ಗಟ್ಟಿಲ್ಲ.

ಗಾಜಾ ಪಟ್ಟಿ ಪ್ರದೇಶಾಡಳಿತ ಹಮಾಸ್ ಉಗ್ರವಾದಿಗಳ ಕೈಯ್ಯಲ್ಲಿದೆ. ಪಶ್ಚಿಮ ದಂಡೆ ಪ್ರದೇಶ ಮಹಮ್ಮದ್ ಅಬ್ಬಾಸ್ ನೇತೃತ್ವದ ಉದಾರವಾದಿ ಫತಾ ಗುಂಪಿನ ನಿಯಂತ್ರಣದಲ್ಲಿದೆ. ಈ ಎರಡೂ ಗುಂಪುಗಳ ನಡುವೆ ಅಲ್ಪ ಸ್ವಲ್ಪ ಹೊಂದಾಣಿಕೆ ಸಾಧಿತವಾಗಿದ್ದರೂ ನೀತಿಗಳು ಭಿನ್ನವಾಗಿವೆ. ಹಮಾಸ್ ಗುಂಪು ಇಸ್ರೇಲ್ ಅಸ್ತಿತ್ವವನ್ನೇ ಒಪ್ಪುವುದಿಲ್ಲ. ಇಸ್ರೇಲ್ ನಾಶ ಅದರ ಗುರಿ. ಆದರೆ ಇಸ್ರೇಲ್ ಅಸ್ತಿತ್ವವನ್ನು ಫತಾ ಒಪ್ಪುತ್ತದೆ. ಸ್ವತಂತ್ರ ಪ್ಯಾಲೆಸ್ಟೇನ್ ದೇಶ ರಚನೆ ಅದರ ಗುರಿ. ಮಾತುಕತೆಯ ಮೂಲಕ ಈ ಗುರಿ ಸಾಧಿಸಲು ಫತಾ ಸಂಘಟನೆ ಬದ್ಧವಾಗಿದೆ. ಎರಡೂ ಸಂಘಟನೆಗಳು ಭಿನ್ನ ನಿಲುವು ತಳೆದಿರುವುದು ಇಸ್ರೇಲ್‌ಗೆ ಅನುಕೂಲವಾಗಿದೆ.

ಈ ಸಮಸ್ಯೆ ಬಗೆಹರಿಸುವ ಪ್ರಯತ್ನಗಳು ಸಾಕಷ್ಟು ನಡೆದಿವೆ. ಪ್ಯಾಲೆಸ್ಟೇನ್ ಜನರ ಜನಪ್ರಿಯ ನಾಯಕರಾಗಿದ್ದ ಯಾಸಾರ್ ಅರಾಫತ್ ಬದುಕಿದ್ದಾಗ ಈ ಸಮಸ್ಯೆ ಒಂದು ಪರಿಹಾರ ಹುಡಕಲಾಗಿತ್ತು. ಒಪ್ಪಂದವೂ ಆಗಿತ್ತು. ಈ ಒಪ್ಪಂದದ ಪ್ರಕಾರ ಪ್ಯಾಲೆಸ್ಟೇನ್ ಸಂಘಟನೆ ಇಸ್ರೇಲ್‌ಗೆ ಮಾನ್ಯತೆ ನೀಡಬೇಕಿತ್ತು. ಇದಕ್ಕೆ ಪ್ರತಿಯಾಗಿ ಪ್ರತ್ಯೇಕ ಪ್ಯಾಲೆಸ್ಟೇನ್ ದೇಶ ರಚನೆಗೆ ಇಸ್ರೇಲ್ ಒಪ್ಪಿಗೆ ನೀಡಬೇಕಿತ್ತು. ಆದರೆ ಪ್ಯಾಲೆಸ್ಟೇನ್ ಪ್ರದೇಶದ ಗಡಿ ಗುರುತಿಸುವ ವಿಚಾರದಲ್ಲಿ ಒಮ್ಮತ ಮೂಡಲಿಲ್ಲ. ಜೊತೆಗೆ ಜರೂಸಲೆಂ ನಗರ ಹೊಸ ದೇಶದ ರಾಜಧಾನಿ ಎಂದು ಪ್ಯಾಲೆಸ್ಟೇನ್ ಸಂಘಟನೆ ಪಟ್ಟು ಹಿಡಿಯಿತು. ಆದರೆ ಅದನ್ನು ಬಿಟ್ಟುಕೊಡಲು ಇಸ್ರೇಲ್ ಒಪ್ಪಲಿಲ್ಲ.

