Mysore
33
few clouds

Social Media

ಭಾನುವಾರ, 08 ಮಾರ್ಚ್ 2026
Light
Dark

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಬಿಹಾರದಲ್ಲಿ ನಿತೀಶ್ ಕುಮಾರ್ ಆಡಳಿತಕ್ಕೆ ಎಳ್ಳುನೀರು

ಬಿಹಾರ ವಿಧಾನಸಭೆಗೆ ಚುನಾವಣೆ ನಡೆದು ಮೂರೂವರೆ ತಿಂಗಳಾಗುವಷ್ಟರಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಗೆ ಏಕಿಷ್ಟು ಆತುರ? ಏನು ಕಾರಣ ಎನ್ನುವುದಕ್ಕೆಲ್ಲ ಉತ್ತರ ತಿಳಿದುಕೊಳ್ಳುವುದಕ್ಕೆ ಯಾರಿಗೂ ಕೃತಕ ಬುದ್ಧಿಮತ್ತೆಯ ವಿಶೇಷ ಜ್ಞಾನವೇನೂ ಬೇಕಾಗಿಲ್ಲ. ಭಾರತೀಯ ಜನತಾ ಪಕ್ಷದ ಅಸಲಿ ರಾಜಕಾರಣದ ಸಾಮಾನ್ಯ ಜ್ಞಾನವಿದ್ದರೆ ಸಾಕು. ರಾಜಕೀಯ ಎಂದರೆ ಹಲವೊಮ್ಮೆ ಅಧಿಕಾರ ಹಿಡಿಯಲು ಗಣಿತ, ವಿಜ್ಞಾನದಂತೆ ಕರಾರುವಾಕ್ಕಾದ ಸಂಖ್ಯಾಬಲ ಮುಖ್ಯವಾದರೆ, ಗುರಿಸಾಧನೆಗೆ ಕೆಲವೊಮ್ಮೆ ರಸಾಯನ ವಿಜ್ಞಾನದಂತೆ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಒಂದುಗೂಡಿಸಿಕೊಂಡು ಹೋಗುವ ಲೆಕ್ಕಾಚಾರ ಮುಖ್ಯವಾಗುತ್ತದೆ. ಈ ಸತ್ಯವನ್ನು ಅರಿತು ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ಸುಲಭವಾಗಿ ಉತ್ತರ ಕಂಡುಕೊಳ್ಳಬಹುದು.

ಬಿಹಾರದಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸಿತು. ಆಗ ಬಿಜೆಪಿಯಾಗಲಿ ಅಥವಾ ಜನತಾದಳ (ಯು) ಆಗಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಲು ಮುಂದಾಗಲಿಲ್ಲ. ನಿತೀಶ್ ಕುಮಾರ್‌ರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಜನತಾದಳ (ಯು)ದಿಂದ ಒತ್ತಡವಿದ್ದರೂ ಬಿಜೆಪಿ ಸುತರಾಂ ಒಪ್ಪಲಿಲ್ಲ.

