ಮೀಸಲಾತಿ ವ್ಯವಸ್ಥೆ ಜಾರಿ ಸಂಬಂಧ ಪರ ಮತ್ತು ವಿರೋಧದ ಚರ್ಚೆ ಹಾದಿ ಬೀದಿ, ಹಳ್ಳಿಯ ಪಂಚಾಯಿತಿ ಕಟ್ಟೆಗಳಲ್ಲಿ ಮತ್ತು ಖಾಸಗಿಯಾಗಿ ಕುಳಿತು ಮಾತನಾಡುವಾಗಲೂ ನಿತ್ಯವೂ ನಡೆಯುತ್ತಲೇ ಇದೆ. ಈ ಚರ್ಚೆಯ ಮುಖ್ಯ ಉದ್ದೇಶ ಮೀಸಲಾತಿ ಮೆರಿಟ್ ಮೇಲಿರಬೇಕೇ ವಿನಾ ಜಾತಿ ಆಧಾರದ ಮೇಲಿರಬಾರದು ಎನ್ನುವುದೇ ವಾಸ್ತವ. ಇತ್ತೀಚಿನ ವರ್ಷಗಳಲ್ಲಿ ಈ ವಿವಾದ ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಮತ್ತು ಸುಪ್ರೀಂ ಕೋರ್ಟಿನಲ್ಲೂ ವಿಚಾರಣೆ ನಡೆಯುತ್ತಾ ಕೇಂದ್ರ ಹಾಗೂ ಸಂಬಂಽಸಿದ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡುವ ತೀರ್ಪುಗಳು ಆಗಿಂದಾಗ್ಗೆ ಹೊರಬೀಳುತ್ತಲೇ ಇವೆ. ಹೀಗೆ ಹೊರಬರುವ ಸೂಚನೆ ಮತ್ತು ತೀರ್ಪುಗಳನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪೀಕಲಾಟ ಮತ್ತು ಹಲವಾರು ತೊಂದರೆಗಳು ಎದುರಾಗುತ್ತಿರುವುದನ್ನು ಕಾಣುತ್ತೇವೆ.
ಕೆಲವು ವರ್ಷಗಳಿಂದ ಕೆನೆಪದರ ಮತ್ತು ಒಳಮೀಸಲಾತಿ ವಿಷಯವು ನಿರಂತರ ಚರ್ಚೆಗೆ ಒಳಪಡುತ್ತಿದೆ. ಅಷ್ಟು ಮಾತ್ರವಲ್ಲ ಈ ವಿಷಯಗಳು ಕೂಡ ಪರ ವಿರೋಧಗಳ ಆಯಾಮದಲ್ಲಿ ಚರ್ಚೆ ಮುಂದುವರಿಯುತ್ತಲೇ ಇವೆ. ೨೦೦೪ರಲ್ಲಿ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ನೇತೃತ್ವದ ಐವರು ನ್ಯಾಯಾಧೀಶರ ಪೀಠ , ಅನುಸೂಚಿತ ಜಾತಿಗಳಲ್ಲಿ ಬರುವ ಎಲ್ಲ ಜಾತಿಗಳು ಒಂದೇ ಬಗೆಯ ಅಸ್ಪೃಶ್ಯತೆಯನ್ನು ಅನುಭವಿಸುತ್ತ ಸಮಾನ ದುಃಖಿಗಳಾಗಿರುವುದರಿಂದ (ಹೋಮೋಜೀನಿಯಸ್) ಅವರನ್ನು ವರ್ಗೀಕರಿಸಲು ಸಂವಿಧಾನದ ೩೪೧ನೇ ವಿಧಿಯನ್ವಯ ಬರುವುದಿಲ್ಲ ಎಂದು ಇ.ವಿ.ಚಿನ್ನಯ್ಯ ಮತ್ತು ಆಂಧ್ರಪ್ರದೇಶದ ವರ್ಗೀಕರಣ ಕಾಯ್ದೆಯು ಅಸಾಂವಿಧಾನಿಕ ಎಂದು ತಿರಸ್ಕರಿಸಿತ್ತು ಮತ್ತು ಅನುಸೂಚಿತ ಜಾತಿಗಳ ಪಟ್ಟಿಯನ್ನು ಡಿಸ್ಟರ್ಬ್ ಮಾಡಕೂಡದು ಎಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಸಭೆಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವನ್ನೇ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಬದಲಾಗುವ ಸನ್ನಿವೇಶ ಮತ್ತು ಕಾಯ್ದೆಗಳ ತಿದ್ದುಪಡಿಯ ಹಿನ್ನೆಲೆಯಲ್ಲಿ ೨೦೨೪ ಆಗಸ್ಟ್ ೧ರಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳಾಗಿದ್ದ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ಮಂದಿ ನ್ಯಾಯಮೂರ್ತಿಗಳ ಸಂವಿಧಾನ ಪೀಠ (ಒಬ್ಬರು ವಿರೋಧ) ದವಿಂದರ್ ಸಿಂಗ್ ಮತ್ತು ಪಂಜಾಬ್ ಸರ್ಕಾರದ ವರ್ಗೀಕರಣದ ಪ್ರಕರಣದಲ್ಲಿ ೨೦೦೪ರ ತೀರ್ಪನ್ನು ತಿರಸ್ಕರಿಸಿ, ವೈಜ್ಞಾನಿಕ ಸಮೀಕ್ಷೆ (ಎಂಪಿರಿಕಲ್ ಡೇಟಾ) ನಡೆಸಿ ಅನುಸೂಚಿತ ಜಾತಿಗಳ ವರ್ಗೀಕರಣ ಮಾಡಿ ಈಗಿನ ಮೀಸಲಾತಿಯಲ್ಲೇ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಽಕಾರ ಇರುವುದಾಗಿ ಹೇಳಿತು. ಈ ತೀರ್ಪಿನಿಂದಾಗಿ ಪಂಜಾಬ್, ಹರಿಯಾಣ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಹಲವು ದಶಕಗಳಿಂದ ಒಳ ಮೀಸಲಾತಿಗಾಗಿ ತಳಸಮುದಾಯದ ಕೆಲವು ಜಾತಿಗಳು ನಡೆಸಿಕೊಂಡು ಬಂದ ಹೋರಾಟಕ್ಕೆ ಫಲ ಸಿಕ್ಕಿತು.
೨೦೨೪ರಲ್ಲಿ ನ್ಯಾ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠ ಒಳಮೀಸಲಾತಿಗಷ್ಟಕ್ಕೇ ಸೀಮಿತವಾದ ತೀರ್ಪು ನೀಡಲಿಲ್ಲ. ಜೊತೆಯಲ್ಲಿಯೇ ಅಂದಿನ ಸಂವಿಧಾನ ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಪಂಕಜ್ ಮಿಠಲ್ , ಮೀಸಲಾತಿ ಸೌಲಭ್ಯ ಪಡೆದು ಆರ್ಥಿಕವಾಗಿ ಸುಧಾರಿಸಿದ ಮೊದಲ ಪೀಳಿಗೆಗೆ ಮೀಸಲಾತಿ ಕೊನೆಯಾಗಬೇಕು. ಈ ಪೀಳಿಗೆಗೆ ಮೀಸಲಾತಿ ಸೌಲಭ್ಯ ಮುಂದುವರಿಯಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇದಕ್ಕೆ ಪೀಠದಲ್ಲಿನ ಬಹುತೇಕ ನ್ಯಾಯಮೂರ್ತಿಗಳು ಸಹಮತ ವ್ಯಕ್ತಪಡಿಸಿದ್ದರು.
