ಸಿದ್ದರಾಮಯ್ಯರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿದರೆ ಪಕ್ಷಕ್ಕೆ ಆಪತ್ತು ಎಂಬ ಆತಂಕ
ಇಂತಹದೊಂದು ಪ್ರಶ್ನೆ ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳೆಯಗಳಲ್ಲಿ ಮಾತ್ರವಲ್ಲ. ಸಿಎಂ-ಡಿಸಿಎಂ ಪಾಳೆಯಗಳಲ್ಲಿ ಗುರುತಿಸಿಕೊಳ್ಳದೆ ತಟಸ್ಥ ನೀತಿಯನ್ನು ಅನುಸರಿಸುತ್ತಿರುವ ಪಾಳೆಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಕಾರಣ ಕಳೆದ ನವೆಂಬರ್ ತಿಂಗಳಿನಿಂದ ತೀವ್ರ ಸ್ವರೂಪ ಪಡೆದಿರುವ ಅಧಿಕಾರ ಹಂಚಿಕೆಯ ವಿಷಯ ಬಂದಾಗ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರಿಂದ ಹಿಡಿದು,ದಿಲ್ಲಿಯ ಬಹುತೇಕ ನಾಯಕರವರೆಗೆ ಎಲ್ಲರೂ ತಮ್ಮದೇ ನೆಲೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಆದರೆ ಒಬ್ಬ ರಾಹುಲ್ ಗಾಂಧಿಯವರು ಮಾತ್ರ ಅಧಿಕಾರ ಹಂಚಿಕೆಯ ಎಪಿಸೋಡಿನ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಅವರು ಪ್ರತಿಕ್ರಿಯಿಸಲಿ ಅಂತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ಹಲವು ಬಾರಿ ದೆಹಲಿಗೆ ಹೋಗಿದ್ದಾರೆ.
ಆದರೆ ಅದೇನೇ ಮಾಡಿದರೂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಬಯಸುತ್ತಿಲ್ಲ. ಫೆ.೧೪ರಂದು ಭೇಟಿಯಾದರೂ ಅಧಿಕಾರ ಹಂಚಿಕೆಯ ಬಗ್ಗೆ ಯಾವ ಭರವಸೆಯನ್ನೂ ಅವರು ನೀಡಿಲ್ಲ. ಆದರೆ ಡಿಕೆಶಿ ವಿಷಯದಲ್ಲಿ ಹೀಗೆ ಅಂತರ ಕಾಯ್ದುಕೊಳ್ಳುವ ರಾಹುಲ್ ಗಾಂಧಿ ಅವರು, ಸಿದ್ದರಾಮಯ್ಯ ಅವರ ಸಂಪುಟದ ಹಿರಿಯ ಸಚಿವರಾದ ಕೆ.ಜೆ.ಜಾರ್ಜ್ ದಿಲ್ಲಿಗೆ ಬಂದರೆ ಅರ್ಧರ್ಧ ಗಂಟೆ ಚರ್ಚಿಸುತ್ತಾರೆ.
ಆದರೆ ಡಿ.ಕೆ.ಶಿವಕುಮಾರ್ ಅವರ ಬಳಿ ಮುಕ್ತವಾಗಿ ಮಾತನಾಡಲು ಅವರು ಸಿದ್ಧರಾಗುತ್ತಿಲ್ಲ.ಅವರ ಈ ನಡವಳಿಕೆಯೇ ಸಿದ್ದರಾಮಯ್ಯ ಅವರ ಪಾಳೆಯದಲ್ಲಿ ಒಂದು ನೆಮ್ಮದಿ ಮೂಡಲು, ಡಿ.ಕೆ.ಶಿವಕುಮಾರ್ ಪಾಳೆಯದಲ್ಲಿ ಅತಂಕ ಮೂಡಲು ಕಾರಣವಾಗಿದೆ. ಅದೇನೇ ಮಾಡಿದರೂ ರಾಹುಲ್ ಗಾಂಧಿ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುತ್ತಿಲ್ಲ. ಇದರ ಅರ್ಥ ಬೇರೇನೂ ಅಲ್ಲ,ಅವರಿಗೆ ಕರ್ನಾಟಕದ ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಬದಲಿಸುವ ಇಚ್ಛೆ ಇಲ್ಲ ಎಂಬುದು ಸಿಎಂ ಪಾಳೆಯದ ಮಾತು.
ಅಷ್ಟೇ ಅಲ್ಲ, ರಾಹುಲ್ ಗಾಂಧಿ ಹೀಗೇಕೆ ಮಾಡುತ್ತಿದ್ದಾರೆ ಎಂದು ಅವರು ತಮ್ಮದೇ ಕಾರಣಗಳನ್ನು ಮುಂದಿಡುತ್ತಾರೆ. ಅವರ ಪ್ರಕಾರ, ಕರ್ನಾಟಕದ ನೆಲೆಯಲ್ಲಿ ಸಿದ್ದರಾಮಯ್ಯನವರನ್ನು ಬದಲಿಸಲು ರಾಹುಲ್ ಗಾಂಧಿ ತಯಾರಿಲ್ಲ. ಇದಕ್ಕೆ ಒಂದೆರಡು ಕಾರಣಗಳಲ್ಲ, ಹಲವು ಕಾರಣಗಳಿವೆ.
ಬಹುಮುಖ್ಯವಾಗಿ ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳ ನಾಯಕರಾಗಿ ಬೆಳೆದು ನಿಂತಿದ್ದಾರೆ. ಇವತ್ತು ಅಲ್ಪಸಂಖ್ಯಾತರೇ ಇರಲಿ, ಹಿಂದುಳಿದ ವರ್ಗಗಳೇ ಇರಲಿ ಅಥವಾ ದಲಿತ ವರ್ಗವೇ ಇರಲಿ, ಅವುಗಳಿಗೆ ಸಿದ್ದರಾಮಯ್ಯ ಅವರಂತಹ ನಾಯಕರು ಕಣ್ಣಿಗೆ ಕಾಣುತ್ತಿಲ್ಲ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅಹಿಂದ ವರ್ಗಗಳು ಸಿದ್ದರಾಮಯ್ಯ ಅವರನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿವೆ. ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸುವ ಕೆಲಸಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾದರೆ ಕರ್ನಾಟಕದ ನೆಲೆಯಲ್ಲಿ ಆಪತ್ತು ಎದುರಿಸಲು ಅದು ತಯಾರಾಗಬೇಕು ಎಂದೇ ಅರ್ಥ.
ಇದು ಒಂದು ಕಡೆಗಾದರೆ, ಮತ್ತೊಂದು ಕಡೆಯಿಂದ ಸ್ವತಃ ಕಾಂಗ್ರೆಸ್ ಹೈಕಮಾಂಡ್ ಮಾಡುತ್ತಿರುವ ಪ್ರಚಾರ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ವರಿಷ್ಠರು, ಅದರಲ್ಲೂ ಮುಖ್ಯವಾಗಿ ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗಗಳ ಬಗ್ಗೆ ಅಪಾರವಾಗಿ ಮಾತನಾಡುತ್ತಾರೆ. ತಮ್ಮ ಪಕ್ಷದಲ್ಲಿ ಹಿಂದುಳಿದ ವರ್ಗಗಳಿಗೆ ಎಂತಹ ಆದ್ಯತೆ ಇದೆ ಎಂದು ಅವರು ದೇಶದ ಜನತೆಯ ಮುಂದೆ ಎತ್ತಿ ತೋರಿಸುತ್ತಿರುತ್ತಾರೆ. ಆದರೆ ಹೀಗೆ ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಳಕಳಿ ತೋರಿಸುವ ರಾಹುಲ್ ಗಾಂಧಿ ಅವರು ಹಿಮಾಚಲ ಪ್ರದೇಶದಲ್ಲಿ, ತೆಲಂಗಾಣದಲ್ಲಿ ಮುಂದುವರಿದ ಸಮುದಾಯಗಳ ಮುಖ್ಯಮಂತ್ರಿಗಳನ್ನು ಮೌನವಾಗಿ ನೋಡುತ್ತಾರೆ.
