ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ಕಳೆದ ವರ್ಷ ೨೦೨೫ರಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಗೆಲುವು ತಂದು ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ಮತ್ತೆ ಮೂರು ದೊಡ್ಡ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆ ಚುನಾವಣೆ ಎದುರಾಗಿದೆ.
ಎಪ್ಪತ್ತರ ದಶಕದ ನಂತರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆ ಪ್ರತ್ಯೇಕವಾಗಿ ನಡೆಯುತ್ತಿದ್ದು ಪ್ರತಿ ವರ್ಷವು ನಾಲ್ಕು ರಾಜ್ಯಗಳ ಚುನಾವಣೆ ನಡೆಯುತ್ತಾ ಬಂದಿದೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ೧೯೭೧ರಲ್ಲಿ ಲೋಕಸಭೆ ವಿಸರ್ಜಿಸಿ ಚುನಾವಣೆಗೆ ಹೋದ ಮೇಲೆ ಮತ್ತು ಹಲವು ರಾಜ್ಯಗಳಲ್ಲಿ ರಾಜಕೀಯ ಏರುಪೇರುಗಳಾದ ಪಕ್ಷಾಂತರ ಮತ್ತು ಇತರೆ ಕಾರಣಗಳಿಗೆ ಆಗಾಗ್ಗೆ ಸರ್ಕಾರಗಳು ಬಿದ್ದು ಹೋದ ಕಾರಣ ಚುನಾವಣೆಗಳು ನಡೆಯುವ ನಿಗದಿತ ಕಾಲಮಾನದಲ್ಲಿ ಏರು ಪೇರಾಯಿತು. ಹೀಗಾಗಿ ಪ್ರತಿ ವರ್ಷವೂ ಹಲವು ರಾಜ್ಯಗಳಿಗೆ ಚುನಾವಣೆ ನಡೆಯುವ ಅನಿವಾರ್ಯ ಪರಿಸ್ಥಿತಿಯನ್ನು ಐದು ದಶಕಗಳಿಂದ ನೋಡುವಂತಾಗಿದೆ.
ಪ್ರತಿ ವರ್ಷವೂ ಚುನಾವಣೆ ನಡೆಯುತ್ತಿರುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇನ್ನು ಮುಂದೆ ಏಕ ಕಾಲಕ್ಕೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆ ನಡೆಸುವ ಪ್ರಯತ್ನದಲ್ಲಿ ತೊಡಗಿದ್ದು ‘ಒಂದು ರಾಷ್ಟ್ರ ಒಂದು ಚುನಾವಣೆ’ ಘೋಷಣೆಯತ್ತ ಹೆಜ್ಜೆ ಇಟ್ಟಿದ್ದಾರೆ. ಆದರೆ ಈ ಉದ್ದೇಶಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಇನ್ನೂ ತಮ್ಮ ಸಹಮತ ವ್ಯಕ್ತಪಡಿಸಿಲ್ಲ. ಹಾಗಾಗಿ ಅದಿನ್ನೂ ಚರ್ಚೆ ಮತ್ತು ವಿವಾದದ ಮಟ್ಟದಲ್ಲಿಯೇ ಇದೆ.
