Mysore
21
broken clouds

Social Media

ಸೋಮವಾರ, 16 ಮಾರ್ಚ್ 2026
Light
Dark

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಕಾಂಗ್ರೆಸ್‌ನಲ್ಲಿ ನಿರ್ಣಾಯಕ ಘಟ್ಟಕ್ಕೆ ತಲುಪಿದ ಅಧಿಕಾರ ಹಂಚಿಕೆ

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಕಚ್ಚಾಟ ನಿರ್ಣಾಯಕ ಘಟ್ಟಕ್ಕೆ ತಲುಪಿದಂತೆ ಕಾಣುತ್ತಿದೆ.

ಕಾರಣ ಅಧಿಕಾರ ಹಂಚಿಕೆಯ ಮಾತು ಉಳಿದುಕೊಂಡಿದೆ ಎಂಬ ಕಾರಣಕ್ಕಾಗಿ ಪಕ್ಷದ ವರಿಷ್ಠರು ಸಂಪುಟ ಪುನರ್ರಚನೆಗೆ ಅವಕಾಶ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರೆ, ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ತಮಗೆ ಮುಖ್ಯಮಂತ್ರಿ ಪಟ್ಟ ದಕ್ಕುತ್ತಿಲ್ಲ ಎಂಬ ಕಾರಣಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಮುನಿಸಿಕೊಂಡಿದ್ದಾರೆ. ಹೀಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಸದ್ಯದ ಅಸಮಾಧಾನ, ಮುನಿಸುಗಳೇ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಕಚ್ಚಾಟವನ್ನು ನಿರ್ಣಾಯಕ ಘಟ್ಟಕ್ಕೆ ತಂದು ನಿಲ್ಲಿಸಿವೆ.

ಅಂದ ಹಾಗೆ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾದಾಗಲೇ ತಮಗೆ ಸಿಎಂ ಪದವಿ ದಕ್ಕಬೇಕಿತ್ತು, ಸಿದ್ದರಾಮಯ್ಯ ಅವರು ತಮಗೆ ಪಟ್ಟ ಬಿಟ್ಟುಕೊಡಬೇಕಿತ್ತು ಎಂದು ಡಿ.ಕೆ.ಶಿವಕುಮಾರ್ ಈಗ ಮೇಲಿಂದ ಮೇಲೆ ಒಂದು ಮೆಸೇಜು ಕೊಡುತ್ತಾ, ಅತ್ತ ವರಿಷ್ಠರನ್ನೂ, ಇತ್ತ ಪಕ್ಷದ ಶಾಸಕರನ್ನೂ ಒಂದು ಎಚ್ಚರಿಕೆಯಗೂಡಿಗೆ ತಳ್ಳಿದ್ದಾರೆ.

ಆದರೆ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಬಿಟ್ಟುಕೊಡುವ ವಿಷಯದಲ್ಲಿ ಗೊಂದಲವೇನಿಲ್ಲ. ಈ ವಿಷಯದಲ್ಲಿ ಅವರು ತಯಾರಾಗಿಯೇ ಇದ್ದಾರೆ. ಆದರೆ ಈ ವಿಷಯ ಬಂದಾಗ ತೀರ್ಮಾನ ಕೈಗೊಳ್ಳಬೇಕಾದುದು ಪಕ್ಷದ ಹೈಕಮಾಂಡೇ ಹೊರತು ತಾವಲ್ಲ ಎಬುದು ಅವರ ಯೋಚನೆ. ಮೂಲಗಳ ಪ್ರಕಾರ ಅಽಕಾರದಲ್ಲಿರುವುದು, ಕೆಳಗೆ ಇಳಿಯಬೇಕು ಎಂಬುದು ವರಿಷ್ಠರಿಗೆ ಬಿಟ್ಟಿದ್ದು. ನಾನಾಗಿಯೇ ಹೋಗಿ ಈ ಬಗ್ಗೆ ಮಾತನಾಡಲು ಸಾಧ್ಯವೇ? ಎಂದು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಹೇಳಿದ್ದಾರೆ.

ಆದರೆ ಅದೇ ಕಾಲಕ್ಕೆ ಅವರಿಗೆ ಒಂದು ಅಸಮಾಧಾನವೂ ಶುರುವಾಗಿದೆ. ಅದೆಂದರೆ ಸಂಪುಟ ಪುನರ್ರಚನೆಗೆ ಹೈಕಮಾಂಡ್ ಅನುಮತಿ ನೀಡದೆ ಇರುವುದು. ವಾಸ್ತವವಾಗಿ ಸರ್ಕಾರಕ್ಕೆ ಎರಡು ವರ್ಷ ಭರ್ತಿಯಾದ ಸಂದರ್ಭದಲ್ಲೇ ರಾಹುಲ್ ಗಾಂಧಿಯವರು ಸಂಪುಟ ಪುನರ್ರಚನೆ ಮಾಡಿ ಎಂದು ಸಿದ್ದರಾಮಯ್ಯ ಅವರಿಗೆ ಹಸಿರು ನಿಶಾನೆ ತೋರಿಸಿದ್ದರಂತೆ.

ಆದರೆ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾಗಲಿ, ಅಲ್ಲಿಗೆ ಮೊದಲ ಕಂತಿನಲ್ಲಿ ಮಂತ್ರಿಗಳಾದ ಬಹುತೇಕರಿಗೆ ಸಾಕಷ್ಟು ಅವಕಾಶವೂ ಸಿಕ್ಕಂತಾಗುತ್ತದೆ ಮತ್ತು ಎರಡನೇ ಕಂತಿನಲ್ಲಿ ಮಂತ್ರಿಗಳಾದವರಿಗೂ ಅಷ್ಟೇ ಪ್ರಮಾಣದ ಅವಕಾಶ ದಕ್ಕುತ್ತದೆ ಎಂದು ಸಿದ್ದರಾಮಯ್ಯ ರಾಹುಲ್ ಗಾಂಧಿಯವರಿಗೆ ಹೇಳಿದ್ದರು. ವಸ್ತುಸ್ಥಿತಿ ಎಂದರೆ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಸಂಪುಟ ಪುನರ್ರಚನೆ ಮಾಡಲು ಅನುಮತಿ ಕೊಡಿ ಎಂದು ರಾಹುಲ್ ಗಾಂಧಿಯವರನ್ನು ಕೋರಿಕೊಂಡಿದ್ದಾರೆ.

ಅವರ ಈ ಕೋರಿಕೆಗೆ ರಾಹುಲ್ ಗಾಂಧಿಯವರು ಒಪ್ಪಿಗೆ ನೀಡಿದ್ದರೂ ತದ ನಂತರ ಇದ್ದಕ್ಕಿದ್ದಂತೆ ಸಂಪುಟ ಪುನರ್ರಚನೆಗೆ ಇನ್ನಷ್ಟು ದಿನ ಕಾಯಿರಿ ಎಂದು ಹೇಳಿದ್ದರು. ಹೀಗೆ ಅವರು ಧ್ವನಿ ಬದಲಿಸಲು ಡಿಸಿಎಂ ಡಿ. ಕೆ.ಶಿವಕುಮಾರ್ ಅವರು ಕಾರಣ ಎಂಬುದು ಸಿದ್ದರಾಮಯ್ಯ ಪಾಳೆಯದ ಮಾತು. ಎಲ್ಲಿಯವರೆಗೆ ತಮಗೆ ಮುಖ್ಯಮಂತ್ರಿ ಹುದ್ದೆ ಸಿಗುವುದಿಲ್ಲವೋ ಅಲ್ಲಿಯವರೆಗೆ ಸಂಪುಟ ಪುನರ್ರಚನೆಗೆ ಅವಕಾಶ ನೀಡಬಾರದು. ಹಾಗೇನಾದೂ ಅವಕಾಶ ನೀಡಿದರೆ ಅಽಕಾರ ಹಂಚಿಕೆಯ ಮಾತಿಗೆ ಬ್ರೇಕ್ ಬಿದ್ದಿದೆ ಎಂಬ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ನಾಯಕತ್ವದ ವಿಷಯ ಇತ್ಯರ್ಥವಾದ ನಂತರವೇ ಪುನರ್ರಚನೆಯ ಮಾತು ಎಂದು ಡಿ.ಕೆ.ಶಿವಕುಮಾರ್ ಅವರು ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.

ಪರಿಣಾಮ ಕಳೆದ ನವೆಂಬರ್ ತಿಂಗಳಿನಿಂದ ಸಿದ್ದರಾಮಯ್ಯ ಅವರು ಎರಡು, ಮೂರು ಬಾರಿ ಯತ್ನಿಸಿದರೂ ಸಂಪುಟ ಪುನರ್ರಚನೆಗೆ ಹಸಿರು ನಿಶಾನೆ ದೊರಕುತ್ತಿಲ್ಲ. ಹೀಗೆ ತಮ್ಮ ಸಂಪುಟ ಪುನರ್ರಚನೆಗೆ ಅವಕಾಶ ಸಿಗದೆ ಇರುವ ಕಾರಣ ಸರ್ಕಾರದ ಬಗ್ಗೆ ವ್ಯತಿರಿಕ್ತ ಸಂದೇಶ ರವಾನೆ ಯಾಗುತ್ತಿದೆ ಎಂಬುದು ಸಿದ್ದರಾಮಯ್ಯನವರ ಅಸಮಾಧಾನ. ಅಂದ ಹಾಗೆ ನಾಯಕತ್ವದ ವಿಷಯ ಬಂದಾಗ ದಿಲ್ಲಿ ದೊರೆಗಳ ಭಾವನೆ ಏನು ಅನ್ನುವ ಬಗ್ಗೆ ಸಿದ್ದರಾಮಯ್ಯನವರಿಗೆ ನಕಾರಾತ್ಮಕ ಅಂಶಗಳೇನೂ ಗಮನಕ್ಕೆ ಬಂದಿಲ್ಲ. ಬದಲಿಗೆ, ಕರ್ನಾಟಕದಲ್ಲಿ ಸಿದ್ದರಾಮಯ್ಯನವರನ್ನು ಕೆಳಗಿಳಿಸುವುದು ಎಂದರೆ ರಾಷ್ಟ್ರ ಮಟ್ಟದಲ್ಲಿ ಅಹಿಂದ ವರ್ಗಗಳಿಗೆ ತಪ್ಪು ಸಂದೇಶ ರವಾನೆಯಾಗುವುದು ಎಂದೇ ಅರ್ಥ ಅನ್ನುವುದು ರಾಹುಲ್ ಗಾಂಧಿಯವರ ಲೆಕ್ಕಾಚಾರ ಎಂಬುದು ಸಿದ್ದರಾಮಯ್ಯನವರಿಗೆ ಇರುವ ಮಾಹಿತಿ.

ಏಕೆಂದರೆ ಇವತ್ತು ದೇಶದೆಲ್ಲೆಡೆ ಶೋಷಿತ ಸಮುದಾಯಗಳ ಪರವಾಗಿ ಮಾತನಾಡುತ್ತಾ, ಇಲ್ಲಿ ಅದೇ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಶೋಷಿತ ಸಮುದಾಯಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ರಾಹುಲ್ ಗಾಂಧಿಯವರ ಲೆಕ್ಕಾಚಾರ. ಹೀಗಾಗಿ ಅವರು ತಮ್ಮನ್ನು ಕೆಳಗಿಳಿಸುವ ಕುರಿತು ಯೋಚಿಸುವುದಿಲ್ಲ ಎಂಬುದು ಸಿದ್ದರಾಮಯ್ಯನವರ ನಂಬಿಕೆ. ಆದರೆ ರಾಹುಲ್ ಗಾಂಧಿಯವರಿಗೆ ಇರುವ ಈ ಭಾವನೆ ಸೋನಿಯಾ ಗಾಂಧಿಯವರಿಗಾಗಲೀ, ಪ್ರಿಯಾಂಕಾ ಗಾಂಧಿಯವರಿಗಾಗಲೀ ಇಲ್ಲ. ವಸ್ತುಸ್ಥಿತಿ ಎಂದರೆ ಅವರಿಗೆ ಹಲವು ಕಾರಣಗಳಿಗಾಗಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಪಟ್ಟಕ್ಕೇರುವುದು ಬೇಕು.

ಆದರೆ ಅವರ ಭಾವನೆ ಏನೇ ಇದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಇವತ್ತು ನಿರ್ಣಾಯಕ ತೀರ್ಮಾನ ಕೈಗೊಳ್ಳುವುದು ರಾಹುಲ್ ಗಾಂಧಿಯವರೇ ಹೊರತು ಇನ್ನೊಬ್ಬರಲ್ಲ. ಹೀಗಾಗಿ ರಾಹುಲ್ ಗಾಂಧಿಯವರ ಬಯಕೆ ಏನಿದೆ ಅದರ ಪ್ರಕಾರವೇ ದಿನಗಳು ಮುಂದೋಡುತ್ತವೆ ಎಂಬುದು ಸಿದ್ದರಾಮಯ್ಯನವರ ಪಾಳೆಯದ ಮಾತು.

ಆದರೆ ಇದು ಒಂದು ಕಡೆಯಾದರೂ ಮತ್ತೊಂದು ಕಡೆ ಸಂಪುಟ ಪುನರ್ರಚನೆ ಕಾರ್ಯವನ್ನು ಕೈಗೆತ್ತಿಕೊಳ್ಳಲೇ ಬೇಕು ಎಂಬ ಭಾವನೆ ಸಿದ್ದರಾಮಯ್ಯ ನವರಿಗಿದೆ. ಏಕೆಂದರೆ ಎಲ್ಲಿಯವರೆಗೆ ಸಂಪುಟ ಪುನರ್ರಚನೆಗೆ ಅವಕಾಶ ಸಿಗುವುದಿಲ್ಲವೋ ಅಲ್ಲಿಯವರೆಗೆ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ ಎಂಬ ಸಂದೇಶ ಆಡಳಿತ ಯಂತ್ರಕ್ಕ ರವಾನೆಯಾಗುವುದಿಲ್ಲ.

ವಸ್ತುಸ್ಥಿತಿ ಎಂದರೆ, ಇವತ್ತೋ ನಾಳೆಯೋ ಸಿದ್ದರಾಮಯ್ಯ ನವರು ಕೆಳಗಿಳಿದು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೆ ಬಂದರೂ ಅಚ್ಚರಿಯಿಲ್ಲ ಅಂತ ಭಾವಿಸಿರುವ ಸರ್ಕಾರದ ಹಿರಿಯ ಅಧಿಕಾರಿಗಳು ನಿರ್ಣಾಯಕ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ.

ಅವರ ಮನಸ್ಸು ಗೊಂದಲದಲ್ಲಿದೆ ಎಂಬುದಕ್ಕೆ ಇದೇ ಸಾಕ್ಷಿ. ಹೀಗಾಗಿ ಸಿದ್ದರಾಮಯ್ಯನವರು ಅಸಮಾಧಾನಗೊಂಡಿದ್ದಾರೆ. ಮೂಲಗಳ ಪ್ರಕಾರ,ಇಂತಹ ಅಸಮಾಧಾನದೊಂದಿಗೆ ಸಿದ್ದರಾಮಯ್ಯ ಅವರು ಬಜೆಟ್ ಅಧಿವೇಶನ ಮುಗಿದ ಕೂಡಲೇ ದಿಲ್ಲಿ ಯಾತ್ರೆಗೆ ಸಜ್ಜಾಗಲಿದ್ದಾರೆ. ಮೂಲಗಳ ಪ್ರಕಾರ ಹೀಗೆ ದಿಲ್ಲಿಗೆ ಹೋಗುವ ಸಿದ್ದರಾಮಯ್ಯನವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ತಮಗೆ ಸಂಪುಟ ಪುನರ್ರಚನೆಗೆ ಅನುಮತಿ ಕೊಡಿ. ಇಲ್ಲವೇ ನನ್ನ ರಾಜೀನಾಮೆಯನ್ನಾದರೂ ತೆಗೆದುಕೊಳ್ಳಿ ಎಂದು ಹೇಳಲಿದ್ದಾರೆ.

ಹೀಗೆ ಅವರು ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದರೆ, ರಾಹುಲ್ ಗಾಂಧಿಯವರು ಸಂಪುಟ ಪುನರ್ರಚನೆಗೆ ಅನುಮತಿ ನೀಡುತ್ತಾರೆ. ಹೀಗೆ ಅವರು ಅನುಮತಿ ನೀಡಿದ ತಕ್ಷಣ ರಾಜ್ಯ ಕಾಂಗ್ರೆಸ್ ನ ಹಿರಿಯ ಶಾಸಕರು ಮಂತ್ರಿ ಮಂಡಲಕ್ಕೆ ಸೇರ್ಪಡೆ ಆಗಲಿದ್ದಾರೆ. ಹೀಗೆ ಸಂಪುಟ ಪುನರ್ರಚನೆ ಪ್ರಕ್ರಿಯೆ ಪೂರ್ಣಗೊಂಡರೆ ಅನುಮಾನವೇ ಬೇಡ. ನಾಯಕತ್ವ ಬದಲಾವಣೆಯ ವಿಷಯಕ್ಕೆ ತಕ್ಷಣ ಬ್ರೇಕ್ ಬೀಳಲಿದೆ ಮತ್ತು ಸಿದ್ದರಾಮಯ್ಯನವರು ಸೇಫ್ ಆಗಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತದೆ. ಹೀಗೆ ಇಂತಹ ಸಂದೇಶ ರವಾನೆಯಾದರೆ ಆಡಳಿತ ಯಂತ್ರಕ್ಕೆ ಎಚ್ಚೆತ್ತುಕೊಳ್ಳುತ್ತದೆ. ಆ ಮೂಲಕ ಸರ್ಕಾರಕ್ಕೆ ವೇಗ ದಕ್ಕುತ್ತದೆ ಎಂಬುದು ಸಿದ್ದರಾಮಯ್ಯನವರ ಯೋಚನೆ.

ಹೀಗಾಗಿಯೇ ಅವರು ಬಜೆಟ್ ಅಧಿವೇಶನದ ನಂತರ ದಿಲ್ಲಿಗೆ ಹೋಗಲು ಅತ್ಯಾತುರದಿಂದಿದ್ದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೂಡ ಅತ್ಯಾತುರದಲ್ಲಿದ್ದಾರೆ. ಅವರ ಪಾಳೆಯದ ಪ್ರಕಾರ, ಬಜೆಟ್ ಅಧಿವೇಶನ ಮುಗಿದ ನಂತರ ಯಾವುದೇ ಕ್ಷಣದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಹಾಗೆ ರಾಜೀನಾಮೆ ನೀಡಲು ವರಿಷ್ಠರು ಸೂಚನೆ ನೀಡಲಿದ್ದಾರೆ ಎಂಬುದು ಡಿ.ಕೆ.ಶಿವಕುಮಾರ್ ಅವರ ಪಾಳೆಯದ ಮಾತು.

ಹೀಗಾಗಿ ದಿಲ್ಲಿ ಮಟ್ಟದಲ್ಲಿ ಸಿದ್ದರಾಮಯ್ಯನವರ ಮಾತು ನಡೆಯಲಿದೆಯೋ? ಅಥವಾ ಡಿ.ಕೆ.ಶಿವಕುಮಾರ್ ಅವರ ಮಾತು ನಡೆಯಲಿದೆಯೋ? ಎಂಬ ಕುತೂಹಲ ರಾಜಕೀಯ ವಲಯಗಳಲ್ಲಿ ಕಾಣಿಸಿಕೊಂಡಿದೆ.

” ಇವತ್ತು ದೇಶದೆಲ್ಲೆಡೆ ಶೋಷಿತ ಸಮುದಾಯಗಳ ಪರವಾಗಿ ಮಾತನಾಡುತ್ತಾ, ಇಲ್ಲಿ ಅದೇ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಶೋಷಿತ ಸಮುದಾಯಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ರಾಹುಲ್ ಗಾಂಧಿಯವರ ಲೆಕ್ಕಾಚಾರ.”

 

 

Tags:
error: Content is protected !!