೨೦೨೪ರಲ್ಲಿ ಸುಪ್ರೀಂ ಕೋರ್ಟ್ ಒಳಮೀಸಲಾತಿ ಪ್ರಕರಣದಲ್ಲಿ ತೀರ್ಪು ನೀಡುವಾಗ, ಈ ಸಂವಿಧಾನ ಪೀಠ, ಹಿಂದುಳಿದ ವರ್ಗಗಳ ಮೀಸಲಾತಿಗೆ ಇರುವ ಕೆನೆಪದರ ನೀತಿಯನ್ನು ಇಲ್ಲಿಯೂ ಜಾರಿಗೆ ತರಬೇಕು. ಈ ಬಗೆಗೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಸೂಚನೆ ನೀಡಿತು. ಈ ತೀರ್ಪು ಬಂದ ಮೇಲೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಗೆ ಕೆನೆಪದರ ನೀತಿ ಅನ್ವಯವಾಗುವುದಿಲ್ಲ. ಹಲವಾರು ವರ್ಷಗಳಿಂದ ಅನ್ಯಾಯಕ್ಕೊಳಗಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಗೆ ಆರ್ಥಿಕ ಮಾನದಂಡವನ್ನು ಅನ್ವಯಿಸಲು ಬರುವುದಿಲ್ಲ. ಮೀಸಲಾತಿಯಿಂದ ಕೆಲವು ಮಂದಿ ಆರ್ಥಿಕವಾಗಿ ಉತ್ತಮ ಸ್ಥಿತಿಗೆ ಬಂದಿದ್ದರೂ, ಹಲವಾರು ವರ್ಷಗಳಿಂದ ಅನುಭವಿಸಿಕೊಂಡು ಬಂದಿರುವ ಸಾಮಾಜಿಕ ವ್ಯವಸ್ಥೆಯು ಅವರನ್ನು ಮುಂದುವರಿಯಲು ಬಿಡುತ್ತಿಲ್ಲ ಎನ್ನುವ ಸ್ಥಿತಿ ಇರುವುದರಿಂದ ಕೆನೆಪದರ ನೀತಿಯನ್ನು ಕೇಂದ್ರ ಸರ್ಕಾರ ಒಪ್ಪುವುದಿಲ್ಲ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಪತ್ರಿಕಾಗೋಷ್ಠಿಯಲ್ಲಿ ಸಂಪುಟ ಸಭೆಯ ನಿರ್ಧಾರವನ್ನು ತಿಳಿಸಿದ್ದರು. ಕೇಂದ್ರ ಸರ್ಕಾರದ ಈ ನಿಲುವನ್ನು ಆಗ ಸುಪ್ರೀಂ ಕೋರ್ಟಿಗೆ ರವಾನಿಸಲಾಯಿತು.
ಸುಪ್ರೀಂ ಕೋರ್ಟ್ ಆಗಸ್ಟ್ ೧ರಂದು ನೀಡಿದ ತೀರ್ಪಿನ ನಂತರ ಅದೇ ತಿಂಗಳ ೯ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಿಜೆಪಿ ಸಂಸತ್ ಸದಸ್ಯರ ನಿಯೋಗವೊಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ವರ್ಗದ ಮೀಸಲಾತಿಗೆ ಕೆನೆಪದರ ನೀತಿಯನ್ನು ಅನುಸರಿಸಬಾರದು ಎಂದು ಒತ್ತಾಯಿಸುವ ಮನವಿಯನ್ನು ಸಲ್ಲಿಸಿದ ಪರಿಣಾಮ ಕೇಂದ್ರ ಸಂಪುಟ ಈ ಮನವಿಗೆ ಪೂರಕವಾದ ತೀರ್ಮಾನವನ್ನು ಕೈಗೊಂಡಿದ್ದನ್ನು ಸ್ಮರಿಸಬಹುದು.
ಈ ಸಮಸ್ಯೆ ಇಲ್ಲಿಗೆ ಮುಗಿಯಿತು ಎನ್ನುವಷ್ಟರಲ್ಲಿ ರೈಲ್ವೆ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ಕೇಂದ್ರ ಸರ್ಕಾರದ ನಿವೃತ್ತ ಪ್ರಿನ್ಸಿಪಲ್ ಸೆಕ್ರೆಟರಿ ಗ್ಯಾನೇಂದ್ರ ಕುಮಾರ್ ಖಾರೆ ಮತ್ತು ಓ.ಪಿ. ಶುಕ್ಲಾ ಹಾಗೂ ಸಮತಾ ಆಂದೋಲನ ಸಮಿತಿಯು ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಪ್ರಸ್ತಾಪಿಸಿರುವಂತೆ ಕೆನೆಪದರ ನೀತಿ ಇಲ್ಲದೆ ಜಾರಿಗೆ ತಂದಿರುವ ಮೀಸಲಾತಿ ವ್ಯವಸ್ಥೆಯಿಂದ ಸಂವಿಧಾನದ ವಿಧಿ ೧೪ ಮತ್ತು ೧೫ರ ಸ್ಪಷ್ಟ ಉಲ್ಲಂಘನೆ ಆಗುತ್ತಿದೆ. ಜೊತೆಗೆ ಉತ್ತಮ ಸ್ಥಿತಿಯಲ್ಲಿರುವವರಿಗೂ ಜಾತಿ ಆಧಾರಿತ ಮೀಸಲಾತಿ ಸೌಲಭ್ಯ ನೀಡುವುದರಿಂದ ಸಾರ್ವಜನಿಕ ಸಂಪನ್ಮೂಲದ ದುರ್ಬಳಕೆ ಆಗುತ್ತಿದೆ ಎಂದು ವಾದಿಸಲಾಯಿತು.