೨೦೧೪ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ಬಿಜೆಪಿ ೨೮೨ ಸ್ಥಾನಗಳನ್ನು ಗಳಿಸಿದರೆ ೨೦೧೮ರಲ್ಲಿ ಆ ಸಂಖ್ಯೆ ೨೭೩ಕ್ಕೆ ಇಳಿಯಿತು. ಅದೀಗ ಅಂದರೆ ೨೦೨೪ರ ಚುನಾವಣೆಯಲ್ಲಿ ಆ ಸಂಖ್ಯಾಬಲ ೨೪೦ಕ್ಕೆ ಇಳಿದಿದ್ದು ಮೋದಿ ಅವರ ಹುಮ್ಮಸ್ಸನ್ನು ಕುಗ್ಗಿಸಿತಾದರೂ ಅವರ ಕೈ ಹಿಡಿದದ್ದು ತೆಲುಗು ದೇಶಂನ ೧೬, ಜನತಾದಳ (ಯು) ೧೨ ಮತ್ತು ಎನ್‌ಡಿಎ ಮೈತ್ರಿಕೂಟದಲ್ಲಿ ಸೇರಿರುವ ಇತರೆ ಪಕ್ಷಗಳಿಂದ ದೊರೆತ ಒಟ್ಟು ೨೯೩ ಸದಸ್ಯರ ಸಂಖ್ಯಾ ಬಲದಿಂದ ಮೋದಿಯವರ ಸ್ಥಾನ ಭದ್ರವಾಗಿ ಉಳಿದಿದೆ. ಆದರೆ ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆ ವಿಶೇಷವಾಗಿ ಮೋದಿ ಅವರ ವರ್ಚಸ್ಸನ್ನು ಹೆಚ್ಚಿಸಿತಾದರೂ, ಬಿಜೆಪಿ ತತ್ವಸಿದ್ಧಾಂತಗಳಿಗೆ ಸಡ್ಡು ಹೊಡೆದು ನಿಂತಿರುವ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್, ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತು ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ನೇತೃತ್ವದ ಎಡಪಕ್ಷಗಳು ಈಗ ನಿಜಕ್ಕೂ ಒಂದು ದೊಡ್ಡ ಸವಾಲಾಗಿ ನಿಂತಿವೆ.
ಪಶ್ಚಿಮ ಬಂಗಾಳ ವಿಧಾನಸಭೆಯ ಒಟ್ಟು ಸ್ಥಾನಗಳು ೨೯೪ ಇದ್ದು, ಅಧಿಕಾರ ಹಿಡಿಯಲು ೧೪೮ ಸ್ಥಾನಗಳು ಬೇಕಾಗಿವೆ. ತಮಿಳುನಾಡಿನ ವಿಧಾನಸಭೆಯ ಒಟ್ಟು ೨೩೪ ಸ್ಥಾನಗಳು, ಕೇರಳ ೧೪೦, ಅಸ್ಸಾಂ ೧೨೬ ಮತ್ತು ಪುದುಚೇರಿಯ ವಿಧಾನಸಭೆಯ ೩೦ ಸ್ಥಾನಗಳಿಗೆ ಬರುವ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಚುನಾವಣೆ ನಡೆಯಬೇಕಿದೆ.
ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಟಿಎಂಸಿ ೨೨೨ ಸ್ಥಾನಗಳನ್ನು, ತಮಿಳುನಾಡಿನಲ್ಲಿ ಡಿಎಂಕೆ ೧೨೬, ಕೇರಳದಲ್ಲಿ ಸಿಪಿಐ (ಎಂ) ೯೯ ಸ್ಥಾನಗಳನ್ನು ಪಡೆದಿವೆ. ಕೇರಳದಲ್ಲಿ ಮೊದಲ ಬಾರಿಗೆ ತಿರುವನಂತಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅಽಕಾರ ಹಿಡಿದಿರುವ ಬಿಜೆಪಿ ದಕ್ಷಿಣ ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹುಮ್ಮಸ್ಸಿನಲ್ಲಿದೆ.
