ಇದು ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ಯುಗ. ಅರವತ್ತರ ದಶಕದಲ್ಲಿ ಕೃಷಿ ಕ್ಷೇತ್ರದಲ್ಲಿ ಜಾರಿಗೆ ತಂದ ಜಪಾನ್ ಮಾದರಿಯ ನಾಟಿ, ಕಳೆಕೀಳುವ ಅತಿ ಸರಳ ಯಂತ್ರಗಳು ಬಳಕೆಗೆ ಬಂದಾಗ ಇನ್ನು ಹೊಲ ಗದ್ದೆಗಳಲ್ಲಿ ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲ ಎನ್ನುವ ಆತಂಕ ಎದುರಾಯಿತು. ಮಣ್ಣು ತೆಗೆಯುವುದೂ ಸೇರಿದಂತೆ ಹಲವು ಕೆಲಸಗಳಿಗೆ ಬಳಕೆಯಾಗುವ ಜೆಸಿಬಿ ಅರ್ಥ್ ಮೂವರ್ಸ್ ಯಂತ್ರ ಬಳಕೆಗೆ ಬಂದಾಗ ಮತ್ತೊಂದು ಆತಂಕ ಉಂಟಾಯಿತು. ದಿನವಿಡೀ ಹತ್ತು ಜನರು ಮಾಡುವ ಕೆಲಸವನ್ನು ಒಂದೇ ಗಂಟೆಯಲ್ಲಿ ಈ ಅರ್ಥ್ ಮೂವರ್ಸ್ ಯಂತ್ರ ಮಾಡುವುದರಿಂದ ಕೂಲಿಯನ್ನೇ ನಂಬಿದ ಬಡ ಕಾರ್ಮಿಕರ ಅನ್ನವನ್ನು ಕಿತ್ತುಕೊಳ್ಳಲಾಗುತ್ತಿದೆ ಎನ್ನುವ ಭಯ ಕಾಡಿತು. ಕೂಲಿಯನ್ನೇ ನಂಬಿ ಬದುಕುವ ಗ್ರಾಮೀಣ ಪ್ರದೇಶದ ಜನರಿಗೆ ವರ್ಷದಲ್ಲಿ ೧೦೦ ದಿನ ಕಡ್ಡಾಯವಾಗಿ ಕೆಲಸ ನೀಡಬೇಕೆನ್ನುವ ನರೇಗ ಯೋಜನೆಗಳು ಬಂದಾಗ ಯಂತ್ರಗಳನ್ನು ಬಳಸಕೂಡದು. ಕೆಲಸದ ಅವಶ್ಯಕತೆ ಇರುವ ಕೂಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಕೆಲಸ ನೀಡಬೇಕು ಎನ್ನುವ ಕಾನೂನನ್ನೇ ಅಂದಿನ ಸರ್ಕಾರ ಮಾಡಿತ್ತು.
ಆದರೂ ಸರ್ಕಾರದ ಕಾನೂನಿನ ಕಣ್ಣಿಗೆ ಮಣ್ಣೆರಚಿ ಅಲ್ಲಲ್ಲಿ ಯಂತ್ರಗಳನ್ನೇ ಬಳಸುವ ದೂರುಗಳು ಹೇರಳವಾಗಿ ಸಿಗುತ್ತವೆ. ಮತ್ತೊಂದು ಕಡೆ ಹಳ್ಳಿಗಳಲ್ಲಿ ಹೊಲ ಗದ್ದೆ ಕೆಲಸಗಳಿಗೆ ಕೆಲಸಗಾರರೇ ಸಿಗುವುದಿಲ್ಲ ಎನ್ನುವ ದೂರುಗಳು ಕೂಡ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತಲೇ ಇವೆ. ಕೆಲವರು ಈ ಸಮಸ್ಯೆಗೆ ಸರ್ಕಾರ ನೀಡುತ್ತಿರುವ ಕೆಲವು ಉಚಿತ ಕೊಡುಗೆಗಳು ಕಾರಣ ಎನ್ನುವ ಉದಾಹರಣೆಯನ್ನು ಧಾರಾಳವಾಗಿ ಕೊಡುತ್ತಾರೆ. ಇದರ ನೈಜತೆಯ ಬಗೆಗೆ ಇನ್ನೂ ಕರಾರುವಾಕ್ಕಾದ ಕಾರಣಗಳು ತಿಳಿದು ಬಂದಿಲ್ಲ.
