Mysore
20
overcast clouds

Social Media

ಮಂಗಳವಾರ, 10 ಡಿಸೆಂಬರ್ 2024
Light
Dark

ಪತಂಜಲಿ ಸಮಿತಿಯಿಂದ ಯೋಗ ಶಿಕ್ಷಣದ ‘ಸೇವೆ’

ಭಾಗ ೩

ಪ್ರಪಂಚದ ಮೂಲೆ ಮೂಲೆಯಿಂದ ಮೈಸೂರಿಗೆ ಯೋಗ ಕಲಿಯಲು ಸಹಸ್ರಾರು ಮಂದಿ ಬರುತ್ತಿದ್ದಾರೆ. ಇವರಿಗೆಲ್ಲ ಕೇವಲ ಯೋಗವನ್ನು ಮಾತ್ರ ಹೇಳಿಕೊಡದೇ ಸಂಸ್ಕಾರ, ಸಂಘಟನಾ ಕೌಶಲ್ಯ, ಪರಿಸರ ಕಾಳಜಿ, ಸ್ವಚ್ಛತೆ ಕುರಿತು ತಿಳಿಸಿಕೊಡುವ ಸಂಸ್ಥೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ. ಇಷ್ಟೆಲ್ಲ ಹೇಳಿಕೊಡುವ ಈ ಸಂಸ್ಥೆಯೂ ಶಿಬಿರಾರ್ಥಿಗಳಿಂದ ಶುಲ್ಕದ ರೂಪದಲ್ಲಿ ಒಂದು ನಯಾ ಪೈಸೆಯನ್ನು ಸ್ವೀಕರಿಸುವುದಿಲ್ಲ. ಎಲ್ಲವೂ ಉಚಿತ.

ಆರ್. ವೀರೇಂದ್ರ ಪ್ರಸಾದ್

ಮೈಸೂರು: 22 ವರ್ಷಗಳ ಹಿಂದಿನ ಮಾತು. ಅಂದರೆ 2000 ನೇ ಇಸವಿಯಲ್ಲಿ, ಸಾಂಸ್ಕೃತಿಕ ನಗರಿ ಮೈಸೂರಿನ ಸಿದ್ಧಾರ್ಥನಗರದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಾಖೆ ಕಾರ್ಯಾರಂಭ ಮಾಡಿತು. ಸಣ್ಣ ಮಳೆ ಹನಿ ರೂಪದಲ್ಲಿ ಕಲಿಕಾರ್ಥಿಗಳು ಆಗಮಿಸಿದರು. ವಾರದಿಂದ-ವಾರಕ್ಕೆ ದ್ವಿಗುಣವಾಗತೊಡಗಿದರು. ತಿಂಗಳು ಕಳೆಯುವುದರೊಳಗೆ ನೂರಾರು ಜನರು ಪ್ರವೇಶ ಪಡೆದರು.
-ಹೀಗೆ ಪ್ರಾರಂಭವಾದ ಪತಂಜಲಿಯ ‘ಯೋಗ’ಗಾಥೆಯು ವರ್ಷಗಳು ಕಳೆಯುತ್ತಾ-ಕಳೆಯುತ್ತಾ ಮೈಸೂರಿನ ಪ್ರಮುಖ ಎಲ್ಲ ಬಡಾವಣೆಗಳಲ್ಲೂ ಶಾಖಾ ಕೇಂದ್ರಗಳು ಶುರುವಾಗುವುದರೊಂದಿಗೆ, ಜನಮನಸದಲ್ಲಿ ಬೇರು ಬಿಟ್ಟಿದೆ. ನಗರದಲ್ಲಿ ಇನ್ನಿಲ್ಲ ಅಂದರೂ ೮೦ ಕೇಂದ್ರಗಳು ಯೋಗವನ್ನು ಕಲಿಸುತ್ತಿವೆ.