ಜರೂಸಲೆಂ ನಗರ ಇಸ್ಲಾಂ ಅನುಯಾಯಿಗಳಿಗಷ್ಟೇ ಅಲ್ಲ, ಕ್ರೈಸ್ತ ಮತ್ತು ಯಹೂದಿಗಳಿಗೂ ಪವಿತ್ರ ಸ್ಥಳ. ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ ಮತ್ತು ಪುನರುತ್ಥಾನವಾದ ಸ್ಥಳ ಇಲ್ಲಿದೆ. ಪ್ರವಾದಿ ಮೊಹಮದ್ ಸ್ವರ್ಗಕ್ಕೆ ಹೋದ ಸ್ಥಳ ಮತ್ತು ಯಹೂದಿಗಳ ‘ಅಳುವ ಗೋಡೆ’ ಮತ್ತು ಟೆಂಪಲ್ ಮೌಂಟ್ ಇಲ್ಲಿಯೇ ಇದೆ. ಹೀಗೆ ಮೂರೂ ಧರ್ಮದವರಿಗೂ ಈ ಸ್ಥಳ ಪವಿತ್ರವಾಗಿರುವುದರಿಂದ ಯಾರೊಬ್ಬರಿಗೆ ಇದನ್ನು ಕೊಟ್ಟರೂ ಶಾಂತಿ ಸ್ಥಾಪಿತವಾಗಿವುದಿಲ್ಲ ಎಂಬ ಅಭಿಪ್ರಾಯ ಅಂತಾರಾಷ್ಟ್ರೀಯ ತಜ್ಞರದಾಗಿದೆ. ಅದು ತನ್ನ ದೇಶದ ರಾಜಧಾನಿ ಎಂದು ಇಸ್ರೇಲ್ ಕೂಡಾ ಪಟ್ಟು ಹಿಡಿದಿದೆ. ಹೀಗಾಗಿ ಸಮಸ್ಯೆ ಉಳಿದುಕೊಂಡು ಬಂದಿದೆ.

ಈ ವಿಚಾರದಲ್ಲಿ ವಿಶ್ವ ಸಂಸ್ಥೆ ಹಲವು ಬಾರಿ ಸಂಧಾನ ನಡೆಸಿ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಅಮೆರಿಕದ ನಾಯಕರು, ಯೂರೋಪಿನ ನಾಯಕರು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದೇನೇ ಇದ್ದರೂ ಮಿಲಿಟರಿ ಬಲದಿಂದ ಇಸ್ರೇಲ್ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಪ್ಯಾಲೆಸ್ಟೇನ್ ಜನರ ಹೆಣಗಳ ಮೇಲೆ ದೇಶ ಕಟ್ಟಲು ಸಾಧ್ಯವಿಲ್ಲ ಎನ್ನುವುದನ್ನು ಇಸ್ರೇಲ್ ಮನವರಿಕೆ ಮಾಡಿಕೊಳ್ಳಬೇಕು. ಶಾಂತಿ ಮತ್ತು ನೆಮ್ಮದಿಯಿಂದ ಬಾಳಲು ಮುಂದಿನ ಜನಾಂಗಕ್ಕೆ ಸಾಧ್ಯವಾಗಬೇಕು. ಅಂಥ ಪರಿಸ್ಥಿತಿ ಕಲ್ಪಿಸಲು ಎರಡೂ ಕಡೆಯವರು ಮುಂದಾಗಬೇಕು.