ಅರವತ್ತರ ದಶಕದಲ್ಲಿ ಟೈಪ್‌ರೈಟರ್‌ಗಳು ಬಂದವು. ಎಂಬತ್ತರ ದಶಕದ ಮಧ್ಯದಲ್ಲಿ ಅಲ್ಲಲ್ಲಿ ಕಂಪ್ಯೂಟರ್‌ಗಳು ಕಾಣಿಸಿಕೊಂಡವು. ತೊಂಬತ್ತರ ದಶಕದಿಂದೀಚೆಗೆ ಬಹುತೇಕ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಕಾರ್ಯಾಲಯಗಳಲ್ಲಿ ಕಂಪ್ಯೂಟರ್‌ಗಳು ಟೈಪ್ ರೈಟರ್‌ಗಳ ಜಾಗವನ್ನು ಆಕ್ರಮಿಸಿಕೊಂಡವು. ಅಲ್ಲಿಂದೀಚೆಗೆ ಈಗ ಕಂಪ್ಯೂಟರೀಕರಣದ ಕ್ರಾಂತಿಯೇ ನಡೆದು ಹೋಗಿದೆ. ಕಚೇರಿಗಳು ಮಾತ್ರವಲ್ಲ ಮನೆ ಮನೆಗಳಲ್ಲೂ ಈಗ ಮೇಜಿನ ಮೇಲಿನ ಹಳೇ ಮಾದರಿಯ ಕಂಪ್ಯೂಟರ್‌ಗಳ ಬದಲಿಗೆ ಲ್ಯಾಪ್‌ಟಾಪ್‌ಗಳು ಮತ್ತು ಅದರ ಮುಂದುವರಿದ ನವೀಕೃತ ಮಾದರಿಯ ನೂರಾರು ಲ್ಯಾಪ್ ಟಾಪ್‌ಗಳು ನಮ್ಮ ಮನೆಗಳಲ್ಲಿ ನಿತ್ಯದ ಬಳಕೆಯ ವಸ್ತುವಿನಂತೆ ನಮ್ಮ ಮೇಜಿನ ಮೇಲೆ ಕುಳಿತಿವೆ.
ಕಂಪ್ಯೂಟರ್ ಬಳಕೆಯ ವ್ಯವಸ್ಥೆ ಬಂದಾಗಲೂ ಅನೇಕರ ಉದ್ಯೋಗಗಳು ಹೋಗುತ್ತವೆ ಎನ್ನುವ ಭಯ ಕಾಡಿತು. ಮನೆಗಳಲ್ಲಿ ಟೆಲಿಫೋನ್ ಇಲ್ಲದವರು ಎಸ್‌ಟಿಡಿ ಬೂತ್‌ಗಳ ಮುಂದೆ ಜನರು ಕ್ಯೂ ನಿಲ್ಲುತ್ತಿದ್ದರು. ಮೊಬೈಲ್ ಬಂದಾಗ ಆರಂಭದ ದಿನಗಳಲ್ಲಿ ಕಾಲ್ ಮಾಡುವವರು ಮತ್ತು ಕಾಲ್ ಸ್ವೀಕಾರ ಮಾಡುವವರೂ ಎಷ್ಟು ನಿಮಿಷ ಮಾತನಾಡಿದೆವು ಎನ್ನುವ ಅವಧಿಗೆ ಅಧಿಕ ಹಣ ನೀಡಬೇಕಿತ್ತು. ಉಪಗ್ರಹ ತಂತ್ರಜ್ಞಾನದಿಂದ ಹೇರಳವಾಗಿ ದೊರೆತ ತರಂಗಾಂತರಗಳಿಂದ ಮೊಬೈಲ್ ಬಳಕೆ ಹೆಚ್ಚಾಯಿತು. ಅದರ ಸದುಪಯೋಗಕ್ಕೆ ತಕ್ಕಂತೆ ಖಾಸಗಿ ಸಂಸ್ಥೆಗಳು ಹೇರಳವಾಗಿ ಮೊಬೈಲ್ ಉತ್ಪಾದಿಸಿ ಮಾರುಕಟ್ಟೆಗೆ ಬಿಟ್ಟವು. ಈಗ ಮೊಬೈಲ್ ಇಲ್ಲದ ಕೈಗಳಿಲ್ಲ ಎನ್ನುವ ಮಟ್ಟಿಗೆ ನಮ್ಮ ಸಂವಹನ ಕ್ರಾಂತಿ ಆಗಿದೆ.