‘ಮೊದಮೊದಲು ಸುಮಾರು ೪೦ ವರ್ಷಕ್ಕಿಂತ ಮೇಲ್ಪಟ್ಟ ವರು ನಮ್ಮ ಕೇಂದ್ರಕ್ಕೆ ಯೋಗ ಕಲಿಯಲು ಬಂದರು. ಅವರಲ್ಲಿ ಬಹುತೇಕರಿಗೆ ಇಂದಿನ ದಿನಮಾನದಲ್ಲಿ ಸಹಜವಾಗಿ ಕಾಡುತ್ತಿರುವ ಮಧುಮೇಹ, ರಕ್ತದ ಒತ್ತಡ ಮುಂತಾದ ಕಾಯಿಲೆಗಳು ಇದ್ದವು. ಆ ಕಾಯಿಲೆಗಳನ್ನು ಹತೋಟಿಗೆ ತಂದು ಕೊಳ್ಳುವ ಕಾರಣಕ್ಕಾಗಿ ಅವರು ಕಲಿಯುವುದಕ್ಕೆ ಬಂದರು. ಆದರೆ ನಮ್ಮ ಸಮಿತಿಯಲ್ಲಿ ನಾವು ಯೋಗವಲ್ಲದೇ ಮಾನಸಿಕ ಆರೋಗ್ಯ ಅಂದರೆ ಆ ವಯಸ್ಸಿನಲ್ಲಿ ಮನಶಾಂತಿ ಕಾಪಾಡಿಕೊಳ್ಳಲು ಏನು ಬೇಕು ಅದನ್ನು ಕಲಿಸಿದೇವು’ ಎಂದು ಸಂಸ್ಥೆಯ ಪ್ರಾರಂಭದ ದಿನಗಳ ಬಗ್ಗೆ ಮಾಹಿತಿ ನೀಡಿದರು ಎಸ್‌ಪಿವೈಎಸ್‌ಎಸ್ ಅಧ್ಯಕ್ಷರಾದ ಗೋಪಾಲಕೃಷ್ಣ ಅವರು.

ಸಿದ್ಧಾರ್ಥ ನಗರದಲ್ಲಿ ಕಲಿಕಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತ ಬಂತಲ್ಲದೇ ಬೇರೆ-ಬೇರೆ ಬಡಾವಣೆಗಳಿಂದ ಜನರು ಅಲ್ಲಿಗೆ ಹುಡುಕಿಕೊಂಡು ಬರಲು ಶುರು ಮಾಡಿದರು. ಇದರಿಂದ ಯಾವ ಬಡಾವಣೆಗಳಿಂದ ಯೋಗ ಶಾಖೆಯನ್ನು ತೆರೆಯಬಹುದಾದಷ್ಟು ಜನರು ಬರುತ್ತಿದ್ದರೋ ಅಲ್ಲಿಗೆ ಮೊದಲ ಆದ್ಯತೆ ನೀಡಿ ಆ ಬಡಾವಣೆಗಳಲ್ಲಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಯಿತು. ಹೀಗೆ ಮೈಸೂರಿನಲ್ಲಿ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿಯು ಸಣ್ಣ ಗಿಡದಂತೆ ಬೆಳೆಯಲು ಪ್ರಾರಂಭವಾಗಿ ಪ್ರಸ್ತುತ ಲಕ್ಷಾಂತರ ಮಂದಿಗೆ ಯೋಗದ ಮೂಲಕ ತಂಪಾದ ‘ನೆರೆಳು’ ನೀಡುವ ಆಲದ ಮರವಾಗಿ ನಿಂತಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ಪತಂಜಲಿಯಲ್ಲಿ ಅಂಥ ವಿಶೇಷತೆ ಏನಿದೆ?
ಇರುವ ನೂರಾರು ಯೋಗ ಶಿಕ್ಷಣ ಶಾಲೆಗಳು ಕಲಿಸುವಂತಯೇ ಪತಂಜಲಿ ಸಮಿತಿಯು ಕಲಿಸುತ್ತದೆ. ಅದರಲ್ಲಿ ವಿಶೇಷತೆ ಏನಿದೆ? ಎನ್ನುವ ಪ್ರಶ್ನೆಯು ಈಗಿನ ಕಲರ್‌ಫುಲ್ ಜಮಾನದಲ್ಲಿ ಮೂಡುವುದು ಸಹಜವೇ. ಅದರೆ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಪ್ರಾರಂಭವಾಗಿ ೪೨ ವರ್ಷ ವಾಗಿದೆ. ವಿಶ್ವದಾದ್ಯಂತ ೧೦,೦೦೦ಕ್ಕೂ ಅಧಿಕ ಶಾಖೆಗಳು ಇವೆ. ಇಲ್ಲಿವರೆಗೆ ಕಲಿತವರ ಸಂಖ್ಯೆಯನ್ನು ಕೋಟಿಯ ಹತ್ತಿರ ಲೆಕ್ಕ ಹಾಕಬಹುದು. ಈ ಅಂಕಿ-ಅಂಶಗಳನ್ನು ಬಿಟ್ಟು ಪತಂಜಲಿಯ ಸೇವೆಯು ಬೇರೊಂದು ಆಯಾಮ ಪಡೆದಕೊಳ್ಳಲು ಕಾರಣವೇನೆಂದರೆ ಸಮಿತಿಯು ಇಲ್ಲಿವರೆಗೂ ಕಲಿಕಾರ್ಥಿಗಳಿಂದ ಯಾವುದೇ ರೂಪದಲ್ಲೂ ಶುಲ್ಕವನ್ನು ಪಡೆದುಕೊಂಡಿಲ್ಲ. ಭಾರತದಲ್ಲಿ ಮಾತ್ರವಲ್ಲಿ ವಿದೇಶದಲ್ಲಿ ಇರುವ ಶಾಖೆಗಳಲ್ಲೂ ಶುಲ್ಕ ಇಲ್ಲ.

