ಮಾಡುವ ಖರ್ಚಿಗೂ ಸಿಗುವ ಪ್ರತಿಫಲಕ್ಕೆ ಸಂಬಂಧವಿಲ್ಲ ಆದರೆ ಕೈಯಾರೆ ಬೆಳೆದು ಹಂಚಿ ತಿನ್ನುವಲ್ಲಿ ಸಿಗುವ ಸಂತಸದ ಕಿಮ್ಮತ್ತೇ ಬೇರೆ!
ನಮ್ಮದು ಅರೆರೈತಾಪಿ ಕುಟುಂಬ. ಹಳ್ಳಿಯಲ್ಲಿ ಖುಷ್ಕಿ ಜಮೀನಿನಲ್ಲಿ ರಾಗಿ ಅವರೆ ನವಣೆ ಸಾವೆ ಹುರುಳಿ ಅಲಸಂದೆ ಹುಚ್ಚೆಳ್ಳು ಬೆಳೆಯುತ್ತಿದ್ದೆವು. ತರೀ ಜಮೀನನ್ನು ಕೋರಿಗೆ ಹಿಡಿದಾಗ ಭತ್ತ-ಕಬ್ಬು ಬೆಳೆಯುತ್ತಿದ್ದೆವು. ನಮ್ಮ ಆಲೆಮನೆಯಲ್ಲಿ ರಸವು ಪಾಕಕ್ಕೆ ಕುದಿವಾಗ ಹೊಮ್ಮುತ್ತಿದ್ದ ಮಾದಕ ಪರಿಮಳ, ಈಗಲೂ ನನ್ನ ವಾಸನಾಸ್ಮೃತಿಯಲ್ಲಿದೆ. ಮೊದಲ ಹಂತದಲ್ಲಿ ನಾನು ಅಮ್ಮನ ಜತೆ ಅಲಸಂದೆ ಅವರೆ ಮೆಣಸಿನಕಾಯಿ ಬಿಡಿಸುವ, ಹುಲ್ಲು ಕೀಳುವ, ಕಳೆತೆಗೆವ, ಬದುವಿನ ಮೇಲೆ ಎತ್ತು ಮೇಯಿಸುವ ಉಪರೀ ಕೆಲಸದಲ್ಲಿ ತೊಡಗಿದ್ದೆ. ತಾರುಣ್ಯಕ್ಕೆ ಬಂದಮೇಲೆ ನೇಗಿಲು ಕುಂಟೆಗಳ ಮೇಣಿ ಹಿಡಿಯಲು ಬಡ್ತಿ ಸಿಕ್ಕಿತು. ನನಗೆ ಏಕಾಂತಕ್ಕೆಡೆಯಿಲ್ಲದ ಹಿಡಿಬಡಿಯ ಗಡಿಬಿಡಿಯುಳ್ಳ ಕುಲುಮೆಗಿಂತ, ನಿಸರ್ಗದ ನಡುವೆ ಏಕಾಂತದಲ್ಲಿದ್ದು ಮಣ್ಣಿನಲ್ಲಿ ಕೆಲಸ ಮಾಡುವುದು ಹಿತವೆನಿಸುತ್ತಿತ್ತು. ಮಳೆಬಿದ್ದು ಹದಗೊಂಡ ಜಮೀನನ್ನು ಉಳುವಾಗ, ಹಡಗು ಮೂತಿಯನ್ನು ಕಡಲನೀರನ್ನು ಸೀಳುತ್ತ ಆಚೀಚೆ ತೆರೆಗಳನ್ನು ಚೆಲ್ಲುತ್ತ ಹೋಗುವಂತೆ, ನೇಗಿಲಕುಳವು ಮಣ್ಣನ್ನು ಭೇದಿಸುತ್ತಿದ್ದುದು; ಕಬ್ಬಿಣದ ನೇಗಿಲೊ, ನೆಲದ ಪದರ ಪದರವನ್ನು ಕಾವಲಿಯ ಮೇಲಿನ ರೊಟ್ಟಿಯಂತೆ ಮಗುಚುತ್ತಿದ್ದುದು; ನೆಲದೊಳಗಿಂದ ಎರೆಹುಳು ಗೊಬ್ಬರದ ಹುಳುಗಳು ಹೊರಬೀಳುತ್ತಿದ್ದು, ನೇಗಿಲ ಸಾಲನ್ನು