ಅರ್ಥಾತ್,ಅವರಿಗೆ ರಾಷ್ಟ್ರ ಮಟ್ಟದಲ್ಲಿ ಇವತ್ತು ಶಕ್ತಿ ತುಂಬುತ್ತಿರುವ ಹಿಂದುಳಿದ ವರ್ಗಗಳ ನಾಯಕ ಎಂದರೆ ಸಿದ್ದರಾಮಯ್ಯ.ಹೀಗಿರುವಾಗ ಅಧಿಕಾರ ಹಂಚಿಕೆಯ ಹೆಸರಿನಲ್ಲಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ದೇಶದ ಜನರ ಮುಂದೆ ಅವರೇನು ಸಮರ್ಥನೆ ಕೊಟ್ಟುಕೊಳ್ಳುತ್ತಾರೆ? ಈ ಪ್ರಶ್ನೆಗೆ ಇರುವ ನೇರ ಗುರಿ ಎಂದರೆ ಸದ್ಯದಲ್ಲೇ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆ. ಹೀಗೆ ಚುನಾವಣೆಯನ್ನು ಎದುರಿಸುತ್ತಿರುವ ತಮಿಳುನಾಡು, ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಶಕ್ತಿ ಜಾಸ್ತಿ.
ಹೀಗಾಗಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ, ಆ ರಾಜ್ಯದ ಮತದಾರರಿಗೆ ಯಾವ ಸಂದೇಶ ರವಾನಿಸಬಹುದು? ಇದು ರಾಹುಲ್ ಗಾಂಧಿಯವರ ಸದ್ಯದ ಯೋಚನೆ ಎಂಬುದು ಸಿದ್ದರಾಮಯ್ಯ ಅವರ ಪಾಳೆಯದ ಮಾತು. ಆದರೆ ಡಿ.ಕೆ.ಶಿವಕುಮಾರ್ ಅವರ ಪಾಳೆಯ ಬೇರೆಯೇ ಬಗೆಯಲ್ಲಿ ಯೋಚಿಸುತ್ತದೆ. ಅದರ ಪ್ರಕಾರ, ಕರ್ನಾಟಕದ ನೆಲೆಯಲ್ಲಿ ನಾಯಕತ್ವ ಬದಲಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಪಟ್ಟದ ಮೇಲೆ ಕೂರಿಸಿದರೆ ಹೇಳಿಕೊಳ್ಳುವಂತಹ ಸಮಸ್ಯೆ ಏನೂ ಆಗುವುದಿಲ್ಲ.
ಏಕೆಂದರೆ ಇವತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರು ಹೇಗೆ ಇದ್ದಾರೋ ಅದೇ ರೀತಿ ಡಿಕೆಶಿ ಬೆಂಬಲಿಗರು, ಹೈಕಮಾಂಡ್ ಮಾತಿಗೆ ಜೈ ಅನ್ನುವವರೂ ಇದ್ದಾರೆ. ಇಂತಹ ಸ್ಥಿತಿಯಲ್ಲಿ ಹೈಕಮಾಂಡ್ ಒಂದು ನಿರ್ಧಾರ ತೆಗೆದುಕೊಂಡು ಸಿದ್ದರಾಮಯ್ಯ ಅವರಿಗೆ ಪದತ್ಯಾಗ ಮಾಡುವಂತೆ ಸೂಚಿಸಿದರೆ ಮುಗಿಯಿತು. ಹೈಕಮಾಂಡ್ ನಿಷ್ಠರು ಅದಕ್ಕೆ ಬೆಂಬಲ ಸೂಚಿಸುತ್ತಾರೆ. ಆದರೆ ಇದಕ್ಕೆ ರಾಹುಲ್ ಗಾಂಧಿಯವರು ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ, ಯಾಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿ ಮಾತುಕತೆ ನಡೆಸುತ್ತಿಲ್ಲ ಎಂಬುದು ಈ ಪಾಳೆಯದ ಪ್ರಶ್ನೆ.
ಅದರ ಪ್ರಕಾರವೇ, ರಾಹುಲ್ ಗಾಂಧಿಯವರು ಒಂದು ನಿರ್ಧಾರ ತೆಗೆದುಕೊಂಡು ಸಿದ್ದರಾಮಯ್ಯ ಅವರನ್ನು ಕೆಳಗಿಳಿಯಲು ಸೂಚಿಸಿದರೆ ಸಿದ್ದರಾಮಯ್ಯ ಅವರೇನೂ ಹಠ ಹಿಡಿಯುವುದಿಲ್ಲ. ಮೂಲಗಳ ಪ್ರಕಾರ, ಸಿದ್ದರಾಮಯ್ಯನವರು ಅದಾಗಲೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರಿಗೆ ತಮ್ಮದೇ ಮೆಸೇಜು ಕಳಿಸಿದ್ದಾರೆ. ಅದರ ಪ್ರಕಾರ, ರಾಹುಲ್ ಗಾಂಧಿಯವರು ತಮ್ಮನ್ನು ದೆಹಲಿಗೆ ಕರೆದು, ಅಧಿಕಾರ ತ್ಯಾಗ ಮಾಡುವಂತೆ ಹೇಳಿದರೆ ತಾವು ಖಂಡಿತ ರಾಜೀನಾಮೆ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಕರೆಸಿ ಹೇಳಲು ರಾಹುಲ್ ಗಾಂಧಿ ಚಿಂತಿಸುವ ಅಗತ್ಯವಿಲ್ಲ.
ಆದರೂ ಅವರು ಚಕಾರವೆತ್ತುತ್ತಿಲ್ಲ. ರಾಹುಲ್ ಗಾಂಧಿ ಹೀಗೇಕೆ ಮಾಡುತ್ತಿದ್ದಾರೆ ಅಂತ ಡಿಕೆಶಿ, ಸಿದ್ದರಾಮಯ್ಯ ಪಾಳೆಯಗಳು ಮಾತ್ರವಲ್ಲ, ತಟಸ್ಥ ನೀತಿ ಅನುಸರಿಸುತ್ತಿರುವ ಶಾಸಕರ ಗುಂಪು ಕೂಡ ಯೋಚಿಸುತ್ತಿದೆ. ಆದರೆ ಅದರ ಪ್ರಕಾರ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ ಬಿಟ್ಟು ಇಳಿಯಲು ತಯಾರಿದ್ದರೂ ರಾಹುಲ್ ಗಾಂಧಿಯವರು ಅದನ್ನು ಬಯಸುತ್ತಿಲ್ಲ. ಅವರೇಕೆ ಹೀಗೆ ಮಾಡುತ್ತಿದ್ದಾರೆ ಎಂಬುದೇ ತಟಸ್ಥ ಬಣದ ಶಾಸಕರ ಯೋಚನೆ. ಹೀಗೆ ಯೋಚಿಸುತ್ತಿರುವ ತಟಸ್ಥ ಬಣ ರಾಹುಲ್ ಗಾಂಧಿಯವರ ನಡವಳಿಕೆಗೆ ಇರುವ ಕಾರಣಗಳನ್ನು ಪಟ್ಟಿ ಮಾಡುತ್ತದೆ.
ಅದರ ಪ್ರಕಾರ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಲುಗಾಡುತ್ತದೆ ಎಂಬ ಎಂಬ ಯೋಚನೆ ರಾಹುಲ್ ಗಾಂಧಿ ಅವರಿಗಿದೆ. ಕಾರಣ ಅವರಿಗೆ ತಲುಪುತ್ತಿರುವ ಸಂದೇಶಗಳು ಹಾಗಿವೆ.
ಇವತ್ತು ರಾಹುಲ್ ಗಾಂಧಿಯವರಿಗೆ ತಲುಪುತ್ತಿರುವ ಸಂದೇಶಗಳ ಪ್ರಕಾರ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಒಂದು ಬಾರಿ ಕೆಳಗಿಳಿದರೆ ದೇಶಕ್ಕೆ ಯಾವ ಸಂದೇಶ ರವಾನೆಯಾಗುತ್ತದೆ ಎಂದು ರಾಹುಲ್ ಗಾಂಧಿ ಯೋಚಿಸುವುದು ಒಂದು ಭಾಗ. ಆದರೆ ಅದಕ್ಕಿಂತ ಕಳವಳಕಾರಿ ಸಂಗತಿ ಎಂದರೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ, ಡಿಕೆಶಿ ಅವರನ್ನು ಅಧಿಕಾರಕ್ಕೆ ತಂದರೆ ತಕ್ಷಣ ಬಿಜೆಪಿಯ ರಾಷ್ಟ್ರೀಯ ನಾಯಕರು ರಂಗಕ್ಕಿಳಿಯುತ್ತಾರೆ. ಮತ್ತು ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಸಜ್ಜಾಗುತ್ತಾರೆ.
ಏಕೆಂದರೆ ಒಂದು ಸಲ ಸಿದ್ದರಾಮಯ್ಯ ಅವರು ಕೆಳಗಿಳಿದರೆ ಸಾಕು, ರಾಜ್ಯ ಕಾಂಗ್ರೆಸ್‌ನ ಬಹುದೊಡ್ಡ ಶಾಸಕರ ಗುಂಪು ಪರ್ಯಾಯ ಹೆಜ್ಜೆ ಇಡಲು ತಯಾರಾಗುತ್ತದೆ. ಹೀಗೆ ಅದು ತಯಾರಾದಾಗ ತಾವು ಕೈ ನೀಡಿ ಆ ಬಣವನ್ನು ಸೆಳೆದುಕೊಂಡರೆ ಸಾಕು ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಹೀಗೆ ಅವರು ಸಿದ್ದರಾಮಯ್ಯ ಅವರ ಬೆನ್ನ ಹಿಂದಿರುವ ಶಾಸಕರ ಸಂಪರ್ಕದಲ್ಲಿದ್ದು, ಅದೇ ಕಾಲಕ್ಕೆ ಇಲ್ಲಿ ಮುಖ್ಯಮಂತ್ರಿಯಾಗುವವರ ವಿರುದ್ಧ ಮುಗಿಬಿದ್ದರೆ, ಅದನ್ನು ತಡೆದುಕೊಳ್ಳುವುದು ಕಷ್ಟ ಎಂಬುದು ರಾಹುಲ್ ಗಾಂಧಿ ಅವರ ಯೋಚನೆ.
ಹೀಗಾಗಿ ಅವರು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ, ತಮಗೆ ಪಟ್ಟ ಕಟ್ಟಬೇಕು ಎಂಬ ಡಿ.ಕೆ.ಶಿವಕುಮಾರ್ ಅವರ ವಾದಕ್ಕೆ ಕಿವುಡಾಗಿದ್ದಾರೆ. ಆದರೆ ಅವರು ಹೀಗೆ ಕಿವುಡಾಗಿರುವ ಬದಲು, ಇದ್ದದ್ದನ್ನು ಇದ್ದಂತೆ ಹೇಳಲು ಸಜ್ಜಾಗಬೇಕು, ಹೀಗೆ ಅವರು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರನ್ನು ಕೂರಿಸಿಕೊಂಡು ಸ್ಪಷ್ಟವಾಗಿ ಮಾತನಾಡದಿದ್ದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಯೋಮಯ ಸ್ಥಿತಿಯಲ್ಲಿಯೇ ಮುಂದುವರಿಯುತ್ತದೆ ಎಂಬುದು ಹಲ ಶಾಸಕರ ವಾದ. ಆದರೆ ಅದರ ವಾದ ರಾಹುಲ್ ಗಾಂಧಿ ಕಿವಿಗೆ ಮಾತ್ರ ಬೀಳುತ್ತಿಲ್ಲ.
ಕೊನೆಯ ಮಾತು: ದಿಲ್ಲಿ ಮೂಲಗಳ ಪ್ರಕಾರ ರಾಹುಲ್ ಗಾಂಽಯವರ ಮೌನದ ನಡುವೆಯೇ ಅಧಿಕಾರ ಹಂಚಿಕೆಯ ಮಾತು ಜೂನ್ ತನಕ ತಣ್ಣಗಾಗುವ ಲಕ್ಷಣಗಳು ಕಾಣಿಸಿಕೊಂಡಿವೆ.ಇದು ಕೂಡ ರಾಹುಲ್ ಮೌನದ ಪ್ರಭಾ
” ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳ ನಾಯಕರಾಗಿ ಬೆಳೆದು ನಿಂತಿದ್ದಾರೆ. ಇವತ್ತು ಅಲ್ಪಸಂಖ್ಯಾತರೇ ಇರಲಿ, ಹಿಂದುಳಿದ ವರ್ಗಗಳೇ ಇರಲಿ ಅಥವಾ ದಲಿತ ವರ್ಗವೇ ಇರಲಿ, ಅವುಗಳಿಗೆ ಸಿದ್ದರಾಮಯ್ಯ ಅವರಂತಹ ನಾಯಕರು ಕಣ್ಣಿಗೆ ಕಾಣುತ್ತಿಲ್ಲ.”