ತಮಿಳುನಾಡಿನ ಜನರ ಮನ ಗೆಲ್ಲಲು ಬಿಜೆಪಿಯು ಈ ಹಿಂದೆ ಎರಡು ಬಾರಿ ಕೊಯಮತ್ತೂರು ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿ ನಂತರ ಜಾರ್ಖಂಡ್ ಮತ್ತು ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಸಿ.ಪಿ.ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಆರಿಸಿ ತರುವ ರಾಜಕೀಯ ತಂತ್ರಗಾರಿಕೆಯಲ್ಲಿ ಯಶಸ್ಸು ಕಂಡಿದೆ. ಇದರ ಜೊತೆಗೆನಾಲ್ಕೈದು ವರ್ಷಗಳಿಂದ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿಯನ್ನೂ ಬೆಳೆಸಿಕೊಂಡಿದ್ದು, ತಮಿಳುನಾಡಿನಲ್ಲಿ ತನ್ನ ಅಧಿಕಾರ ಸ್ಥಾಪನೆಯ ಕನಸಿನ ಹೆಜ್ಜೆಯನ್ನಿಡಲು ಹೊರಟಿದೆ. ಆದರೆ ಬಿಜೆಪಿಯ ಈ ಕನಸು ನನಸಾಗುವುದು ಅಷ್ಟು ಸುಲಭ ಅಲ್ಲ ಎನ್ನುವುದು ದ್ರಾವಿಡ ನೆಲದ ರಾಜಕೀಯ ಹಿನ್ನೆಲೆ ಮತ್ತು ಅಲ್ಲಿನ ಜನರ ದ್ರಾವಿಡ ಅಸ್ಮಿತೆಗೆ ಬದ್ಧರಾಗಿರುವ ಚರಿತ್ರೆಯತ್ತ ಗಮನಿಸಿದರೆ ಬಿಜೆಪಿಗೆ ಚುನಾವಣೆ ದಾರಿ ಅಷ್ಟು ಸುಲಭವಲ್ಲ ಎನ್ನುವುದು ಅರ್ಥವಾದೀತು.
ವಾಸ್ತವವಾಗಿ ಆಳುವ ಡಿಎಂಕೆಗೆ ಈಗ ಪ್ರಬಲ ಪೈಪೋಟಿ ನೀಡುತ್ತಿರುವುದು ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟಕ್ಕಿಂತ ಜನಪ್ರಿಯ ನಟ ದಳಪತಿ ವಿಜಯ್ ಸ್ಥಾಪಿಸಿರುವ ತಮಿಳಿಗ ವೆಟ್ರಿ ಕಳಗಂ ಪಕ್ಷ. ನಟ ವಿಜಯ್ ಈಗ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ತಮಿಳುನಾಡಿನಲ್ಲಿ ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧವಾಗುತ್ತಿವೆ. ಚುನಾವಣೆಯ ನೋಟವನ್ನು ಮತ್ತು ರಾಜಕೀಯ ಪಕ್ಷಗಳು ನಡೆಸುತ್ತಿರುವ ಸಭೆಗಳನ್ನು ಅವರ ಪ್ರಚಾರ ವೈಖರಿಯನ್ನು ಗಮನಿಸಿದರೆ ನಿಜವಾದ ಪೈಪೋಟಿ ಇರುವುದು ಆಡಳಿತದಲ್ಲಿರುವ ಡಿಎಂಕೆಯ ಮುಖ್ಯಮಂತ್ರಿ ಸ್ಟಾಲಿನ್ ಮತ್ತು ದಳಪತಿ ವಿಜಯ್ ನಡುವೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ.
ಪಶ್ಚಿಮ ಬಂಗಾಳವನ್ನು ಸತತವಾಗಿ ೨೫ ವರ್ಷಗಳ ಕಾಲ ಆಳಿದ ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನೂ ಗಳಿಸದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದು, ಆ ಪಕ್ಷಗಳು ದಾರುಣವಾಗಿ ತಮ್ಮ ನೆಲೆ ಕಳೆದುಕೊಂಡದ್ದು ಇತಿಹಾಸ. ಹಾಗೆಯೇ ಕಮ್ಯೂನಿಸ್ಟ್ ರಾಜ್ಯವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಸವಾಲಾಗಿ ನಿಂತ ಬಿಜೆಪಿ ಕಳೆದ ಬಾರಿ ಅಚ್ಚರಿ ಎನಿಸುವಂತೆ ೭೭ ಸ್ಥಾನಗಳನ್ನು ಗಳಿಸುವ ಮೂಲಕ ಇನ್ನು ತನಗೂ ಈ ರಾಜ್ಯದಲ್ಲಿ ಅವಕಾಶ ವಿಪುಲವಾಗಿದೆ ಎನ್ನುವ ಸಂದೇಶವನ್ನು ನೀಡಿತು.
ಎರಡು ದಶಕಗಳ ಕಾಲ ಎಡ ಪಕ್ಷಗಳ ಎದುರು ಹೋರಾಡಿದ ಮಮತಾ ಬ್ಯಾನರ್ಜಿ ಈ ಐದು ವರ್ಷಗಳಲ್ಲಿ ಬಿಜೆಪಿಯ ವಿರುದ್ಧ ಬೀದಿ ಕಾಳಗವನ್ನೇ ಮಾಡಿ ತಮ್ಮ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಈಗ ಸಮರೋಪಾದಿಯಲ್ಲಿ ಚುನಾವಣೆಗೆ ಸಜ್ಜಾಗಿದ್ದಾರೆ. ಆದರೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಮತ್ತು ಬಿಜೆಪಿಯ ಎಲ್ಲ ಚುನಾವಣೆಗಳ ತಂತ್ರಗಾರಿಕೆ ರೂಪಿಸುವಲ್ಲಿ ತಮ್ಮ ಅಽಕಾರದ ಕೈಚಳಕ ತೋರುತ್ತಿರುವ ಅಮಿತ್ ಶಾ ಈ ಬಾರಿ ಬಂಗಾಳವನ್ನು ತಮ್ಮ ವಶಕ್ಕೆ ಪಡೆಯುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವರ ನೆರವಿಗೆ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಕಾರ್ಯ ಪೂರಕವಾಗಿರುವುದು ಈಗ ರಹಸ್ಯವಾಗೇನೂ ಉಳಿದಿಲ್ಲ ಎನ್ನುವುದು ಮನೆಮಾತಾಗಿದೆ. ಬಂಗಾಳಕ್ಕೆ ವಲಸೆ ಬಂದ ಬಾಂಗ್ಲಾ ದೇಶದ ಅಕ್ರಮವಾಸಿಗಳನ್ನು ಹೊರಹಾಕುವ ನೆಪದಲ್ಲಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದತೆಗೆಯಲಾಗಿದೆ ಎನ್ನುವ ಆರೋಪ ಈಗ ಮಮತಾ ಬ್ಯಾನರ್ಜಿ ಅವರ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಇದೇ ಆರೋಪ ಈಗ ತಮಿಳುನಾಡಿನ ಸರದಿಯೂ ಆಗಿದೆ.
ಇನ್ನು ಅಸ್ಸಾಂ ಮತ್ತು ಕೇರಳದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ನಡುವೆಯಷ್ಟೇ ಪೈಪೋಟಿ. ಮುವತ್ತು ಸ್ಥಾನಗಳನ್ನು ಹೊಂದಿರುವ ಪುದುಚೇರಿಯಲ್ಲಿ ಡಿಎಂಕೆಯ ಆಡಳಿತವಿದ್ದರೂ, ಕೇಂದ್ರಾಡಳಿತ ಪ್ರದೇಶವಾದರೂ ದ್ರಾವಿಡ ನೆಲದಲ್ಲಿ ತನ್ನ ಕಾಲೂರಲು ಬಿಜೆಪಿಗೆ ಪ್ರತಿಷ್ಠೆಯ ಕಣವೇ ಆಗಿದೆ. ಇಡೀ ದೇಶವನ್ನೇ ಕೇಸರಿ ಮಾಡುವ ಕನಸು ಹೊತ್ತಿರುವ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಮುಖ್ಯವಾಗಿ ಸವಾಲಾಗಿರುವುದು ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಎನ್ನುವುದು ವಾಸ್ತವ.
” ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆ ವಿಶೇಷವಾಗಿ ಮೋದಿ ಅವರ ವರ್ಚಸ್ಸನ್ನು ಹೆಚ್ಚಿಸಿತಾದರೂ, ಬಿಜೆಪಿ ತತ್ವಸಿದ್ಧಾಂತಗಳಿಗೆ ಸಡ್ಡು ಹೊಡೆದು ನಿಂತಿರುವ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್, ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತು ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ನೇತೃತ್ವದ ಎಡಪಕ್ಷಗಳು ಈಗ ನಿಜಕ್ಕೂ ಒಂದು ದೊಡ್ಡ ಸವಾಲಾಗಿ ನಿಂತಿವೆ.”