ಚುನಾವಣೆ ಫಲಿತಾಂಶ ಬಂದಾಗ ಎನ್‌ಡಿಎ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂದು ಬಿಜೆಪಿಯ ಚುನಾವಣಾ ತಂತ್ರಗಾರಿಕೆಯನ್ನು ಹೆಣೆಯುವ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಸ್ಪಷ್ಟಪಡಿಸಿದ್ದರು. ಚುನಾವಣೆ ನಡೆದು ಫಲಿತಾಂಶ ಬಂದಾಗ ಒಟ್ಟು ೨೩೪ ಸ್ಥಾನಗಳ ಪೈಕಿ ಎನ್‌ಡಿಎ ೧೭೮ ಸ್ಥಾನಗಳನ್ನು ಗಳಿಸಿತು. ಅಧಿಕಾರದ ಚುಕ್ಕಾಣಿ ಹಿಡಿಯಲು ೧೨೨ ಸ್ಥಾನಗಳು ಮಾತ್ರ ಬೇಕಾಗಿತ್ತು. ಈ ೧೭೮ ಸ್ಥಾನಗಳ ಪೈಕಿ ಬಿಜೆಪಿ ೯೩ ಮತ್ತು ಜನತಾದಳ (ಯು) ೮೫ ಸ್ಥಾನಗಳನ್ನು ಗಳಿಸಿದವು. ಎನ್‌ಡಿಎ ಕೂಟದ ಇತರೆ ಪಕ್ಷಗಳು ಪಡೆದ ಒಟ್ಟು ಸ್ಥಾನಗಳನ್ನು ಲೆಕ್ಕಹಾಕಿದಾಗ ಆ ಸಂಖ್ಯೆ ೧೭೮ ಮುಟ್ಟಿತ್ತು.ಜನತಾದಳ (ಯು)ಗಿಂತ ಬಿಜೆಪಿ ಎಂಟು ಸ್ಥಾನಗಳನ್ನು ಹೆಚ್ಚಿಗೆ ಪಡೆದಿದ್ದರೂ, ಚುನಾವಣೆ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದದ್ದರಿಂದ ಅವರ ವರ್ಚಸ್ಸು ಮತ್ತು ಜನಪ್ರಿಯತೆಯನ್ನು ಗೌರವಿಸಿ ಬಿಜೆಪಿಯು ನಿತೀಶ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ದುಕೊಳ್ಳುವ ಸಂಧಾನಕ್ಕೆ ತಲೆಬಾಗಿತು.

ಕರ್ನಾಟಕದಲ್ಲಿ ಕಳೆದ ಆರು ತಿಂಗಳಿಂದ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿರುವ ರಾಜಕೀಯ ಜಟಾಪಟಿ ಮತ್ತು ಗೊಂದಲ ಬಿಹಾರದಲ್ಲಿ ನಡೆಯಲಿಲ್ಲ. ಸದ್ದುಗದ್ದಲವಿಲ್ಲದೆ ದಿಢೀರ್ ಬದಲಾವಣೆಯಂತು ಈಗ ನಡೆಯುತ್ತಿದೆ. ಎಪ್ಪತ್ತೆ ದು ವರ್ಷದ ನಿತೀಶ್ ಕುಮಾರ್ ಎರಡು ದಶಕಗಳು ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಿದ್ದಾರೆ. ಅವರ ಈ ಅವಧಿಯಲ್ಲಿ ಕರ್ನಾಟಕದ ಎಚ್. ಡಿ. ಕುಮಾರಸ್ವಾಮಿಯಂತೆ ಪರಿಸ್ಥಿತಿಗೆ ತಕ್ಕಂತೆ ಕಾಂಗ್ರೆಸ್ ಮತ್ತು ಬಿಜೆಪಿಯ ಮೈತ್ರಿಕೂಟಗಳನ್ನು ಬದಲಾಯಿಸಿಕೊಂಡೇ ಬರುವ ಮೂಲಕ ಅಧಿಕಾರ ರಾಜಕಾರಣದಲ್ಲಿ ಮುಂದುವರಿದಿದ್ದಾರೆ. ಸಂಪೂರ್ಣ ಕ್ರಾಂತಿಯ ಕನಸು ಕಂಡಿದ್ದ ಜಯಪ್ರಕಾಶ್ ನಾರಾಯಣ ಮತ್ತು ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರ ಶಿಷ್ಯನಾಗಿ ರಾಜಕೀಯಕ್ಕೆ ಬಂದ ನಿತೀಶ್ ಕುಮಾರ್ ತಮ್ಮ ಎರಡು ದಶಕಗಳ ಅಧಿಕಾರಾವಧಿಯಲ್ಲಿ ಬಿಹಾರದ ಬಡತನವನ್ನು ತಗ್ಗಿಸುವ ಅಥವಾ ಬೇರೆ ರಾಜ್ಯಗಳಿಗೆ ಮಾದರಿಯಾಗುವ ಯಾವ ಬದಲಾವಣೆಯನ್ನೂ ತರಲಿಲ್ಲ ಎನ್ನುವುದು ವಾಸ್ತವ.