ಪತಂಜಲಿ ಸಮಿತಿಯಲ್ಲಿ ಮೊದಲಿಗೆ ೪೫ ದಿನ ಯೋಗದ ಬೇಸಿಕ್ ಕಲಿಸಲಾಗುತ್ತದೆ. ೬ ತಿಂಗಳ ನಂತರ ಜಿಲ್ಲಾ ಮಟ್ಟದ ಪ್ರಶಿಕ್ಷಣ ಕೊಡಲಾಗುತ್ತದೆ. ಇದಾದ ನಂತರ ರಾಜ್ಯಮಟ್ಟದಲ್ಲಿ ಪ್ರಾಂತ್ಯ ಶಿಕ್ಷಣ ಕಲಿಸಲಾಗುತ್ತದೆ. ಇದನ್ನು ಕಲಿತು ಇನ್ನು ಕಲಿಯುತ್ತೇವೆ ಎನ್ನುವವರಿಗೆ ‘ಆತ್ಮಾನುಸಂಧಾನ’ ಕಲಿಸಲಾಗುತ್ತದೆ. ಇವನ್ನೆಲ್ಲ ಕಲಿತವರು ಪ್ರಶಿಕ್ಷಕರಾಗಲು ಪೂರ್ಣ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ.

-ಕೆ.ಎಸ್. ಗೋಪಾಲಕೃಷ್ಣ, ಅಧ್ಯಕ್ಷರು,ಎಸ್‌ಪಿವೈಎಸ್‌ಎಸ್.

ಇತ್ತೀಚಿನ ವರ್ಷಗಳಲ್ಲಿ ಯೋಗದ ಕಡೆಗೆ ಎಲ್ಲರೂ ಆಕರ್ಷಿತರಾಗುತ್ತಿದ್ದಾರೆ. ಯುವಕರು, ಮಹಿಳೆಯರು ಯೋಗ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಋಷಿ ಪರಂಪರೆಯಲ್ಲಿ ಉತ್ತರಗಳು-ಪರಿಹಾರಗಳು ಲಭ್ಯವಾಗುತ್ತವೆ ಎನ್ನುವುದನ್ನು ತಿಳಿದುಕೊಂಡಿದ್ದಾರೆ. ಹಾಗಾಗಿ ವಾರಾಂತ್ಯದಲ್ಲಿ ಮಾತ್ರ ನಡೆಯುತ್ತಿದ್ದ ಯೋಗ ತರಗತಿಗಳು ಈಗ ದಿನ ನಡೆಯುತ್ತಿವೆ.

-ಡಾ.ಎನ್.ಕೃಷ್ಣಮೂರ್ತಿ, ವಿಜ್ಞಾನಿ, ಸಿಎಫ್‌ಟಿಆರ್‌ಐ.

ಪತಂಜಲಿ ಯೋಗ ಶಿಕ್ಷಣ ಸಮಿತಿಗೆ ಪ್ರವೇಶ ಪಡೆದ ಮೇಲೆ ನಮ್ಮ ಜಿವನ ಶೈಲಿಯಲ್ಲಿ ಬದಲಾವಣೆಯಾಗಿದೆ. ಮೊದಲು ಎಷ್ಟೋ ಹೊತ್ತಿಗೆ ಏಳುವುದು, ಸಿಕ್ಕ ಕಡೆಯಲ್ಲಿ ಆಹಾರ ಸೇವನೆ ಮಾಡುವುದು, ಅದೂ ಕೂಡ ಸರಿಯಾದ ಸಮಯಪಾಲನೆಯಾಗುತ್ತಿರಲಿಲ್ಲ. ಆದರೆ ಈಗ ಬೆಳಿಗ್ಗೆ ೫.೧೫ಕ್ಕೆ ತರಗತಿಗಳು ಪ್ರಾರಂಭವಾಗುತ್ತವೆ. ೬.೧೫ರಿಂದ ಒಂದು ಗಂಟೆಕಾಲ ಯೋಗ ತರಬೇತಿ ಪಡೆಯುತ್ತೇವೆ. ಇದರ ಜತೆಗೆ ಸಮೃದ್ಧ ಜೀವನಕ್ಕಾಗಿ ಕಲಿಯಬೇಕಾಗಿರುವ ತತ್ವ-ಚಿಂತನೆಗಳನ್ನು ಹೇಳಿಕೊಡುತ್ತಾರೆ. ಇದರಿಂದಾಗಿ ನಮ್ಮ ಕೆಲಸ ಹಾಗೂ ಬದುಕಿನಲ್ಲಿ ಸತ್ಯವನ್ನು ಪಾಲನೆ ಮಾಡುತ್ತಾ, ಪ್ರಾಮಾಣಿಕತೆಯಿಂದ ನಡೆಯಲು ಸಹಕಾರಿಯಾಗಿದೆ.

 

 

ಪಿಯುಎಸ್‌ಎಸ್ ಸ್ಥಾಪನೆ
ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯು ಸುಮಾರು ೪೨ ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ಹನುಮಂತಪುರದಲ್ಲಿ ಸ್ಥಾಪನೆಯಾಯಿತು. ಎ.ಆರ್. ರಾಮಸ್ವಾಮಿ ಅವರು ಈ ಸಂಸ್ಥೆಯ ಜನಕರು. ಪತಂಜಲಿ ಯೋಗ ಸಮಿತಿಯು ಯೋಗದ ಮೂಲಕ ಸ್ವಯಂ ಸೇವಾ ಗುಣ ಬೆಳವಣಿಗೆ ಕುರಿತು ತಿಳಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ದೇಶದಾದ್ಯಂತ ಇರುವ ಸಾವಿರಕ್ಕೂ ಹೆಚ್ಚು ಶಾಖೆಗಳಲ್ಲಿ ಕಲಿಯುತ್ತಿರುವ ಲಕ್ಷಾಂತರ ಕಲಿಕಾರ್ಥಿಗಳಿಗೆ ಸಾಮಾಜಿಕ ಆರೋಗ್ಯ ಕಾಪಾಡಿಕೊಳ್ಳುವುದರ ಕುರಿತು ಹೇಳಿಕೊಡಲಾಗುತ್ತಿದೆ.

 ದಿನಕ್ಕೊಂದು ಆಸನ 

ಮತ್ಸ್ಯಾಸನ
ಮೀನಿನ ಆಕಾರವನ್ನು ಹೋಲುವ ಆಸನ. ಸರ್ವಾಂಗಾಸನಕ್ಕೆ ಪ್ರತಿಯಾಗಿ ಇದನ್ನು ಅಭ್ಯಾಸ ಮಾಡಲಾಗುತ್ತದೆ .ಕುಳಿತು, ಮಲಗಿ ಎರಡೂ ಕ್ರಮಗಳಲ್ಲಿ ಇದನ್ನು ಮಾಡುವ ರೂಢಿ ಇದೆ. ಮಲಗಿದಲ್ಲಿಯೇ ಮತ್ಸ್ಯಾಸನ ಮಾಡುವ ಕ್ರಮವನ್ನು ಗಮನಿಸಬೇಕು.