ಈ ಅಂಶವನ್ನು ಗಂಭೀರವಾಗಿ ತೆಗೆದುಕೊಂಡ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಆರ್.ಮಹಾದೇವನ್ ಮತ್ತು ಜಾಯ್ ಮಲ್ಯಾ ಬಾಗ್ಚಿ ನ್ಯಾಯಪೀಠವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಗೂ ಕೆನೆಪದರ ಅನ್ವಯಿಸುವ ಬಗೆಗೆ ಕೇಂದ್ರ ಸರ್ಕಾರವು ತನ್ನ ನಿಲುವನ್ನು ಮತ್ತೆ ಸ್ಪಷ್ಟಪಡಿಸಬೇಕು ಎಂದು ಈ ತಿಂಗಳ ೧೦ರಂದು ಕೇಂದ್ರಕ್ಕೆ ತಾಕೀತು ಮಾಡಿದೆ. ನ್ಯಾಯಾಲಯವು ಮತ್ತೆ ಕೇಳಿರುವ ಈ ಸ್ಪಷ್ಟನೆಗೆ ಕೇಂದ್ರ ಸರ್ಕಾರವು ಒಂದೂವರೆ ವರ್ಷದ ಹಿಂದೆ ತೆಗೆದುಕೊಂಡ ತೀರ್ಮಾನವನ್ನೇ ಮತ್ತೆ ಪುನರುಚ್ಚರಿಸುವ ಸಾಧ್ಯತೆಯೇ ಹೆಚ್ಚು ಎನ್ನುವುದರಲ್ಲಿ ಅನುಮಾನವಿಲ್ಲ. ಮೀಸಲಾತಿಯ ಸೌಲಭ್ಯ ತಳಸಮುದಾಯದಲ್ಲಿರುವ ಬಡವರಿಗೆ ಮೊದಲ ಆದ್ಯತೆಯಾಗಿ ತಲುಪಬೇಕೆನ್ನುವ ಉದ್ದೇಶ ಕೆನೆಪದರ ವ್ಯವಸ್ಥೆಯದ್ದು. ಇದೇ ಸಾಮಾಜಿಕ ನ್ಯಾಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೀಸಲಾತಿಯ ಬಗೆಗಿನ ಪರಿಕಲ್ಪನೆ ಎಂದರೆ ನಮ್ಮ ಅಡಳಿತ ವ್ಯವಸ್ಥೆಯ ಎಲ್ಲ ಹಂತಗಳಲ್ಲಿಯೂ ಪರಿಶಿಷ್ಟರ ಪ್ರಾತಿನಿಧ್ಯ ಇರಬೇಕೆನ್ನುವುದು. ಈ ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ಉನ್ನತ ಶೈಕ್ಷಣಿಕ ಸಂಸ್ಥೆಗಳಾದ ಐಐಟಿ, ಐಐಎಂ, ಐಐಎಸ್‌ಸಿ, ಏಮ್ಸ್‌ನಂತಹ ಕಡೆಗಳಲ್ಲಿ ಮೀಸಲಾತಿಯ ಪರಿಸ್ಥಿತಿ ಶೋಚನೀಯವಾಗಿದೆ. ಚೆನ್ನೆ ನ ಕುಮಾರ್ ಎನ್ನುವವರು ಹಲವು ವರ್ಷ ಶ್ರಮಪಟ್ಟು ಆರ್‌ಟಿಐ ಅರ್ಜಿ ಮೂಲಕ ಪಡೆದಿರುವ ಮಾಹಿತಿಯಂತೆ ಈ ಸಂಸ್ಥೆಗಳಲ್ಲಿ ಶೇ.೮೦ರಿಂದ ೯೦ರಷ್ಟು ಪ್ರಾಧ್ಯಾಪಕರು ಮತ್ತು ಇತರೆ ಸಿಬ್ಬಂದಿಯಲ್ಲಿ ಬಲಿಷ್ಠ ಜಾತಿಗಳು ವಿಶೇಷವಾಗಿ ಬ್ರಾಹ್ಮಣ ವರ್ಗದವರಿದ್ದಾರೆ ಎನ್ನುವ ಅಂಶವನ್ನು ನೋಡಬಹುದು.
ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿ ಅಂತಹ ಕಡೆಗಳಲ್ಲಿ ಉದ್ಯೋಗ ಪಡೆದು ಬೇರೆಯವರ ಜೊತೆ ಸರಿಸಮನಾಗಿ ಕೆಲಸ ಮಾಡಬೇಕಾದರೆ ಪರಿಶಿಷ್ಟ ಜಾತಿಯಲ್ಲಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರ ಮಕ್ಕಳಿಂದ ಸಾಧ್ಯವಾಗಬಹುದು ಎನ್ನುವ ವಾಸ್ತವವನ್ನು ಗಮನಿಸಬೇಕು. ಪರಿಶಿಷ್ಟರ ಮೀಸಲಾತಿಯಲ್ಲಿ ಕೆನೆಪದರ ವ್ಯವಸ್ಥೆ ಜಾರಿಗೆ ಬಂದರೆ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಈಗಿಲ್ಲದ ತಳಸಮುದಾಯದ ಪ್ರಾತಿನಿಧ್ಯ ಮತ್ತಷ್ಟು ಕನಸು ಎನ್ನುವುದು ಬೆಳಕಿನಷ್ಟೇ ನಿಚ್ಚಳ. ಈ ಹಿನ್ನೆಲೆಯಲ್ಲಿ ಹೆಚ್ಚು ಚರ್ಚೆ ಆಗಬೇಕಿದೆ.
ಈ ಮಧ್ಯೆ ಹಿಂದುಳಿದ ವರ್ಗಗಳಿಗೆ ಇರುವ ಕೆನೆಪದರ ನೀತಿಯಲ್ಲಿ ಕೇವಲ ಪೋಷಕರ ಆದಾಯ ಮತ್ತು ವೇತನವನ್ನೇ ಪ್ರಧಾನವಾಗಿ ಪರಿಗಣಿಸಲಾಗದು. ಈ ವರ್ಗಗಳು ಹಲವಾರು ವರ್ಷಗಳಿಂದ ಅನುಭವಿಸಿಕೊಂಡು ಬಂದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಅಸಮಾನತೆಯನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರ ನ್ಯಾಯಪೀಠ ತೀರ್ಪು ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಪೋಷಕರ ವೇತನವನ್ನೇ ಆಧಾರವಾಗಿಟ್ಟುಕೊಂಡು ೨೦೧೫ರಿಂದ ಈ ವರ್ಗದ ವಿದ್ಯಾರ್ಥಿಗಳನ್ನು ಕೆನೆಪದರ ನೀತಿ ವ್ಯಾಪ್ತಿಗೆ ತರುವ ಮೂಲಕ ಅನ್ಯಾಯ ಮಾಡಲಾಗಿತ್ತು. ಈ ತಾರತಮ್ಯವನ್ನು ಮಾರ್ಚ್ ೧೨ರ ತೀರ್ಪು ಸರಿಪಡಿಸಿರುವುದು ಹಿಂದುಳಿದ ವರ್ಗಗಳಿಗೆ ಆಶಾದಾಯಕ ಎಂದೇ ಹೇಳಬಹುದು. ಆದರೆ ಪರಿಶಿಷ್ಟರ ಮೀಸಲಾತಿಗೆ ಕೆನೆಪದರ ನೀತಿಯನ್ನು ಜಾರಿಗೆ ತರಬೇಕೆನ್ನುವ ವಿಷಯದಲ್ಲಿ ಸುಪ್ರೀಂ ಕೋರ್ಟ್ ಪದೇ ಪದೇ ತನ್ನ ನಿಲುವನ್ನು ವ್ಯಕ್ತಪಡಿಸಿರುವುದು ಮತ್ತಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.
” ಪರಿಶಿಷ್ಟರ ಮೀಸಲಾತಿಯಲ್ಲಿ ಕೆನೆಪದರ ವ್ಯವಸ್ಥೆ ಜಾರಿಗೆ ಬಂದರೆ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಈಗಿಲ್ಲದ ತಳಸಮುದಾಯದ ಪ್ರಾತಿನಿಧ್ಯ ಮತ್ತಷ್ಟು ಕನಸು ಎನ್ನುವುದು ಬೆಳಕಿನಷ್ಟೇ ನಿಚ್ಚಳ. ಈ ಹಿನ್ನೆಲೆಯಲ್ಲಿ ಹೆಚ್ಚು ಚರ್ಚೆ ಆಗಬೇಕಿದೆ.”