ವಿಶ್ವದೆಲ್ಲೆಡೆ ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ ಆಗಾಗ್ಗೆ ಅಂದರೆ ಐದು ವರ್ಷಗಳಿಗೊಮ್ಮೆ ಹಿಂದಿನ ತಂತ್ರಜ್ಞಾನವನ್ನು ಹಿಂದಿಕ್ಕಿ ಮತ್ತೊಂದು ಹೊಸ ತಂತ್ರಜ್ಞಾನ ಬಂದು ನಮ್ಮ ಬದುಕಿನ ಆಯಾಮವನ್ನೇ ಬದಲಿಸುತ್ತಿದೆ. ಮಾಹಿತಿ ತಂತ್ರಜ್ಞಾನದ ದಿಗ್ಗಜರಲ್ಲಿ ಒಬ್ಬರಾದ ನಂದನ್ ನೀಲೇಕಣಿ ಅವರೇ ಹೇಳುವಂತೆ ಇಂಟರ್‌ನೆಟ್ ಎಲ್ಲರ ಬಳಕೆಗೆ ಲಭ್ಯವಾಗಲು ಹತ್ತು ವರ್ಷ ಬೇಕಾಯಿತು. ಹಾಗೆಯೇ ಹಲವರು ಸ್ಮಾರ್ಟ್ ಫೋನ್ ಬಳಸಬೇಕಾದರೆ ಐದು ವರ್ಷ ಬೇಕಾಯಿತು. ಈಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಅತ್ಯಂತ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಈ ಬದಲಾವಣೆಗೆ ನಾವು ಹೊಂದಿಕೊಳ್ಳದೆ ವಿಽ ಇಲ್ಲ ಎನ್ನತ್ತಾರೆ. ಹೀಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆ ಎನ್ನುವುದು ಕ್ಷಣ ಕ್ಷಣಕ್ಕೂ ಆಗುತ್ತಿರುವ ಬೆಳವಣಿಗೆ. ಈ ಐದಾರು ದಶಕಗಳಲ್ಲಿ ಬಂದ ಇಷ್ಟೆಲ್ಲ ಬದಲಾವಣೆಗಳನ್ನು ನಮ್ಮ ಬದುಕಿನ ಒಂದು ಅನಿವಾರ್ಯ ಅಂಗವನ್ನಾಗಿ ಬಳಸಿಕೊಳ್ಳುತ್ತಾ ಮುನ್ನಡೆದಿದ್ದೇವೆ.