ಇತ್ತೀಚಿನ ವರ್ಷಗಳಲ್ಲಿ ಅವರ ಸಾರ್ವಜನಿಕ ವರ್ತನೆ ಕೂಡ ಟೀಕೆಗಳಿಗೆ ಗುರಿಯಾಗಿತ್ತು. ವಯಸ್ಸಾದಂತೆ ಅವರಲ್ಲಿ ಮಾನಸಿಕ ಬದಲಾವಣೆ ಅಂದರೆ ಅರಳುಮರಳು ಕಾಣಿಸಿಕೊಳ್ಳುತ್ತಿರುವ ಸೂಚನೆಯ ಒಂದೆರಡು ಘಟನೆಗಳು ನಡೆದವು. (ಸಮಾರಂಭವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಗಾಂಭೀರ್ಯವಾಗಿ ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸುವ ಬದಲಿಗೆ ಪಕ್ಕದಲ್ಲಿ ನಿಂತಿದ್ದವರನ್ನು ಕರೆದು ಮಾತನಾಡಿಸುವ ಪ್ರಯತ್ನ ಮಾಡಿದ್ದರು ಮತ್ತು ವೈದ್ಯಕೀಯ ಹುದ್ದೆಗೆ ಆಯ್ಕೆಯಾಗಿದ್ದ ಮುಸ್ಲಿಂ ಮಹಿಳೆಯೊಬ್ಬರ ಬುರ್ಖಾವನ್ನು ಎಳೆದ ಪ್ರಕರಣ).

ರಾಜ್ಯ ಸಭೆಯ ಆರು ಸ್ಥಾನಗಳಿಗೆ ರಾಜ್ಯ ವಿಧಾನ ಸಭೆ ಗಳಿಂದ ಮಾ.೧೬ರಂದು ಚುನಾವಣೆ ನಡೆಯಲಿದೆ. ಈ ಸುವರ್ಣಾವಕಾಶವನ್ನು ಬಿಜೆಪಿ ಈಗ ಬಳಸಿಕೊಂಡು ನಿತೀಶ್ ಕುಮಾರ್ ಅವರನ್ನು ರಾಜ್ಯಸಭೆಗೆ ಕಳುಹಿಸಿ ತಾನು ರಾಜ್ಯದ ಅಧಿಕಾರ ಸೂತ್ರ ಹಿಡಿಯುವ ತಂತ್ರಗಾರಿಕೆಯನ್ನು ಯಶಸ್ವಿಯಾಗಿ ಹೆಣೆದಿದೆ. ನಿತೀಶ್ ಕುಮಾರ್ ಅವರನ್ನು ಸಮಾಧಾನ ಮಾಡಲು ಅವರ ಪುತ್ರ ನಿಶಾಂತ್ ಕುಮಾರ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವ ಭರವಸೆಯನ್ನು ನೀಡಿದೆ. ರಾಜ್ಯಸಭೆ ಚುನಾವಣೆಯ ಈ ಆರು ಸ್ಥಾನಗಳ ಪೈಕಿ ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನಬೀನ್ ಅವರನ್ನು ಕೂಡ ರಾಜ್ಯಸಭೆಗೆ ತರುವ ಮೂಲಕ ದೆಹಲಿಯಲ್ಲಿದ್ದು ಸಕ್ರಿಯವಾಗಿ ರಾಷ್ಟ್ರ ರಾಜಕಾರಣದಲ್ಲಿ ತೊಡಗುವಂತೆ ಬಿಜೆಪಿ ಮಾಡುತ್ತಿದೆ. ನಿತೀಶ್ ಕುಮಾರ್ ಅವರು ಬಿಜೆಪಿಯ ಈ ತಂತ್ರಗಾರಿಕೆಗೆ ಪ್ರತಿರೋಧ ವ್ಯಕ್ತಪಡಿಸದಂತೆ ನೋಡಿಕೊಳ್ಳಲು ಹಾಗೂ ಬಿಜೆಪಿಯ ಅಧ್ಯಕ್ಷರ ನಾಮಪತ್ರದ ದಿನ ಗೌರವ ವ್ಯಕ್ತಪಡಿಸಲು ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಮಪತ್ರ ಸಲ್ಲಿಸುವಾಗ ಖುದ್ದು ಹಾಜರಿದ್ದದ್ದು ವಿಶೇಷ.