ಹಿಂಬಾಲಿಸಿ ಬರುವ ಹಕ್ಕಿಗಳು ಅವನ್ನು ಕಬಳಿಸುತ್ತಿದ್ದುದು ಬೆರಗು ಹುಟ್ಟಿಸುತ್ತಿತ್ತು. ನಮ್ಮ ತಿಪ್ಪೆಗೆ ಮಳೆಗಾಲದಲ್ಲಿ ಸೊಕ್ಕಿ ಬೆಳೆಯುತ್ತಿದ್ದ ಮುಳ್ಳರಿವೆ ಗಿಡಗಳನ್ನು ಕತ್ತರಿಸಿ ಹಾಕುತಿದ್ದೆವು. ಮೊದಲ ಮಳೆಯ ಕಾಲಕ್ಕದು ಬುತ್ತಿತುಂಬಿದ ಪುಟ್ಟಿಯಂತೆ ತುಂಬಿಕೊಂಡಿರುತ್ತಿತ್ತು. ಕೇಕಿನಂತೆ ಮೃದುವಾಗಿರುತ್ತಿದ್ದ ಗೊಬ್ಬರವನ್ನು ಕಡಿದು ಪುಟ್ಟಿಗೆ ತುಂಬಿ ಗಾಡಿಗೆ ಅಡಕುವಾಗ, ಬೆಳ್ಳನೆಯ ಮಾಂಸಲವಾದ ಕಪ್ಪು ಮೂತಿಯ ಗೊಬ್ಬರಹುಳುಗಳು ಮೈದೋರುತ್ತಿದ್ದವು. ಕಾಗೆಗಳು ಅವನ್ನು ಕೈಮಾ ಉಂಡೆಯಂತೆ ಗುಳುಂ ನುಂಗುತ್ತಿದ್ದವು. ನಾನೂ ಅಣ್ಣನೂ ಮೊದಲ ಮಳೆ ಬೀಳುತ್ತಿದ್ದಂತೆ, ಹೊಲಕ್ಕೆ ಬಂಡಿಯಲ್ಲಿ ಗೊಬ್ಬರ ಹೇರುತ್ತಿದ್ದೆವು. ಗೊಬ್ಬರ ಚೆಲ್ಲುವುದು, ಬದುಗಳನ್ನು ಗುದ್ದಲಿಯಿಂದ ಸವರುವುದು, ಗೊಬ್ಬರದ ಬೆರೆಸಿದ ಬೀನವನ್ನು ಸೊಂಟಕ್ಕೆ ಕಟ್ಟಿಕೊಂಡ ತೊಟ್ಟಿಲಿಗೆ ಕಟ್ಟಿಕೊಂಡು, ಸಾಲುಗುಣಿಗಳಿಗೆ ಹಾಕುವುದು; ಗದ್ದೆಗೆ ಹಸಿರು ಸೊಪ್ಪು ಹಾಕಿ ತುಳಿಯುವುದು; ಕೊಯಿಲು ಮಾಡುವುದು; ಅರಿಯನ್ನು ಸಿವುಡುಗಟ್ಟುವುದು; ಕಣ ಕೆತ್ತುವುದು; ರೋಣಗಲ್ಲು ಹೊಡೆದು ರಾಗಿತುಳಿಸುವುದು, ತೂರಿದ ದವಸವನ್ನು ಪಣತಕ್ಕೆ ಅಡಕುವುದು-ಎಲ್ಲವೂ ಸಂತೋಷ ಕೊಡುತ್ತಿದ್ದವು. ಇವುಗಳಲ್ಲೆಲ್ಲ ಎಡೆಕುಂಟೆ ಕಷ್ಟದ್ದು. ಎಡೆಕುಂಟೆಯನ್ನು ಅದರ ದಿಂಡಿನ ನಡುವಿರುವ ಗುಳಿಯಲ್ಲಿ ಕೋಲನ್ನೂರಿ ದಿಕ್ಕನ್ನು ನಿಯಂತ್ರಿಸುತ್ತ, ಪೈರಿನ ಬುಡ ಕೊಚ್ಚದಂತೆ ಹುಶಾರಾಗಿ ಹಾಯಿಸುವುದನ್ನು ಅಣ್ಣ ಕಲಿಸಿದನು.