ಹೊಸದಿಲ್ಲಿಯಲ್ಲಿ ಫೆ.೧೬ರಿಂದ ೨೦ರವರೆಗೆ ವಿಶ್ವಮಟ್ಟದ ಕೃತಕ ಬುದ್ಧಿ ಮತ್ತೆಯ ಶೃಂಗ ಸಮಾವೇಶ ನಡೆದಿದೆ. ನಮ್ಮ ಬದುಕನ್ನು ಮುನ್ನಡೆಸುವ ಆಡಳಿತ ವ್ಯವಸ್ಥೆ ಹಾಗೂ ಸಾರ್ವಜನಿಕ ಬದುಕಿನ ವಿವಿಧ ಸ್ತರಗಳಲ್ಲಿ ಪ್ರಭಾವಿಸುವ ಕೃತಕ ಬುದ್ಧಿ ಮತ್ತೆಯ ಸಮಾವೇಶದ ಮುಖ್ಯ ಗುರಿ ‘ಪೀಪಲ್, ಪ್ಲಾನೆಟ್ ಮತ್ತು ಪ್ರೋಗ್ರೆಸ್’ ಗುರಿಯನ್ನು ಹೊಂದಿದ ‘ಎಐ ಇಂಪ್ಯಾಕ್ಟ್ ಸಮ್ಮಿಟ್’ ಎನ್ನುವ ಘೋಷ ವಾಕ್ಯವನ್ನು ಒಳಗೊಂಡಿತ್ತು . ಈ ಶೃಂಗ ಸಮಾವೇಶದ ತಂತ್ರಜ್ಞಾನದ ಮೂಲವಾಗಿರುವ ಸಿಲಿಕಾನ್ ವ್ಯಾಲಿಯ ಅತಿ ಬುದ್ಧಿವಂತರೆನಿಸಿಕೊಂಡ ತಂತ್ರಜ್ಞಾನಿಗಳು, ತಂತ್ರಜ್ಞಾನ ಸಂಸ್ಥೆಗಳ ನಿರ್ಮಾತೃಗಳು, ಮಾಹಿತಿ ತಂತ್ರಜ್ಞಾನದ ೧೦೦ ಮಂದಿ ಸಿಇಒಗಳು, ೧೫೦ ಶೈಕ್ಷಣಿಕ ತಜ್ಞರು, ಸಂಶೋಧಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ೧೦೦ ಮಂದಿ ಪ್ರತಿನಿಽಗಳು ಮತ್ತು ೬೦ ಮಂದಿ ವಿವಿಧ ರಾಜ್ಯಗಳ ಮಾಹಿತಿ ತಂತ್ರಜ್ಞಾನದ ಉಸ್ತುವಾರಿ ನೋಡಿಕೊಳ್ಳುವ ಸಚಿವರುಗಳು ಉದ್ಯಮದ ಆಶ್ರಯದಾತರು ಮತ್ತು ದಾನಿಗಳು ಹೀಗೆ ಸಾವಿರಾರು ಮಂದಿಯ ಶೃಂಗ ಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಈ ಶೃಂಗ ಸಮಾವೇಶವನ್ನು ವ್ಯವಸ್ಥೆ ಮಾಡಿದ್ದ ಕೇಂದ್ರ ಸರ್ಕಾರದ ಉದ್ದೇಶ ವಾಣಿಜ್ಯ ಬಳಕೆಗಿಂತ ಅಭಿವೃದ್ಧಿಗೆ ಒತ್ತುಕೊಡಬೇಕೆನ್ನುವುದಾಗಿತ್ತು. ಪ್ರಪಂಚದ ಎಲ್ಲ ಭಾಗಗಳಲ್ಲೂ ಹಬ್ಬುತ್ತಿರುವ ಈ ಕೃತಕ ಬುದ್ಧಿಮತ್ತೆಯ ಶೃಂಗ ಸಮಾವೇಶದಲ್ಲಿ ಈ ತಂತ್ರಜ್ಞಾನದ ಪಾಲುದಾರರು, ನಮ್ಮ ಬದುಕಿನ ಆಯಾಮವನ್ನೇ ಬದಲಾಯಿಸಬಲ್ಲ ಸಂಶೋಧನೆಗಳಿಂದ ಹೊರ ಬರುವ ಹೊಸ ತಂತ್ರಾಂಶಗಳು ಮತ್ತು ಹೊಸ ಹೊಸ ಕಂಪ್ಯೂಟರ್ ಅಪ್ಲಿಕೇಶನ್‌ಗಳನ್ನು ಮಾನವ ಅಭಿವೃದ್ಧಿಗೆ ಬಳಕೆ ಆಗಬೇಕೆನ್ನುವ ಬಯಕೆ ಭಾರತದ್ದಾಗಿದೆ. ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಮಾನವ’ ದೂರದೃಷ್ಟಿಯ ಗುರಿಯನ್ನು ಹೊಂದಿರುವುದಾಗಿ ಹೇಳಿ ಅದರ ಉದ್ದೇಶವನ್ನು ವಿವರಿಸಿದ್ದರು.