ಅಭ್ಯಾಸ ಕ್ರಮ:
*ಸಮತಲ ಸ್ಥಿತಿಗೆ ಬರಬೇಕು. ಮಲಗಿದಲ್ಲಿಯೇ ಎಡಗಾಲು ಬಲತೊಡೆಯ ಮೇಲೆ, ಬಲಗಾಲು ಎಡ ತೊಡೆಯ ಮೇಲೆ ಬರುವಂತೆ ಪದ್ಮಾಸನ ಹಾಕಬೇಕು.
* ಕೈಗಳನ್ನು ಹಿಂದೆ ತಂದು ಹಸ್ತವನ್ನು ಹಿಮ್ಮುಖವಾಗುವಂತೆ ಭುಜದ ಪಕ್ಕ ಊರಬೇಕು.
*ಶ್ವಾಸ ತಗೆದು ಕೊಳ್ಳುತ್ತಾ ಬೆನ್ನು, ಕುತ್ತಿಗೆಯ ಭಾಗವನ್ನು ಮೇಲೆತ್ತಿ ಬೆನ್ನಿನ ಭಾಗವನ್ನು ಕಮಾನಿನಂತೆ ಬಗ್ಗಿಸಿ, ನೆತ್ತಿಯ ಭಾಗವನ್ನು ನೆಲಕ್ಕೆ ಕೂಡಿಸಬೇಕು.
*ಕೈ ಬೆರಳುಗಳಿಂದ ಎರಡೂ ಕಾಲುಗಳ ಹೆಬ್ಬೆರಳುಗಳನ್ನು ಹಿಡಿದು ಮೊಣಕೈ ಗಂಟುಗಳನ್ನು ನೆಲಕ್ಕೆ ತಾಗಿಸಬೇಕು.
*ಕೆಲ ಸಮಯದ ನಂತರ ಶ್ವಾಸ ಬಿಡುತ್ತಾ ಹೋದ ಕ್ರಮದಲ್ಲಿಯೇ ಹಿಂದೆ ಬರಬೇಕು.
* ಪದ್ಮಾಸನ ಹಾಕಲು ಬಾರದಿದ್ದವರಿಗೆ ಮತ್ತೊಂದು ಅಭ್ಯಾಸದ ಕ್ರಮ ಇದೆ. ಸಮತಲ ಸ್ಥಿತಿಗೆ ಬಂದು ಕೈಗಳನ್ನು ಭುಜದ ಪಕ್ಕ ತಂದು ಅಂಗೈಗಳನ್ನು ಹಿಮ್ಮುಖವಾಗಿ ನಿಲ್ಲಿಸಿ. ಹಸ್ತಗಳನ್ನು ನೆಲಕ್ಕೆ ಒತ್ತುತ್ತಾ ಬೆನ್ನಿನ ಕುತ್ತಿಗೆಯ ಶಿರೋಭಾಗವನ್ನು ಮೇಲೆತ್ತಿ. ನೆತ್ತಿಯನ್ನು ನೆಲಕ್ಕೆ ಕೂಡಬೇಕು.
* ಕಾಲುಗಳು ನೇರಕ್ಕೆ ಚಾಚಿರಲಿ, ಕೈಗಳನ್ನು ತೊಡೆಯ ಮೇಲೆ ಇರಿಸಿಕೊಳ್ಳಬೇಕು.
* ಸೊಂಟದಿಂದ ಕೆಳಭಾಗಗಕ್ಕೆ ಚಲನೆಯಿಲ್ಲ. ಶ್ವಾಸ ಬಿಡುತ್ತಾ ಹೋದ ಸ್ಥಿತಿಗಳಲ್ಲಿಯೇ ಹಿಂದೆ ಬರಬೇಕು.

ಲಾಭಗಳು:
*ಥೈರಾಯಿಡ್, ಪ್ಯಾರಾಥೈರಾಯಿಡ್ ಗ್ರಂಥಿಗಳು ಸಕ್ಷಮಗೊಳ್ಳುತ್ತವೆ.
*ಎದೆಯ ಭಾಗ ವಿಸ್ತಾರಗೊಳ್ಳುವುದರಿಂದ ಉಸಿರಾಟದ ತೊಂದರೆ ನಿವಾರಣೆ.
* ಮೂಲವ್ಯಾಧಿ ನಿವಾರರಣೆಗೆ ಪೂರಕ.
*ಮಧುಮೇಹ ನಿಯಂತ್ರಣಕ್ಕೆ ಸಹಾಯಕ.
* ಹೊಟ್ಟೆಯ ಭಾಗದ ತೊಂದರೆಗಳು, ಅರ್ಜಿಣ, ಮಲಬದ್ಧತೆ ನಿವಾರಣೆಗೆ ಪೂರಕ.

– ಮಾಹಿತಿ
ಯೋಗ ಗುರು ಡಾ.ಕೆ. ರಾಘವೇಂದ್ರ ಪೈ, ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ, ಮೈಸೂರು.

 

 

Tags: