ಆರ್.ಟಿ ವಿಠ್ಠಲಮೂರ್ತಿ
ಕಳೆದ ವಾರ ಕರ್ನಾಟಕಕ್ಕೆ ಬಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದರು. ಈ ಹೊತ್ತಿಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಹಲವು ಸಚಿವರು ಹೆಚ್ಚುವರಿ ಡಿಸಿಎಂ ಹುದ್ದೆಯ ಬೇಡಿಕೆಯನ್ನು ಮುಂದಿಟ್ಟು ಬಹಿರಂಗವಾಗಿ ಮಾತನಾಡತೊಡಗಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮುಂಬಯಿ-ಕರ್ನಾಟಕ, ಹೈದ್ರಾಬಾದ್-ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಭಾಗಗಳ ಮೇಲೂ ಪ್ರಭಾವ ಬೀರಲು ಮತ್ತು ಆ ಮೂಲಕ ಹೆಚ್ಚು ಸೀಟುಗಳನ್ನು ಗೆಲ್ಲಲು ಹೆಚ್ಚುವರಿ ಡಿಸಿಎಂಗಳ ಹುದ್ದೆ ಸೃಷ್ಟಿಸುವುದು ಒಳ್ಳೆಯದು ಎಂಬುದು ಈ ಸಚಿವರ ಬೇಡಿಕೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಈ ಕುರಿತಂತೆ ಗಟ್ಟಿ ಧ್ವನಿಯನ್ನು ಎತ್ತಿದರಾ ದರೂ ಡಿಸಿಎಂ ಹುದ್ದೆಯ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಏಳು ಮಂದಿ ಸಚಿವರು ಮುಂದಿನ ಉಪಮುಖ್ಯಮಂತ್ರಿಗಳಾಗಲು ಉತ್ಸುಕರಾಗಿದ್ದರು. ರಣದೀಪ್ ಸಿಂಗ್ ಸುರ್ಜೇವಾಲ ಅವರು ಕಳೆದ ವಾರ ಬೆಂಗಳೂರಿಗೆ ಬಂದಾಗ ಈ ಆಕಾಂಕ್ಷಿಗಳ ಪೈಕಿ ಬಹುತೇಕರು ಅವರನ್ನು ಭೇಟಿ ಮಾಡಿ, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವುದು ಏಕೆ ಅನಿವಾರ್ಯ ಎಂದು ವಿವರಿಸಿ ಬಂದಿದ್ದರು.
ಈ ಎಲ್ಲರೂ ಭೇಟಿ ಮಾಡಿದ ನಂತರ ತಮ್ಮನ್ನು ಭೇಟಿ ಮಾಡಿದ ಡಿ.ಕೆ. ಶಿವಕುಮಾರ್ ಅವರ ಬಳಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ ಅವರು, ಕರ್ನಾಟಕದಲ್ಲಿ ಹೆಚ್ಚುವರಿ ಡಿಸಿಎಂಗಳ ಬೇಡಿಕೆ ಬಂದಿರುವ ಕುರಿತು ವಿವರಿಸಿದ್ದಾರೆ. ಯಾವಾಗ ಸುರ್ಜೇವಾಲ ಅವರು ಈ ವಿಷಯವನ್ನು ತಮ್ಮ ಮುಂದೆ ಪ್ರಸ್ತಾಪಿಸಿದರೋ ಆಗ ಡಿಕೆಶಿ ನೇರವಾಗಿ ಖಂಡಿತ ಮಾಡಿ ಸಾರ್, ಹೆಚ್ಚುವರಿ ಡಿಸಿಎಂಗಳನ್ನು ನೇಮಕ ಮಾಡಿದರೆ ಕರ್ನಾಟಕದಲ್ಲಿ ಪಕ್ಷಕ್ಕೆ ಅನುಕೂಲವಾಗಬಹುದು. ಹೀಗಾಗಿ ಈ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡಲು ನಾನು ಉಪಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ. ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂದರಂತೆ.