ಜನರ ಬದುಕನ್ನು ಪ್ರಭಾವಿಸುವ ಈ ಹೊಸ ತಂತ್ರಜ್ಞಾನದ ಗುರಿ ಸಾರ್ವಜನಿಕರಿಗೆ ಲಾಭವಾಗಬೇಕು. ರೈತರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಬೇಕು ಎನ್ನುವ ಬಯಕೆ ಭಾರತದ್ದು. ಈ ದಿಕ್ಕಿನಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ವಿಶ್ವದ ಅನೇಕ ದೇಶಗಳಲ್ಲಿ ಬದಲಾಗುವ ವಾತಾವರಣದ ಮುನ್ಸೂಚನೆ, ಹೊಸದಾಗಿ ಕಾಣಿಸಿಕೊಳ್ಳುವ ರೋಗ ರುಜಿನಗಳ ಪತ್ತೆ ಮತ್ತು ಸೂಕ್ತ ವೈದ್ಯಕೀಯ ಪರಿಹಾರ ಕಂಡು ಹಿಡಿಯುವಂತಹ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಲಾಗುತ್ತಿದೆ ಎನ್ನುವ ಅಂಶವನ್ನು ಹಲವು ಪ್ರತಿನಿಧಿಗಳು ಸಮಾವೇಶದಲ್ಲಿ ಬೆಳಕು ಚೆಲ್ಲಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಸುದುಪಯೋಗದ ಜೊತೆ ಜೊತೆಯಲ್ಲಿಯೇ ದುರ್ಬಳಕೆ ಆಗುತ್ತಿರುವುದು ಮತ್ತು ಲಕ್ಷಾಂತರ ಮಂದಿಯ ಉದ್ಯೋಗವನ್ನು ಕಸಿದುಕೊಳ್ಳಲಿದೆ ಎನ್ನುವ ಆತಂಕಕಾರಿ ಬೆಳವಣಿಗೆ ಭಯ ಹುಟ್ಟಿಸಿರುವುದು ನಿಜ. ಮಾಹಿತಿ ತಂತ್ರಜ್ಞಾನದ ದಿಗ್ಗಜ ನಂದನ್ ನೀಲೇಕಣಿ, ಶೃಂಗ ಸಮಾವೇಶದಲ್ಲಿ ಮಾತನಾಡುತ್ತಾ, ಕೃತಕ ಬುದ್ಧಿಮತ್ತೆಯು ನಮ್ಮ ಈಗಿನ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯ ಭಾಷೆಯ ವ್ಯಾಕರಣವನ್ನೇ ಮತ್ತೆ ಬರೆಯುತ್ತದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೋಡಿಂಗ್ ಮಾಡುವ ಹುದ್ದೆಗಳೇ ಮಾಯವಾಗಲಿವೆ. ವಿಶ್ವಮಟ್ಟದಲ್ಲಿ ಸುಮಾರು ೯೦ ಮಿಲಿಯನ್ ಸಾಂಪ್ರದಾಯಿಕ ಉದ್ಯೋಗಳೇ ಇಲ್ಲವಾಗಬಹುದು. ಆದರೆ ಅದೇ ಕಾಲಕ್ಕೆ ೧೭೦ ಮಿಲಿಯನ್ ಹೊಸ ಹೊಸ ಉದ್ಯೋಗಾವಕಾಶಗಳು ವಿಶ್ವದಾದ್ಯಂತ ತೆರೆದುಕೊಳ್ಳಲಿವೆ. ಆರೋಗ್ಯ ಕ್ಷೇತ್ರದಲ್ಲಿನ ಸುಧಾರಣೆ, ಶಿಕ್ಷಣ ಮತ್ತು ಭಾಷಾಂತರ ಕ್ಷೇತ್ರದಲ್ಲಿ ಹೊಸ ಅಪ್ಲಿಕೇಶನ್ ಗಳು ಸೃಷ್ಟಿಯಾಗಿ ನೂತನ ಉದ್ಯೋಗಾವಕಾಶಗಳು ದೊರೆಯಲಿವೆ. ಈ ಬೆಳವಣಿಗೆಯಿಂದ ಕಾರ್ಪೋರೇಟ್ ಕುಳಗಳಿಗಿಂತ ಟೆಕ್ನೀಷಿಯನ್‌ಗಳಿಗೆ ಹೆಚ್ಚು ಲಾಭದಾಯಕವಾಗಲಿದೆ. ಕೆಲವು ಉದ್ಯೋಗಗಳು ಮಾಯವಾಗುವುದನ್ನು ತಡೆಯುವುದು ಕಷ್ಟ. ಆದರೆ ಹೊಸ ವಾತಾವರಣಕ್ಕೆ ನಾವು ಹೊಂದಿಕೊಳ್ಳಬೇಕಾಗುತ್ತದೆ ಎನ್ನುವ ಮುನ್ಸೂಚೆನೆಯನ್ನು ನೀಡಿದ್ದು ಗಮನಾರ್ಹ.
ಈ ಶೃಂಗ ಸಮಾವೇಶದಲ್ಲಿ ಭಾಗವಹಿಸಿದ್ದ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಲಿನಾ ಜಿಯಾರ್ಜಿಯಾ ಅವರ ಪ್ರಕಾರ ಕೃತಕ ಬುದ್ಧಿಮತ್ತೆ ಭಾರತದ ವಿಕಸಿತ್ ಭಾರತ್ ಗುರಿ ಸಾಧನೆಗೆ ಸಹಾಯವಾಗಬಹುದು. ಆದರೆ ವಿಶ್ವಮಟ್ಟದಲ್ಲಿ ಇದರಿಂದಾಗುವ ಲಾಭ ಶೇ.೦.೮. ಅಂದರೆ ಕೋವಿಡ್ ಪೂರ್ವದಿನಗಳಿಗಿಂತ ಹೆಚ್ಚು ಅಭಿವೃದ್ಧಿಯ ಬೆಳವಣಿಗೆ ಸಾಧ್ಯತೆಗಳಿವೆ. ಇದರಿಂದ ಭಾರತದ ವಿಕಸಿತ್‌ಭಾರತ್ ಯೋಜನೆಯ ಗುರಿ ಮುಟ್ಟಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಐಎಂಎಫ್ ಈ ಕೃತಕ ಬುದ್ಧಿಮತ್ತೆಯ ಬೆಳವಣಿಗೆಯಿಂದಾಗುವ ಪರಿಣಾಮಗಳ ಬಗೆಗೆ ಮಾಡಿರುವ ಅಧ್ಯಯನದ ಪ್ರಕಾರ ಅನೇಕ ಉದ್ಯೋಗಾವಕಾಶಗಳು ಕಡಿತಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಹೊಸ ಆರ್ಥಿಕ ಕ್ಷೇತ್ರದಲ್ಲಿ ಕಳೆದು ಹೋಗುವ ಉದ್ಯೋಗಾವಕಾಶಗಳಿಗೆ ಹೇಗೆ ಪರ್ಯಾಯ ಕಂಡುಕೊಳ್ಳಬೇಕೆಂದು ಅಧ್ಯಯನ ಮಾಡಲಾಗುತ್ತಿದೆ.