ಬಿಜೆಪಿಯ ಈ ದಿಢೀರ್ ನಿರ್ಧಾರಕ್ಕೆ ಜನತಾದಳ (ಯು)ದಲ್ಲಿ ಯಾವುದೇ ತಲ್ಲಣ ಉಂಟಾಗಿಲ್ಲ. ನಿತೀಶ್ ಅವರ ಪುತ್ರ ನಿಶಾಂತ್ ಕುಮಾರ್ ಅವರಿಗೆ ಪಕ್ಷದ ಸದಸ್ಯತ್ವ ನೀಡಿ ಅವರು ಪಕ್ಷವನ್ನು ಮುನ್ನಡೆಸುವಂತೆ ಮಾಡಲು ಜೆಡಿಯು ಮಾರ್ಚ್ ೮ರಂದು ಪಟ್ನಾದಲ್ಲಿ ಸಭೆ ಸೇರುತ್ತಿದೆ. ಬಿಹಾರದಲ್ಲಿ ೧೯೪೭ರಿಂದ ಇದುವರೆಗೆ ೨೩ ಮಂದಿ ಮುಖ್ಯಮಂತ್ರಿಗಳಾಗಿದ್ದು ಅವರಲ್ಲಿ ಹತ್ತು ಮಂದಿ ಸಿನ್ಹಾ, ಸಿಂಗ್ , ಪಾಂಡೆ ಮತ್ತು ಮಿಶ್ರ ಹೆಸರಿನ ಬಲಿಷ್ಠ ಜಾತಿಗಳ ನಾಯಕರು ಮುಖ್ಯಮಂತ್ರಿಗಳಾಗಿದ್ದರು. ನಂತರ ಅತ್ಯಂತ ಅಲ್ಪ ಅವಧಿಯಂತೆ ಮೂರು ಬಾರಿ ಪರಿಶಿಷ್ಟ ಜಾತಿಯ ಭೋಲಾ ಪಾಸ್ವಾನ್ ಶಾಸ್ತ್ರಿ, ಹಿಂದುಳಿದ ವರ್ಗದ ನಾಯಕರಾಗಿದ್ದ ಕರ್ಪೂರಿ ಠಾಕೂರ್, ಲಾಲೂ ಪ್ರಸಾದ್ ಯಾದವ್, ಅವರ ಪತ್ನಿ ರಾಬ್ಡಿ ದೇವಿ ಮತ್ತು ನಿತೀಶ್ ಕುಮಾರ್ ಹೀಗೆ ಎಲ್ಲರೂ ತಳಸಮುದಾಯದ ಜಾತಿಗಳಿಗೆ ಸೇರಿದ ಮುಖ್ಯಮಂತ್ರಿಗಳಾಗಿದ್ದರು. ಬಿಜೆಪಿ ಈಗ ಬಿಹಾರದ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದು, ಸಹಜವಾಗಿಯೇ ತನ್ನ ಸಾಂಪ್ರದಾಯಿಕ ಬೆಂಬಲಿತ ಬಲಿಷ್ಠ ಜಾತಿಯ ನಾಯಕರೊಬ್ಬರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುತ್ತಿದೆ. ಬಿಜೆಪಿಯಲ್ಲಿ ಹಿಂದುಳಿದ ವರ್ಗದ ಪ್ರಮುಖ ಮತ್ತು ಬಲಿಷ್ಠ ನಾಯಕರಾರೂ ಮುಖ್ಯಮಂತ್ರಿ ಆಗುವ ವರ್ಚಸ್ಸು ಹೊಂದಿಲ್ಲ. ಹೀಗಾಗಿ ಬಿಜೆಪಿಯು ಮುಖ್ಯಮಂತ್ರಿ ಸ್ಥಾನಕ್ಕೆ ಗೋಪ್ಯವಾಗಿ ತನ್ನ ಆಯ್ಕೆಯನ್ನು ಮಾಡಿಕೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಆದರೂ ಸಾಂಪ್ರದಾಯಿಕವಾಗಿ ಯಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆನ್ನುವ ಬಗೆಗೆ ತನ್ನ ಶಾಸಕರ ಅಭಿಪ್ರಾಯವನ್ನು ಬಿಜೆಪಿ ಸಂಗ್ರಹಿಸುವ ಕಾರ್ಯ ಮತ್ತು ಸಮಾಲೋಚನೆಯಲ್ಲಿ ತೊಡಗಿದೆ. ರಾಜಕೀಯವಾಗಿ ಪ್ರಮುಖ ತೀರ್ಮಾನ ಕೈಗೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮನಸ್ಸಿನಲ್ಲಿ ಯಾರಿದ್ದಾರೆಂದು ಹೇಳುವುದು ಬಹುಶಃ ಬಿಹಾರದವರೇ ಆದ ಬಿಜೆಪಿಯ ಅಧ್ಯಕ್ಷ ನಿತಿನ್ ನಬೀನ್ ಅವರಿಗೆ ತಿಳಿಯದಿದ್ದರೂ ಅಚ್ಚರಿಯೇನಿಲ್ಲ. ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದಿಂದ ಬಿಜೆಪಿಯು ತನ್ನ ಅಧಿಕಾರದ ಕಬಂಧ ಬಾಹುವನ್ನು ವಿಸ್ತರಿಸಿಕೊಳ್ಳುತ್ತಿದೆ.

