ಜಿ.ಪಿ.ಬಸವರಾಜು
ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಸಿನಿಮ – ಹೀಗೆ ಸೃಜನಶೀಲ ಕಲೆಯ ಯಾವುದೇ ಪ್ರಕಾರದಲ್ಲಾಗಲಿ, ಗಂಭೀರವಾಗಿ ತೊಡಗುವ ಕಲೆ ನಿರಂತರ ಹುಡುಕಾಟದಲ್ಲಿಯೇ ಇರುತ್ತದೆ. ಇಂಥ ಹುಡುಕಾಟದಲ್ಲಿ ಸಿಕ್ಕುವ ಸತ್ಯದ ತುಣುಕುಗಳು ಸಮಾಜದ ಮುನ್ನಡೆಗೆ ಬೆಳಕನ್ನು ನೀಡುತ್ತವೆ. ಮೊನ್ನೆ ರಂಗಾಯಣದಲ್ಲಿ ನೋಟಕ್ಕೆ ಸಿಕ್ಕ ಹೊಸ ನಾಟಕ- ಕಾಣೆ ಆದವರು- ಇಂಥ ಹುಡುಕಾಟವನ್ನೇ ಮುಖ್ಯ ಕೇಂದ್ರವಾಗಿ ಮಾಡಿಕೊಂಡಿತ್ತು.
ಆಧುನಿಕ ಬದುಕಿನಲ್ಲಿ ತಮ್ಮನ್ನು ತಾವೇ ಕಳೆದುಕೊಂಡ ಎಲ್ಲರ ಹುಡುಕಾಟ ಇದಾದರೂ, ಈ ನಾಟಕದ ಬಿಡುಬೆಳಕು ಬಿದ್ದದ್ದು ಹೆಣ್ಣಿನ ಹುಡುಕಾಟದ ಮೇಲೇ. ಕಳೆದುಹೋದ ಮಗಳಿಗಾಗಿ ತಾಯಿ ಹುಡುಕುವುದು, ಹಾಗೆಯೇ ತಂಗಿಗಾಗಿ, ಗೆಳತಿಗಾಗಿ, ಆತ್ಮೀಯ ಜೀವಕ್ಕಾಗಿ ಇತರರು ನಡೆಸುವ ನಿರಂತರ ಹುಡುಕಾಟ; ಅಡುಗೆ ಮನೆಯಲ್ಲಿ, ಗಿಜಿಗುಡುವ ಬೀದಿಯಲ್ಲಿ, ನಿತ್ಯದ ನೂರು ತರಹದ ದುಡಿಮೆಯಲ್ಲಿ, ಯಾಂತ್ರಿಕ ಬದುಕಿನಲ್ಲಿ ಸಿಕ್ಕ ಮಹಿಳೆ ತನ್ನ ಅಸ್ಮಿತೆಗಾಗಿ ನಡೆಸುವ ಹುಡುಕಾಟ; ಕಿವಿಗೆ ಬಂದು ಅಪ್ಪಳಿಸುವ ನೂರು ಸದ್ದುಗಳಲ್ಲಿ ತನ್ನ ದನಿಯನ್ನು ತಾನೇ ಕಂಡುಕೊಳ್ಳುವ ಹುಡುಕಾಟ- ಹೀಗೆ ನೂರು ಬಗೆಯ ಹುಡುಕಾಟಗಳ ಮೇಲೆ ಬೆಳಕು ಚೆಲ್ಲುವ ನಾಟಕ ಇದು. ತುಣುಕು ತುಣುಕು ನೋಟಗಳನ್ನು ಹಿಡಿದು ಕಟ್ಟಿದ್ದು ಜೀವಗಳನ್ನು ಬೇಯಿಸುವ ಜ್ವಲಂತ ಸಮಸ್ಯೆಗಳ, ಸವಾಲುಗಳ ಸೂತ್ರ. ಈ ಕಾರಣದಿಂದಾಗಿಯೇ ಈ ನಾಟಕವನ್ನು ಸಲೀಸಾಗಿ ನೋಡಲು ಸಾಧ್ಯವಿಲ್ಲ; ಆರಾಮಾಗಿ ಮೈಮರೆಯಲೂ ಸಾಧ್ಯವಿಲ್ಲ. ನಾಟಕ ಎತ್ತುವ ಸಮಸ್ಯೆಗಳಿಗೆ ತಲೆಕೊಟ್ಟು, ಕಲಾವಿದರ ಸಂಭಾಷಣೆಯಲ್ಲಿ ಬೆರೆತು, ನಾಟಕದ ಒಟ್ಟು ಹುಡುಕಾಟದಲ್ಲಿ ನೋಟಕ ತಾನೂ ಭಾಗಿಯಾಗಿ ‘ನೋಡಬೇಕಾದ’ ನಾಟಕ ಇದು.