ವಿಶ್ವಮಟ್ಟದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸುನಾಮಿಯಂತೆ ಅವಕಾಶಗಳು ತಪ್ಪಿಹೋಗಲಿವೆ. ಅಂದರೆ ವಿಶ್ವಮಟ್ಟದಲ್ಲಿ ಶೇ.೪೦ರಷ್ಟು ಉದ್ಯೋಗ ನಷ್ಟವಾಗಲಿದೆ. ಆದರೆ ಐಎಂಎಫ್, ಈ ಕೃತಕ ಬುದ್ಧಿಮತ್ತೆಯಿಂದಾಗುವ ಭವಿಷ್ಯದ ಬೆಳವಣಿಗೆಯನ್ನು ಹೇಗೆ ನಿಭಾಯಿಸಬೇಕೆನ್ನುವ ಬಗೆಗೆ ಹಲವು ದೇಶಗಳ ಜೊತೆ ಸಹಾಯಕ್ಕೆ ನಿಲ್ಲಲಿದೆ. ಈ ದಿಕ್ಕಿನಲ್ಲಿ ಸಂಶೋಧನೆ ಮತ್ತು ಅಧ್ಯಯನ ನಡೆಯುತ್ತಿರುವುದಾಗಿ ಆತಂಕ ಎದುರಿಸುತ್ತಿರುವ ರಾಷ್ಟ್ರಗಳಿಗೆ ಭರವಸೆಯ ಬೆಳಕನ್ನು ನೀಡಿದ್ದು ವಿಶೇಷ.
ನಾಲ್ಕು ದಿನಗಳ ಶೃಂಗ ಸಮಾವೇಶದಲ್ಲಿ ಆಗಿರುವ ಬೆಳವಣಿಗೆ ಎಂದರೆ ಕೃತಕ ಬುದ್ಧಿಮತ್ತೆ ಕ್ಷೇತ್ರದ ಮೂಲಭೂತ ವ್ಯವಸ್ಥೆಯ ಸೃಷ್ಟಿಗೆ ಹಲವು ದೇಶಗಳು ತೋರಿರುವ ಬದ್ಧತೆ ಮತ್ತು ಹೂಡಿಕೆಯನ್ನು ಲೆಕ್ಕಾಚಾರ ಹಾಕಿದರೆ ೨೫೦ ಬಿಲಿಯನ್ ಹಣವನ್ನು ವಿನಿಯೋಗಿಸಲು ಬದ್ಧವಾಗಿವೆ ಎಂಬುದನ್ನು ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ಅಶಿನಿ ವೈಷ್ಣವ್ ಪ್ರಕಟಿಸುತ್ತಾ ಈ ಸಮಾವೇಶದ ಯಶಸ್ಸನ್ನು ಶ್ಲಾಸಿ, ಇದೊಂದು ಮಹತ್ವದ ಸಾಧನೆ ಎಂದು ಬೀಗಿದರು.
” ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಸುದುಪಯೋಗದ ಜೊತೆ ಜೊತೆಯಲ್ಲಿಯೇ ದುರ್ಬಳಕೆ ಆಗುತ್ತಿರುವುದು ಮತ್ತು ಲಕ್ಷಾಂತರ ಮಂದಿಯ ಉದ್ಯೋಗವನ್ನು ಕಸಿದುಕೊಳ್ಳಲಿದೆ ಎನ್ನುವ ಆತಂಕಕಾರಿ ಬೆಳವಣಿಗೆ ಭಯ ಹುಟ್ಟಿಸಿರುವುದು ನಿಜ.”