ಬಿಹಾರದ ಈ ಮಾದರಿ ಮಹಾರಾಷ್ಟ್ರದಲ್ಲಾದ ಬದಲಾವಣೆಯ ಪ್ರತಿರೂಪ. ಮಹಾರಾಷ್ಟ್ರದಲ್ಲಿ ೨೮೮ ವಿಧಾನಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ದೊರೆತ ೨೩೫ ಸ್ಥಾನಗಳನ್ನು ಪೈಕಿ ಬಿಜೆಪಿ ಗಳಿಸಿದ್ದು ೧೩೩ ಸ್ಥಾನಗಳು. ಆಗ ಮುಖ್ಯಮಂತ್ರಿ ಆಗಿದ್ದ ಏಕ್ ನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಗೆದ್ದಿದ್ದು ಕೇವಲ ೫೭ ಸ್ಥಾನಗಳು. ಈ ಚುನಾವಣೆಯಲ್ಲೂ ಮಹಾಯುತಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಿರಲಿಲ್ಲ. ಹಾಗಾಗಿ ಮೈತ್ರಿಕೂಟದಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ್ದ ಬಿಜೆಪಿಯು ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಿದ್ದನ್ನು ಇಲ್ಲಿ ಗಮನಿಸಬಹುದು. ಇದೇ ತಂತ್ರಗಾರಿಕೆಯ ಮೂಲಕ ನಿತೀಶ್ ಅವರನ್ನು ರಾಜ್ಯದ ಸಕ್ರಿಯ ರಾಜಕಾರಣದಿಂದ ಪಕ್ಕಕ್ಕೆ ಸರಿಸುತ್ತಿದೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಬರಲು ಇನ್ನೂ ಎರಡು ವರ್ಷಗಳು ಬೇಕು. ಆದರೆ ವಿರೋಧ ಪಕ್ಷವಾದ ಬಿಜೆಪಿ ಮತ್ತು ಆ ಪಕ್ಷದ ಜೊತೆ ಸೇರಿಕೊಂಡಿರುವ ಜಾ.ದಳದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕೆನ್ನುವ ಚರ್ಚೆ ಆಗಾಗ್ಗೆ ನಡೆಯುತ್ತಲೇ ಇದೆ. ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವುದೇ ತನ್ನ ಏಕಮಾತ್ರ ಗುರಿ ಎನ್ನುವಂತೆ ಜಾ.ದಳದ ನಾಯಕರು ಮಾತನಾಡುತ್ತಿದ್ದಾರೆ. ಆದರೆ ವಿಧಾನಮಂಡಲದ ಬಿಜೆಪಿಯ ನಾಯಕರಿಬ್ಬರು ಚುನಾವಣೆಯಲ್ಲಿ ಬಿಜೆಪಿ ೧೧೩ ಸ್ಥಾನಗಳಿಸಿದರೆ ತಮ್ಮ ಪಕ್ಷದವರು ಮುಖ್ಯಮಂತ್ರಿಗಳಾಗುತ್ತಾರೆ. ಜಾ.ದಳ ೧೧೩ ಸ್ಥಾನಗಳಿಸಿದರೆ ಆ ಪಕ್ಷದ ನಾಯಕರು ಮುಖ್ಯಮಂತ್ರಿ ಆಗುತ್ತಾರೆ ಎಂದು ಬಹಿರಂಗವಾಗಿ ಹೇಳಿದ ನಂತರ ದಳದ ದನಿ ಬದಲಾಗಿದೆ. ದಳದ ಅಗ್ರಗಣ್ಯ ನಾಯಕ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ಕೈಯಲ್ಲಿದೆ ಎಂದು ತಮ್ಮ ಅಸಹಾಯಕತೆಯನ್ನು ಹೊರಗೆಡವಿದ್ದಾರೆ.

ಇತ್ತ ಕುಮಾರಸ್ವಾಮಿ ಅವರು ತಾಯಂದಿರೇ ಕಾಂಗ್ರೆಸ್ ಸರ್ಕಾರ ಎರಡು ಸಾವಿರ ಕೊಟ್ಟರೆ ತಾನು ಅಧಿಕಾರಕ್ಕೆ ಬಂದರೆ ಹತ್ತುಸಾವಿರ ಕೊಡುತ್ತೇನೆ. ತನ್ನನ್ನು ಅಧಿಕಾರಕ್ಕೆ ತನ್ನಿ. ತನಗೆ ಐದು ವರ್ಷ ಅವಕಾಶ ಕೊಡಿ ಎಂದು ಹೇಳುತ್ತಲೇ ಈಗಿನ ರಾಜಕಾರಣವನ್ನು ನೋಡಿದರೆ ರಾಜಕೀಯದ ಬಗೆಗೇ ತನಗೆ ವೈರಾಗ್ಯ ಉಂಟಾಗುತ್ತಿದೆ ಎನ್ನುತ್ತಾ ತಮ್ಮನ್ನು ಕಾಡುತ್ತಿರುವ ಗೊಂದಲ ಮತ್ತು ತಳಮಳವನ್ನು ಹೊರಹಾಕುತ್ತಿರುವುದು ವಿಪರ್ಯಾಸ. ಏನೇ ಆಗಲಿ ಇನ್ನೂ ಎರಡು ವರ್ಷಗಳಲ್ಲಿ ರಾಜಕೀಯ ರಂಗದಲ್ಲಿ ಏನೇನು ಬೆಳವಣಿಗೆ ಆಗುತ್ತದೆಯೋ ಅದನ್ನು ಕಾದುನೋಡುವುದಷ್ಟೇ ಮತದಾರರ ಕೆಲಸ ಎನ್ನುವಂತಾಗಿದೆ. ಬಿಜೆಪಿಯ ತಂತ್ರಗಾರಿಕೆಯ ಮುಂದೆ ಜನತಾದಳದ ಆಟ ಹೇಗೆ ನಡೆಯುತ್ತದೆ ಕಾಲವೇ ಹೇಳಬೇಕು. ಕಾಂಗ್ರೆಸ್ಸಿಗೆ ಆಡಳಿತ ಮಾಡುವ ಅವಕಾಶ ಇನ್ನೂ ಎರಡು ವರ್ಷ ಇರುವುದರಿಂದ ಎಲ್ಲರ ಆಟ ಗಾಳಿಯಲ್ಲಿ ಗುದ್ದಾಟ ನಡೆಸಿದಂತೆ.

” ರಾಜ್ಯ ವಿಧಾನ ಸಭೆಗಳಿಂದ ರಾಜ್ಯ ಸಭೆಗೆ ಮಾ.೧೬ರಂದು ಚುನಾವಣೆ ನಡೆಯಲಿದೆ. ಈ ಸುವರ್ಣಾವಕಾಶವನ್ನು ಬಿಜೆಪಿ ಈಗ ಬಳಸಿಕೊಂಡು ನಿತೀಶ್ ಕುಮಾರ್ ಅವರನ್ನು ರಾಜ್ಯಸಭೆಗೆ ಕಳುಹಿಸಿ ತಾನು ರಾಜ್ಯದ ಅಧಿಕಾರ ಸೂತ್ರ ಹಿಡಿಯುವ ತಂತ್ರಗಾರಿಕೆಯನ್ನು ಯಶಸ್ವಿಯಾಗಿ ಹೆಣೆದಿದೆ.”

 

 

Tags:
error: Content is protected !!