ಸುಮಾರು ಒಂದೂ ಮುಕ್ಕಾಲು ಗಂಟೆ ನೋಟಕರನ್ನು ಅಲ್ಲಾಡದಂತೆ ಹಿಡಿದಿಟ್ಟ ಈ ನಾಟಕ ಅತ್ಯಂತ ಗಂಭೀರವೂ, ಅರ್ಥಪೂರ್ಣವೂ, ಸೃಜನಶೀಲವೂ ಆಗಿತ್ತು. ಮೂರು ದಶಕಗಳಿಗೂ ಮಿಕ್ಕಿದ ಅನುಭವ ಶ್ರೀಮಂತಿಕೆಯನ್ನು ಪಡೆದುಕೊಂಡಿರುವ ರಂಗಾಯಣದ ಮೂವರು ಕಲಾವಿದೆಯರು (ಗೀತಾ ಮೊಂಟಡ್ಕ, ಕೆ.ಆರ್.ನಂದಿನಿ ಮತ್ತು ಬಿ.ಎನ್. ಶಶಿಕಲಾ) ತಮ್ಮ ಪ್ರತಿಭೆ, ಜಾಣ್ಮೆ, ಅಭಿನಯ ಕೌಶಲ ಮತ್ತು ಕಲೆಗಾರಿಕೆಗಳಿಂದ ಈ ನಾಟಕಕ್ಕೆ ಜೀವ ತುಂಬಿದರು.
ಹೊಸ ತಲೆಮಾರೊಂದು ಈಗಿನ ಸನ್ನಿವೇಶಕ್ಕೆ, ಸಂದರ್ಭಕ್ಕೆ, ಸಾಂಸ್ಕ ತಿಕ ಸವಾಲುಗಳಿಗೆ ಹೇಗೆ ಎದುರಾಗಬಹುದು, ರಂಗಭೂಮಿಗೆ ಹೊಸ ನೀರನ್ನು ಹೇಗೆ ಹರಿಸಬಹುದು ಎಂಬುದನ್ನೂ ಈ ನಾಟಕ ತೋರಿಸಿಕೊಟ್ಟಿತು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ ಮತ್ತು ಪಶ್ಚಿಮ ಬಂಗಾಳದ ಕ್ರಿಯಾಶೀಲ ಯುವಕ ಸೌರವ್ ಪೊದ್ದಾರ್, ಮೂವರೇ ಕಲಾವಿದರನ್ನು ಬಳಸಿಕೊಂಡು ಈ ನಾಟಕವನ್ನು ಕಟ್ಟಿದ ರೀತಿ ಸೋಜಿಗ ಹುಟ್ಟಿಸುವಂತಿತ್ತು. (ಸಿದ್ಧ ನಾಟಕವಿಲ್ಲದೆ ತುಣುಕುಗಳಲ್ಲಿ, ಚಿಂತನೆಯಲ್ಲಿ, ಹುಡುಕಾಟದಲ್ಲಿ ‘ನಾಟಕ’ವನ್ನು ಸಿದ್ಧಪಡಿಸಿದವರು. ಈ ನಾಲ್ಕು ಜನರ ಸಾಮೂಹಿಕ ಪ್ರಯತ್ನ).