ಜಮೀನಿನ ಜತೆಗಿನ ಈ ನಂಟು ನಮಗೆಲ್ಲ ಹಿತ್ತಲಿನಿಂದ ಶುರುವಾಯಿತು. ನಮ್ಮ ಹಿತ್ತಲು ಹಣ್ಣಿನಮರ, ಕಕ್ಕಸ್ಸು, ತಿಪ್ಪೆ, ಹೂವಿನಗಿಡಗಳಿಂದ ಕೂಡಿದ್ದು, ಮಾಲಿನ್ಯ ಸಮೇತವಾದ ಫಲವಂತಿಕೆ ತಾಣವಾಗಿತ್ತು. ನಾವು ಬಾಲ್ಯದಲ್ಲಿ, ಅಡುಗೆಮನೆಯ ಡಬ್ಬಿಗಳಲ್ಲಿ ಸಾರು ಮಾಡಲೆಂದು ಇಟ್ಟಿದ್ದ ಕಾಳುಕಡಿಗಳನ್ನು ಎಗರಿಸಿ, ನಮ್ಮದೇ ಮಡಿಗಳನ್ನು ಮಾಡಿ ಅದರಲ್ಲಿ ಊರುತಿದ್ದೆವು. ಅವು ಅಂಕುರವೊಡೆದು ಹಸಿರು ಉಂಗುರದಂತೆ ನೆಲವನ್ನೊಡೆದು ಮೇಲೆ ಬರುವುದನ್ನು, ದ್ವಿದಳ ಗಿಡವಾಗಿ ತಲೆಯೆತ್ತುವುದನ್ನು ದಿನದಿನವೂ ವೀಕ್ಷಿಸುತ್ತಿದ್ದೆವು. ನಮ್ಮ ಹಿತ್ತಲ ಒಂದು ಮೂಲೆಗೆ ಹುಲ್ಲಬಣವೆಯಿತ್ತು. ಅದು ರಹಸ್ಯ ಮಾತುಕತೆಯ ಕೇಂದ್ರವೂ ಅಳುವವರಿಗೆ ಕೋಪಗೃಹವೂ ಗುಪ್ತಪತ್ರಗಳನ್ನು ಓದಿಸುವ ಸ್ಥಳವೂ ಆಗಿತ್ತು. ಅದರಲ್ಲಿ ಇಲಿಗಳಂತೆ ಬಿಲಮಾಡಿ, ನಾವು ನಮ್ಮ ಪಾಲಿನ ಮಾವಿನಕಾಯನ್ನು ಹಣ್ಣಿಗಿಡುತ್ತಿದ್ದೆವು. ಬಚ್ಚಲನೀರಿಗೆ ಕೊಬ್ಬಿ ಬೆಳೆದ ಬಸಳೆ ತೊಂಡೆ ಹಿತ್ತಲವರೆ ಚಪ್ಪರಗಳು ಸದಾ ತುಂಬಿಕೊಂಡಿರುತ್ತಿದ್ದವು. ಉಳಿದಂತೆ ಕಚ್ಚಿದರೆ ಕೆಂಪುಕಾರುವ ಸೀಬೆಗಿಡ. ಹಲವು ಶಾಖೆಗಳಿದ್ದ ಪಪಾಯಿ ಗಿಡ; ತಿಂಗಳಹುರುಳಿ ಬದನೆ ಬೆಂಡೆ ಚವಳಿ ದಂಟು ಮೂಲಂಗಿಯ ಸಾಲು; ಬೇಲಿಸಾಲಿಗೆ ನುಗ್ಗೆ ಸೀಬೆ ತೆಂಗು ಹುಣಿಸೆ ಮರ; ನುಗ್ಗೆಯ ಬುಡಕ್ಕೆ ಹಬ್ಬಿಸಿದ ಏಳುಸುತ್ತಿನ ಮಲ್ಲಿಗೆ ಬಳ್ಳಿ; ಮುದುಕಿಯರ ಸೊರಗಿದ ಜಡೆಯಂತಿದ್ದ ತೆಂಗಿನಮರದಲ್ಲಿ ಗೊನೆಗೆರಡೊ ಮೂರೊ ನೇತಾಡುವ ಅಳುಮುಂಜಿ ತೆಂಗಿನಕಾಯಿ; ಸಿಹಿಗುಂಬಳ ಸೊರೆ ತುಪ್ಪದಹೀರೆಗಳಿಂದ ಟೇರೇಸ್ ಗಾರ್ಡನಾಗಿರುತ್ತಿದ್ದ ಕೊಟ್ಟಿಗೆಯ ಛಾವಣಿ; ನಡುವೆ ದೃಷ್ಟಿಯಾಗದಂತೆ ನಿಲ್ಲಿಸಿದ ಸುಣ್ಣ ಬಳಿದ ಮಡಕೆದಲೆಯ ಬೆರ್ಚಪ್ಪ.
ನಮಗೆ ದಿನಕ್ಕೆ ಮೊಳದುದ್ದ ಬೆಳೆವ ಕುಂಬಳ ಕುಡಿ, ಅದರ ಹಳದಿಹೂವು ಒಣಗಿ ತುದಿಗೆ ಕಾಯಿಕಚ್ಚುವುದು ಸೋಜಿಗ ಬರಿಸುತ್ತಿತ್ತು. ಇವತ್ತು ಎರಡಂಗುಲದ ಕುಡಿಯಾಗಿದ್ದ ಚವಳೆ, ಬೆಳಕು ಹರಿಯುವುದರೊಳಗೆ ಸೊಂಟಕ್ಕೆ ಖಡ್ಗ ಸಿಕ್ಕಿಸಿಕೊಂಡ ಬಂಟನಂತೆ, ನಾಲ್ಕಂಗುಲ ಬೆಳೆದಿರುತ್ತಿತ್ತು. ಟೊಮಟೊ ಬದನೆ ಹೂವು ಅಮ್ಮನ ಬೆಂಡೋಲೆಗಳಂತಿದ್ದವು. ಆಸರೆಗೆ ನಿಲ್ಲಿಸಿದ ಜರಲಿನಿಂದ ಇಳಿಬಿದ್ದ ಡಬಲ್ಬೀನ್ಸು, ಬಳ್ಳಿಬಿಟ್ಟ ಲೋಲಾಕುಗಳಾಗಿದ್ದವು. ಮೆಕ್ಕೆಜೋಳವು, ಕಂಕುಳಲ್ಲಿ ಮಗು ಎತ್ತಿಕೊಂಡಂತೆ ತೆನೆಬಿಟ್ಟು ರೇಷ್ಮೆನಯದ ಕೆಂಗೂದಲಿನ ಜುಟ್ಟಿನಿಂದ ಟರ್ಕಿಟೋಪಿ ತೊಟ್ಟು ಕಂಗೊಳಿಸುತ್ತಿತ್ತು. ಅಮ್ಮ, ಜಿರ್ರೊಯೆಂದು ಮಳೆಹಿಡಿದ ದಿನಗಳಲ್ಲಿ, ಹಿತ್ತಲಿನಿಂದ ತರಕಾರಿ ಹರಿದುಕೊಂಡು ಬಂದು, ಮಸಾಲೆ ಕಡೆದುಹಾಕಿ ಸಾರು ಮಾಡುತ್ತಿದ್ದಳು. ಅವರೆಬೇಳೆ ಬೇಯಲಿಟ್ಟು, ಮೊರವನ್ನು ಹಿಡಿದು ಹಿತ್ತಲಿಗೆ ಹೋದರೆ, ಕುಂಬಳಕುಡಿ, ನುಗ್ಗೆಸೊಪ್ಪು, ಚಕೋತ, ಹುಣಿಸೆ ಚಿಗುರು, ಹರಿವೆ ತೊಪ್ಪಲನ್ನು ಹರಿದುಕೊಂಡು ಬಂದು, ಮಸ್ಸಪ್ಪು ಕೂಡಿಸುತ್ತಿದ್ದಳು.
ನಮ್ಮ ಕುಟುಂಬವು ಪಕ್ಕದ ತರೀಕೆರೆ ಪಟ್ಟಣಕ್ಕೆ ಗುಳೆ ಬಂದಾಗ, ನಮ್ಮ ಹಿತ್ತಲೂ ಹಿಂಬಾಲಿಸಿತು. ನಾವಿದ್ದ ಬಾಡಿಗೆ ಮನೆಯ ಮುಂದೆ ಕೋಡಿಯ ನೀರಿನ ನಾಲಾದಂಡೆಯಲ್ಲಿದ್ದ ಪಾಕಂಪೋರಂ ಜಾಗಕ್ಕೆ ಮುಳ್ಳುಸುತ್ತಿ ಹಿತ್ತಲು ಮಾಡಿದೆವು. ಪರಿಚಿತ ಹೀರೆ ಚವಳಿ ಬದನೆ ಬೀನ್ಸುಗಳ ಜತೆ ಅಪರಿಚಿತವಾಗಿದ್ದ ಕೋಸು ನವಿಲುಕೋಸು ಸುವರ್ಣಗೆಡ್ಡೆ ಗಜ್ಜರಿಗಳನ್ನೂ ಬೆಳೆದೆವು. ಚಪ್ಪರಗಳಿಂದ ಹಾವುಗಳಂತೆ ಇಳಿಬಿದ್ದ ಸೋರೆಕಾಯಿ ಹಾಲಸೋರೆಗಳು ಜನಾಕರ್ಷಣೆಯ ಕೇಂದ್ರವಾಗಿದ್ದವು. ಹಿತ್ತಲ ನಡುವೆ ತೆಂಗಿನಗರಿಯನ್ನು ಹೊಚ್ಚಿ, ನಾನು ಓದಿಕೊಳ್ಳಲು ಪರ್ಣಕುಟಿ ರಚಿಸಿದೆ. ಬೀದಿ ಹೆಂಗಸರು ‘ರಾಮತ್ತಣ್ಣ ನಾಕುಕಡ್ಡಿ ಕೊತ್ತಂಬರಿ ಬೇಕಿತ್ತು’ ಎಂದು ಬೇಡಿ ಬಂದಾಗ, ಪ್ರಸನ್ನನಾದ ದೊರೆ ಆಸ್ಥಾನದ ಕಲಾವಿದರಿಗೆ ಕೊರಳ ಹಾರ ಬಿಚ್ಚಿಕೊಡುವಂತೆ ಕೊಡುತ್ತಿದ್ದೆ.
ನಾನು, ಶಾಲೆಗೆ ಹೋಗುವ ಒತ್ತಡವಿಲ್ಲದಿದ್ದರೆ ಸಂತೋಷದಿಂದ ರೈತನಾಗಿರುತ್ತಿದ್ದೆ. ಆದರೆ ಬಾಳಿನ ಹಂಚಿಕೆ ಬೇರೆಯೇ ಇತ್ತು. ಎಂ.ಎ. ಫಲಿತಾಂಶದ ಟೆಲಿಗ್ರಾಮನ್ನು ಹಿಡಿದು ಅಪ್ಪ ಬಂದಾಗ, ನಾನು ಹೊಲದಲ್ಲಿದ್ದೆ. ಸಹಪಾಠಿ ವರದರಾಜು ಕಳಿಸಿದ ತಂತಿಯ ಸಂದೇಶ ‘ಫಸಟ್ಯೆಾಂಕ್ ಕಂಗ್ರಾಟ್ಸ್’ ಎಂಬ ಎರಡು ಪದಗಳು, ಹೊಸಹಾದಿಗೆ ದೂಡಿದವು. ಅಪ್ಪ ‘ಏನಂತೊ ಸುದ್ದಿ’ ಎಂದು ಕೇಳಿದ, ‘ಪಾಸಾಗಿದ್ದೀನಪ್ಪ’ ಎಂದೆ. ಸುಡುಬಿಸಿಲಲ್ಲೂ ಅವನ ಮುಖ ಅರಳಿತು. ‘ಒಳ್ಳೆಯದಾಯಿತು. ಈ ಬೇಸಾಯ ಮನೆಮಂದೆಲ್ಲ ಸಾಯ; ಕುಲುಮೆ ಕೆಲಸ ನನ್ನ ತಲೆಗೆ ನಿಂತುಹೋಗಲಿ’ ಎಂದು ಸಂಕಲ್ಪದ ದನಿಯಲ್ಲಿ ನುಡಿದನು. ಅದು ಹಾಗೆಯೇ ಆಯಿತು.
ವೃತ್ತಿ ಬೇರೆಯಾದರೂ ಹಿತ್ತಲ ಸಂಗ ಕೈಬಿಡಲಿಲ್ಲ. ಹೊಸಪೇಟೆಯ ಈಗಿರುವ ಮನೆಯಲ್ಲೂ ಭರಪೂರ ತರಕಾರಿ ಬೆಳೆಯುತ್ತಿದ್ದೆವು. ಮನೆಗೆಲಸಕ್ಕೆ ಬರುತ್ತಿದ್ದ ಹೆಂಗಸು, ಹೊಳೆವ ರಾಯದುರ್ಗದ ಬದನೆಯನ್ನೊ ತೊಗರಿಕಾಯನ್ನೊ ಮಡಿಲುತುಂಬ ಬಿಡಿಸಿಕೊಂಡು ಹೋಗುತ್ತಿತ್ತು. ಯಾವಾಗ ಮಾವು ತೆಂಗು ಸಪೋಟ ಸೀತಾಫಲ ದಿವಿಹಲಸು ಹೆಮ್ಮರಗಳಾಗಿ ಬೆಳೆದು ಘಾತುಕ ನೆರಳನ್ನು ಚೆಲ್ಲಿದವೊ, ತರಕಾರಿಗೆ ಬಿಸಿಲಿಲ್ಲವಾಯಿತು. ಆದರೂ ಮಾವಿನಕಾಯಿ ಸಪೋಟ ದಿವಿಹಲಸು ಹಲಸು ಸೀತಾಫಲವನ್ನು ಇಳಿಸಿದಾಗ, ಫಲರಾಶಿಯ ಮಧ್ಯೆ ಕೂತು ಬಾನು ಆನಂದಿಸುತ್ತಾಳೆ. ದಿವಿಹಲಸಿನಿಂದ ಕರಾವಳಿಯ ಜನರೆಲ್ಲ ಅವಳ ಅಭಿಮಾನಿಗಳಾಗಿದ್ದಾರೆ. ಕೆಂಡಸಂಪಿಗೆ ಇಡೀ ಬೀದಿಗೆ ವಿತರಣೆಯಾಗುತ್ತದೆ. ಬ್ಯಾಂಕಿನಲ್ಲಿ ಸಂಪಿಗೆಯ ಲಂಚದ ದೆಸೆಯಿಂದ, ಚೆಕ್ ಕೊಟ್ಟೊಡನೆ ಕ್ಯಾಶ್ ಸಿಗುತ್ತದೆ.
ನಾನು ಬಾನು ಯಾರ ಮನೆಗೆ ಹೋದರೂ ಹಿತ್ತಲುಗಳನ್ನು ಪ್ರೇಕ್ಷಣೀಯ ಸ್ಥಳಗಳಂತೆ ನೋಡುತ್ತೇವೆ. ನೇಪಾಳ ಭೂತಾನಗಳಲ್ಲಿ ಸಮತಟ್ಟಾದ ನೆಲವೇ ಕಡಿಮೆ. ಆದರೆ ಮನೆಯ ಮುಂದಿನ ಇಳಿಜಾರು ಜಾಗದಲ್ಲಿ ಜನ ಚಿಕ್ಕ ಮಡಿಮಾಡಿ ತರಕಾರಿ ಬೆಳೆಯುವುದನ್ನು ಕಂಡೆವು. ಭೂತಾನದಲ್ಲಿ ಹಣ್ಣು ತರಕಾರಿ ತಂಬಿದ ಹಿತ್ತಲುಗಳಿಲ್ಲದ ಮನೆಯೇ ಇಲ್ಲ. ಒಂದು ಮನೆಯಲ್ಲಿ ಸೀಬೆಕಾಯಿ ತಿನ್ನವವರು ಗತಿಯಿಲ್ಲದೆ ಜಗ್ಗಿದ್ದವು. ಸೀಮೆಬದನೆಗೆ ಕೇಳುವವರು ದಿಕ್ಕಿರದೆ ಬಳ್ಳಿಯಲ್ಲೇ ಬಾಡಿದ್ದವು. ಕ್ರೋಶಿಯಾದಲ್ಲಿ, ನಾವು ಉಳಿದುಕೊಳ್ಳುತ್ತಿದ್ದ ಬಾಡಿಗೆ ಮನೆಗಳಲ್ಲಿ ಕಡ್ಡಾಯವೆಂಬಂತೆ ಕೈದೋಟಗಳಿದ್ದವು. ಅವುಗಳಲ್ಲಿ ಹಣ್ಣು ತರಕಾರಿ. ನಾವು ಹೋದಲ್ಲಿಂದ ಗಿಡ ಬಳ್ಳಿ ಬೀಜಗಳನ್ನು ತರುತ್ತೇವೆ. ಹೀಗಾಗಿ ನಮ್ಮ ಹಿತ್ತಲಲ್ಲಿ ಕಾಸರಗೋಡಿನಿಂದ ತಂದ ಆರ್ಕಿಡ್, ಉಡುಪಿಯಿಂದ ಬಂದ ಲಿಲ್ಲಿ, ಕುಂದಾಪುರದಿಂದ ಅಂಥೋರಿಯಂ, ಬೆಂಗಳೂರಿನಿಂದ ರಂಗೂನ್ಬಳ್ಳಿ, ಶಿವಮೊಗ್ಗೆಯ ದಿವಿಹಲಸು, ತೇಜಸ್ವಿಯವರ ಮನೆಗೆ ಹೋದಾಗ ರಾಜೇಶ್ವರಿ ಕೊಟ್ಟಿದ್ದ ಹೂವಿನಗಿಡ, ತುಮಕೂರಿನ ಹಲಸು, ತೀರ್ಥಹಳ್ಳಿಯ ಪನ್ನೇರಳೆ, ಹಡಗಲಿ ಅಂಜೂರ, ಸಹಪಾಠಿ ಮನೆಯ ಕರಿಮೆಣಸು; ತಿಪಟೂರಿನ ತೆಂಗು; ತರೀಕೆರೆಯ ಬದಾಮಿ ಮಾವು; ಮೈಸೂರಿನ ರಾಮು ಕೊಟ್ಟ ಡ್ರಾಗನ್ಕಳ್ಳಿ, ಗಾಜನೂರು ಡ್ಯಾಮಿನಿಂದ ಕದ್ದು ತಂದ ಕಡ್ಡಿಯಿಂದ ಚಿಗುರಿದ ಕ್ರೋಟನ್-ಹೀಗೆ ಅಖಿಲ ಕರ್ನಾಟಕವೇ ಜಾತ್ರೆ ನೆರೆದಿದೆ. ಈ ಜಾತ್ರೆಗೆ ಸಂಗೀತ ಸಂಯೋಜನೆ ಹಂಪಿ ಸೀಮೆಯ ಹಕ್ಕಿಗಳದ್ದು. ಮಾಡುವ ಖರ್ಚಿಗೂ ಸಿಗುವ ಪ್ರತಿಫಲಕ್ಕೆ ಸಂಬಂಧವಿಲ್ಲ. ಆದರೆ ಕೈಯಾರೆ ಬೆಳೆದು ಹಂಚಿ ತಿನ್ನುವಲ್ಲಿ ಸಿಗುವ ಸಂತಸದ ಕಿಮ್ಮತ್ತೇ ಬೇರೆ.