ಕೃಷಿ ಪ್ರಧಾನ ಜಿಲ್ಲೆಗಳಲ್ಲಿ ಒಂದಾಗಿರುವ ಮಲೆನಾಡಿನ ಕೊಡಗಿನಲ್ಲಿ ವನ್ಯಜೀವಿ-ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದೊಮ್ಮೆ ಕಾಡಾನೆಗಳ ದಾಳಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಹುಲಿ ಹಾವಳಿಯೂ ಕಾಣಿಸಿಕೊಂಡು ಜನ-ಜಾನುವಾರುಗಳಿಗೆ ಕಂಟಕವಾಗಿದೆ. ಇದರ ಜತೆಗೆ ಚಿರತೆ, ಕಾಡುಕೋಣ, ಕಾಡೆಮ್ಮೆ, ಕಾಡುಹಂದಿ, ಕೋತಿ, ನವಿಲುಗಳ ಹಾವಳಿಯೂ ಕಂಗೆಡಿಸಿದೆ.
ಅರಣ್ಯದಂಚಿನಲ್ಲಿ ಕಂದಕ ತೋಡಿ, ಸೋಲಾರ್ ಬೇಲಿ, ರೈಲ್ವೆ ಕಂಬಿಗಳ ಬೇಲಿ, ಹೊಸ ಮಾದರಿಯ ನೇತಾಡುವ ಸೋಲಾರ್ ಬೇಲಿ ಅಳವಡಿಕೆ ಆಗಿದ್ದರೂ ಆನೆ ಸೇರಿ ಕಾಡುಪ್ರಾಣಿಗಳ ದಾಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಜನವಸತಿ ಪ್ರದೇಶ, ತೋಟ, ಭತ್ತದ ಗದ್ದೆಗಳಿಗೆ ದಾಳಿ ಇಡುತ್ತಿವೆ. ಮಾನವ ಪ್ರಾಣ ಹಾನಿಯ ಜತೆಗೆ ಜಾನುವಾರು, ಬೆಳೆ ನಷ್ಟದಿಂದಾಗಿ ಜನಸಾಮಾನ್ಯರು ಕಂಗೆಟ್ಟಿದ್ದಾರೆ.
ವನ್ಯಜೀವಿ ಹಾವಳಿಯಿಂದ ಬೆಳೆ, ಆಸ್ತಿ, ಮಾನವ, ಸಾಕು ಪ್ರಾಣಿಗಳ ಪ್ರಾಣ ಹಾನಿ, ಗಾಯ ಗೊಂಡವರಿಗೆ, ಶಾಶ್ವತ ಅಂಗ ವೈಕಲ್ಯಕ್ಕೆ ದಯಾತ್ಮಕ ಪರಿಹಾರ ಧನ ನೀಡಲು ಸರ್ಕಾರ ೨೦೧೬ ಸೆಪ್ಟೆಂಬರ್ ೧೯ಕ್ಕೆ ಪರಿಷ್ಕೃತ ಆದೇಶ ಹೊರಡಿಸಿದೆ. ವನ್ಯಜೀವಿಯಿಂದ ಮಾನವ ಪ್ರಾಣ ಹಾನಿ, ಶಾಶ್ವತ ಅಂಗ ವೈಕಲ್ಯಕ್ಕೆ ೫.೦೦ ಲಕ್ಷ, ಭಾಗಶಃ ಅಂಗವೈಕಲ್ಯಕ್ಕೆ ೨.೫೦ ಲಕ್ಷ, ಗಾಯಗೊಂಡವರಿಗೆ ೩೦ ಸಾವಿರ, ಕಾಡಾನೆ ದಾಳಿಯಿಂದ ಆಸ್ತಿ ನಷ್ಟಕ್ಕೆ ೧೦ ಸಾವಿರ ರೂ ಪರಿಹಾರ ಧನ ದೊರೆಯಲಿದೆ.
ಅರಣ್ಯ ಇಲಾಖೆಯಿಂದ ಪರಿಹಾರ ನಿಗದಿ ಮಾಡುವಲ್ಲಿ ಅವೈಜ್ಞಾನಿಕ ಕ್ರಮ ಅನುಸರಿಸಲಾಗಿದೆ ಎನ್ನುವುದು ಕೃಷಿಕರ ಆರೋಪ. ೭೦ ಸಾವಿರ ಬೆಲೆಯ ಹಸು ಹುಲಿ ದಾಳಿಗೆ ಬಲಿಯಾದರೆ ಸಿಗುವ ಪರಿಹಾರ ೧೦-೨೦ ಸಾವಿರ ರೂ.ಮಾತ್ರ. ಎಲ್ಲವೂ ಆನ್‌ಲೈನ್ ವ್ಯವಸ್ಥೆಯಡಿ ತರಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಪರಿಹಾರದ ಮೊತ್ತಕ್ಕಾಗಿ ದಾಖಲೆಗಳನ್ನು ಹೊಂದಿಸುವಲ್ಲಿ ಸಂತ್ರಸ್ತ ಸುಸ್ತಾಗಿರುತ್ತಾನೆ.