ಸಾಂಪ್ರದಾಯಿಕ ಎಂದು ಹೇಳಬಹುದಾದ, ಸಿದ್ಧ ಮಾದರಿಗಳಲ್ಲಿ ಅರಳಬಹುದಾದ ‘ಕತೆ’ ಎಂಬುದೇ ಈ ನಾಟಕಕ್ಕೆ ಇರಲಿಲ್ಲ. ಹಾಗೆಯೇ ರಂಗಭೂಮಿಯ ಪ್ರಚಲಿತ ತಂತ್ರಗಳಿಗಷ್ಟೆ ಈ ನಾಟಕ ಸೀಮಿತವಾಗಿರಲಿಲ್ಲ. ಹುಡುಕಾಟದ ಮೂಲಕವೇ ಕತೆಯನ್ನು ಕಟ್ಟಿಕೊಳ್ಳುತ್ತ, ತನ್ನ ಚಿಂತನೆಯ ಮೂಲಕವೇ ನಮ್ಮ ಜ್ವಲಂತ ಸಮಸ್ಯೆಗಳಿಗೆ ಎದುರಾಗುತ್ತ, ನೋಟಕರನ್ನು ಒಳಗೊಳ್ಳುತ್ತ ನಡೆದ ಈ ಪ್ರಯೋಗ ತನ್ನ ಹೊಸತನದಿಂದಾಗಿ, ಹೊಸ ‘ರಂಗಭಾಷೆ’ಯಿಂದಾಗಿ ಸೆಳೆದುಕೊಂಡಿತು.
ಅನುಭವದ ಪರಿಣತಿ, ಪ್ರಬುದ್ಧ ಚಿಂತನೆ ಮತ್ತು ಹೊಸ ರಂಗಭಾಷೆ ಹದವಾಗಿ ಬೆರೆತರೆ ಏನಾಗಬಹುದು ಎಂಬುದನ್ನೂ ಈ ನಾಟಕ ತೋರಿಸಿತು.
ಸಂಭಾಷಣೆ, ದೃಶ್ಯ ಸಂಯೋಜನೆ, ಕಲಾತ್ಮಕ ಅಭಿನಯದ ಜೊತೆಗೆ ಪ್ರೊಜೆಕ್ಟರ್ ಮೂಲಕ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡ ಚಿತ್ರಗಳು ಹಾಗೂ ಅನೇಕ ಸಾಂಕೇತಿಕ ವಸ್ತುಗಳು, ನೆರಳು-ಬೆಳಕು ಈ ಪ್ರಯೋಗಕ್ಕೆ ಕೈಜೋಡಿಸಿದ್ದವು. ಮೆಲುದನಿಯಲ್ಲಿ ಕಲಾವಿದೆಯರು ಇಂಪಾಗಿ ಹಾಡಿದ ಸೊಲ್ಲುಗಳ ಜೊತೆಗೆ, ಕಿವಿಗೆ ಬಂದು ಅಪ್ಪಳಿಸುವ ಹಿನ್ನೆಲೆಯ ಧ್ವನಿ, ಸಂಗೀತ (ಇದೆಲ್ಲ ನಮ್ಮ ಸಂದರ್ಭದ ಕಠೋರ ಸವಾಲುಗಳನ್ನು ಸೂಚಿಸಲು), ವಾದ್ಯಗಳ ಬಳಕೆ ಹೀಗೆ ಎಲ್ಲವೂ ಹೊಸತನವನ್ನು ಪಡೆದುಕೊಂಡು ನಾಟಕದ ಅರ್ಥವಂತಿಕೆಯನ್ನು ಹಿಗ್ಗಿಸಿದವು (ರಂಗದ ಹಿಂದಿನ ದುಡಿಮೆ: ಜನಾರ್ಧನ್, ರಮೇಶ್, ಮಹೇಶ್ ಕಲ್ಲತ್ತಿ, ಎನ್.ಮಹೇಶ್ ಕುಮಾರ್, ಮೋಹನ, ಅಂಜುಸಿಂಗ್, ಶಿವಕುಮಾರ್ ಮತ್ತು ರವಿ).
ತೀರಾ ಗಂಭೀರವಾದ ಈ ನಾಟಕವನ್ನು ಅಲ್ಲಾಡದೆ ಕುಳಿತು ನೋಡಿದ ಪ್ರೇಕ್ಷಕರನ್ನು ಅಲ್ಲಲ್ಲಿ ಕಚಗುಳಿ ಇಟ್ಟು ಮುಖದ ಮೇಲೆ ಮಂದಹಾಸವನ್ನು ಮಿನುಗುವಂತೆ ಮಾಡಿದ ಸನ್ನಿವೇಶಗಳು ಮೂಡಿದ್ದು ಕಲಾವಿದೆಯರ ಲವಲವಿಕೆಯ ಅಭಿನಯದಿಂದ.
ಕಳೆದವರು, ಕಾಣೆಯಾದವರು ಎಲ್ಲಿ ಹೋದರು, ಏನಾದರು, ಬದುಕಿದ್ದಾರೆಯೇ, ಸತ್ತಿದ್ದಾರೆಯೇ ಈ ಎಲ್ಲ ಪ್ರಶ್ನೆಗಳಿಗೆ ನಿಖರವಾದ ಉತ್ತರ ಸಿಕ್ಕುವುದೇ ಇಲ್ಲ. ಇವತ್ತಿನ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ ಕಳೆದು ಹೋಗಿರುವವರು ಎಷ್ಟೊಂದು ಜನ! ಅವರೆಲ್ಲರ ಪತ್ತೆಯಾದರೂ ಎಲ್ಲಿ ಸಿಕ್ಕಿದೆ? ಇದು ಕೇವಲ ಹೆಣ್ಣಿನ ಪ್ರಶ್ನೆಯಲ್ಲ, ಒಂದು ರಾಷ್ಟ್ರದ, ಒಂದು ಸನ್ನಿವೇಶದ, ಒಂದು ಸಾಂಸ್ಕ ತಿಕ ಸಂದರ್ಭದ ಪ್ರಶ್ನೆಯೂ ಅಲ್ಲ. ಜ್ವಲಂತ ಸಮಸ್ಯೆಗೆ ತನ್ನ ಬಾಹುಗಳನ್ನು ಚಾಚುತ್ತ ಚಾಚುತ್ತ ನಾಟಕ ಜಾಗತಿಕ ಸಮಸ್ಯೆಯೇ ಆಗುವುದು ಇದರ ವಿಶೇಷ. ತಮ್ಮನ್ನು ಈ ನಾಟಕಕ್ಕೆ ಕೊಟ್ಟುಕೊಂಡ ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಮತ್ತು ನೋಟಕರು ಕಣ್ಣು, ಕಿವಿ, ಮನಸ್ಸು ತೆರೆದು ಈ ಸಮಸ್ಯೆ ಗಳಿಗೆ ಎಲ್ಲರೂ ಎದುರಾಗುವುದು ಈ ನಾಟಕದ ಮತ್ತೊಂದು ವಿಶೇಷ.
ಮೌನ ಮರೆಯಾದಂತೆ, ಸಂಭಾಷಣೆಯೇ ಹೆಚ್ಚಾಗಿರು ವಂತೆ ಕಂಡರೂ ಈ ಸಂಭಾಷಣೆಗೆ ವಿಭಿನ್ನ ಆಯಾಮ ಗಳಿವೆ. ಇದು ಚರಿತ್ರೆಯೊಂದಿಗೆ ಮಾತನಾಡುವ ಸಂಭಾಷಣೆ; ನಿಲ್ಲದ ನಿರಂತರ ಹಿಂಸೆಯೊಂದಿಗೆ ಮಾತನಾಡುವ ಸಂಭಾಷಣೆ; ನಿತ್ಯದ ಯಾಂತ್ರಿಕ ದುಡಿಮೆಯೊಂದಿಗೆ ಮಾತನಾಡುವ ಸಂಭಾಷಣೆ; ಅರ್ಥಹೀನ ಕ್ರಿಯೆಗಳೊಂದಿಗೆ, ನಿರಂತರ ಚಡಪಡಿಕೆಯೊಂದಿಗೆ ನಡೆಸುವ ಸಂಭಾಷಣೆ; ಒಳಗಿನ ಬೇಗುದಿಯನ್ನು ಹೊರಹಾಕಲು ಇರುವ ಏಕೈಕ ಮಾರ್ಗದಂತೆ ಕಾಣುವ ಸಂಭಾಷಣೆ.
ಒಂದು ನಾಟಕ ನಮ್ಮ ಜಗತ್ತನ್ನು ತೋರಿಸುವ, ನಮ್ಮ ಕಣ್ಣು ಕಿವಿ ಹೃದಯಗಳನ್ನು ತೆರೆಸುವ ಕ್ರಿಯೆಯಲ್ಲಿ ಯಾವುದು ಮಾತು, ಯಾವುದು ಮೌನ, ಯಾವುದು ಸಂಗೀತ, ಯಾವುದು ಕಠೋರ ಸದ್ದು, ಯಾವುದು ಬೆಳಕು, ಯಾವುದು ಕತ್ತಲು, ಎಲ್ಲಿ ಮಣಿಪುರದ ನಾರಿಯರ ಬಿಚ್ಚು ಹೋರಾಟ, ಎಲ್ಲಿ ಕಂಡೂ ಕಾಣಿಸ ದಂತಾಗಿರುವ ಅಂಬೇಡ್ಕರ್ ಕಳಕಳಿ – ಎಲ್ಲವೂ ಒಂದರೊಳಗೊಂದು ಬೆರೆತುಹೋಗುವ ಪರಿ ಈ ನಾಟಕವನ್ನು ಎತ್ತರದಲ್ಲಿ ನಿಲ್ಲಿಸುತ್ತದೆ. ಬಹುಕಾಲ ನೆನಪಿನಲ್ಲಿ ಉಳಿಯುವ ಮತ್ತೆ ಮತ್ತೆ ನೋಡಬೇಕೆಂದು ಪ್ರೇರೇಪಿಸುವ ಈ ನಾಟಕ ರಂಗಾಯಣದ ಮುಖ್ಯ ಪ್ರಯೋಗಗಳ ಪರಂಪರೆಗೆ ಹೊಸ ಸೇರ್ಪಡೆಯಾಗಿದೆ.
” ತೀರಾ ಗಂಭೀರವಾದ ಈ ನಾಟಕವನ್ನು ಅಲ್ಲಾಡದೆ ಕುಳಿತು ನೋಡಿದ ಪ್ರೇಕ್ಷಕರನ್ನು ಅಲ್ಲಲ್ಲಿ ಕಚಗುಳಿ ಇಟ್ಟು ಮುಖದ ಮೇಲೆ ಮಂದಹಾಸವನ್ನು ಮಿನುಗುವಂತೆ ಮಾಡಿದ ಸನ್ನಿವೇಶಗಳು ಮೂಡಿದ್ದು ಕಲಾವಿದೆಯರ ಲವಲವಿಕೆಯ ಅಭಿನಯದಿಂದ. ಕಳೆದವರು, ಕಾಣೆಯಾದವರು ಎಲ್ಲಿ ಹೋದರು, ಏನಾದರು, ಬದುಕಿದ್ದಾರೆಯೇ, ಸತ್ತಿದ್ದಾರೆಯೇ ಈ ಎಲ್ಲ ಪ್ರಶ್ನೆಗಳಿಗೆ ನಿಖರವಾದ ಉತ್ತರ ಸಿಕ್ಕುವುದೇ ಇಲ್ಲ.”