ಯಾವಾಗ ಡಿ.ಕೆ.ಶಿವಕುಮಾರ್ ಅವರು ಖಡಾಖಂಡಿತವಾಗಿ ಮಾತನಾಡಿದರೋ ಆಗ ಸಹಜವಾಗಿಯೇ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬೇಡಿಕೆ ಬಂತು ಎಂದ ಮಾತ್ರಕ್ಕೆ ಹೆಚ್ಚುವರಿ ಡಿಸಿಎಂಗಳನ್ನು ನೇಮಕ ಮಾಡಲು ಹೈಕಮಾಂಡ್ ಆಸಕ್ತವಾಗಿದೆ ಅಂತಲ್ಲ ಎಂದು ಸಮಾಧಾನಿಸಲು ಯತ್ನಿಸಿದ್ದಾರೆ.
ಆದರೆ ಅಷ್ಟೊತ್ತಿಗಾಗಲೇ ಅಸಮಾಧಾನಗೊಂಡಿದ್ದ ಡಿ.ಕೆ.ಶಿವಕುಮಾರ್ ಅವರು, ಸಾರ್ ಮುಖ್ಯಮಂತ್ರಿ ಹುದ್ದೆಯನ್ನು ಸಿದ್ದರಾಮಯ್ಯ ಅವರಿಗೆ ಕೊಡಬೇಕು ಎಂಬ ತೀರ್ಮಾನವಾದಾಗ ನನ್ನನ್ನು ಹೊರತುಪಡಿಸಿ ಬೇರೊಬ್ಬರನ್ನು ಡಿಸಿಎಂ ಹುದ್ದೆಗೆ ತರಬಾರದು ಎಂಬ ತೀರ್ಮಾನವಾಗಿತ್ತು. ಇದಕ್ಕೆ ಕಾರಣವೇನು? ಪಕ್ಷಕ್ಕಾಗಿ ನಾನು ದುಡಿದ ರೀತಿ ಮತ್ತು ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಮಾಡಿದ ತ್ಯಾಗ. ಆದರೆ ಈಗೇನು ನಡೆಯುತ್ತಿದೆ? ಸರ್ಕಾರ ಬಂದ ಶುರುವಿನಿಂದಲೂ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಲು ಹಲವು ಸಚಿವರು ಬೇಡಿಕೆ ಇಡುತ್ತಲೇ ಇದ್ದಾರೆ. ಬಹಿರಂಗವಾಗಿ ಮಾತನಾಡುತ್ತಲೇ ಇದ್ದಾರೆ. ಹೀಗೆ ಬಹಿರಂಗವಾಗಿ ಮಾತನಾಡಬೇಡಿ ಎಂದು ಹೈಕಮಾಂಡ್ ಪದೇ ಪದೇ ಹೇಳಿದರೂ ಅದನ್ನು ಪಾಲಿಸುವವರೇ ಇಲ್ಲ. ಹೀಗಿದ್ದಾಗ ಇಂತಹ ಕೂಗಿಗೆ ಇಂಬು ನೀಡುತ್ತಾ ಹೋದರೆ ನಾನಾದರೂ ಏಕೆ ಡಿಸಿಎಂ ಹುದ್ದೆಯಲ್ಲಿರಲಿ? ಹೀಗಾಗಿ ನಾನೇ ರಾಜೀನಾಮೆ ಕೊಟ್ಟು ಹೊರಬರುತ್ತೇನೆ. ಪಕಕ್ಕೆ ಯಾರು ಅನುಕೂಲ ಅನ್ನಿಸುತ್ತದೋ ಅವರನ್ನು ಡಿಸಿಎಂ ಮಾಡಲಿ ಎಂದರು.
ಯಾವಾಗ ಶಿವಕುಮಾರ್ ಅವರ ಸಿಟ್ಟು ಬಹಿರಂಗವಾಯಿತೋ ರಣದೀಪ್ ಸಿಂಗ್ ಸುರ್ಜೇವಾಲ ಸಮಾಧಾನಪಡಿಸಿದ್ದಾರೆ. ಅಷ್ಟೇ ಅಲ್ಲ, ದಿಲ್ಲಿಯ ವರಿಷ್ಠರಿಗೆ ಈ ಕುರಿತು ಸಂದೇಶ ರವಾನಿಸಿದ್ದಾರೆ.
ಇದಾದ ನಂತರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚರ್ಚಿಸಲು ಜನವರಿ ಹನ್ನೊಂದರಂದು ದಿಲ್ಲಿಗೆ ಬರುವಂತೆ ಸಿದ್ದರಾಮಯ್ಯ ಅವರ ಸಂಪುಟದ ಇಪ್ಪತ್ತೆಂಟು ಸಚಿವರಿಗೆ ಬುಲಾವ್ ನೀಡಲಾಗಿದೆ. ಹೈಕಮಾಂಡ್ ಸೂಚನೆಯ ಮೇರೆಗೆ ದಿಲ್ಲಿಗೆ ಹೋದ ಸಚಿವರಿಗೆ, ಲೋಕಸಭಾ ಚುನಾವಣೆಯಲ್ಲಿ ಅನುಸರಿಸಬೇಕಾದ ರಣತಂತ್ರಗಳ ಕುರಿತು ವಿವರಿಸಿದ ವರಿಷ್ಠರು ತದ ನಂತರ ಪ್ರತ್ಯೇಕವಾಗಿ ಕೆಲ ಸಚಿವರನ್ನು ಕರೆಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಸಂಪುಟದ ಇಬ್ಬರು ಪ್ರಮುಖ ಸಚಿವರನ್ನು ಕರೆಸಿಕೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕಷ್ಟಪಟ್ಟು ನಾವು ಅಧಿಕಾರಕ್ಕೆ ಬಂದಿದ್ದೇವೆ. ಅಷ್ಟೇ ಅಲ್ಲ, ಅದನ್ನೇ ಮಾಡೆಲ್ ಆಗಿಟ್ಟುಕೊಂಡು ದೇಶದಲ್ಲಿ ಲೋಕಸಭಾ ಚುನಾವಣೆಗೆ ಹೋಗಲು ಅಣಿಯಾಗುತ್ತಿದ್ದೇವೆ. ಆದರೆ ಇಂತಹ ಸಂದರ್ಭದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿ ಅಂತ ಪದೇ ಪದೇ ಹೇಳುತ್ತಿದ್ದೀರಲ್ಲ ಇದು ಸರಿಯಲ್ಲ, ಒಂದು ವೇಳೆ ಅಂತಹ ಅಗತ್ಯ ಕಂಡು ಬಂದರೆ ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ನೀವು ಪದೇ ಪದೇ
ಮಾತನಾಡಬೇಡಿ ಅಂತ ಖರ್ಗೆ ಹೇಳಿದಾಗ ಈ ಸಚಿವರು ತಡಬಡಾಯಿಸಿದ್ದಾರೆ. ಸಾರ್, ನಾವು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಹಾಗೆ ಹೇಳುತ್ತಿದ್ದೇವೆ ಎಂದರೂ ಅದನ್ನೊಪ್ಪದ ಖರ್ಗೆ ಅವರು, ಇದಿರಿಂದ ಹೆಚ್ಚು ಸೀಟುಗಳನ್ನು ಗೆಲ್ಲಲು ಸಾಧ್ಯವಿಲ್ಲ. ಬದಲಿಗೆ ಸಂಘಟಿತರಾಗಿ ಕೆಲಸ ಮಾಡಿದರೆ ಮಾತ್ರ ಹೆಚ್ಚು ಸೀಟು ಗಳಿಸಬಹುದು ಎಂದಿದ್ದಾರೆ.
ಯಾವಾಗ ಈ ಬೆಳವಣಿಗೆ ನಡೆಯಿತೋ ಇದಾದ ನಂತರ ಕರ್ನಾಟಕದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕೆಂಬ ಕೂಗು ಶಕ್ತಿ ಕಳೆದುಕೊಂಡು, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಗೆಲ್ಲಿಸುವ ಕುರಿತು ಗಮನ ಹರಿದಿದೆ.
ದಿಲ್ಲಿ ಮೂಲಗಳ ಪ್ರಕಾರ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿರ್ದಿಷ್ಟ ಕ್ಷೇತ್ರಗಳಲ್ಲಿ ಗೆಲ್ಲಿಸುವ ಸಾಮರ್ಥ್ಯ ಯಾರಿಗಿದೆ ಎಂಬ ಅಂಶವನ್ನು ಕಾಂಗ್ರೆಸ್ ವರಿಷ್ಠರು ಗಮನದಲ್ಲಿಟ್ಟುಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ಕ್ಷೇತ್ರಗಳೆಷ್ಟು? ಪಡೆದ ಶೇಕಡಾವಾರು ಮತಗಳೆಷ್ಟು? ಎಂಬುದನ್ನು ಮುಖ್ಯವಾಗಿ ಗಮನಿಸಿರುವ ವರಿಷ್ಠರು, ಇದರ ಆಧಾರದ ಮೇಲೆ ಕರ್ನಾಟಕದಲ್ಲಿ ಗೆಲ್ಲಬಹುದಾದ ಸೀಟುಗಳ ಸಂಖ್ಯೆ ಇಪ್ಪತ್ತು ಅಂತ ಲೆಕ್ಕ ಹಾಕಿದ್ದಾರೆ. ಅರ್ಥಾತ್, ಈ ಕ್ಷೇತ್ರಗಳ ಜವಾಬ್ದಾರಿಯನ್ನು ವಹಿಸಿಕೊಂಡ ಸಚಿವರು ಯಾರಿದ್ದಾರೆ ಇವರು ಶತಾಯಗತಾಯ ಹೋರಾಡಿ ಅಲ್ಲಿ ಪಕ್ಷ ಗೆಲ್ಲುವಂತೆ ನೋಡಿಕೊಳ್ಳಬೇಕು.
ಒಂದು ವೇಳೆ ಇದು ಸಾಧ್ಯವಾಗದೆ ಹೋದರೆ ಅಂತಹಸಚಿವರು ತಲೆದಂಡಕ್ಕೆ ಸಜ್ಜಾಗಿರಬೇಕು ಎಂದು ಸೂಚಿಸಿದೆ. ಪರಿಣಾಮ ಕಳೆದ ಹಲವು ತಿಂಗಳುಗಳಿಂದ ಕೇಳಿ ಬರುತ್ತಿದ್ದ ಹೆಚ್ಚುವರಿ ಡಿಸಿಎಂ ಹುದ್ದೆಗೆ ಬೇಡಿಕೆ ಇಡುತ್ತಿದ್ದವರು ಮತ್ತು ಆಕಾಂಕ್ಷಿಗಳಾಗಿದ್ದವರು ಈಗ ಲೋಕಸಭಾ ಚುನಾವಣೆಯಲ್ಲಿ ತಮ್ಮ ತಮ್ಮ ಸಾಮರ್ಥ್ಯವನ್ನು ತೋರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಒಂದು ವೇಳೆ ಇಂತಹವರು ತಮಗೆ ವಹಿಸಿಕೊಟ್ಟ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಮೇ ನಂತರ ಡಿಸಿಎಂ ಹುದ್ದೆಯ ಬಗ್ಗೆ ಮಾತನಾಡುವ ಶಕ್ತಿ ಪಡೆಯುತ್ತಾರೆ. ಇಲ್ಲದಿದ್ದರೆ ಶಕ್ತಿ ಕಳೆದುಕೊಂಡು ಸೈಡ್ ಲೈನಿಗೆ ಸರಿಯುತ್ತಾರೆ.