ವನ್ಯಜೀವಿಯಿಂದ ನಷ್ಟಕ್ಕೆ ಒಳಗಾದವರಿಗೆ ಅರಣ್ಯ ಇಲಾಖೆ ಕೊಡುವ ಪರಿಹಾರವನ್ನು ಇಲಾಖೆಯ ಭಾಷೆಯಲ್ಲಿ ದಯಾತ್ಮಕ ದರ ಎಂದು ಕರೆಯಲಾಗುತ್ತದೆ. ಈ ಪದ ಬಳಕೆಯೇ ಸರಿಯಿಲ್ಲ ಎಂದು ಕೊಡಗು ಬೆಳೆಗಾರರ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ. ಪರಿಹಾರವನ್ನು ಪರಿಹಾರ ಎಂದೇ ಕರೆಯಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಕೊಡಗಿನಲ್ಲಿ ೨೦೨೦-೨೧ನೇ ಸಾಲಿನಲ್ಲಿ ವನ್ಯಜೀವಿಗಳಿಂದ ಮನುಷ್ಯನಿಗೆ ವಿವಿಧ ರೀತಿಯ ಹಾನಿಗೆ ಸಂಬಂಧಿಸಿದ ೮೫೧೭ ಪ್ರಕರಣಗಳು ದಾಖಲಾಗಿದ್ದು, ಸುಮಾರು ೬.೬೮ ಕೋಟಿ ರೂ. ಪರಿಹಾರ ಸಂತ್ರಸ್ತರಿಗೆ ಪಾವತಿಸಲಾಗಿದೆ. ಮಾನವ-ವನ್ಯಜೀವಿ ಸಂಘರ್ಷ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು, ಹಾಲಿ ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಒತ್ತಾಯ ಕೇಳಿಬಂದಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ.
ಶಾಶ್ವತ ಪರಿಹಾರೋಪಾಯಗಳನ್ನು ಕಂಡುಕೊಂಡಲ್ಲಿ ಮಾತ್ರ ಮಾನವ-ವನ್ಯಜೀವಿ ಸಂಘರ್ಷಕ್ಕೆ ಸಂಪೂರ್ಣ ಕಡಿವಾಣ ಹಾಕಬಹುದು. ಆದರೆ ಇದಕ್ಕೆ ೭೦೦ ಕೋಟಿ ರೂ.ಅಗತ್ಯವಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು. ಈ ಸಂಬಂಧ ಈಗಾಗಲೇ ಸಮಗ್ರವಾದ ಡಿಪಿಆರ್ ತಯಾರಿಸಲಾಗಿದೆ. ಸರ್ಕಾರದಿಂದ ೭೦೦ ಕೋಟಿ ರೂ. ಅನುದಾನ ಬಂದರೆ ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಾಣ ಸೇರಿ ಹಲವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಆನೆ-ಮಾನವ ಸಂಘರ್ಷ ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಆನೆಗಳ ಮರಣ ವರದಿ ಪ್ರಕಾರ ಕಳೆದ ವರ್ಷ ರಾಜ್ಯದಲ್ಲಿ ವಿವಿಧ ಕಾರಣಗಳಿಂದ ೭೦ ಆನೆಗಳು ಮೃತಪಟ್ಟಿವೆ. ಈ ಪೈಕಿ ಕೊಡಗಿನ ೩ ಆನೆಗಳು ಸೇರಿ ೧೦ ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದರೆ, ೧೫ ಆನೆಗಳು ಅಸ್ವಾಭಾವಿಕ ಕಾರಣಗಳಿಂದ ಪ್ರಾಣಬಿಟ್ಟಿವೆ. ಆನೆಗಳ ಜನಸಂಖ್ಯೆಗೆ ಹೋಲಿಸಿದರೆ ಸ್ವಾಭಾವಿಕವಾಗಿ ಮೃತಪಡುವ ಆನೆಗಳ ಪ್ರಮಾಣ ಸಹಜವಾಗಿಯೇ ಇದೆ ಎನ್ನುವ ವನ್ಯಜೀವಿ ತಜ್ಞರು ವಿವಿಧ ಕಾರಣಗಳಿಂದ ಅಸ್ವಾಭಾವಿಕವಾಗಿ ಮತ್ತು ವಿದ್ಯುತ್ ಸ್ಪರ್ಶದಿಂದ ಮೃತಪಡುತ್ತಿರುವ ಆನೆಗಳ ಸಂಖ್ಯೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ೨೦೧೪-೧೫ರಲ್ಲಿ ೧೫, ೨೦೧೫-೧೬ರಲ್ಲಿ ೮, ೨೦೧೬-೧೭ರಲ್ಲಿ ೬, ೨೦೧೭-೧೮ರಲ್ಲಿ ೧೦, ೨೦೧೮-೧೯ರಲ್ಲಿ ೯, ೨೦೧೯-೨೦ರಲ್ಲಿ ೮ ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ.
ಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕಾಗಿದೆ. ಕಾಡಾನೆ ಸಂತತಿಯನ್ನು ಕಾಡಿನಲ್ಲಿ ಉಳಿಸಿ ನಾಡಿನಲ್ಲಿ ಜನತೆ ನೆಮ್ಮದಿಯ ಜೀವನ ಸಾಗಿಸುವಂತಹ ಶಾಶ್ವತ ಪರಿಹಾರವನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕಿದೆ.