Mysore
29
overcast clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಮಕ್ಕಳ ಪರೀಕ್ಷಾ ಸಿದ್ಧತೆಯಲ್ಲಿ ಪೋಷಕರ ಪಾತ್ರದ ಮಹತ್ವ

ಡಾ.ಪಿ.ಮಂಜುನಾಥ

ನಕಾರಾತ್ಮಕ ಭಾವನೆ ಮಕ್ಕಳಲ್ಲಿ ಮೂಡದಂತೆ ಎಚ್ಚರ ಅಗತ್ಯ 

ಪರೀಕ್ಷೆಗಳು ಕೆಲವೇ ತಿಂಗಳುಗಳಲ್ಲಿ ಸಾಲು ಸಾಲಾಗಿ ಪ್ರಾರಂಭವಾಗಲಿವೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಸಾಮಾನ್ಯವಾಗಿ ಮಕ್ಕಳು ಒತ್ತಡವನ್ನು ಅನುಭವಿಸುತ್ತಾರೆ. ಪರಿಣಾಮವಾಗಿ ಮಕ್ಕಳಲ್ಲಿ ತಲೆನೋವು, ನಿದ್ರಾಹೀನತೆ, ಪರೀಕ್ಷಾ ಭಯ, ಅಧ್ಯಯನದಲ್ಲಿ ನಿರಾಸಕ್ತಿ, ಓದಿಕೊಂಡಿದ್ದನ್ನು ಮರೆಯುವುದು, ಅಜೀರ್ಣ, ಪರೀಕ್ಷಾ ವೈಫಲ್ಯದ ಭಯ… ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.

ಇಂತಹ ಪರೀಕ್ಷಾ ಆತಂಕ ಸ್ಥಿತಿಯಲ್ಲಿ ಮಕ್ಕಳ ಮನಸ್ಸು ಮಾನಸಿಕವಾಗಿ ಖಿನ್ನತೆಗೆ ಒಳಗಾಗುವುದರಿಂದ ಪೋಷಕರ ಸಹಾಯವನ್ನು ಬಯಸುತ್ತದೆ. ಆದಕಾರಣ ಪರೀಕ್ಷಾ ಸಿದ್ಧತೆ ಸಂದರ್ಭದಲ್ಲಿ ಮಕ್ಕಳಿಗೆ ಪೋಷಕರ ಭಾವನಾತ್ಮಕ ಬೆಂಬಲ, ಪ್ರೇರಣೆ ಮತ್ತು ಸೂಕ್ತ ಮಾರ್ಗದರ್ಶನ ಅತ್ಯವಶ್ಯ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವುದು, ಸಕಾರಾತ್ಮಕ ಬೆಳವಣಿಗೆಗೆ ಉತ್ತೇಜಿಸುವುದು, ಅಗತ್ಯ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವುದು, ಮಕ್ಕಳನ್ನು ಉತ್ತಮ ಜೀವನಕ್ಕೆ ಸಿದ್ಧಪಡಿಸುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ.  ಪೋಷಕರು ಮಕ್ಕಳಿಗೆ ಆಹಾರ ಮತ್ತು ವಸತಿಯಂತಹ ಮೂಲ ಆರೈಕೆ ಒದಗಿಸುವುದರ ಜೊತೆಗೆ ಭಾವನಾತ್ಮಕ ಆರೈಕೆಯನ್ನೂ ಒದಗಿಸಬೇಕು.

ಮಕ್ಕಳ ಆಹಾರ – ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ: ಮಕ್ಕಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸದೃಢ ದೈಹಿಕ ಮತ್ತು ಮಾನಸಿಕ ಆರೋಗ್ಯ ಅತ್ಯಗತ್ಯ. ಮಕ್ಕಳು ಪ್ರತಿನಿತ್ಯ ಸುಮಾರು ೮ ಗಂಟೆಗಳ ಕಾಲ ಆರೋಗ್ಯಕರವಾದ ನಿದ್ರೆಯನ್ನು ಮಾಡುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಜೀರ್ಣವಾಗುವಂತಹ ಸೊಪ್ಪು, ತರಕಾರಿ, ಹಣ್ಣುಗಳು ಹಾಗೂ ಸಮತೋಲನ ಆಹಾರವನ್ನು ನೀಡಬೇಕು. ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ನಡಿಗೆ ಮುಂತಾದ ಆರೋಗ್ಯಕರ ಕ್ರಿಯಾ ಚಟುವಟಿಕೆಗಳಿಂದ ಮನಸ್ಸು ಮತ್ತು ದೇಹ ಕ್ರಿಯಾಶೀಲವಾಗಿ ಮತ್ತು ಆರೋಗ್ಯವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಮಕ್ಕಳಿಗೆ ಪೋಷಕರು ಅರ್ಥ ಮಾಡಿಸಿ ಆರೋಗ್ಯಕರ ಕ್ರಿಯಾಚಟುವಟಿಕೆಗಳಲ್ಲಿ ಪ್ರತಿನಿತ್ಯ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು. ಇದರಿಂದ ಮಕ್ಕಳು ಆರೋಗ್ಯಪೂರ್ಣರಾಗಿ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆಯಲು ಸಾಧ್ಯವಾಗುತ್ತದೆ.

ಮಕ್ಕಳ ಸಾಮರ್ಥ್ಯಕ್ಕನುಗುಣವಾಗಿ ಗುರಿ ನಿಗದಿಪಡಿಸುವುದು ಸೂಕ್ತ: ಪ್ರತಿಯೊಂದು ಮಗುವು ತನ್ನದೇಆದ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುತ್ತದೆ. ಆ ಸಾಮರ್ಥ್ಯಕ್ಕನುಗುಣವಾಗಿ ವೈಯಕ್ತಿಕ ಮಟ್ಟದ ಸಾಧನೆಯನ್ನು ಮಾಡುತ್ತದೆ ಎಂಬುದನ್ನು ಪೋಷಕರು ಮೊದಲು ಅರ್ಥ ಮಾಡಿಕೊಳ್ಳಬೇಕು. ಅವರ ಸಾಮರ್ಥ್ಯಕ್ಕೂ ಮೀರಿದ ಅಸಾಧ್ಯವಾದ ಗುರಿಗಳನ್ನು ಮಕ್ಕಳಿಗೆ ನಿಗದಿಪಡಿಸಿದರೆ ಮಕ್ಕಳಲ್ಲಿ ಮಾನಸಿಕ ಒತ್ತಡ ಉಂಟಾಗುತ್ತದೆ. ಆದ ಕಾರಣ ಪೋಷಕರು ಮಕ್ಕಳು ಸಾಧಿಸಲು ಸಾಧ್ಯವಾಗುವಂತಹ ನೈಜ ಗುರಿಗಳನ್ನು ನಿಗದಿಪಡಿಸಬೇಕು.

ಇತರ ಮಕ್ಕಳೊಂದಿಗೆ ಹೋಲಿಕೆ ಸಲ್ಲದು: ಬಹುಪಾಲು ಪೋಷಕರು ತಮ್ಮ ಮಕ್ಕಳನ್ನು ಒಡಹುಟ್ಟಿದವರೊಂದಿಗೆ, ನೆರೆಹೊರೆಯ ಮಕ್ಕಳೊಂದಿಗೆ ಮತ್ತು ಸಂಬಂಧಿಕರ ಮಕ್ಕಳೊಂದಿಗೆ ಹೋಲಿಸುವುದು ಸಾಮಾನ್ಯ. ಉದಾಹರಣೆಗೆ ಪಕ್ಕದ ಮನೆಯ ಹುಡುಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೦ ಅಂಕಗಳನ್ನು ಗಳಿಸಿದ್ದಾನೆ. ನೀನು ಆತನಿಗಿಂತ ಹೆಚ್ಚು ಅಂಕಗಳನ್ನು ಗಳಿಸಬೇಕು ಎಂದು ಮಕ್ಕಳಿಗೆ ಒತ್ತಡವನ್ನು ಉಂಟುಮಾಡಬಾರದು. ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವ ಮೂಲಕ ಆತ್ಮವಿಶ್ವಾಸವನ್ನು ಕುಗ್ಗಿಸಬಾರದು.

ಪೋಷಕರು ನಕಾರಾತ್ಮಕವಾಗಿ ವರ್ತಿಸಬಾರದು: ಪೋಷಕರು ಮಕ್ಕಳ ಸಾಮರ್ಥ್ಯಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡಬಾರದು. ‘ಈ ಪರೀಕ್ಷೆಯು ನಿನ್ನ ಜೀವನವನ್ನು ನಿರ್ಧರಿಸುತ್ತದೆ’, ‘ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದರೆ ಜೀವನದಲ್ಲಿ ನೀನು ಪ್ರಯೋಜನಕ್ಕೆ ಬರುವುದಿಲ್ಲ,’ ‘ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದರೆ ಸಮಾಜದಲ್ಲಿ ನಿನ್ನಿಂದಾಗಿ ನಮಗೆ ಗೌರವ ಕಡಿಮೆಯಾಗುತ್ತದೆ’… ಹೀಗೆ ನಕಾರಾತ್ಮಕವಾಗಿ ವರ್ತಿಸುವುದರಿಂದ ಮಕ್ಕಳ ಮನಸ್ಸಿನಲ್ಲಿ ಪರೀಕ್ಷೆಯ ಬಗೆಗೆ ಆತಂಕ ಉಂಟಾಗುತ್ತದೆ. ಅದಕ್ಕೆ ಬದಲಾಗಿ ‘ಶ್ರದ್ಧೆ ಮತ್ತು ಪರಿಶ್ರಮದಿಂದ ನಿರಂತರವಾಗಿ ಅಧ್ಯಯನ ಮಾಡು, ನಿನ್ನಲ್ಲಿ ಉತ್ತಮ ಸಾಮರ್ಥ್ಯವಿದೆ, ಉತ್ತಮವಾಗಿ ಫಲಿತಾಂಶ ಬರುತ್ತದೆ’ ಎಂಬ ಪ್ರೇರಣಾತ್ಮಕ ಮಾತುಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು.

ಅಧ್ಯಯನಕ್ಕೆ ಪ್ರಶಾಂತವಾದ ವಾತಾವರಣವನ್ನು ಕಲ್ಪಿಸಿಕೊಡಬೇಕು: ಮನೆಯು ಮಕ್ಕಳ ಅಧ್ಯಯನದ ಪ್ರಮುಖ ಸ್ಥಳವಾಗಿರುತ್ತದೆ. ಅದು ಅಧ್ಯಯನದ ಏಕಾಗ್ರತೆಗೆ ಭಂಗವನ್ನುಂಟು ಮಾಡುವಂತಹ ಸನ್ನಿವೇಶಗಳಿಂದ ಮುಕ್ತವಾಗಿರಬೇಕು. ಮಕ್ಕಳು ಅಧ್ಯಯನ ಮಾಡುತ್ತಿರುವಾಗ ಜೋರಾದ ಶಬ್ದದೊಂದಿಗೆ ಟಿ.ವಿ. ನೋಡುವುದು, ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಹರಟೆ ಹೊಡೆಯುವುದು, ಪರೀಕ್ಷಾ ಸಂದರ್ಭಗಳಲ್ಲಿ ಮನೆಯಲ್ಲಿ ಪಾರ್ಟಿಗಳನ್ನು ಆಯೋಜಿಸುವುದು… ಇಂತಹ ಸನ್ನಿವೇಶಗಳನ್ನು ಪೋಷಕರು ನಿಯಂತ್ರಿಸಬೇಕು. ಇದರಿಂದ ಮಕ್ಕಳು ಏಕಾಗ್ರತೆಯಿಂದ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.

ಮಕ್ಕಳಿಗೆ ಪರೀಕ್ಷೆಯ ಉದ್ದೇಶವನ್ನು ಅರ್ಥಮಾಡಿಸಬೇಕು: ಪರೀಕ್ಷೆಗಳನ್ನು ನಡೆಸುವ ಉದ್ದೇಶ ಮಕ್ಕಳು ಆಯಾ ಶೈಕ್ಷಣಿಕ ವರ್ಷದಲ್ಲಿ ಆಯಾ ತರಗತಿಗೆ ಸಂಬಂಧಿಸಿದಂತೆ ವಿವಿಧ ವಸ್ತು ವಿಷಯಗಳಲ್ಲಿ ಎಷ್ಟು ಕಲಿತಿರುತ್ತಾರೆ ಎಂಬುದನ್ನು ಮೌಲ್ಯಮಾಪನ ಮಾಡುವುದಾಗಿರುತ್ತದೆ ಎಂಬುದನ್ನು ಮಕ್ಕಳಿಗೆ ಅರ್ಥಮಾಡಿಸಬೇಕು. ಪರೀಕ್ಷೆಗಳಲ್ಲಿ ಮಕ್ಕಳು ಒಂದು ವಿಷಯದಲ್ಲಿ ಹೆಚ್ಚು ಅಂಕಗಳಿಸಬಹುದು. ಮತ್ತೊಂದು ವಿಷಯದಲ್ಲಿ ಕಡಿಮೆ ಅಂಕಗಳಿಸಬಹುದು. ಕಡಿಮೆ ಅಂಕಗಳಿಸಿದ ವಿಷಯಕ್ಕೆ ಹೆಚ್ಚು ಒತ್ತುಕೊಟ್ಟು ಅಧ್ಯಯನ ಮಾಡಲು ಪೋಷಕರು ಮಾರ್ಗದರ್ಶನ ನೀಡಬೇಕು.

ಪರೀಕ್ಷಾ ಯಶಸ್ಸಿನ ತಂತ್ರಗಳ ಕುರಿತು ಮಕ್ಕಳಿಗೆ ತಿಳಿವು: ಮಕ್ಕಳು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಯಶಸ್ಸನ್ನು ಸಾಧಿಸಲು ಹಲವಾರು ತಂತ್ರಗಳಿರುತ್ತವೆ. ಅವುಗಳೆಂದರೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹ ಮಾಡಿಕೊಂಡು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅಭ್ಯಾಸ ಮಾಡುವುದು. ಮೂರು ಗಂಟೆಗಳ ನಿರ್ದಿಷ್ಟ ಅವಧಿಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಸಮರ್ಪಕವಾಗಿ ಉತ್ತರಿಸುವ ಮೂಲಕ ಬರೆಯುವ ಸಾಮರ್ಥ್ಯವನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು. ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅಂಕಗಳಿಗೆ ಅನುಗುಣವಾಗಿ ಉತ್ತರಿಸುವ ಕೌಶಲವನ್ನು ಬೆಳೆಸಿಕೊಳ್ಳುವುದು, ಅಂದವಾದ ಬರವಣಿಗೆ, ಪ್ರಶ್ನೆಗೆ ತಕ್ಕಂತೆ ಸಮರ್ಪಕ ಉತ್ತರ ಮುಂತಾದ ಪರೀಕ್ಷಾ ಯಶಸ್ಸಿನ ತಂತ್ರಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಮನೆಯ ಅಧ್ಯಯನ ವೇಳಾಪಟ್ಟಿಯನ್ನು ಸಿದ್ಧಪಡಿಸಲು ಮಕ್ಕಳಿಗೆ ಸಹಾಯ ಮತ್ತು ಮಾರ್ಗದರ್ಶನವನ್ನು ನೀಡುವುದು ಪೋಷಕರ ಆದ್ಯತೆಯಾಗಿರಬೇಕು.

ಪರೀಕ್ಷೆ ಭಯದ ಲಕ್ಷಣಗಳನ್ನು ಪ್ರಾರಂಭದಲ್ಲಿ ಗುರುತಿಸಬೇಕು: ಪರೀಕ್ಷೆಯು ಕೆಲವೇ ವಾರಗಳು ಇವೆ ಎನ್ನುವ ಹಂತದಲ್ಲಿ ಮಕ್ಕಳು ಪರೀಕ್ಷಾ ಒತ್ತಡದಿಂದಾಗಿ ಬೆವರುವುದು, ನಿದ್ರಾಹೀನತೆ, ಒತ್ತಡ, ವಾಂತಿ, ಜ್ವರ, ಆಲಸ್ಯ, ಪರೀಕ್ಷಾ ಭಯ, ತಲೆನೋವು, ಹೊಟ್ಟೆನೋವು ಮುಂತಾದರೋಗ ಲಕ್ಷಣಗಳನ್ನು ವ್ಯಕ್ತಪಡಿಸುತ್ತಾರೆ. ಪೋಷಕರು ಈ ರೋಗ ಲಕ್ಷಣಗಳನ್ನು ಸೂಕ್ಷ್ಮವಾಗಿ ಗುರುತಿಸಿ ಅರ್ಥ ಮಾಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಮನಃ ಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗಿ ಸೂಕ್ತ ಆಪ್ತ ಸಮಾಲೋಚನೆಯ ಸೌಲಭ್ಯವನ್ನು ಒದಗಿಸಿಕೊಟ್ಟು ಮಕ್ಕಳನ್ನು ಪರೀಕ್ಷಾ ಭಯದಿಂದ ಮುಕ್ತರನ್ನಾಗಿ ಮಾಡಬೇಕು.

ಮಕ್ಕಳ ಪರೀಕ್ಷಾ ಸಿದ್ಧತೆಯ ಸಂದರ್ಭದಲ್ಲಿ ಪೋಷಕರು ಜವಾಬ್ದಾರಿಯುತ ಮತ್ತು ಸಮರ್ಥ ಪಾತ್ರವನ್ನು ನಿರ್ವಹಿಸುವುದರೊಂದಿಗೆ ಮಕ್ಕಳಿಗೆ ಸೂಕ್ತ ಭಾವನಾತ್ಮಕ ಬೆಂಬಲವನ್ನು ನೀಡಿದಾಗ ಮಕ್ಕಳು ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪದಿಂದ ಪರೀಕ್ಷೆಯನ್ನು ಬರೆದು ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ.

(ಲೇಖಕರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು)

” ಜೀವನದ ಯಶಸ್ಸು ಅಂಕಗಳಿಂದ ಮಾತ್ರ ನಿರ್ಧಾರಿತವಾಗುವುದಿಲ್ಲ ಎಂಬ ವಾಸ್ತವಿಕತೆಯನ್ನು ಪೋಷಕರು ಅರಿತುಕೊಂಡು ಮಕ್ಕಳು ಪರೀಕ್ಷೆಯನ್ನು ಒತ್ತಡರಹಿತವಾಗಿ ಬರೆಯುವಂತೆ ಪ್ರೇರೇಪಿಸಬೇಕು.”

Tags:
error: Content is protected !!